‘ಮಯೂರ' ಹಾಸ್ಯ - (ಭಾಗ ೨೭)

‘ಮಯೂರ' ಹಾಸ್ಯ - (ಭಾಗ ೨೭)

‘ಮುಗ್ದತೆ'

ಒಂದನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮೊಮ್ಮಗ ವೇದಾಂತನಿಗೆ ಕೂಡಿಸುವ ಮತ್ತು ಕಳೆಯುವ ಲೆಕ್ಕ ಹೇಳಿಕೊಡುತ್ತಿದ್ದೆ. ‘ನೋಡೋ ವೇದಾಂತ ನಿನ್ನಲ್ಲಿ ೧೦ ಮಾವಿನ ಹಣ್ಣು ಇದೆಯೆಂದುಕೋ. ಅದರಲ್ಲಿ ಎಂಟು ಹಣ್ಣು ನಿನ್ನ ತಂಗಿಗೆ ಕೊಟ್ಟರೆ ಎಷ್ಟು ಉಳಿಯುತ್ತೆ?’ ಎಂದು ಕೇಳಿದೆ. ‘ಏನೂ ಉಳಿಯಲ್ಲ ಅಜ್ಜಿ, ನನಗೆ ಮಾನಿನ ಹಣ್ಣೂಂದ್ರೆ ತುಂಬಾ ಪ್ರೀತಿ ನಾನೇ ಬೇಕಾದ್ರೆ ೧೦ ಹಣ್ಣು ಇಟ್ಕೋತೀನಿ. ಎಂಟ್ಯಾಕೆ ಅವಳಿಗೆ ಕೊಡಬೇಕು? ಕೊಡಬೇಕಿದ್ರೆ ಎರಡೇ ಕೊಡ್ತೀನಿ. ಇಂತಹ ಲೆಕ್ಕ ನೀವು ಕೊಡ್ಲೇ ಬೇಡಿ' ಎಂದು ಅಳಲು ಶುರು ಮಾಡ ಬೇಕೇ! ಅವನ ಚುರುಕುತನಕ್ಕೆ ನನಗೆ ಖುಷಿಯಾಯಿತಾದರೂ ಅವನ ಮುಗ್ದತೆ ಕಂಡು ಜೋರಾಗಿ ನಕ್ಕು ಬಿಟ್ಟೆ.

-ರಾಜಲಕ್ಷ್ಮೀ ವಿ.ಶೆಣೈ

***

‘ಸಜೀವ ಪ್ರಮಾಣಪತ್ರ'

ನಮ್ಮ ಅಂಚೆ ಕಚೇರಿಗಳಲ್ಲಿ ನಿವೃತ್ತರಿಗೆ ವಿಶ್ರಾಂತಿ ವೇತನ ನೀಡುವ ಕೆಲಸವೂ ಇರುತ್ತದೆ. ವರ್ಷಕ್ಕೊಮ್ಮೆ ನಿವೃತ್ತಿ ವೇತನದಾರರ ಸಜೀವ ಪ್ರಮಾಣಪತ್ರವನ್ನು ಪಡೆದುಕೊಂಡು ಸಂರಕ್ಷಿಸಿ ಇಡಬೇಕಾಗುತ್ತದೆ. ಒಮ್ಮೆ ನಮ್ಮ ಕಚೇರಿಗೆ ಬಂದ ಅಧಿಕಾರಿಯೊಬ್ಬರು ನಿವೃತ್ತಿ ವೇತನದಾರರ ಲೈಫ್ ಸರ್ಟಿಫಿಕೇಟ್ ಫೈಲನ್ನು ಕೇಳಿ ಪಡೆದು ಪರೀಕ್ಷಿಸತೊಡಗಿದರು. ಒಬ್ಬ ನಿವೃತ್ತಿ ವೇತನದಾರರ ಪ್ರಸಕ್ತ ವರ್ಷದ ಲೈಫ್ ಸರ್ಟಿಫಿಕೇಟ್ ಇದ್ದು, ಹಿಂದಿನ ವರ್ಷದ್ದು ಇರಲಿಲ್ಲ. ‘ಅದು ಹ್ಯಾಗ್ರೀ ಅವರಿಗೆ ನಿವೃತ್ತಿ ವೇತನ ನೀಡಿದಿರಿ?’ ಎಂದು ಕೇಳಬೇಕೇ. ಈ ವರ್ಷದ ಲೈಫ್ ಸರ್ಟಿಫಿಕೇಟ್ ಇದೆಯಲ್ಲ ಎಂದರೂ ಕೇಳಲಿಲ್ಲ. ಹಿಂದಿನ ವರ್ಷದ ಲೈಫ್ ಸರ್ಟಿಫಿಕೇಟನ್ನೂ ಪಡೆದು ಫೈಲ್ ಮಾಡುತ್ತೇವೆ ಎಂದಾಗಲೇ ಅವರಿಗೆ ನಿರಾಳವಾಯಿತೆನ್ನಿ!

-ಯಜ್ಞ ನಾರಾಯಣ ಉಳ್ಳೂರ

***

‘ಮೆಟ್ ಕೊಡೆ'

ನನ್ನ ಮೈದುನ ಕೃಷ್ಣ ಸ್ವಲ್ಪ ಗಡಿಬಿಡಿ ಸ್ವಭಾವದವನು. ಮುಂಗೋಪಿ ಬೇರೆ. ಅವನ ಗಡಿಬಿಡಿಯಿಂದ ಆಗೋ ಅಚಾತುರ್ಯಕ್ಕೆ ನಾವು ನಕ್ಕರೆ, ಅವನಿಗೆ ಸಿಟ್ಟು ಬಂತೆಂದೇ ಲೆಕ್ಕ. ಅದರ ಫಲವಾಗಿ ಅವನ ಹೆಂಡತಿ ಮೇಲೆ ರೇಗಾಟ. ನಮಗಿದೆಲ್ಲ ಅಭ್ಯಾಸವಾಗಿದೆ. ಕಳೆದ ವಾರ ಮನೆಯಲ್ಲಿ ಸಣ್ಣ ಕಾರ್ಯಕ್ರಮವಿತ್ತು. ಎಲ್ಲರೂ ಸೇರಿದ್ದೆವು. ನನ್ನ ವಾರಗಿತ್ತಿ ಪೇಟೆಯಿಂದ ಏನೋ ಸಾಮಾನು ತರಲು ಪದೇ ಪದೇ ಹೇಳಿದಳು. ಸಿಟ್ಟಾದ ನನ್ನ ಮೈದ ಸ್ಕೂಟಿ ಏರಿ ಹೊರಟೇ ಬಿಟ್ಟ. ಹಾಗೇ ತಿರುಗಿ ಬಂದು ಮಗಳಿಗೆ ‘ಏಯ್ ಚಿನ್ನೂ ಮೆಟ್ ಕೊಡೆ' ಎಂದು ಕೂಗಿದ. ತಕ್ಷಣ ನಮ್ಮ ವಿಶು (ನಾದಿನಿ ಮಗ) ಅವನ ಒಂದು ಜೊತೆ ಚಪ್ಪಲಿ ಹಿಡಿದು ಕೊಡಲು ಹೋದ. ನನ್ನ ಮೈದುನನ ಸಿಟ್ಟೆಲ್ಲ ಜರ್ರನೆ ಇಳಿದು, 'ಅಪ್ಪಾ ದೊರೆ ಹೆಲ್ಮೆಟ್ ಅಪ್ಪ ನಾನು ಕೇಳಿದ್ದು' ಎಂದು ನಾಟಕೀಯವಾಗಿ ಕೈಮುಗಿದ. ಆ ಸಂದರ್ಭ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆವು.

-ಸುಮಾ ಕಳಸಾಪುರ

***

ಲವ್ ಆಲ್…

ನನ್ನ ಮಗ ತೇಜಸ್ವಿಗೆ ಐದುವರೆ ವರ್ಷ. ಮನೆ ಎದುರಿನ ರಸ್ತೆಯಲ್ಲಿ ಅವನ ಅಪ್ಪ ಹಾಗೂ ಅವರ ಸ್ನೇಹಿತ ಶಟಲ್ ಬಾಡ್ಮಿಂಟನ್ ಆಡುತ್ತಿರುವುದನ್ನು ಗಮನಿಸಿರುತ್ತಾನೆ. ಹಾಗಾಗಿ ಶಟಲ್ ನ ಅಂಕಗಳು ಆತನಿಗೆ ಗೊತ್ತು. ಅದೊಂದು ದಿನ ಆತ ‘ಲವ್ ಆಲ್, ಲವ್ ಆಲ್, ಒನ್ ಲವ್, ಒನ್ ಲವ್...' ಎಂದು ಜೋರಾಗಿ ಅಂಕಗಳನ್ನು ಹೇಳುತ್ತಿದ್ದ. ಅಷ್ಟರಲ್ಲಿ ಆತನ ಅಜ್ಜಿ ಅವನನ್ನು ಮನೆಯೊಳಗೆ ಕರೆದು ಗದರಲಾರಂಭಿಸಿದರು. ಆತ ತನಗೇಕೆ ಗದರುತ್ತಿದ್ದಾರೆಂದು ಅರಿಯದೆ ಕಕ್ಕಾಬಿಕ್ಕಿಯಾಗಿದ್ದ. 

ನಾನು ವಿಷಯವೇನೆಂದು ಅತ್ತೆಯಲ್ಲಿ ಕೇಳಿದೆ.

‘ಇವನು ಅಲ್ಲಿ ರಸ್ತೆಯಲ್ಲಿ ಅಷ್ಟು ಜೋರಾಗಿ ಲವ್ ಲವ್ ಅಂತ ಕಿರುಚುತ್ತಾ ಇದ್ದಾನೆ' ಎಂದು ಹೇಳಿದರು. ನನಗೆ ಒಮ್ಮೆಗೆ ನಗು ಬಂತು. ಅವರಿಗೆ ನಾನು ‘ಶಟಲ್ ಅಂಕದಲ್ಲಿ ಸೊನ್ನೆಗೆ ಲವ್ ಎನ್ನುತ್ತಾರೆ. ಅಂಕದಲ್ಲಿ ಮೊದಲಿಗೆ ಲವ್ ಆಲ್ ಎಂದೇ ಶುರು ಮಾಡುತ್ತಾರೆ' ಎಂದು ವಿವರಿಸಿ ಹೇಳಿದೆ. ಅವರೂ ನಕ್ಕುಬಿಟ್ಟರು.

-ಗಾಯತ್ರಿ ನಾಯಕ್

***

(‘ಮಯೂರ' ಮೇ ೨೦೧೭ರ ಸಂಚಿಕೆಯಿಂದ ಸಂಗ್ರಹಿತ)