‘ಮಯೂರ' ಹಾಸ್ಯ (ಭಾಗ - ೨೩)

‘ಮಯೂರ' ಹಾಸ್ಯ (ಭಾಗ - ೨೩)

ಮುಖ ತಲೆ ತೆಗೆದ …

ಗೆಳೆಯ ರಾಜೀವ್ ತನ್ನ ಮನೆಯ ಸಮಾರಂಭ ಒಂದರಲ್ಲಿ ತನ್ನ ಹತ್ತು ವರ್ಷದ ಮಗನ ಕೈಗೆ ಕ್ಯಾಮರಾ ಕೊಟ್ಟು ‘ಚೆನ್ನಾಗಿ ಫೋಟೋ ತೆಗೀ ಬೇಕು. ಮುಖ, ತಲೆ ತೆಗಿಬೇಕು ಆಯ್ತಾ?’ ಎಂದು ಆದೇಶ ನೀಡಿದ. ಸಮಾರಂಭವೆಲ್ಲಾ ಮುಗಿದ ಬಳಿಕ ಮಗ ತೆಗೆದಿದ್ದ ಫೊಟೋ ನೋಡೋಣ ಎಂದು ಕ್ಯಾಮರಾ ಆನ್ ಮಾಡಿದರೆ, ಯಾವ ಫೊಟೋದಲ್ಲೂ ಒಬ್ಬರದೂ ಮುಖ ಕಾಣುತ್ತಿಲ್ಲ ! ‘ಏನೋ ಇದು? ಯಾವ ಫೋಟೋದಲ್ಲೂ ಯಾರದೂ ಮುಖ, ತಲೆನೇ ಕಾಣ್ತಾ ಇಲ್ಲ? ‘ ಎಂದು ಕೇಳಿದ. ‘ನೀವೇ ಹೇಳಿದಿರಲ್ಲ ಅಪ್ಪ, ಮುಖ, ತಲೆ ತೆಗಿ ಅಂತ... ಅದಕ್ಕೆ ನಾನು ಅವೆರಡೂ ಕಾಣದಂತೆ ಕುತ್ತಿಗೆಯಿಂದ ಕೆಳಗೆ ಮಾತ್ರ ಫೊಟೋ ತೆಗೆದೆ' ಎಂದಾಗ ರಾಜೀವನ ಮುಖ ನೋಡುವಂತಿರಲಿಲ್ಲ. 

-ಎಂ. ಆರ್. ರಘುನಾಥ್

***

ಅಮೇರಿಕೆಯಲ್ಲಿ !

ಅಂದು ಭಾನುವಾರ. ಆ ಕೆಲಸಕ್ಕೆ ಅಂದೇ ಸರಿಯಾದ ದಿವಸ. ಸರಿ. ಹೊರಟೆ. ಅಲ್ಲೂ ಸರದಿಯ ಸಾಲಿತ್ತು. ಆದರೆ ಕಡಿಮೆ ಜನವಿದ್ದರು. ಹಾಗೂ ಹೀಗೂ ನನ್ನ ಸರದಿ ಬಂದಾಗ ಸಿಂಹಾಸನವನ್ನೇರಿದೆ. ಸೀನ ತಲೆಯ ಮೇಲೆ ಕೈಯಾಡಿಸತೊಡಗಿದ. ಅಲ್ಲಿದ್ದವರೊಬ್ಬರ ಮೊಬೈಲ್ ರಿಂಗ್ ಆಯ್ತು. ‘ಎಲ್ಲಿದ್ದಿಯೋ?’ ಅತ್ತಲಿಂದ ದನಿ. ‘ನಾನಾ..ಅಮೇರಿಕಾದಲ್ಲಿ' ಎಂದ. ‘ಅದ್ಯಾವಾಗ ಹೋದ್ಯೋ ಬಡ್ಡೆತ್ತದೆ?’ ‘ಹಿ ಹಿ ಹಿ' ಎಂದು ನಕ್ಕ. ‘ಯಾವಾಗ ವಾಪಾಸ್ ಬತ್ತೀಯಾ?’ ‘ರಾಮಸ್ವಾಮಿ ಸರ್ಕಲ್ ಬಳಿ ಇರೋ ಅಮೇರಿಕನ್ ಹೇರ್ ಕಟ್ಟಿಂಗ್ ಸಲೂನ್ ಕಣ್ಲಾ’... ‘ಅಯ್ಯೋ ಬಡ್ಡೀ ಮಗ್ನೆ ಇದೇನಪ್ಪಾ. ಪಾಸ್ ಪೋರ್ಟ್ ಇಲ್ಲಾ... ವೀಸಾ ಇಲ್ಲಾ ಅಮೇರಿಕಾಗೆ ಹೆಂಗ್ ಹೋದ ಅಂತ ಆಶ್ಚರ್ಯ ಆಯ್ತು ಕಣ್ಲಾ...'ಎಂದವನು ಫೋನ್ ಕಟ್ ಮಾಡಿದ. ನಾನೂ ನಗುತ್ತ ಮನೆ ಕಡೆ ಹೋದೆ. 

-ಕೊ.ಸು.ನರಸಿಂಹ ಮೂರ್ತಿ

***

ದೊಡ್ಡ ‘ತ' ಬರಿ

ನಾನು ನಲಿಕಲಿ ತರಗತಿಯ ಶಿಕ್ಷಕನಾಗಿದ್ದೇನೆ. ಮಕ್ಕಳ ಮುದ್ದುಮುಖ. ಒಮ್ಮೆ ಎರಡನೇ ತರಗತಿಯ ಮಕ್ಕಳಿಗೆ ಶಬ್ದ ಬರಹ ಬರೆಸುತ್ತ ಇದ್ದೆ. ಕೌಸಲ್ಯಾ ಎಂಬ ಹುಡುಗಿ, ‘ರಥ' ಎಂಬ ಶಬ್ದವನ್ನು ಬರೆಯುವಾಗ ‘ಥ' ಎಂಬ ಅಕ್ಷರ ಬರೆಯುವ ಬದಲು ‘ತ' ಬರೆದಳು. ಆಗ ಪಕ್ಕದಲ್ಲಿ ಕುಳಿತ ಹುಡುಗಿ ‘ದೊಡ್ಡ ‘ತ' ಬರಿ' ಎಂದಳು. ಆಗ ಅವಳು ದೊಡ್ಡದಾಗಿ ‘ತ' ಎಂದು ಬರೆಯಬೇಕೆ! ನಾನು ಆಗ, ‘ಅದು ಹಾಗಲ್ಲ, ಹೀಗೆ ‘ ಎಂದು ತೋರಿಸಬೇಕಾಯಿತು.

-ಬಾಲು ಪಟಗಾರ

***

ಭೋಜನ!

ನೆರೆಮನೆಗೆ ಹೊಸದಾಗಿ ಆಗಮಿಸಿದ ಬಂಗಾಲಿ ಕುಟುಂಬದ ಯಜಮಾನ ಅಂದು ಬೆಳಿಗ್ಗೆ ನಮ್ಮ ಮನೆಗೆ ಆಗಮಿಸಿ ವಿನಂತಿಸಿದ ‘ಇಂದು ಮದ್ಯಾಹ್ನ ೧೨ ಗಂಟೆಯಿಂದ ನಮ್ಮ ಮನೆಯಲ್ಲಿ ಭೋಜನ ಇದೆ. ದಯವಿಟ್ಟು ನೀವೂ ಬನ್ನಿ.’ ನಾನು ‘ಸರಿ' ಎಂದವನೆ, ‘ಪಕ್ಕದ ಮನೆಗೆ ಭೋಜನಕ್ಕೆ ಹೋಗುತ್ತಿದ್ದೇನೆ. ನನಗೆ ಅಡುಗೆ ಮಾಡಬೇಡ' ಎಂದು ಪತ್ನಿಗೆ ಹೇಳಿದೆ.

ನಂತರ ೧೨ ಗಂಟೆಗೆ ಸರಿಯಾಗಿ ಅವರ ಮನೆಗೆ ಹೋದೆ. ಅಲ್ಲಿ ಏಳೆಂಟು ಜನರು ಆಗಲೇ ನೆರೆದಿದ್ದು ಅವರೆಲ್ಲರ ಕೈಯಲ್ಲಿ ತಾಳ, ತಂಬೂರಿಗಳಿದ್ದವು. ನನಗೂ ಒಂದು ತಾಳವಿತ್ತರು. ಮದ್ಯಾಹ್ನ ೨ ಗಂಟೆಯವರೆಗೂ ಬಂಗಾಳಿ ಭಾಷೆಯ ಹಾಡುಗಳನ್ನು ಹಾಡಿದರು. ನಂತರ ಯಜಮಾನ ಎದ್ದು ನಿಂತು, ‘ಭೋಜನ ಕಾರ್ಯಕ್ರಮ ಇಲ್ಲಿಗೆ ಸಮಾಪ್ತಿಯಾಯಿತು. ತಮಗೆಲ್ಲರಿಗೂ ಧೊನ್ಯವಾದಗಳು' ಎಂದು ಹೇಳಿದಾಗಲೇ ನಾನು ಎಡವಿದ್ದೆಲ್ಲಿ ಎಂಬ ಅರಿವು ಮೂಡಿತು. ಬಂಗಾಳಿ ಆಡು ಭಾಷೆಯ ಶೈಲಿಯಲ್ಲಿ ನೆರೆಮನೆಯಾತ ‘ಭಜನೆ’ಯನ್ನು ‘ಭೋಜನ’ವೆಂದು ಉಚ್ಚರಿಸಿರುವುದು, ‘ಧನ್ಯವಾದ'ವನ್ನು ಧೊನ್ಯವಾದ' ಎಂದು ಹೇಳಿದಾಗಲೇ ನನಗೆ ಮನವರಿಕೆಯಾಗಿದ್ದು.!

-ರಮಣ್ ಶೆಟ್ಟಿ ರೆಂಜಾಳ್

***

(‘ಮಯೂರ' ಜುಲೈ ೨೦೧೭ರ ಸಂಚಿಕೆಯಿಂದ ಸಂಗ್ರಹಿತ)