‘ಮಯೂರ ಹಾಸ್ಯ' ಭಾಗ - ೨೮

‘ಮಯೂರ ಹಾಸ್ಯ' ಭಾಗ - ೨೮

ದೇವರು ಅಂದ್ರೆ…

ಗೆಳತಿ ಮಂಜುಳಾಳ ತಂಗಿಯ ಐದು ವರ್ಷದ ಮಗ ತುಂಬಾ ಚೂಟಿ. ಅವನ ಪ್ರಶ್ನೆಗಳಿಗೆ ಉತ್ತರ ಹೇಳಲು ಮನೆಮಂದಿಯೆಲ್ಲ ತಡವರಿಸುತ್ತಾರೆ. ಮೊನ್ನೆಯೂ ಹಾಗೇ ಅವನ ಪ್ರಶ್ನಾವಳಿ ದೇವರ ಬಗ್ಗೆ ತಿರುಗಿತ್ತು.

'ಅಮ್ಮಾ, ಅಮ್ಮಾ ದೇವರು ಅಂದ್ರೆ ಅನಿಮಲ್ಸ್ ಅಲ್ವಾ? ‘ ಎಂದ. ಅವರಮ್ಮ ಆಶ್ಚರ್ಯದಿಂದ ‘ಯಾಕೋ ಪುಟ್ಟಾ?’ ಎಂದು ಕೇಳಿದಳು.

‘ಮತ್ತೆ, ನಮ್ಮನೆ ಪೂಜಾ ರೂಂನಲ್ಲಿರೋ ದೇವರ ಫೋಟೋಗಳಲ್ಲಿ ಗಣಪ ಅಂದ್ರೆ ಎಲಿಫೆಂಟ್, ಹನುಮಂತ ಅಂದ್ರೆ ಮಂಕಿ ಮತ್ತೆ ಉಗ್ರ ನರಸಿಂಹ ಅಂದ್ರೆ ಲಯನ್ ಇದೆಯಲ್ಲಮ್ಮಾ. ಹಾಗಿದ್ರೆ ದೇವರು ಅಂದ್ರೆ ಅನಿಮಲ್ಸ್ ತಾನೇ?’ ಅಂದಾಗ ಅವರಮ್ಮನಿಗೆ ಸುಸ್ತೋ ಸುಸ್ತು.

-ನಳಿನಿ ಟಿ.ಭೀಮಪ್ಪ

***

ಸ್ವರ್ಗ ಸೇರಿದ ನಾರು

ನಮ್ಮ ಮನೆಯಲ್ಲಿ ಬಿಡುವ ಮಲ್ಲಿಗೆ ಹೂವುಗಳನ್ನು ದಾರದಲ್ಲಿ ಕಟ್ಟಿ ಹಾರ ಮಾಡಿ ದೇವರ ಫೋಟೋಗಳಿಗೆ ಹಾಕುತ್ತೇನೆ. ಒಮ್ಮೆ ಹಿಂದಿನ ದಿನ ದೇವರಿಗೆ ಹಾಕಿದ್ದ ಹೂವಿನ ಹಾರಗಳನ್ನೆಲ್ಲಾ ತೆಗೆದು ಹಾಕುತ್ತಿರುವಾಗ ಹೂವನ್ನು ಕಟ್ಟಲು ಉಪಯೋಗಿಸಿದ ದಾರ ಚೆನ್ನಾಗಿಯೇ ಇರುವುದನ್ನು ಗಮನಿಸಿದೆ. ಸರಿ, ಹೂವನ್ನೆಲ್ಲ ತರಿದು ಹಾಕಿ ದಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆ. ಪಕ್ಕದಲ್ಲಿ ನಿಂತು ನೋಡುತ್ತಿದ್ದ ನಮ್ಮ ಮನೆಯವರು ‘ಏನು ಮಾಡ್ತಾ ಇದೀಯಾ?’ ಎಂದು ಕೇಳಿದರು. ವಿಷಯವನ್ನು ಅವರಿಗೆ ಹೇಳಿದೆ. ಅದಕ್ಕವರು ನಗುತ್ತಾ, ‘ಹೂವಿನ ಜತೆ ನಾರೂ ಸ್ವರ್ಗ ಸೇರುತ್ತೆ ಅನ್ನೋ ಗಾದೆ ಮಾತಿದೆ. ಪಾಪ, ನೀನು ನಾರಿಗೆ ಸ್ವರ್ಗ ತಪ್ಪಿಸುತ್ತಿದ್ದೀಯಲ್ಲಾ !’ ಎಂದರು. ನನಗೂ ತಡೆಯಲಾರದಷ್ಟು ನಗು ಬಂತು.

-ಬಿ.ಎಸ್. ರಾಜಲಕ್ಷ್ಮಿ

***

ತ್ರಿಕೋನ ಮಾಡುತ್ತೇನೆ

ನಾನು ಕೆಲವು ವರ್ಷಗಳ ಹಿಂದೆ ಹುಬ್ಬಳ್ಳಿಯ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಚಾಕ್ ಎಂಬುವರು ಬ್ಯಾಂಕಿನ ಮ್ಯಾನೇಜರ್ ಆಗಿದ್ದರು. ಅದೊಂದು ದಿನ ನಮ್ಮ ಬ್ಯಾಂಕಿನ ಆಫೀಸರ್ ಆರ್.ಎಲ್.ಪೈ ಅವರಿಗೂ ಚಾಕ್ ಅವರಿಗೂ ಕ್ಲಿಯರಿಂಗ್ ವಿಷಯದಲ್ಲಿ ಜಟಾಪಟಿ ನಡೆಯಿತು. ಮಾತಿಗೆ ಮಾತು ಬೆಳೆದು ಸಿಟ್ಟಿಗೆದ್ದ ಪೈ ‘ಮಿ. ಚಾಕ್ ನಿನ್ನ ಮುಖವನ್ನು ತ್ರಿಕೋನ ಮಾಡುತ್ತೇನೆ' ಎಂದಾಗ ನಾವೆಲ್ಲ ನಕ್ಕಿದ್ದೇ ನಕ್ಕಿದ್ದು !

-ಪಿ.ಜಯವಂತ ಪೈ

***

ಹುಡುಗಿ

ಬೀದರ್ ನಲ್ಲಿ ರಾಜ್ಯ ನಿಗಮವೊಂದರ ಹೊಸ ಕಚೇರಿಯನ್ನು ತೆರೆದು ಕಾರ್ಯಾರಂಭ ಮಾಡಿದ್ದೆ. ಅಲ್ಲಿನ ಬೇಸಿಗೆಯ ಒಂದು ದಿನ ಹುಮ್ನಾಬಾದಿನಿಂದ ಹೊರಟ ಕೆಂಪು ಬಸ್ಸಿನಲ್ಲಿ ತೂಕಡಿಸುತ್ತಿದ್ದೆ. ‘ಹುಡ್ಗೀರು ಇಳ್ಕಳ್ಳಿ, ಹುಡ್ಗೀರು ಇಳ್ಕಳ್ಳಿ’ ಎಂದು ಕಂಡೆಕ್ಟರ್ ಕೂಗುತ್ತಿದ್ದ ಸದ್ದಿಗೆ ಎಚ್ಚರವಾಗಿ, ಮಂಪರಿನಲ್ಲೇ ಕಣ್ಣು ಬಿಟ್ಟೆ. ಬಸ್ಸಿನಲ್ಲಿ ಹುಡುಗಿಯರು ಕುಳಿತೇ ಇದ್ದರು. ಒಂದಿಬ್ಬರು ವಯಸ್ಕರು, ನಂತರ ಒಬ್ಬ ಅಜ್ಜಿ ಬಾಗಿಲ ಕಡೆಗೆ ಹೊರಟರು. ನಾನು ಅಜ್ಜಿಗೆ, ‘ನೀನು ಹುಡ್ಗೀನಾ’ ಎಂದು ಛೇಡಿಸಿದೆ. ‘ಹೌದು' ಎನ್ನುವಂತೆ ತಲೆಯಾಡಿಸಿ, ಅಜ್ಜಿ ಇಳಿದಳು. ಯಾವ ಹುಡುಗಿಯೂ ಇಳಿಯಲಿಲ್ಲ. ನಾನು ಗೊಂದಲದಲ್ಲಿರುವಾಗಲೇ ಕಂಡಕ್ಟರ್. ‘ರೈಯಾ’ ಎಂದು ಕೂಗಿದ್ದು ಕೇಳಿಸಿತು. ಹೊರಟ ಬಸ್ಸು ಮುಂದೆ ಚಲಿಸಿದಾಗ, ರಸ್ತೆ ಬದಿಯಲ್ಲಿ ಕಾಣಿಸಿತು. ಆ ಊರಿನ ನಾಮಫಲಕ ‘ಹುಡುಗಿ'

-ಹಾಡ್ಯ ಬಿ.ಜಯಾನಂದ

***

(ಸೆಪ್ಟೆಂಬರ್ ೨೦೧೭ರ ‘ಮಯೂರ' ಸಂಚಿಕೆಯಿಂದ)