‘ಮಯೂರ' ಹಾಸ್ಯ - ಭಾಗ ೧೮

‘ಮಯೂರ' ಹಾಸ್ಯ - ಭಾಗ ೧೮

ಒಂಟೆ ಕಳಿಸಬೇಡ

ಟಿ.ವಿ.ಯಲ್ಲಿ ರಾತ್ರಿ ಹತ್ತೂವರೆಯಿಂದ ಹನ್ನೊಂದು ಗಂಟೆವರೆಗೆ ಪ್ರಸಾರವಾಗುವ ಕಾರ್ಯಕ್ರಮ ಒಂದರಲ್ಲಿ ವೀಕ್ಷಕರಿಂದ ಪ್ರಶ್ನೆ ಆಹ್ವಾನಿಸಿದ್ದರು. 

ಜೀವಮಾನವಿಡೀ ನೀರನ್ನೇ ಕಮ್ಮಿ ಕುಡಿಯುವ ಜೀವಿ ಯಾವುದು? ಎಂಬುದಾಗಿ ಪ್ರಶ್ನೆ ಕೇಳಿ, ಒಂಟೆ, ಗೊರಿಲ್ಲಾ, ಕಾಂಗರೂ, ಇಲಿ ಎನ್ನುವ ನಾಲ್ಕು ಆಯ್ಕೆಯನ್ನು ಕೊಟ್ಟಿದ್ದರು. ಉತ್ತರ ಕಳುಹಿಸಲು ಒಂದು ದಿನ ಕಾಲಾವಕಾಶವಿತ್ತು.

ನಮ್ಮ ಕಚೇರಿಯಲ್ಲಿ ಮರುದಿನ ಮಧ್ಯಾಹ್ನದ ಮೇಲೆ ಹೆಚ್ಚಿನ ಕೆಲಸವಿಲ್ಲದಿರುವುದರಿಂದ ಲೋಕಾಭಿರಾಮ ಮಾತನಾಡುತ್ತಾ ಕುಳಿತಿರುತ್ತೇವೆ. ‘ಕಡಿಮೆ ನೀರನ್ನು ಕುಡಿದು ಬದುಕುವ ಜೀವಿ ಯಾವುದು?’ ಎನ್ನುವ ನನ್ನ ಪ್ರಶ್ನೆಗೆ ಹಿರಿಯರೊಬ್ಬರು ‘ಒಂಟೆ' ಎಂಬುದಾಗಿ ತಕ್ಷಣ ಉತ್ತರಿಸಿದರು. ಮರಳುಗಾಡಿನಲ್ಲಿ ವಾಸಿಸುವ ಒಂಟೆ ನೀರನ್ನು ಕಮ್ಮಿ ಕುಡಿಯುತ್ತದೆ ಎಂಬ ಸ್ಪಷ್ಟನೆಯನ್ನೂ ನೀಡಿದರು. ಆ ಉತ್ತರ ಸರಿ ಇರಬಹುದೆಂದು ನಾನು ಕೂಡಲೇ ‘ಹಾಗಾದರೆ ಒಂಟೆಯನ್ನೇ ಕಳಿಸುತ್ತೇನೆ' ಎಂದು ಬಿಟ್ಟೆ. ‘ಒಂಟೆ ಕಳುಹಿಸಬೇಡಿ. ಸಾಕಲು ಕಷ್ಟವಾದೀತು. ಒಂಟೆ ಎನ್ನುವ ಉತ್ತರ ಮಾತ್ರ ಕಳುಹಿಸಿ' ಎಂದರು ನಗುತ್ತಾ... ಮಾತಿನ ಒಳಾರ್ಥ ತಿಳಿದು ನಾನೂ ನಕ್ಕೆ!

-ಎಸ್ ಎನ್ ಕೆ. ಕಡೂರು

***

ಓಟು ಹಾಕಿದ ಕೃಷ್ಣ

ಊರಿನಿಂದ ಸಂಬಂಧಿಕರು ಬಂದಿದ್ದರು. ಎಲ್ಲರೂ ಸೇರಿ ರಾತ್ರಿ ಬಿತ್ತರಗೊಳ್ಳುವ ಮಹಾಭಾರತ ಧಾರಾವಾಹಿಯನ್ನು ತಲ್ಲೀನರಾಗಿ ನೋಡುತ್ತಿದ್ದೆವು. ಸಂದರ್ಭವೇ ಹಾಗಿತ್ತು. ಶಕುನಿ ಮತ್ತು ಶ್ರೀಕೃಷ್ಣ ಪಗಡೆ ಆಡುವ ಸಂದರ್ಭವದು. ಶಕುನಿಯ ಮೋಸದ ದಾಳಗಳನ್ನು ಎಡಗೈಯಲ್ಲಿ ಹಿಡಿದ ಅವುಗಳನ್ನು ಹೊಸಕಿ ಹಾಕುವುದನ್ನು ರೋಚಕವಾಗಿ ತೋರಿಸುತ್ತಿದ್ದರು. ಟಿ.ವಿ. ಸ್ಕ್ರೀನ್ ನ ತುಂಬ ಆತನ ಕೈ ಮಾತ್ರ ಕಾಣುತ್ತಿತ್ತು.

‘ಮಾಮಿ..ಮಾಮಿ.. ನೋಡಲ್ಲಿ... ಶ್ರೀಕೃಷ್ಣನ ಬೆರಳಿಗೂ ನಿಮಗೆಲ್ಲರಿಗೂ ಇರುವಂತಹ ಓಟು ಹಾಕಿದ ಗುರುತಿದೆ. ಶ್ರೀಕೃಷ್ಣ ಪರಮಾತ್ಮ ಕೂಡ ಭೂಮಿಗೆ ಬಂದು ಓಟು ಹಾಕಿದ್ದಾನೆಂದು ಕಾಣುತ್ತೆ. ನಿಜರೂಪದಲ್ಲಂತೂ ಬಂದಿರಲ್ಲ. ಯಾವ ರೂಪದಲ್ಲಿ ಬಂದಿದ್ದಾನೋ.. ಯಾವ ಪಕ್ಷಕ್ಕೆ ಓಟು ಹಾಕಿದ್ದಾನೋ ಆ... ಕೃಷ್ಣನೇ ಬಲ್ಲ !

ಸಂಬಂಧಿಕರ ಮಗ ಆರನೇ ಕ್ಲಾಸಿನ ಚೂಟಿ ಚಿಲ್ಟಾರಿ ಹೇಳಿದ ಧಾಟಿಗೆ ಎಲ್ಲರೂ ಗೊಳ್ಳೆಂದು ನಕ್ಕೆವು. ಹೌದು, ಶ್ರೀಕೃಷ್ಣನ ಪಾತ್ರಧಾರಿಯ ಬೆರಳಿನ ಮೇಲೆ ಶಾಯಿಯ ಗುರುತಿತ್ತು!

-ಲತಾ ಉದಯ ಹೆಗಡೆ, ಹುಬ್ಬಳ್ಳಿ

***

ಮೀನಿನ ರಹಸ್ಯ

ನನ್ನ ಆತ್ಮೀಯ ಮಿತ್ರ, ಸಹೋದ್ಯೋಗಿಯೂ ಆದ ವೇಣುಗೋಪಾಲನಿಗೆ ‘ಇವತ್ತು ಮನೆಯಲ್ಲಿ ಊಟದಲ್ಲೇನು ವಿಶೇಷ?’ ಎಂದು ಕೇಳಿದರೆ ಪ್ರತೀ ಸಲವೂ ಮೀನಿನ ಫ್ರೈ, ಮೀನಿನ ಬಿರಿಯಾನಿ, ಸಾರು, ಪಲ್ಯ, ಸೂಪ್... ಹೀಗೆ ಮೀನಿನ ವಿವಿಧ ವಿಶೇಷಗಳನ್ನು ಹೇಳುತ್ತಿದ್ದ.

ಆಮೇಲೆ ಅವರ ಮನೆಯ ಅಡುಗೆಯ ಹಿಂದಿನ ಗುಟ್ಟು ಗೊತ್ತಾಯಿತು. ಅವನ ಹೆಂಡತಿಯ ಹೆಸರು ‘ಮೀನಾ ಕುಮಾರಿ' ಎಂದಾಗಿತ್ತು.

-ಅಕ್ಷಯ ಕಾಂತಬೈಲು, ಮಡಿಕೇರಿ

***

ತಾಯಿತದ ಎಫೆಕ್ಟ್

ಎರಡನೇ ಕ್ಲಾಸು ವಿದ್ಯಾರ್ಥಿಯಾದ ಪಕ್ಕದ್ಮನೆ ಪುಟ್ಟ ಎಂದಿನಂತೆ ನಮ್ಮನೆಗೊಮ್ಮೆ ಭೇಟಿ ಕೊಡಲು ಬಂದಿದ್ದ. ಅವನ ಕೊರಳಲ್ಲಿ ಅದುವರೆಗೂ ನಾನು ಕಂಡಿರದ ತಾಯಿತವೊಂದು ತೂಗಾಡುತ್ತಿತ್ತು. ಏನೋ ಇದು ಅಂತ ಕೇಳಿದೆ. ಅದಕ್ಕವನು, ನಾನು ದೊಡ್ಡವನಾದ್ರೂ ರಾತ್ರಿ ಹಾಸಿಗೆ ಮೇಲೆ ಉಚ್ಚೆ ಮಾಡ್ತೀನಲ್ಲ ಅದ್ಕೆ ತಾಯಿತ ಕಟ್ಸಿದ್ದಾರೆ. ಇದನ್ನು ಕಟ್ಕೊಂಡ್ರೆ ಹಾಸಿಗೆ ಮೇಲೆ ಉಚ್ಚೆ ಮಾಡಲ್ವಂತೆ ಅಂತಂದ. ಸರಿ ಕಣಪ್ಪ ಅಂತ ನಕ್ಕು ಸುಮ್ಮನಾಗಿದ್ದೆ. 

ಇದಾದ ಒಂದೆರಡು ದಿನಗಳ ನಂತರ ಅವನ ಅಜ್ಜಿ ನಮ್ಮ ಮನೆಗೆ ಬಂದಿದ್ರು. ತಾಯಿತದ ವಿಷಯ ಪ್ರಸ್ತಾಪಿಸಿ, ಏನಜ್ಜಿ ನಿಮ್ಮ ಮೊಮ್ಮಗ ಹಾಸಿಗೆ ಮೇಲೆ ಉಚ್ಚೆ ಹುಯ್ಯೋದು ನಿಲ್ಲಿಸಿದ್ನಾ? ತಾಯಿತದ ಎಫೆಕ್ಟ್ ಹೇಗಿದೆ' ಅಂತ ವಿಚಾರಿಸಿದೆ. ಅದಕ್ಕವರು, ಅದೇ ರಾಮಾಯಣ ಕಣಪ್ಪ. ತಾಯಿತ ಕಟ್ಕೊಂಡ ಮೇಲೂ ಯಾಕೋ ಹಾಸಿಗೆ ಮೇಲೆ ಉಚ್ಚೆ ಹುಯ್ತೀಯಾ ಅಂತ ಕೇಳಿದ್ರೆ, ‘ಹೋಗಜ್ಜಿ, ಒಂದೇ ದಿನಕ್ಕೆ ನಿಲ್ಲಿಸಲು ಆಗುತ್ತಾ ಅಂತಾನೆ' ಅಂತ ನಗುತ್ತಲೇ ಬೇಸರ ತೋಡಿಕೊಂಡ್ರು.

-ಎಚ್.ಕೆ.ಶರತ್, ಹಾಸನ

***

(ಜನವರಿ ೨೦೧೫ರ ಮಯೂರ ಪತ್ರಿಕೆಯಿಂದ ಸಂಗ್ರಹಿತ)