‘ಮಯೂರ' ಹಾಸ್ಯ - ಭಾಗ ೩೧

‘ಮಯೂರ' ಹಾಸ್ಯ - ಭಾಗ ೩೧

ಸಸ್ಯಾಹಾರಿ ಅವಾಂತರ

ಬಟಾಟೆ ಸೋಂಗ್ ತಯಾರಿಸುವುದರಲ್ಲಿ ನಮ್ಮತ್ತೆ ಎತ್ತಿದ ಕೈ. ಇದೊಂದು ಬಗೆಯ ಕೊಂಕಣಿ ಖಾದ್ಯ. ಅತ್ತೆ ಅದನ್ನು ಬಹಳ ರುಚಿಯಾಗಿ ಮಾಡುತ್ತಿದ್ದರು. ಇದನ್ನು ನನ್ನ ಗೆಳತಿಗೆ ಆಗಾಗ ಹೇಳುತ್ತಲೇ ಇದ್ದೆ.

ಒಮ್ಮೆ ನಮ್ಮತ್ತೆ ಕೈಯಲ್ಲಿ ಚಪಾತಿ ಹಾಗೂ ಸೋಂಗ್ ಮಾಡಿಸಿ ಅವಳನ್ನು ಉಪಹಾರಕ್ಕೆ ಕರೆದೆ. ನಾವಿಬ್ಬರೂ ಡೈನಿಂಗ್ ಟೇಬಲ್ ಮುಂದೆ ಕುಳಿತೆವು. ನಮ್ಮತ್ತೆ, ‘ಪಳೆ ಸೋಂಗ್ ಎದೆ ಕೆಲ್ಲಾ; ತಿಕ್ಕಾ ಕೆಲ್ಲಾ, ತೊಡೆ ವಾಡತಾ’ ಎಂದು ಹೇಳಿದರು.

ಕೂಡಲೇ ನನ್ನ ಗೆಳತಿ ‘ನನಗೆ ಈ ಸೋಂಗ್ ಬೇಡ, ಬಂದ ತಪ್ಪಿಗೆ ಚಪಾತಿ ತುಪ್ಪ ತಿನ್ನುತ್ತೇನೆ' ಎಂದಳು. ಅವಳ ಗಾಬರಿ ಕಂಡು ನಾನು ‘ಏನಾಯಿತು' ಅಂದೆ. ‘ನಾನು ವೆಜ್ ಅಂತ ನಿನಗೆ ಗೊತ್ತಲ್ಲವೇ?’ ನಿಮ್ಮತ್ತೆ ಅದೆನೋ ಎದೆ, ತೊಡೆ, ತಿಕ್ಕಾ ಅಂತೆಲ್ಲಾ ಹೇಳ್ತಾ ಇದ್ದಾರೆ' ಎಂದಳು. ಅದಕ್ಕೆ ನಾನು ‘ಕೊಂಕಣಿ ಭಾಷೆಯಲ್ಲಿ ತೊಡೆ ಅಂದರೆ ಸ್ವಲ್ಪ, ಎದೆ ಅಂದರೆ ಸಣ್ಣ ಪ್ರಮಾಣ, ತಿಕ್ಕಾ ಅಂದರೆ ಭಾರೀ ಖಾರ ಎಂದು ಅರ್ಥ. ಸೋಂಗ್ ಸ್ವಲ್ಪ ಮಾಡಿದ್ದೇನೆ. ಭಾರಿ ಖಾರ ಆಗಿದೆ. ಅದನ್ನು ಸಣ್ಣ ಪ್ರಮಾಣದಲ್ಲಿ ಬಡಿಸುತ್ತೇನೆ ಎಂದು ಅವರು ಹೇಳಿದ್ದು' ಎಂದು ವಿವರಿಸಿದ ಮೇಲೆ ಅವಳು ಚಪ್ಪರಿಸಿ ತಿಂದು ಖುಷಿ ಪಟ್ಟಳು.

-ಜಯಮಾಲಾ ಪೈ

***

ಹುಚ್ಚು ಏನಾಯಿತು?

ನನ್ನ ಪರಿಚಯದವರೊಬ್ಬರ ಹೆಸರು ‘ಹುಚ್ಚೂರಾಯ'. ಅವರ ಸ್ನೇಹಿತರೆಲ್ಲ ಅವರನ್ನು ‘ಹುಚ್ಚು ಹೇಗಿದ್ದೀಯಾ’ ಎಂದು ಕೇಳುತ್ತಿದ್ದರು. ತನ್ನ ‘ಹುಚ್ಚು' ಎಂಬ ಹೆಸರಿನಿಂದ ಬೇಸತ್ತ ಅವರು ತಮ್ಮ ಹೆಸರನ್ನು ಎಚ್. ರಾವ್ ಎಂದು ಬದಲಿಸಿಕೊಂಡರು. ಆದರೂ ಅವರ ಬವಣೆ ತಪ್ಪಲಿಲ್ಲ. ಏಕೆಂದರೆ ಸ್ನೇಹಿತರೆಲ್ಲಾ ಅವರನ್ನು ‘ಹುಚ್ಚು ಹೆಚ್ಚಾಯ್ತಾ?’ (ಎಚ್ ಆಯಿತಾ?) ಎಂದು ರೇಗಿಸಲು ಪ್ರಾರಂಭಿಸಿದರು!

-ಜಿ.ಸುಬ್ರಹ್ಮಣ್ಯ 

***

ಮಾತೇ ಮಾತು

ನನ್ನ ಪರಿಚಿತರಾದ ಪಂಕಜಮ್ಮ ಯಾರೊಂದಿಗಾದರೂ ಮಾತಿಗೆ ನಿಂತರೆಂದರೆ ನಿಂತ ನೆಲವೇ ಕುಸಿದದ್ದೂ ಅವರ ಗಮನಕ್ಕೆ ಬರುತ್ತಿರಲಿಲ್ಲ. ಒಂದು ದಿನ ಅವರ ಪರಿಚಿತ ಮಹಿಳೆಯೊಬ್ಬರು ಪಂಕಜಮ್ಮನ ಮನೆಗೆ ಬಂದಿದ್ದಳು. ಪಂಕಜಮ್ಮ ಆಕೆಯನ್ನು ಮನೆಯ ಒಳಗೂ ಸಹ ಕರೆಯದೇ ಮನೆಯ ಅಂಗಳದಲ್ಲೇ ನಿಲ್ಲಿಸಿ ಮಾತಿಗೆ ಶುರು ಹಚ್ಚಿದರು. ಎಷ್ಟು ಸಮಯ ಕಳೆದರೂ ಅವರ ಮಾತು ಮುಂದುವರೆಯುತ್ತಲೇ ಇತ್ತು. ಅಷ್ಟರಲ್ಲೇ ಮನೆಯ ಒಳಗಿನಿಂದ ಪಂಕಜಮ್ಮನ ಗಂಡ ಒಂದೇ ಸಮನೆ ಕೂಗತೊಡಗಿದರು. ‘ಏನೋ ವಾಸನಿ ಬರಾಕ್ ಹತ್ತಾವು ಗ್ಯಾಸಿನ ಮ್ಯಾಗ ಅನ್ನ ಸೀದು ಹೋಗಿರಬೇಕು. ಬೇಗ ನೋಡೇ’ ಎಂದು. ಅದಕ್ಕೆ ಪಂಕಜಮ್ಮ ‘ಅನ್ನ ಸೀದು ಹೋದ್ರ ಹೋಗ್ಲಿ ಬಿಡ್ರೀ, ಒಳಗ ಅಕ್ಕಿ ಅದಾವು. ಇವ್ರು ಮಾತಾಡೋರು ಮತ್ ಸಿಗ್ತಾರೇನು?’ ಎಂದು ಹೇಳಿ ಪುನಃ ಮಾತು ಮುಂಡುವರೆಸಿದರು !

-ಲಲಿತಾ ಸುವರ್ಣ

***

ಬ್ಲೌಸ್ ಇಕೋಳಿ…

ಕಚೇರಿಗೆ ಹೋಗಲೆಂದು ಬೈಕ್ ಹೊರಗೆ ತೆಗೆದಾಗ ತುಂತುರು ಮಳೆ ಬರುತ್ತಿರುವುದು ಕಾಣಿಸಿತು. ಗ್ಲೌಸ್ ಕೊಡೆಂದು ಕೆಲಸದಾಕೆಗೆ ಹೇಳಿದೆ. ನನ್ನಾಕೆ ಸ್ನಾನಕ್ಕೆ ಹೋಗಿದ್ದರಿಂದ ಕೆಲಸದವಳಿಗೆ ಗ್ಲೌಸ್ ಯಾವುದೆಂದು ತಿಳಿಯದೆ ಆಗ ತಾನೆ ತೊಳೆಯಲು ಇಟ್ಟ ಬಟ್ಟೆಗಳ ರಾಶಿಯಿಂದ ಬ್ಲೌಸ್ ತಂದು ‘ಇಕೊಳಿ' ಎಂದು ಹಲ್ಲು ಕಿರಿದಳು!

-ಗುರುದೇವ ಭಂಡಾರ್ಕರ್

***

(ಮಯೂರ ನವೆಂಬರ್ ೨೦೧೭ರ ಸಂಚಿಕೆಯಿಂದ ಸಂಗ್ರಹಿತ)