‘ಮಯೂರ' ಹಾಸ್ಯ - ಭಾಗ ೨೬
‘ದನ ಕಾಯೋಕೆ ಹೋಗಿದ್ದೆ'
ನನ್ನ ಮಗಳ ಭಾವನವರ ಮೂರು ವರ್ಷದ ಪುಟಾಣಿ ಸಿರಿ ಮಾತಿನ ಮಲ್ಲಿ. ಅವಳ ಮುಗ್ಧ ಚಾಲಾಕಿತನದ ಮಾತುಗಳು ನಮ್ಮನ್ನು ನಗೆಗಡಲಿನಲ್ಲಿ ಮುಳುಗುವಂತೆ ಮಾಡುತ್ತವೆ. ಕಳೆದ ತಿಂಗಳು ನಾನು ಅವರ ಮನೆಗೆ ಹೋದಾಗ ಅವಳು ಮನೆಯಲ್ಲಿರಲಿಲ್ಲ. ನಾನು ಅವಳ ಅಜ್ಜಿ, ತಾತನ ಜೊತೆ ಮಾತನಾಡುತ್ತ ಕುಳಿತಿದ್ದೆ. ಸಂಜೆ ಏಳು ಗಂಟೆಗೆ ಅವಳು ಮನೆಗೆ ಬಂದಾಗ ನಾನು ‘ಏನು ಸಿರಿ ಎಲ್ಲಿಗೆ ಹೋಗಿದ್ದೆ? ಹಬ್ಬಕ್ಕೆ ಬಟ್ಟೆ ತರೋಕೆ ಹೋಗಿದ್ಯಾ?’ ಎಂದು ಕೇಳಿದಾಗ ಅವಳು ಕೂಡಲೇ ‘ಇಲ್ಲ ಆಂಟಿ, ನಾನು ದನ ಕಾಯೋಕೆ ಹೋಗಿದ್ದೆ' ಎಂದಳು! ಅವಳ ಮಾತಿಗೆ ನಾನು ತಬ್ಬಿಬ್ಬಾದೆ! ಆಗ ಅವಳ ತಾಯಿ ನಗುತ್ತಾ ‘ನಾವು ಯೋಗರಾಜ ಭಟ್ ನಿರ್ದೇಶನದ ‘ದನ ಕಾಯೋನು' ಸಿನೆಮಾಕ್ಕೆ ಹೋಗಿದ್ವಿ ಆಂಟಿ. ಅದಕ್ಕೆ ಹೀಗೆ ಹೇಳಿದ್ದಾಳೆ' ಎಂದಾಗ ಎಲ್ಲರೂ ನಗಲಾರಭಿಸಿದರು.
-ಶಾಂತಾ ನರಸಿಂಹಮೂರ್ತಿ
***
ಭಾಷೆಯ ಆವಾಂತರ
೧೯೬೧ರ ಸಮಯ. ನಾನು ಮಂಡ್ಯದಲ್ಲಿ ಎಸ್ಸೆಸ್ಸೆಲ್ಸಿ ಪಾಸು ಮಾಡಿಕೊಂಡು ಮುಂದಿನ ವಿದ್ಯಾಭ್ಯಾಸಕ್ಕಾಗಿ ಬಳ್ಳಾರಿಯಲ್ಲಿದ್ದ ನಮ್ಮ ಅಣ್ಣನ ಮನೆಗೆ ಹೋಗಿ ಅಲ್ಲಿ ಕಾಲೇಜಿಗೆ ಸೇರಿದ್ದೆ. ಆ ಕಾಲದಲ್ಲಿ ಬಳ್ಳಾರಿಯಲ್ಲಿ ಕುಡಿಯುವ ನೀರಿಗೆ ಬಹಳ ಅಭಾವವಿತ್ತು. ಒಂದು ಕೊಡ ನೀರು ತರಬೇಕು ಅಂದರೆ ಸುಮಾರು ಅರ್ಧ ಕಿಲೋಮೀಟರ್ ಇರುವ ಕ್ಯೂನಲ್ಲಿ ನಿಲ್ಲಬೇಕಿತ್ತು. ಹಾಗೆ ಒಂದು ದಿನ ಸರದಿಯಲ್ಲಿ ನಿಂತಿರುವಾಗ ನನ್ನ ಮುಂದೆ ನಿಂತಿದ್ದ ಹೆಂಗಸಿಗೆ ‘ಅಮ್ಮ, ನಿಮ್ಮ ಸರದಿ ಬಂತು ನೀರು ಹಿಡಿಯಿರಿ' ಎಂದೆ. ಅದಕ್ಕೆ ಆ ಹೆಂಗಸು ‘ಯಾಕೆ ಮೈ ನೆಟ್ಟಗಿಲ್ಲೇನು' ಅಂದಳು. 'ನಾನೇನು ಅಂದೆ ನಿಮಗೆ? ಯಾಕಮ್ಮ ಇಷ್ಟು ಕೋಪ?’ ಅಂದೆ. ಅದಕ್ಕೆ ಅವಳು ‘ಅದೆ ವದರಿತ್ತಿಯೇನ್ಲೆ ಬಡ್ಕಾವು' ಎಂದಳು. ನನಗೆ ಹೆದರಿಕೆಯಾಗಿ ಪುನಃ ಮಾತನಾಡದೆ ಮನೆಗೆ ಬಂದು ನಮ್ಮ ಅತ್ತಿಗೆಗೆ ವಿಷಯ ತಿಳಿಸಿದೆ. ಅವರು ‘ಇಲ್ಲಿ ಅಮ್ಮ ಅಂದರೆ ನಿಮ್ಮಪ್ಪನ ಹೆಂಡತಿಯೇನೊ' ಅಂತ ಕೇಳುತ್ತಾರೆ. ಹೆಂಗಸರಿಗೆ ಅವ್ವ ಎಂದು ಸಂಬೋಧಿಸಬೇಕು' ಎಂದರು. ಅನಂತರ ಎಂದೂ, ಯಾರನ್ನೂ ಅಮ್ಮ ಅಂತ ನಾನು ಕರಿಯಲಿಲ್ಲ!
-ಎಲ್. ಮಂಜೇಗೌಡ
***
'ನೀವೇ ಹೆಬ್ಬೆಟ್ಟು'
ಹಳ್ಳಿಯಿಂದ ಬ್ಯಾಂಕಿಗೆ ಆಗೀಗ ಬರುವ ಪೊನ್ನಮ್ಮ ಶಾಲೆಯ ಬಿಸಿಯೂಟದ ವಾರಸುದಾರಣಿ. ಆಕೆಗೆ ಸಹಿ ಮಾಡಲು ಬರುವುದಿಲ್ಲ. ಅವರು ಪ್ರತೀ ಬಾರಿ ಬ್ಯಾಂಕಿಗೆ ಬಂದಾಗ ‘ಮುಂದಿನ ಸಾರಿ ಬರುವಾಗ, ಸಹಿ ಮಾಡಲು ಕಲಿಯದಿದ್ದರೆ, ಹಣ ಕೊಡುವುದಿಲ್ಲ' ಎಂದು ತಮಾಷೆ ಮಾಡುತ್ತಿದ್ದೆ. ‘ನೀವು ಹೇಳಿದ್ದನ್ನು ಕೇಳಿ ಕೇಳಿ ನಾನು ಮುದುಕಿಯಾದೆ' ಅನ್ನುತ್ತಿದ್ದರು. ‘ಏನು ಮಾಡುವುದು, ಬರಹ ಬರುವುದಿಲ್ಲ' ಅನ್ನುತ್ತಿದ್ದರು. ಒಮ್ಮೆ ಬೆಳಿಗ್ಗೆ ಕಚೇರಿಯಲ್ಲಿ ಕಂಪ್ಯೂಟರ್ ಆನ್ ಮಾಡಿ, ಬಯೋಮೆಟ್ರಿಕ್ ಗಾಗಿ ಸತತ ಪ್ರಯತ್ನಿಸಿ ವಿಫಲಳಾದೆ. ಕೌಂಟರಿನಲ್ಲಿ ನಿಂತ ಪೊನ್ನಮ್ಮ, ‘ನನಗೆ ಹೇಳಿ, ನೀವೇ ಹೆಬ್ಬೆಟ್ಟು ಶುರು ಹಚ್ಚಿಕೊಂಡಿದ್ದೀರಲ್ಲ !? ಎನ್ನಬೇಕೇ! ;ನಮಗೆ ಮಾತ್ರ ಕೈಗೆಲ್ಲಾ ಮಸಿ ತಾಗಲಿ ಎಂದು ದೊಡ್ಡ ಇಂಕ್ ಪ್ಯಾಡ್ ಕೊಟ್ಟು ನಿಮಗೆ ಮಾತ್ರ ಚಿಕ್ಕದು (ಬಯೋಮೆಟ್ರಿಕ್ ಸಾಧನ ತೋರಿಸಿ) ಇಟ್ಟುಕೊಂಡಿದ್ದೀರಿ' ಎಂದು ಹೇಳಿದ್ದು ನನ್ನನ್ನು ವಿಸ್ಮಿತಳಾಗಿತ್ತು.!
-ಪೂರ್ಣಿಮಾ ಗುರುದೇವ ಭಂಡಾರ್ಕರ್
***
ಮದುವೆ ಆಗ್ಬಿಟ್ರೆ ಚೆನ್ನಾಗಿರಲ್ಲ !
ಇತ್ತೀಚೆಗೆ ಸಮಾರಂಭವೊಂದಕ್ಕೆ ಹೋಗಿದ್ದೆ. ಬಹಳ ದಿನಗಳ ನಂತರ ಬಂಧುಗಳನ್ನು ಕಾಣುವ ಅವಕಾಶ ಸಿಕ್ಕಿತ್ತು. ಚಿಕ್ಕವನಾಗಿದ್ದಾಗ ನೋಡಿದ್ದ ಸಂಬಂಧಿಕರ ಹುಡುಗನೊಬ್ಬ ಮಾತಿಗೆ ಸಿಕ್ಕ. ಅದೂ ಇದೂ ಮಾತನಾಡುತ್ತಾ, ‘ಎಷ್ಟೋ ನಿನ್ ವಯಸ್ಸು' ಎಂದು ಕೇಳಿದೆ. ‘ಇಪ್ಪತ್ತೇಳು ಅಂಕಲ್' ಎಂದು ಉತ್ತರಿಸಿದ. ‘ಬೇಗ ಮದುವೆ ಮಾಡ್ಕೊ. ಲೇಟಾದ್ರೆ ಹುಡ್ಗೀರು ಸಿಗಲ್ಲ' ಎಂದು ಪುಕ್ಕಟೆ ಸಲಹೆ ಕೊಟ್ಟೆ. ಅವನೂ ಒಳ್ಳೇ ಮೂಡಿನಲ್ಲಿದ್ದ. ‘ಹೂಂ, ಅಂಕಲ್, ಆದಷ್ಟು ಬೇಗ ಮದುವೆ ಮಾಡ್ಕೊಂಡ್ಬಿಡೋಣಾಂತಿದೀನಿ' ಎಂದ.
ನಮ್ಮ ಸಂಭಾಷಣೆಯನ್ನು ಕೇಳುತ್ತಾ ಪಕ್ಕದಲ್ಲಿ ಕುಳಿತಿದ್ದ ಹಿರಿಯರೊಬ್ಬರು, ‘ಏನೋ, ಮದ್ವೆ ಮಾಡ್ಕೊಂಡ್ಬಿಡ್ತಿಯಾ, ಚೆನ್ನಾಗಿರಲ್ಲ ನೋಡು' ಎಂದು ಗದರಿದರು. ಹುಡುಗ ತಬ್ಬಿಬ್ಬು. ನನಗೂ ‘ಇವರೇನು ಹೇಳ್ತಿದ್ದಾರೆ' ಎಂದು ಗೊಂದಲವಾಯಿತು. ಕೂಡಲೇ ಹಿರಿಯರು ನಗುತ್ತಾ, ‘ಅಯ್ಯೋ ಪೆದ್ದುಮುಂಡೇದೇ, ಅರ್ಥವಾಗಲಿಲ್ವೇ? ಮದ್ವೆ ಮಾಡ್ಕೋ, ಯಾರು ಬೇಡಾಂದ್ರು ಆದ್ರೆ (ಹುಡ್ಗೀನ) ಬಿಡೋಕೆ ಹೋಗ್ಬೇಡಾ !’ ಅಂದರು. ಅಲ್ಲಿದ್ದವರೆಲ್ಲಾ ಆ ಹಿರಿಯರ ಮಾತಿನ ಚಾತುರ್ಯಕ್ಕೆ ಬೆರಗಾಗಿ ನಕ್ಕರು. ಆ ಹುಡುಗ ನಾಚಿಕೆಯಿಂದ ಮುದುಡಿಹೋಗಿದ್ದ.!
-ಕೆ.ಪಿ.ಸತ್ಯನಾರಾಯಣ
***
('ಮಯೂರ' ಮಾರ್ಚ್ ೨೦೧೭ರ ಸಂಚಿಕೆಯಿಂದ ಸಂಗ್ರಹಿತ)