‘ಮಯೂರ' ಹಾಸ್ಯ - ಭಾಗ ೧೨

‘ಮಯೂರ' ಹಾಸ್ಯ - ಭಾಗ ೧೨

ಒಂದನ್ನು ಎರಡು ಮಾಡುವ ಅಂಗಡಿ

ನಮ್ಮ ಮನೆ ಕೆಲಸದಾಕೆ ಮಾತಿನ ಮಲ್ಲಿ. ನಾಲ್ಕು ಗೋಡೆಗಳ ಮಧ್ಯೆ ‘ಕೂಪ ಮಂಡೂಕ'ದಂತಿರುವ ನನ್ನಾಕೆಗೆ ಊರಿನ ಸುದ್ದಿಯನ್ನೆಲ್ಲಾ ತಲುಪಿಸುವ ಅವಳನ್ನು ನಾನು ‘ಆಲ್ ಇಂಡಿಯಾ ರೇಡಿಯೋ’ ಎಂದೇ ಗೇಲಿ ಮಾಡುತ್ತಿರುತ್ತೇನೆ.

ಕಳೆದ ತಿಂಗಳು ನಮ್ಮ ಮನೆಯ ಹತ್ತಿರ ಹೊಸದಾಗಿ ಬಳೆ ಅಂಗಡಿಯೊಂದು ತೆರೆದಿತ್ತು. ಅವಳು ಮರುದಿನ ಬಂದವಳೇ ‘ಅಕ್ಕಾ, ಆ ಬಳೆ ಅಂಗಡಿ ನೀನೊಂದು ಬಾರಿ ನೋಡಬೇಕು ಎಷ್ಟು ಚೆನ್ನಾಗಿದೆ!’ ಎಂದಾಗ ನನ್ನಾಕೆ ‘ಆ ಬಳೆ ಅಂಗಡಿ ಎಲ್ಲಿ ಬರುತ್ತೆ ಹೇಳು? ‘ ಎಂದು ಕೇಳಿದಾಗ ಆಕೆ ಸ್ವಲ್ಪ ಹೊತ್ತು ಯೋಚಿಸಿ, ತಲೆ ಕೆರೆದುಕೊಳ್ಳುತ್ತಾ ‘ಅದೇ ಒಂದನ್ನು ಎರಡು ಮಾಡೋ ಅಂಗಡಿ ಇದೆ ನೋಡು ಅದರ ಪಕ್ಕಾನೇ’ ಎಂದಳು. ಇವಳ ಒಗಟಿನ ಮಾತು ಅರ್ಥವಾಗದೆ ‘ ಅದೇನೆಂದು ಸರಿಯಾಗಿ ಹೇಳು' ಎಂದಾಗ ಅವಳ ನಾನಾ ರೀತಿಯ ವಿವರಣೆಯಿಂದ ಅವಳು ‘ಜೆರಾಕ್ಸ್' ಅಂಗಡಿಯ ಬಗ್ಗೆ ಹೇಳುತ್ತಿರುವುದೆಂದು ತಿಳಿದಾಗ ನಮಗೆಲ್ಲಾ ಅವಳ ಮುಗ್ಧ ಮಾತಿಗೆ ಬಹಳ ನಗು ಬಂತು !

-ಬಿ.ಕೆ.ನರಸಿಂಹಮೂರ್ತಿ, ಬೆಂಗಳೂರು

***

ಭೋಜನಿಸ್ಟ್

ನಮ್ಮ ಪಕ್ಕದ ಮನೆಯವರು ತಮ್ಮ ಹಿರಿಯರ ಸ್ಮರಣಾರ್ಥ ಪ್ರತಿ ವರುಷ ಸಂಗೀತ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಅಹೋರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ನಾಡಿನ ಹಲವಾರು ಪ್ರಸಿದ್ಧ ಕಲಾವಿದರು ಭಾಗವಹಿಸುತ್ತಾರೆ. ಕೆಲ ಕಲಾವಿದರು ಅಂದು ಬೇಗನೇ ಬಂದು ಹೊರಗಿನ ಖೋಲಿಯಲ್ಲಿ ‘ರಿಯಾಜ' ಮಾಡುವುದು ವಿಶ್ರಾಂತಿ ಪಡೆಯುವುದು ಮಾಡುತ್ತಾರೆ. ಅಂದು ಮಧ್ಯಾಹ್ನ ಊರ ಪ್ರಮುಖರಿಗೆ ಭೋಜನ ಇರುತ್ತದೆ. ನಮ್ಮ ತಂದೆಯವರು ಅದೇ ತಾನೆ ಊಟ ಮುಗಿಸಿ ಮನೆಗೆ ಬಂದರು. ನಾವು ಅವರನ್ನು ಕುತೂಹಲದಿಂದ ‘ಯಾರಾದರು ‘ಆರ್ಟಿಸ್ಟ್' ಬಂದಿದ್ದಾರೆಯೇ’ ಎಂದು ಕೇಳಿದೆವು. ಇಲ್ಲ ‘ಆರ್ಟಿಸ್ಟ್' ಯಾರೂ ಬಂದಿಲ್ಲ. ಬರಿ ಭೋಜನಿಸ್ಟ್ ಮಾತ್ರ ಬಂದಿದ್ದಾರೆ' ಅಂದರು.

-ಬಿ.ಡಿ.ನಾಡಕರ್ಣಿ, ಗುಡಗೇರಿ

***

ಅವರೇ ಹೇಳಿ ಹೋಗಿದ್ದಾರೆ!

ನಮ್ಮ ಅಕ್ಕನ ಮಗ ಚಿನ್ಮಯ್ ಆಟ-ಪಾಠಗಳಲ್ಲಿ ಬಹಳ ಚುರುಕಿದ್ದರೂ ಊಟ ತಿಂಡಿಯ ವಿಷಯದಲ್ಲಿ ಮಾತ್ರ ಬಹಳ ನಿಧಾನ. ದಿನನಿತ್ಯ ಅವನಿಗೆ ಊಟ ಮಾಡಿಸಲು ಮನೆ-ಮಂದಿಯೆಲ್ಲ ಬಹಳ ಹೆಣಗಬೇಕು.

ಒಂದು ದಿನ ಅವನನ್ನು ಬಂಧುಗಳ ಮದುವೆಯೊಂದಕ್ಕೆ ಕರೆದುಕೊಂಡು ಹೋಗಿದ್ದೆವು. ಧಾರೆಯಾದ ನಂತರ ಎಲ್ಲರೂ ಊಟಕ್ಕೆ ಕುಳಿತೆವು. ಪಂಕ್ತಿಯಲ್ಲಿ ಕುಳಿತ ಎಲ್ಲರ ಊಟ ಮುಗಿಯುತ್ತಾ ಬಂದರೂ ನಮ್ಮ ಚಿನ್ನು ಮಾತ್ರ ಸಾರು-ಅನ್ನ ಕೆದಕ್ಕುತ್ತಲೇ ಕುಳಿತಿದ್ದ. ಆಗ ನಾನು ಕೋಪದಿಂದ ‘ಎಲ್ಲರ ಊಟ ಮುಗಿದು ಎಲೆ ತೆಗೆಯುವವರೂ ಬಂದಾಯ್ತು. ಬೇಗ ಬೇಗ ಊಟ ಮಾಡು'ಎಂದು ಗದರಿದೆ. ಆಗ ಅವನು ‘ನಾವು ಊಟಕ್ಕೆ ಕುಳಿತಾಗ ಒಬ್ಬ ಆಂಟಿ, ಅಂಕಲ್ ಬಂದು ಎಲ್ಲರೂ ನಿಧಾನವಾಗಿ ಊಟ ಮಾಡಿ ಅಂತ ಹೇಳಿದ್ರು.. ಅದಕ್ಕೆ ನಾನು ನಿಧಾನವಾಗೇ ಮಾಡೋದು.’ ಎಂದು ಧೋರಣೆಯಿಂದ ನುಡಿದಾಗ ಅವನ ಮಾತಿಗೆ ನಾನು ತಲೆಬಾಗಲೇಬೇಕಾಯ್ತು.!

-ಕೀರ್ತಿ ಎಸ್. , ಬೆಂಗಳೂರು

***

‘ಮೀಸೆ ಹೇಗೆ ಬೆಳೆಯಿತು?’

ಮನೆಯ ಅಂಗಳದಲ್ಲಿ ಮಣ್ಣು ಹದ ಮಾಡಿ, ಕೊತ್ತಂಬರಿ ಬೀಜ ಉದುರಿಸುತ್ತಾ ಇರುವಾಗ, ಹಿಂದಿನಿಂದ ಮೊಮ್ಮಗಳು ಸುಜಯ ಬಂದು ‘ಏನು? ಹೇಗೆ? ಏಕೆ? ‘ ಎಂದು ಪ್ರಶ್ನೆಗಳ ಸುರುಮಳೆ ಪ್ರಾರಂಭಿಸಿದಳು. ಆರು ವರ್ಷದ ಅವಳಿಗೆ ಎಲ್ಲಾ ತಿಳಿಯುವ ಕುತೂಹಲ. ಅವಳಿಗೆ ಎಲ್ಲಾ ಹೇಳಿ, ಇನ್ನೊಂದು ವಾರದಲ್ಲಿ ಕೊತ್ತಂಬರಿ ಬೀಜ ಮೊಳಕೆಯೊಡೆದು, ಸಸಿ ಹುಟ್ಟುವುದಾಗಿ ತಿಳಿಸಿದೆ. ಅದರಂತೆ, ನೆಲದಿಂದ ಸಸಿಗಳು ಮೇಲೆ ತಲೆ ಎತ್ತಿದಾಗ ಅವಳ ಸಂಭ್ರಮ ಹೇಳತೀರದು. ಅದೇ ಮದ್ಯಾಹ್ನ ನನ್ನ ನಾದಿನಿ, ಗಂಡ ಮಗನೊಂದಿಗೆ, ಅಮೇರಿಕೆಯಿಂದ ನಾಲ್ಕು ವರ್ಷಗಳ ನಂತರ ಬಂದಿದ್ದಳು. ಮಗ ಬಂದವನೇ ನಮ್ಮ ಯಜಮಾನರ ಕಾಲು ಮುಟ್ಟಿ ನಮಸ್ಕರಿಸಿದ. ನಮ್ಮ ಯಜಮಾನರು ‘ಏನೋ ಎಷ್ಟು ದೊಡ್ಡವನಾಗಿಬಿಟ್ಟಿದ್ದೀಯಾ ಆಗಲೇ, ಜೋರಾಗಿ ಮೀಸೆ ಬೇರೆ ಬೆಳೆದಿದೆ' ಎಂದು ಹಾಸ್ಯ ಮಾಡಿದಾಗ, ಹುಡುಗ ನಾಚಿ ತಲೆ ತಗ್ಗಿಸಿದ. ಅವನ ಮುಖವನ್ನೇ ದಿಟ್ಟಿಸಿ ನೋಡಿದ ಸುಜಯ ಗೊಂದಲಕ್ಕೊಳಗಾದವಳಂತೆ ಮೆಲ್ಲನೆ ನುಡಿದಳು ‘ಅಲ್ಲಾ, ಮಣ್ಣು, ನೀರು, ಬೀಜ ಏನೂ ಇಲ್ಲದೆ ಮೀಸೆ ಹೇಗೆ ಬೆಳೆಯಿತು?’ ಎಂದು ಕೇಳಿದಾಗ ನಮಗೆಲ್ಲಾ ಜೋರು ನಗು, ಹುಡುಗನಿಗೆ ಇನ್ನಷ್ಟು ನಾಚಿಕೆ.

-ತಾರಾ ಮಹಿಷಿ, ಬೆಂಗಳೂರು