‘ಮಯೂರ’ ಹಾಸ್ಯ - ಭಾಗ ೯೯

ಒಮ್ಮೆ ಪಟ್ಟ ಪಾಡೇ ಸಾಕು !
ಒಮ್ಮೆ ರಾವಣನನ್ನು ಭೂಲೋಕದ ಕೋರ್ಟಿಗೆ ಕರೆತಂದು, ಭಗವದ್ಗೀತೆಯನ್ನು ತೋರಿಸುತ್ತಾ ‘ಈ ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡು’ ಎಂದಿದ್ದೇ ತಡ, ರಾವಣ ತಕ್ಷಣ ಗಾಬರಿಯಿಂದ ಹಿಂದೆ ಸರಿದ. ವಕೀಲ ‘ಈ ಗೀತೆಯ ಮೇಲೆ ಪ್ರಮಾಣ ಮಾಡಿದ ಮೇಲೆಯೇ ನೀನು ಸಾಕ್ಷಿ ನುಡಿಯಬೇಕು.’ ಎಂದ. ‘ಆಗುವುದಿಲ್ಲ. ಒಮ್ಮೆ ಸೀತೆಯ ಮೇಲೆ ಕೈಯಿಟ್ಟಿದ್ದಕ್ಕೆ ಪಟ್ಟ ಪಾಡೇ ಸಾಕು, ಇನ್ನು ಗೀತೆಯ ಮೇಲೆ ಕೈಯಿಡೋದಾ? ಖಂಡಿತವಾಗಿಯೂ ಸಾಧ್ಯವಿಲ್ಲ.’ ಎಂದು ಕೋರ್ಟಿನಿಂದ ಆಚೆಗೆ ಓಡಿ ಹೋದನು !
-ವಿ.ವಿಜಯೇಂದ್ರ ರಾವ್
***
ಬ್ಯಾಂಕಿನವರು…
ಬ್ಯಾಂಕಿನ ಶಾಖೆಯೊಂದರಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದಾಗ ನಮ್ಮ ಕ್ಷೇತ್ರಾಧಿಕಾರಿಯ ಜೊತೆ ಒಂದು ಗ್ರಾಮಕ್ಕೆ ಸಾಲ ವಸೂಲಾತಿಗೆ ಹೋಗಿದ್ದೆ. ಒಂದು ಮನೆಯ ಎದುರಿನಲ್ಲಿ ಹೆಣ್ಣು ಮಗುವೊಂದು ಆಟವಾಡುತ್ತಿತ್ತು. ಆ ಮಗುವಿಗೆ ‘ನಿಮ್ಮ ತಂದೆ ಮನೆಯಲ್ಲಿ ಇದ್ದಾರೇನಮ್ಮಾ?’ ಎಂದು ಕೇಳಿದೆವು. ಆಗ ಮಗು ‘ಇಲ್ಲಾ, ನಮ್ಮಪ್ಪ ಪೇಟೆಗೆ ಹೋಗಿದ್ದಾರೆ. ನೀವ್ಯಾರು?’ ಎಂದಿತು. ‘ನಾವು ಬ್ಯಾಂಕಿನವರು ಪುಟ್ಟಾ, ನಿಮ್ಮಮ್ಮ ಮನೆಯಲ್ಲಿ ಇದ್ದಾರಾ?’ ಎಂದಾಗ ಆ ಮಗು ‘ಅಮ್ಮಾ, ಸ್ನಾನಕ್ಕೆ ಹೋಗಿದ್ದಾರೆ.’ ಎಂದು ಹೇಳಿತು. ನಮ್ಮ ಸಂಭಾಷಣೆ ಒಳಗಿದ್ದ ಅಮ್ಮನಿಗೆ ಕೇಳಿಸಿರಬೇಕು. ಆಕೆ ಒಳಗಿನಿಂದಲೇ ಕೂಗಿ ಕೇಳಿದರು. ‘ಯಾರೇ ಅದು? ಗಂಡಸರೇನೇ?’ ಅದಕ್ಕೆ ಆ ಮಗು ‘ಅಲ್ಲಮ್ಮಾ, ಬ್ಯಾಂಕಿನೋರಂತೆ!’ ಅನ್ನೋದೇ?
-ಎಲ್ ಆರ್ ಚಂದ್ರಶೇಖರ್
***
ಯಾರ್ರೀ ಮಲ್ಲೇಶ್ವರ?
ಇನ್ನೇನು ಬಸ್ಸು ಹೊರಡುವುದರಲ್ಲಿತ್ತು. ಒಬ್ಬ ವ್ಯಕ್ತಿ ಬಂದು ಅವಸರದಲ್ಲಿ ಬಸ್ಸು ಹತ್ತಿದರು. ‘ಒಂದು ಮಲ್ಲೇಶ್ವರಕ್ಕೆ ಕೊಡಪ್ಪ’ ಅಂದ್ರು. ಕಂಡಕ್ಟರ್ ಟಿಕೇಟ್ ಕೊಟ್ಟರು. ಟಿಕೇಟನ್ನು ಜೇಬಿಗಿಳಿಸಿ ಸೀಟಿಗೊರಗಿದರು. ಮಧ್ಯೆ ಒಮ್ಮೆ ಕಣ್ಣು ಬಿಟ್ಟರು. ಇನ್ನೂ ಮೆಜೆಸ್ಟಿಕ್ಕೇ ಎಂದುಕೊಂಡು ಕಣ್ಣು ಮುಚ್ಚಿದರು. ಮತ್ತೊಮ್ಮೆ ಕಣ್ಣು ಬಿಟ್ಟರು. ಕರೆಂಟು ಹೋಗಿದೆ ಎಂದುಕೊಂಡವರೇ ಮತ್ತೆ ನಿದ್ರೆಗೆ ಜಾರಿದರು. ಆಗಾಗ ಕಣ್ಣು ಬಿಟ್ಟು ಕಿಟಕಿಯಾಚೆ ಇಣುಕಿ ಇಣುಕಿ ನೋಡುತ್ತಿದ್ದರು. ಮತ್ತೆ ಗಡಿಯಾರ ನೋಡುತ್ತಿದ್ರು. ಪಕ್ಕದವರನ್ನು ಕೇಳಿದರು. ‘ಸಮಯ ಸರಿಯಾಗೇ ಇದೆ ಅಂದುಕೊಂಡರು. ‘ರೀ, ಎದ್ದೇಳ್ರೀ, ನಿಮ್ಮ ಸ್ಟಾಪ್ ಬಂತು’ ಕಂಡಕ್ಟರ್ ಅಲುಗಾಡಿಸಿದಾಗ ದಡಬಡಿಸಿ ಎದ್ದು ನಿಂತರು. ಕುಡಿದ ಮತ್ತಿನಲ್ಲಿ ಮೆಜೆಸ್ಟಿಕ್ ಗೆ ಹೋಗುವ ಬದಲು ಕೆ ಎಸ್ ಆರ್ ಟಿ ಸಿ ಬಸ್ ಹತ್ತಿ ಮಲ್ಲೇಶ್ವರಕ್ಕೆ ಟಿಕೇಟ್ ತೆಗೆದುಕೊಂಡಿದ್ದರು. ಕುದುರೆಮುಖಕ್ಕೆ ಮಲ್ಲೇಶ್ವರ ಅಂತ ಕರೆಯುತ್ತಿದ್ದರಲ್ಲ, ಅಲ್ಲಿಗೆ ಬಂದು ಇಳಿದು ತಬ್ಬಿಬ್ಬಾಗಿದ್ದರು!
- ಬಿ ಕೆ ಮೀನಾಕ್ಷಿ
***
ಇಂಟ್ಳು…!
ನಮ್ಮ ಮನೆಯ ಪಕ್ಕ ಪಿ.ಯು. ಕಾಲೇಜಿಗೆ ಹೋಗುವ ರಸ್ತೆ ಇದೆ. ದಿನವೂ ಹುಡುಗರ ಮಾತುಗಳು ಕೇಳುತ್ತಿರುತ್ತದೆ. ‘ಮಚ್ಚಾ, ಬಾಗೂರು, ಮೆಂಟ್ಲು… ಎಲ್ಲಾ ಸಾಮಾನ್ಯವಾಗಿ ಕಿವಿಗೆ ಬೀಳುವ ಪದಗಳು. ಅಂದು ಅಪರೂಪದ ಪದ ‘ಇಂಟ್ಳು’ ಎನ್ನುವುದು ಕಿವಿಗೆ ಬಿತ್ತು. ಅಚ್ಚರಿಯಿಂದ ವಠಾರದ ಪಿ.ಯು. ಓದುವ ಹುಡುಗನ ಬಳಿ ವಿಚಾರಿಸಿದೆ. ‘ಇಂಟ್ಳು’ ಎಂದರೇನು? ಎಂದು. ಕಾಲೇಜಿಗೆ ತಪ್ಪದೇ ಹಾಜರಾಗುವ, ಚೆನ್ನಾಗಿ ಓದುವ, ದಿನವೂ ನೋಟ್ಸ್ ಮಾಡಿಕೊಳ್ಳುವ, ಉತ್ತಮ ಅಂಕಗಳನ್ನು ಪಡೆಯುವ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಇಂಟಲಿಜೆಂಟ್ (ಬುದ್ಧಿವಂತ) ಇರುವವರನ್ನು ಶಾರ್ಟ್ ಆಗಿ ಇಂಟ್ಳು ಅನ್ನುವರು’ ಎಂದ. ಪದಕೋಶದ ಹೊರತಾಗಿಯೂ ಹೈಕ್ಳು ಸೃಷ್ಟಿಸುವ ಹೊಸ ಪದ ನಗು ತರಿಸಿತು.
-ನಗರ ಗುರುದೇವ್ ಭಂಡಾರ್ಕರ್
***
(ನವೆಂಬರ್ ೨೦೨೩ರ ಮಯೂರ ಪತ್ರಿಕೆಯಿಂದ ಆಯ್ದದ್ದು)