‘ಮಯೂರ ಹಾಸ್ಯ' ಭಾಗ - ೧೫

‘ಮಯೂರ ಹಾಸ್ಯ' ಭಾಗ - ೧೫

‘ನೀವೇ ರೇಟು ಬಗೆಹರಿಸಿಕೊಳ್ಳಿ!’

ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಗೆಳೆಯ ಸದಾನಂದ ನಿವೃತ್ತಿ ಹೊಂದಿದ. ಬಳಿಕ ಸ್ವಂತ ಮನೆ ಕೂಡಾ ಕಟ್ಟಿಸಿಕೊಂಡ. ಅವನ ಮನೆಯ ಮುಂದೆ ಕಂಪೌಂಡಿನೊಳಗೆ ಆರು ಅಡಿ ಬಯಲು ಜಾಗವಿತ್ತು. ವಿವಿಧ ಬಣ್ಣಗಳ ಗುಲಾಬಿ, ಚೆಂಡು ಹೂ, ಮಲ್ಲಿಗೆ, ದಾಸವಾಳ... ಮುಂತಾದ ಹೂವಿನ ಗಿಡಗಳನ್ನು ಚೆನ್ನಾಗಿ ಬೆಳೆಸಿದನು. ಅಲ್ಲಲ್ಲಿ ಆಸ್ಟ್ರೇಲಿಯಾದ ದಟ್ಟ ಹಾಗೂ ಮೆತ್ತನೆಯ ಹುಲ್ಲನ್ನೂ ಸಹ ಬೆಳೆಸಿದ್ದ. ಪೇರಲ, ಚಿಕ್ಕು ಹಣ್ಣಿನ ಗಿಡಗಳನ್ನೂ ಬೆಳೆಸಿದನು. ಕೈತೋಟ ಬಹಳ ಆಕರ್ಷಕವಾಗಿ ಕಾಣುತ್ತಿತ್ತು. ಸದಾನಂದ ದಿನದ ಬಹುತೇಕ ಸಮಯವನ್ನು, ಮಣ್ಣು ಸಡಿಲ ಮಾಡುವುದು, ಕಳೆ ಕೀಳುವುದು, ಗೊಬ್ಬರ ಹಾಕುವುದು, ನೀರುಣಿಸುವುದು, ಪಾತಿ ಮಾಡುವುದು, ಔಷಧಿ ಸಿಂಪಡಿಸುವುದು... ಕೆಲಸದಲ್ಲಿ ಕಳೆಯುತ್ತಿದ್ದನು.

ಸಣಕಲು ದೇಹದ, ಮಾಸಿದ ತಲೆಕೂದಲಿನ, ಹರಕು ಬನಿಯನ್ ಹಾಗೂ ಮಾಸಿದ ಲುಂಗಿಯ ಮೇಲಿರುತ್ತಿದ್ದ ಸದಾನಂದ, ನೋಡುವವರಿಗೆ ಮನೆಯ ಯಜಮಾನನ ಹಾಗೆ ಕಾಣುತ್ತಿರಲಿಲ್ಲ. ಇವರ ಎದುರು ಮನೆಗೆ ಅದೇ ತಾನೆ ಬಾಡಿಗೆಗೆ ಬಂದ ಮಾಯಾವತಿ ಎಂಬ ಗೃಹಿಣಿ, ಸದಾನಂದ ಹೆಂಡತಿಗೆ ‘ನಿಮ್ಮ ಕೈತೋಟ ಬಹಳ ಚೆನ್ನಾಗಿದೆ! ನಿಮಗೆ ಒಳ್ಳೆಯ ಮಾಲಿ ಸಿಕ್ಕಿದ್ದಾನೆ. ತಿಂಗಳಿಗೆ ಅವನಿಗೆ ಎಷ್ಟು ಕೊಡ್ತೀರಿ? ನಾನೂ ಸ್ವಲ್ಪ ಹೆಚ್ಚೇ ಕೊಡ್ತೀನಿ! ನಮ್ಮ ಕೈ ತೋಟದಲ್ಲೂ ಪಾರ್ಟೈಮ್ ಕೆಲಸ ಮಾಡ್ತಾರಾ? ಕೇಳ್ರೀ’ ಅಂದಳು. ಸದಾನಂದನ ಹೆಂಡತಿ ತಟ್ಟನೆ ‘ಅವರ ಜೊತೆ ನೀವೇ ಮಾತಾಡಿ, ರೇಟು ಬಗೆಹರಿಸಿಕೊಳ್ಳಿ !’ ಎಂದು ಸಿಟ್ಟಿನಿಂದ ಹೇಳಿ ಮನೆಯೊಳಗೆ ಮಾಯವಾದಳು.

-ಕೆ.ಜಿ.ಭದ್ರಣ್ಣವರ, ಮುದ್ದೇಬಿಹಾಳ

***

ಬಣ್ಣ ಬದಲಾಯಿಸುವುದಿಲ್ಲ !

ನಮ್ಮ ಮಾವನ ಮಗನ ‘ನಿಶ್ಚಿತಾರ್ಥ’ ಕಾರ್ಯಕ್ರಮ ಇದ್ದುದರಿಂದ ನಾವೆಲ್ಲರೂ ಅವರ ಮನೆಯಲ್ಲಿ ಸೇರಿದ್ದೆವು. ನಮ್ಮ ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಮ್ಮ ಹಾಗೂ ಮಕ್ಕಳೆಲ್ಲರೂ ಸೇರಿದಾಗ ನಮ್ಮ ಮನೆ ಹರಟೆಯ ತಾಣವಾಗಿ ಬಿಡುತ್ತದೆ. ಮದ್ಯಾಹ್ನದ ಊಟದ ನಂತರ ಹಿರಿಯರೆಲ್ಲರೂ ತಮ್ಮ ಬಾಲ್ಯದ ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತಾ ನಮ್ಮನ್ನೆಲ್ಲಾ ರಂಜಿಸುತ್ತಿದ್ದರು. ಆಗ ನಮ್ಮ ದೊಡ್ಡಮ್ಮ ನನ್ನನ್ನು ಕುರಿತು ‘ನಿಮ್ಮ ಅಮ್ಮ ಚಿಕ್ಕವಳಿದ್ದಾಗ ಬೆಳ್ಳಗೆ ಇದ್ದಳು. ಈಗ ಆ ಬಣ್ಣ ಇಲ್ಲ. ನಾನು ಚಿಕ್ಕವಳಿದ್ದಾಗ ಎಲ್ಲರೂ ನನ್ನನ್ನು ‘ಕರಿ ಹುಡುಗಿ' ಅಂತಾನೇ ಕರೀತಿದ್ರು ಆದ್ರೇ ಈಗ ಆ ಬಣ್ಣ ತೇಲಿದೆ ನೋಡು' ಎಂದು ಹೇಳುತ್ತಿದ್ದರು. ಆಗ ಇವರ ಮಾತುಗಳನ್ನೆಲ್ಲಾ ಕೇಳುತ್ತಾ ಅಲ್ಲೇ ಕುಳಿತಿದ್ದ ನಮ್ಮ ಸತ್ಯಮಾವ ‘ನಾನು ಮಾತ್ರ ಇವರ ಹಾಗೆ ಬಣ್ಣ ಬದಲಾಯಿಸುವುದಿಲ್ಲವಪ್ಪ. ನಾನು ಆಗಲೂ ಇದೇ ಗ್ಯಾರಂಟಿ ಬಣ್ಣ ಈಗಲೂ ಅದೇ’. ಎಂದಾಗ ಅವರ ಮಾತಿಗೆ ಎಲ್ಲರೂ ಜೋರಾಗಿ ನಗಲಾರಂಭಿಸಿದೆವು!

-ಸಿಂಧು ಬಿ.ಎನ್., ಬೆಂಗಳೂರು

***

ಅವನು ಬೆಣ್ಣೆ ತಿನ್ನಬಹುದೇ?

ಆಗ ನನ್ನ ಮಗನಿಗೆ ನಾಲ್ಕು ವರ್ಷ. ಪ್ರತಿದಿನವೂ ‘ಅಮ್ಮಾ, ಕಥೆ ಹೇಳಮ್ಮಾ’ ಎಂದು ಪೀಡಿಸುತ್ತಿದ್ದ. ಅವನಿಗೆ ಎಷ್ಟು ಕತೆ ಹೇಳೀದರೂ ಸಾಲುತ್ತಿರಲಿಲ್ಲ. ಮತ್ತೇನೂ ತೋಚದೆ ಅಂಗಡಿಯಲ್ಲಿ ಸಿಗುತ್ತಿದ್ದ ಪೌರಾಣಿಕ ಚಿತ್ರಕತೆಗಳ ಪುಸ್ತಕವನ್ನು ತಂದು ಚಿತ್ರ ತೋರಿಸುತ್ತಾ ಅದರ ಕತೆ ಹೇಳತೊಡಗಿದೆ.

ಆಗೆಲ್ಲ ತುಪ್ಪ ಮಾಡಲು ಮನೆಗೆ ಬೆಣ್ಣೆ ತರುತ್ತಿದ್ದೆವು. ಸ್ವಲ್ಪ ಬೆಣ್ಣೆಯನ್ನು ಮಾತ್ರ ಕಾಯಿಸಿ ತುಪ್ಪ ಮಾಡಿ ಉಳಿದಿದ್ದನ್ನು ‘ಆಗಾಗ ಸಂಜೆಯ ತಿಂಡಿಗೆಂದು ಬ್ರೆಡ್ ಗೆ ಹಚ್ಚಿ ಮಗನಿಗೆ ಕೊಡುತ್ತಿದ್ದೆ. ಆದರೆ, ಮುಂಜಾನೆಯೂ ಅದು ಬೇಕೆಂದು ಹಠ ಹಿಡಿಯುತ್ತಿದ್ದ. ಶಾಲೆಗೂ ಬ್ರೆಡ್, ಬೆಣ್ಣೆಯೇ ಬೇಕೆಂದು ಅಳುತ್ತಿದ್ದ. ‘ಹಾಗೆಲ್ಲ ಹಠ ಮಾಡಬಾರದು ಕಣೋ. ಬೆಣ್ಣೆ ಜಾಸ್ತಿ ತಿಂದರೆ ವಾಂತಿಯಾಗುತ್ತೆ. ಜ್ವರ ಬರುತ್ತೆ.’ ಎಂದು ಅವನನ್ನು ಹೆದರಿಸಲು ನೋಡಿದೆ. ಅದಕ್ಕೆ ತಕ್ಷಣ ‘ಅವನು ಮಾತ್ರ ಬೆಣ್ಣೆ ತಿನ್ನಬಹುದೇ?’ ಎಂದು ಕೇಳಿದ. ನನಗೆ ಅವನ ಮಾತು ಅರ್ಥವಾಗದೆ ‘ನಮ್ಮ ಮನೆಯಲ್ಲಿ ನೀನಲ್ಲದೆ ಇನ್ಯಾರು ತಿಂತಾರೋ’ ಎಂದು ಕೇಳಿದೆ.

‘ನಿನ್ನೆ ನೀನು ಕೃಷ್ಣನ ಕತೆಯಲ್ಲಿ ಬಾಲಕೃಷ್ಣ ಪ್ರತಿದಿನ ಅವರಮ್ಮ ಕೊಡುವ ಬೆಣ್ಣೆ ಅಲ್ಲದೆ ಅಕ್ಕ, ಪಕ್ಕದ ಮನೆಗೆಲ್ಲ ಹೋಗಿ ಬೆಣ್ಣೆ ಕದ್ದು ತಿಂತಾನೆ ಅಂತ ಹೇಳಿದ್ದೆ. ಹಾಗೆ ತಿಂದರೆ ಅವನಿಗೆ ಮಾತ್ರ ಏನೂ ಆಗಲ್ಲ ಅವನು ಮಾತ್ರ ಅಷ್ಟೊಂದು ಬೆಣ್ಣೆ ತಿನ್ನಬಹುದೇ? ಎಂದು ತನ್ನ ಬಾಲ ಭಾಷೆಯಲ್ಲಿ ಕೇಳಿದಾಗ, ಏನೂ ಉತ್ತರಿಸಲಾಗದೆ ಅವಕ್ಕಾಗಿದ್ದೆ.

-ಎಸ್.ವಿಜಯ ಗುರುರಾಜ, ಬೆಂಗಳೂರು

***

(‘ಮಯೂರ' ಸೆಪ್ಟೆಂಬರ್ ೨೦೧೫ರ ಸಂಚಿಕೆಯಿಂದ ಸಂಗ್ರಹಿತ)