‘ಮಯೂರ' ಹಾಸ್ಯ - ಭಾಗ ೧೪

‘ಮಯೂರ' ಹಾಸ್ಯ - ಭಾಗ ೧೪

ನಂದೇ ಎಂಗೇಜ್ ಮೆಂಟ್ !

ಮಗಳ ಮದುವೆಯ ಆರತಕ್ಷತೆಯ ಫೋಟೋ ತೆಗೆಸಲು ಯಾರಿಗಾದರೂ ಹೇಳಬೇಕಿತ್ತು. ಪರಿಚಯದ ಒಬ್ಬ ಹುಡುಗನಿಗೆ ಫೋನ್ ಮಾಡಿದೆ. ‘ವೇಣು, ಹತ್ತನೇ ತಾರೀಕು ರಿಸೆಪ್ಷನ್ ಇಟ್ಕೊಂಡಿದೀನಿ ನೀನೇ ಬರಬೇಕು'. ಅವನೆಂದ ‘ಸಾರಿ ಸರ್, ಅವತ್ತು ಎಂಗೇಜ್ ಮೆಂಟ್ ಇದೆ. ಬೇರೆ ಯಾರಿಗಾದರೂ ಹೇಳ್ತೀನಿ'. 

ನನಗೆ ಸಿಟ್ಟೇ ಬಂತು. ಗೊತ್ತಿರೋ ಹುಡುಗ. ಒಂದು ಆರ್ಡರ್ ಕೊಡೋಣಾಂದ್ರೆ.. ‘ಎಂಗೇಜ್ ಮೆಂಟ್ ಗೆ ಬೇರೆ ಯಾರನ್ನ ಬೇಕಾದ್ರೂ ಕಳ್ಸು. ನಮ್ಮನೆ ಫಂಕ್ಷನ್ ಗೆ ನೀನೇ ಬರಬೇಕು'. ಒತ್ತಾಯ ಪೂರ್ವಕವಾಗಿಯೇ ಹೇಳಿದೆ.

ಆ ಕಡೆಯಿಂದ ಮೆತ್ತಗೆ ಉತ್ತರ ಬಂತು. ‘ನಂದೇ ಎಂಗೇಜ್ ಮೆಂಟ್ ಸರ್ ಅವತ್ತಿರೋದು!’

-ಕೆ.ಪಿ.ಸತ್ಯನಾರಾಯಣ, ಹಾಸನ

***

ಗ್ರಾಹಕ ದೇವರು

ನಾವೆಲ್ಲರೂ ಒಮ್ಮೆ ಹೋಟೇಲ್ ಗೆ ಹೋಗಿದ್ದಾಗ ಅಲ್ಲಿ ಕ್ಯಾಶಿಯರ್ ಹಿಂಭಾಗದ ಗೋಡೆಗೆ ಒಂದು ಪ್ರಕಟಣಾ ಫಲಕ ಅಂಟಿಸಿತ್ತು. ಅದರಲ್ಲಿ ‘ಗ್ರಾಹಕರೇ ನಮ್ಮ ದೇವರು. ದೇವರಿಗೆ ಸಾಲ ಕೊಡುವಷ್ಟು ದೊಡ್ಡವನಲ್ಲ ನಾನು' ಎಂದಿತ್ತು. ಸ್ವಲ್ಪ ತರಲೆ ಸ್ವಭಾವದ ನನ್ನ ತಮ್ಮ ಅದನ್ನು ಜೋರಾಗಿ ಓದಿ, ಕ್ಯಾಶಿಯರ್ ಗೆ ‘ನೀವು ದೇವರಿಗೆ ಸಾಲ ಕೊಡೋದು ಬೇಡ ಮಾರಾಯ್ರೆ, ನೈವೇದ್ಯಾಂತ ನೀವು ಮಾಡಿದ ಎಲ್ಲಾ ತಿಂಡಿಯದೂ ಒಂದೊಂದು ಪ್ಲೇಟ್ ಕೊಟ್ಬಿಡಿ ಸಾಕು' ಎಂದು ಹೇಳಿದ. ತಕ್ಷಣಕ್ಕೆ ಉತ್ತರಿಸಲಾರದ ಕ್ಯಾಶಿಯರ್ ಮುಖ ನೋಡಿ ನಮಗೆಲ್ಲಾ ಜೋರು ನಗು ಬಂದಿತು. 

-ಸುಮಾ ಕಳಸಾಪುರ, ಶಿವಮೊಗ್ಗ

***

‘ತಲೆ ಎಲ್ಲಿದೆ?’

ನನ್ನ ಮೊಮ್ಮಗಳು ಸಾನ್ವಿ ಮಾತಿನ ಮಲ್ಲಿ, ಪಟಪಟನೆ ಮಾತನಾಡುತ್ತಾಳೆ. ನಾನು ಅವಳಿಗೆ ನನ್ನ ಕಣ್ಣು, ಕಿವಿ, ಮೂಗು, ಬಾಯಿಯನ್ನು ಗುರುತಿಸಲು ಅಭ್ಯಾಸ ಮಾಡಿಸಿದ್ದೆ. ಕಳೆದ ವಾರ ನನ್ನ ಮಿತ್ರನೊಬ್ಬ ನಮ್ಮ ಮನೆಗೆ ಬಂದಿದ್ದ. ಅವನು ಸಾನ್ವಿ ಚುರುಕಾಗಿ ಮಾತನಾಡುವುದನ್ನು ನೋಡಿ ಬೆರಗಾಗಿದ್ದ. ನಾನು ಅವನಿಗೆ ‘ಅವಳು ನನ್ನ ಕಣ್ಣು, ಕಿವಿ, ಮೂಗು, ಬಾಯಿಯನ್ನು ಕರಾರುವಕ್ಕಾಗಿ ಗುರುತಿಸುತ್ತಾಳೆ. ನಿನಗೆ ಗೊತ್ತಾ? ಎಂದೆ. ಅವನು ಅಚ್ಚರಿಯಿಂದ ‘ಅರೆ ಹೌದಾ?’ ಎಂದವನೇ ‘ಸಾನ್ವಿ ಪುಟ್ಟಾ ತಾತನ ಮೂಗು ತೋರಿಸು' ಎಂದ. ಅವಳು ಕೂಡಲೇ ನನ್ನ ಮೂಗನ್ನು ಮುಟ್ಟಿ ತೋರಿಸಿದಳು. ಮತ್ತೆ ಅವನು ‘ತಾತನ ತಲೆ ಎಲ್ಲಿದೆ ತೋರಿಸು' ಎಂದು ಕೇಳಿದ.

ಅವಳೂ ಕೂಡಲೇ ‘ತಾತನಿಗೆ ತಲೆ ಇಲ್ಲ' ಎಂದು ಬಿಡೋದೇ! ನಾನು ಅವಳಿಗೆ ನನ್ನ ತಲೆಯ ವಿಷಯ ಹೇಳಿಲ್ಲವಾದುದರಿಂದ ಈ ಎಡವಟ್ಟಾಗಿತ್ತು.!

-ಎಂ.ಕೆ.ಮಂಜುನಾಥ್, ಬೆಂಗಳೂರು

***

ಬಂಜೆಯ ಬಾಳಿನ…

ಅಣ್ಣ ೫ ನೇ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆ. ಒಂದು ದಿನ ಅವರ ಶಾಲೆಯಲ್ಲಿ ಹಾಡಿನ ಸ್ಪರ್ಧೆಯನ್ನು ಇಡಲಾಗಿತ್ತಂತೆ. ಅಣ್ಣನ ಸಹಪಾಠಿಯೊಬ್ಬಳು ತನ್ನ ಸರದಿ ಬಂದಾಗ ‘ಬಂಜೆಯ ಬಾಳಿನ ಬೆಳಕಾಗಿ...' ಎಂದು ಹಾಡಲು ಪ್ರಾರಂಭಿಸಿದಳಂತೆ ಆಗ ಅಲ್ಲಿದ್ದ ಉಪಾಧ್ಯಾಯರು, ವಿದ್ಯಾರ್ಥಿಗಳು ಎಲ್ಲರೂ ಜೋರಾಗಿ ನಗಲಾರಂಭಿಸಿದರಂತೆ. ‘ಬಂದೆಯ ಬಾಳಿನ ಬೆಳಕಾಗಿ’ ಎಂದು ಹೇಳಬೇಕಾದದ್ದನ್ನು ತಪ್ಪಾಗಿಯಾದರೂ ಪೂರ್ತಿಯಾಗಿ ತನ್ಮಯತೆಯಿಂದ ಹಾಡಿ ಮುಗಿಸಿದಳಂತೆ. ಇವತ್ತಿಗೂ ಆ ಘಟನೆಯನ್ನು ನೆನಪಿಸಿಕೊಂಡು ನಗುತ್ತಿರುತ್ತಾನೆ.

-ರಶ್ಮಿ ದೀಕ್ಷಿತ್ ಆರ್, ಬೆಂಗಳೂರು

***

('ಮಯೂರ' ಸೆಪ್ಟೆಂಬರ್ ೨೦೧೪ರ ಸಂಚಿಕೆಯಿಂದ ಸಂಗ್ರಹಿತ)