‘ಮಯೂರ' ಹಾಸ್ಯ - ಭಾಗ ೧೧

‘ಮಯೂರ' ಹಾಸ್ಯ - ಭಾಗ ೧೧

ನೀವೆ ಹಾಕಿ !

ನಾನು ಯಲ್ಲಾಪುರದ ವೈ.ಟಿ.ಎಸ್.ಎಸ್. ಕಾಲೇಜಿಗೆ ಸೇರಿದ ಹೊಸತರಲ್ಲಿ ನಡೆದ ಘಟನೆ. ಆಗ ಕಾಲೇಜು ಹಾಗೂ ಪ್ರೌಢ ಶಾಲೆ ಸೇರಿ ಒಂದೇ ಸ್ಟಾಫ್ ರೂಮ್ ಇದ್ದ ಸಮಯ. ಪ್ರೌಢ ಶಾಲಾ ವಿಭಾಗದಲ್ಲಿ ಕುಲಕರ್ಣಿ ಎಂಬ ಹಿರಿಯ ಶಿಕ್ಷಕರಿದ್ದರು. ಶೇಖ್ ಎಂಬವರು ಜವಾನರಾಗಿ ಸೇವೆ ಸಲ್ಲಿಸುತ್ತಿದ್ದರು.

ಕುಲಕರ್ಣಿಯವರು ಯಾರಿಗೋ ಬರೆದ ಪತ್ರ ಒಂದನ್ನು ಅಂಚೆಗೆ ಹಾಕುವಂತೆ ತಿಳಿಸಿ ಶೇಖ್ ಅವರಿಗೆ ನೀಡಿದರು. ಕೆಲವು ಸಮಯದ ನಂತರ ಬಂದ ಶೇಖ್ ಅವರಿಂದ ಪತ್ರವನ್ನು ಅಂಚೆಗೆ ಹಾಕಿದ ಬಗ್ಗೆ ಕುಲಕರ್ಣಿಯವರು ಖಾತರಿ ಪಡಿಸಿಕೊಂಡರು.

ಮಾರನೆಯ ದಿನ ಕುಲಕರ್ಣಿಯವರು ಶೇಖ್ ಅವರನ್ನು ಕರೆದು ಮತ್ತೆ ಪತ್ರದ ಬಗ್ಗೆ ವಿಚಾರಿಸಿದಾಗ ಪತ್ರ ಅಂಚೆಗೆ ಹಾಕಿದ್ದೇನೆ ಸರ್ ಎಂದು ಧೃಢ ಪಡಿಸಿದರು ಶೇಖ್. ಮತ್ತೆ ಮಾರನೆಯ ದಿನ ಪತ್ರದ ಬಗ್ಗೆ ಕುಲಕರ್ಣಿಯವರು ಶೇಖ್ ಅವರನ್ನು ವಿಚಾರಿಸಿದರು. ಆಗ ತಾಳ್ಮೆ ಕಳೆದುಕೊಂಡ ಶೇಖ್ ‘ಅಷ್ಟು ಅರ್ಜೆಂಟ್ ಇದ್ದರೆ ನೀವೆ ಅಂಚೆಗೆ ಹಾಕಿ' ಎಂದು ಕಿಸೆಯಿಂದ ಕುಲಕರ್ಣಿಯವರು ಕೊಟ್ಟ ಪತ್ರವನ್ನು ಕುಲಕರ್ಣಿಯವರಿಗೆ ಮರಳಿ ಕೊಟ್ಟಾಗ ಎಲ್ಲರೂ ಮೂಕ ವಿಸ್ಮಿತರಾದರು.

-ಬೀರಣ್ಣ ನಾಯಕ ಮೊಗಟಾ

***

ಕೀರ್ತನಕಾರರು ಯಾರು?

ನಮ್ಮ ಮನೆಯ ಪುಟಾಣಿ ಸಾಕ್ಷಿಗೆ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಾಡಲು ದಾಸಕೀರ್ತನೆಯ ಆಯ್ಕೆ ಮಾಡುತ್ತಿದ್ದೆವು. ಮನೆಮಂದಿಯೆಲ್ಲ ಸೇರಿ ನಮಗೆ ಗೊತ್ತಿದ್ದ ಕೀರ್ತನೆಗಳನ್ನು ಸೂಚಿಸಿ, ಕೊನೆಯಲ್ಲಿ ಬರುವ ಅಂಕಿತನಾಮದ ಆಧಾರದಲ್ಲಿ ಕೀರ್ತನಕಾರರನ್ನು ಗುರುತಿಸುತ್ತಿದ್ದೆವು.

ಈ ನಡುವೆ ಯಾರೋ ‘ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ' ಎಂಬ ಕೀರ್ತನೆಯನ್ನು ಸೂಚಿಸಿದರು. ಅಷ್ಟರಲ್ಲಿ ಸಾಕ್ಷಿ ತಟ್ಟನೆದ್ದು ‘ಅದು ಪುರಂದರ ದಾಸರ ಸೋದರ ಸೊಸೆ ಬರೆದದ್ದು. ಹಾಗಾಗಿ ಅದು ಬೇಡ. ಕೊನೆಯಲ್ಲಿ ಹಾಗೇ ಇದೆ... ನೋಡಿ' ಎಂದು ಗಂಭೀರವಾಗಿ ಅಂದಾಗ ಅವಳ ಮುಗ್ಧ ಮಾತಿನ ನಡುವೆ ನಮಗೆ ನಗು ತಡೆಯಲಾಗಲಿಲ್ಲ.

-ಅನುಪಲ್ಲವಿ, ಮೂಡಬಿದಿರೆ

***

ದೇವರಿಗೆ ಮಾತ್ರ?

ಗೌರಿ ಪೂಜೆಯ ದಿನದಂದು ಅವಸರದಲ್ಲಿ ದೇವರ ದೀಪಕ್ಕೆ ಗಟ್ಟಿ ತುಪ್ಪ ಹಾಕಿದ್ದನ್ನು ಗಮನಿಸಿದ ನಮ್ಮ ಪುಟ್ಟ ಗುಂಡ, ನಂತರ ಎಲ್ಲರೂ ಊಟಕ್ಕೆ ಕುಳಿತಾಗ ತುಪ್ಪವನ್ನು ಸ್ವಲ್ಪ ಬಿಸಿ ಮಾಡಿ ಹಾಕಿದಾಗ ‘ಅಮ್ಮ ನನಗೇಕೆ ಕರಗಿ ನೀರಾದ ತುಪ್ಪ, ದೇವರಿಗೆ ಮಾತ್ರ ಗಟ್ಟಿ ತುಪ್ಪಾನಾ?’ ಎಂದು ಕೇಳಿದ. ಪುಟ್ಟ ಗುಂಡನ ಈ ಮುಗ್ಧ ಪ್ರಶ್ನೆಯಿಂದ ಎಲ್ಲರ ಮುಖದಲ್ಲಿ ಮೂಡಿದ ನಗುವಿನೊಂದಿಗೆ ಹಬ್ಬದ ಖುಷಿ ಇಮ್ಮಡಿಯಾಯಿತು.

-ಸುನಿತಾ ವಿ.ಕೆ. ಮಂಗಳೂರು

***

ದುಡ್ಡು ಕೊಡಿ

ಗಾಂಧಿ ಜಯಂತಿಯ ದಿನ ನಮ್ಮ ಮಗಳು ಸುನೀತ ಯು.ಕೆ.ಜಿ.ಯಲ್ಲಿ ಓದುತ್ತಿರುವ ನಮ್ಮ ಮೊಮ್ಮಗ ಚೈತನ್ಯನೊಡನೆ ಬಂದಿದ್ದಳು. ನಾನು ಏಕೋ ಶಾಲೆಗೆ ಹೋಗಿಲ್ಲ ಎಂದು ಕೇಳಿದೆ. ಅದಕ್ಕವನು ‘ದುಡ್ಡು ಕೊಡಿ ಹೇಳ್ತೀನಿ' ಎಂದಾಗ ಆಶ್ಚರ್ಯವಾಯಿತು. ರಜೆಗೂ, ದುಡ್ಡಿಗೂ ಏನು ಸಂಬಂಧ ಎಂದು ಯೋಚಿಸುತ್ತಿರುವಾಗ ಅವನು ‘ರೂಪಾಯಿ ನೋಟು ಕೊಡಿ' ಎಂದ. ನಾನು ಏನು ಮಾಡುತ್ತಾನೋ ನೋಡೋಣವೆಂದು ಹತ್ತು ರೂಪಾಯಿಯ ನೋಟು ಕೊಟ್ಟೆ. ಅವನು ಅದರಲ್ಲಿಯ ಗಾಂಧಿ ಚಿತ್ರವನ್ನು ತೋರಿಸುತ್ತಾ, ‘ ನಮ್ಮ ಮ್ಯಾಮ್ ಹೇಳಿದ್ದಾರೆ ಇವತ್ತು ಇವರ ಹುಟ್ಟಿದ ಹಬ್ಬ ಎಂದು. ಅದಕ್ಕೆ ರಜಾ ಗೊತ್ತಾ’ ಎಂದಾಗ ಅವನ ಬುದ್ಧಿಮತ್ತೆಗೆ ಮಾರು ಹೋದೆ.

-ಎಂ. ಮೋಹನ್ ರಾವ್, ಬೆಂಗಳೂರು

***

(ಡಿಸೆಂಬರ್ ೨೦೧೫ರ ಮಯೂರ ಪತ್ರಿಕೆಯಿಂದ ಸಂಗ್ರಹ)