‘ಮಯೂರ' ಹಾಸ್ಯ - ಭಾಗ ೨೦
ಚಪ್ಪಲಿ ಅಂಗಡೀಲಿ
ಶಿರಡಿಯಿಂದ ಧಾರವಾಡಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆವು. ಬೆಂಗಳೂರಿಗೆ ಹೊರಟಿದ್ದ ದಂಪತಿಯ ೩-೪ ವರ್ಷದ ತುಂಟ ಮಗುವೊಂದು ಬಸ್ಸಿನ ತುಂಬೆಲ್ಲಾ ಓಡಾಡುತ್ತಾ ಎಲ್ಲರನ್ನೂ ಮುದ್ದಾಗಿ ಮಾತನಾಡಿಸುತ್ತಿತ್ತು. ಮುಂದಿನ ಸೀಟಿನಲ್ಲಿದ್ದ ಹಿರಿಯರೊಬ್ಬರು ಅದನ್ನು ಮಾತನಾಡಿಸಲು ಶುರುಮಾಡಿದರು.
‘ಎಲ್ಲಿಗೆ ಹೋಗಿದ್ಯೋ ಪುಟ್ಟಾ?’ ಎಂದು ಕೇಳಿದರು.
‘ಶಿರಡಿಗೆ ಹೋಗಿದ್ವಿ. ಅಲ್ಲಿ ಇಷ್ಟು ದೊಡ್ಡ ಅಜ್ಜಾ ಕೂತ್ಕೊಂಡಿದ್ರು' ಅಂತಾ ಕೈಯನ್ನು ಮೇಲೆ, ಕೆಳಗೆ ಮಾಡಿ ಹೇಳುತ್ತಾ, ಅವ್ರಿಗೆ ನಮಸ್ಕಾರ ಮಾಡಿ ಬಂದೆ ಅಂತಾ ಹೇಳಿ ನನ್ನದು ಹೊಸಾ ಚಪ್ಪಲಿ ಅಂತಾ ಚಪ್ಪಲಿಯನ್ನು ತೋರಿಸಿದ.
‘ಚಪ್ಪಲಿಯನ್ನು ಬೆಂಗಳೂರಿನಲ್ಲಿ ತೆಗೆದುಕೊಂಡದ್ದೋ ಅಥವಾ ಶಿರಡಿಯಲ್ಲಿ ತೆಗೆದುಕೊಂಡದ್ದೋ’ ಅಂತಾ ಆ ಹಿರಿಯರು ಕೇಳಿದಾಗ ಆ ಮಗು ‘ಚಪ್ಪಲಿ ಅಂಗಡಿಯಲ್ಲಿ ತಗೊಂಡ್ವಿ' ಎನ್ನುತ್ತಿದ್ದ ಹಾಗೇ ಅಕ್ಕಪಕ್ಕ ಕೇಳಿಸಿಕೊಂಡವರೆಲ್ಲಾ ಗೊಳ್ಳೆಂದು ನಕ್ಕರು.
-ನಳಿನಿ ಟಿ.ಭೀಮಪ್ಪ
***
ಹಿರಿಯರ ಜಾಣತನ
ಶಿವಮೊಗ್ಗ ಇಂಟರ್ ಸಿಟಿ ರೈಲಿನಲ್ಲಿ ಎದುರುಬದುರು ಸೀಟಿನಲ್ಲಿ ಆರು ಜನ ಯುವಕರು ಕುಳಿತಿದ್ದರು. ಆ ಬೋಗಿ ಕಾಯ್ದಿರಿಸದ ಬೋಗಿಯಾಗಿತ್ತು. ರೈಲು ಹೊರಡುವ ಸಮಯಕ್ಕೆ ಹತ್ತು ನಿಮಿಷವಿರುವಾಗ ವಯಸ್ಸಾದವರೊಬ್ಬರು ಆ ಬೋಗಿ ಹತ್ತಿದರು. ಸೀಟು ಖಾಲಿ ಇರಲಿಲ್ಲ. ಕುಳಿತಿದ್ದ ಯುವಕರ ಬಳಿ ಸ್ವಲ್ಪ ಜಾಗ ಕೊಡುವಂತೆ ಕೇಳಿದರು. ಆ ಹುಡುಗರು ಸುಮ್ಮನಿದ್ದರು. ಆ ಹಿರಿಯರು ಮತ್ತೊಮ್ಮೆ ಕೇಳಿದಾಗ ‘ಅಜ್ಜಾ, ಒಂದೆರಡು ಗಂಟೆ ಆದರೆ ಜಾಗ ಬಿಡಬಹುದಿತ್ತು. ನಾವು ಶಿವಮೊಗ್ಗಕ್ಕೆ ಹೊರಟಿರುವುದು. ಐದಾರು ಗಂಟೆ ನಿಲ್ಲಲು ಆಗುವುದಿಲ್ಲ' ಎಂದರು. ಆಗ ಆ ಹಿರಿಯರು ‘ಒಂದೆರಡು ಗಂಟೆ ಪ್ರಯಾಣ ಆಗಿದ್ದರೆ ಜಾಗ ಬಿಡುತ್ತಿದ್ದಿರಾ?’ ಎಂದಾಗ ಎಲ್ಲರೂ ‘ಹೂಂ’ ಗುಟ್ಟಿದರು. ‘ಇದೇ ಮಾತೇನಪ್ಪಾ ನಿಮ್ಮದು?’ ಎಂದು ಮತ್ತೆ ಕೇಳಿದಾಗಲೂ ‘ಹೂಂ’ ಗುಟ್ಟಿದರು. ಆಗ ಹಿರಿಯರು ‘ಒಂದು ಕೆಲಸ ಮಾಡಿ. ನೀವು ಹೇಗೂ ಆರು ಜನರಿದ್ದೀರಲ್ಲಾ? ಒಬ್ಬೊಬ್ಬರು ಒಂದೊಂದು ಗಂಟೆ ನಿಂತುಕೊಳ್ಳಿ. ಅಲ್ಲಿಗೆ ಶಿವಮೊಗ್ಗ ಬಂದೇ ಬಿಡುತ್ತದೆ. ಮೊದಲು ನನಗೆ ಯಾರು ಜಾಗ ಕೊಡುತ್ತೀರೋ ನೋಡಿ!’ ಎಂದರು.
-ಸು.ವಿಜಯಲಕ್ಷ್ಮಿ
***
ಟ್ಯಾಬ್ಲೆಟ್ ಬೇಡ
ನಮ್ಮ ಪಕ್ಕದ ಮನೆಯ ಶಿಕ್ಷಕರ ಪುಟ್ಟ ಮಗ ಬೇರೆಯವರ ಮನೆಯಲ್ಲಿ ಪುಟ್ಟ ಟ್ಯಾಬ್ಲೆಟ್ ನೋಡಿ ಬಂದಿದ್ದ. ಅದರಲ್ಲಿನ ಗೇಮ್ ಗಳನ್ನು ಆಡಿದ ಮೇಲೆ ತನಗೂ ಅಂಥದ್ದೇ ಬೇಕೆಂದು ಕೊಡಿಸಲು ಅಪ್ಪನಲ್ಲಿ ಹಟ ಹಿಡಿದು ಅಳುತ್ತ ಇದ್ದ. ಹಳ್ಳಿಯಿಂದ ಬಂದಿದ್ದ ಅವನ ಅಜ್ಜಿ, ‘ಯಾಕಂತೆ ಅಷ್ಟು ಅಳ್ತಾ ಇದಾನೆ?’ ಕೇಳಿತು. ‘ಅವನಿಗೆ ಟ್ಯಾಬ್ಲೆಟ್ ಬೇಕಂತೆ. ಇಷ್ಟು ಚಿಕ್ಕವನಿಗೆ ಈಗಲೇ ಬೇಡ ಅಂದ್ರೆ ಅರ್ಥವಾಗೋದೇ ಇಲ್ಲ' ಎಂದರು ಅವನ ತಂದೆ.
ಅದನ್ನು ಕೇಳಿದ ಅಜ್ಜಿ ‘ಹೌದು ಕಣೋ. ನೀನಿನ್ನೂ ಚಿಕ್ಕವ. ಈಗಲೇ ಟ್ಯಾಬ್ಲೆಟ್ ಗೀಬ್ಲೆಟ್ ತಗೊಳ್ಳೊದು ಶರೀರಕ್ಕೆ ಅಷ್ಟು ಚೆನ್ನಾಗಿರೋಲ್ಲ. ಅಂತೂ ಬೇಕಿದ್ರೆ ಆಯುರ್ವೇದ ಪಂಡಿತರ ಹತ್ರ ಹೋಗಿ ಚಿಕ್ಕ ಮಾತ್ರೆ ಏನಾದರೂ ತಿಂದು ಬಿಡು' ಎಂದು ಮೊಮ್ಮಗನಿಗೆ ಬುದ್ಧಿ ಹೇಳಿತು.
-ಪ.ರಾಮಕೃಷ್ಣ ಶಾಸ್ತ್ರಿ
***
ಬಗ್ ಸೀ
ನನ್ನ ಸ್ನೇಹಿತೆ ಅಮೇರಿಕದಿಂದ ಬಂದ ತನ್ನ ಮಗಳು, ಮೊಮ್ಮಗಳನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದಳು. ಆ ಮಗುವಿಗೆ ಕನ್ನಡ ಬರುತ್ತಿರಲಿಲ್ಲ. ಹಾಗಾಗಿ ನಮ್ಮ ಬಳಿ ಮಾತು ಕಡಿಮೆಯಿತ್ತು. ಸ್ನೇಹಿತೆಗೆ ಅದರ ಭಾಷೆ ಸ್ವಲ್ಪ ಅರ್ಥ ಆಗುತ್ತಿತ್ತು. ಹಾಗಾಗಿ ಅದು ಏನು ಹೇಳಿದರೂ ತಲೆಯಾಡಿಸಿ ನಗುತ್ತಿದ್ದಳು. ನಾವೆಲ್ಲಾ ಮಾತಿಗೆ ತೊಡಗಿದ್ದಾಗ ಮಗು ಅಜ್ಜಿ ತೊಡೆ ಬಿಟ್ಟು ದಿವಾನದ ಮೇಲೆ ಕೂತುಕೊಂಡಿತು. ಸ್ವಲ್ಪ ಹೊತ್ತಿಗೆ ‘ಮಾಮ್ ಸೀ ಬಗ್ ಬಗ್' ಎಂದು ಕೂಗಿತು. ನನ್ನ ಸ್ನೇಹಿತೆ ಅವಳ ಹತ್ತಿರ ಹೋಗಿ ‘ವಾಟ್ ಪುಟ್ಟಾ’ ಎಂದಳು. ಮತ್ತೆ ಆ ಹುಡುಗಿ ‘ಬಗ್ ಸೀ’ ಅಂತ ದಿವಾನದ ಕೆಳಗೆ ತೋರಿಸಿತು. ನನ್ನ ಸ್ನೇಹಿತೆ ಬಗ್ಗಿ ಬಗ್ಗಿ ನೋಡಿದರೂ ಏನೂ ಕಾಣಲಿಲ್ಲ. ಆ ಹುಡುಗಿ ಮಾತ್ರ ಒಂದೇ ಸಮನೆ ಕೂಗುತ್ತಿತ್ತು. ‘ಬಗ್ ಸೀ’ ಎಂದು. ‘ಬಗ್ಗೇ ನೋಡಿದ್ನಲ್ಲಾ ಅಲ್ಲೇನೂ ಇಲ್ಲಪ್ಪಾ’ ಅಂತ ಹೇಳಿದ್ರೂ ಕೇಳದೆ ಜೋರಾಗಿ ಅಳೋಕೆ ಶುರು ಮಾಡಿತು. ‘ಅವರಮ್ಮ ಎದ್ದೋಗಿ ನೋಡಿ ಜೋರಾಗಿ ನಗಲು ಶುರು ಮಾಡಿದಳು. ‘ಏನಾಯ್ತೆ' ಎಂದು ನಾನು ಕೇಳಿದೆ. ಅದಕ್ಕವಳು ಹೇಳಿದ್ದು, ‘ಪಾಪು, ಕೆಳಗಿಳಿಯೋಕೆ ನೋಡಿದ್ದಾಳೆ. ಅಲ್ಲಿ ಗೊದ್ದ ಓಡಾಡ್ತಿದ್ಯಲ್ಲ ಹೆದ್ರಕೊಂಡು ಕೂಗಿದ್ದಾಳೆ. ಅವ್ಳಿಗೆ ಕನ್ನಡ ಬರಲ್ವಲ್ಲಾ ಅದಕ್ಕೆ ‘ಬಗ್' ಅಂದಿದ್ದಾಳೆ' ಅಂದಳು!
-ಸುಮಾ ಕಳಸಾಪುರ
***
(ಜನವರಿ ೨೦೧೭ರ ‘ಮಯೂರ’ ಪತ್ರಿಕೆಯಿಂದ ಸಂಗ್ರಹಿತ)