‘ಮಯೂರ' ಹಾಸ್ಯ - ಭಾಗ ೩೨
ಚಾಕು ನೋಡಿರಲಿಲ್ವಾ?
ಈಚೆಗೆ ನೆಂಟರ ಮನೆಗೆ ಹೋದಾಗ ಅಲ್ಲಿ ಅವರ ಮೊಮ್ಮಕ್ಕಳ ಜತೆ ಮಾತನಾಡುತ್ತಾ ಕೂತಿದ್ದೆವು. ಚಿಕ್ಕ ಹುಡುಗಿ ತನು ಬಲು ಚೂಟಿ. ‘ದೊಡ್ಡವಳಾದ ಮೇಲೆ ನೀನು ಏನಾಗ್ತೀಯಾ?’ ಎಂದು ನಮ್ಮ ಮನೆಯವರು ಕೇಳಿದಾಗ - ಟೀಚರ್ ಆಗ್ತೀನಿ' ಅಂದಳು. ಅವಳ ಅಪ್ಪ ಅಮ್ಮ ಇಬ್ಬರೂ ಡಾಕ್ಟರು. ‘ಯಾಕೆ, ನೀನು ಅಪ್ಪ ಅಮ್ಮನ ಹಾಗೆ ಡಾಕ್ಟರ್ ಆಗೋದಿಲ್ಲ?’ ಎಂದು ಮತ್ತೆ ಪ್ರಶ್ನೆ ಮಾಡಿದರು.
ಅದಕ್ಕೆ ತನು ‘ನನಗೆ ಭಯ ಆಗುತ್ತಪ್ಪ' ಅಂದಳು. ‘ಭಯ ಯಾಕೆ ಮಗು, ಎಷ್ಟೊಂದು ಜನ ಡಾಕ್ಟ್ರಾಗಿಲ್ವಾ? ನಿಮ್ಮ ಅಪ್ಪ ಅಮ್ಮನೇ ಇದಾರಲ್ಲಾ?’ ನಮ್ಮ ಮನೆಯವರ ಪ್ರೋತ್ಸಾಹಕ ಮಾತುಗಳು ಸಹಾ ಉಪಯೋಗಕ್ಕೆ ಬರಲಿಲ್ಲ. ‘ನಮ್ಮ ಅಮ್ಮನ್ ಫ್ರೆಂಡ್ ಒಬ್ರು ನೈಟ್ ಡ್ಯೂಟಿ ಮುಗಿಸ್ಕೊಂಡು ರಾತ್ರಿ ಬರೋವಾಗ ಐದು ಜನ ಅವರಿಗೆ ಚಾಕು ತೋರಿಸಿದ್ರು ಗೊತ್ತಾ?’ ಅಂದಳು ತನು ಭಯ ನಟಿಸುತ್ತಾ. ತಮಾಷೆಯ ಸ್ವಭಾವದವರಾದ ನಮ್ಮ ಮನೆಯವರು ‘ಯಾಕೆ, ಆ ಡಾಕ್ಟ್ರು ಚಾಕು ನೋಡಿರ್ಲಿಲ್ವಂತಾ?’ ಎಂದು ಕೇಳುವುದೇ.
-ಬಿ.ಎಸ್. ರಾಜಲಕ್ಷ್ಮಿ
***
ರಾತ್ರಿ ಹೋಮ
ನಾನು ಕಂಪ್ಯೂಟರ್ ಮುಂದೆ ಕುಳಿತು ಏನೋ ಮಾಡುತ್ತಿದ್ದೆ. ನಮ್ಮ ಮನೆಯಾಕೆ ಅಡುಗೆ ಮನೆಯಿಂದಲೇ ‘ಮಠದಲ್ಲಿ.. ಹೋಮ ಇದೆ, ಹೋಗಿ ಬರ್ತೀನಿ' ಅಂದಳು. ಅಲ್ಲಿ ರುಬ್ಬುವ ಯಂತ್ರ ಓಡುತ್ತಿತ್ತು. ನಾನು ‘ಸರಿ, ಹೋಗು ಅದಕ್ಕೇನಂತೆ?’ ಅಂದೆ. ಸ್ವಲ್ಪ ಸಮಯ ಬಿಟ್ಟು ಮನೆಯಾಕೆ ಹೊರ ನಡೆದಳು. ನಾನು 'ಅಲ್ವೇ, ರಾತ್ರಿ ಹೋಮ ಇದೇಂದೆ? ಈಗಲೇ ಹೊರಟ್ಯಲ್ಲಾ?’ ಅಂದೆ. ‘ನಾನೆಲ್ಲಿ ರಾತ್ರಿ ಅಂದೆ? ಅಯ್ಯೋ, ನಿಮ್ ಕಿವಿಯೇ.. ನಾನು ಹೇಳಿದ್ದು ರಾತ್ರಿ ಹೋಮ ಅಂತಲ್ಲಾ... ಮಠದಲ್ಲಿ ಧಾತ್ರಿ ಹೋಮ ಇದೇಂತ' ಅನ್ನುತ್ತಾ ನಗುವುದೇ!...'ನಂಗೆ ಗೊತ್ತು, ಸುಮ್ಮನೆ ತಮಾಷೆ ಮಾಡ್ದೆ' ಎಂದು ಹೇಳಿ ಬಚಾವಾದೆ!
-ಕೆ.ಪಿ.ಸತ್ಯನಾರಾಯಣ
***
ರೇಡಿಯೋಥೆರಪಿ
ಗೆಳತಿಯ ತಾಯಿಗೆ ಶ್ವಾಸಕೋಶದ ಕ್ಯಾನ್ಸರ್ ಆಗಿತ್ತು. ಅವರನ್ನು ಮಾತನಾಡಿಸಿಕೊಂಡು ಬರಲು ಅವರ ಮನೆಗೆ ಹೋದಾಗ. ಗೆಳತಿಯ ಅಣ್ಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅರ್ಧ ಗಂಟೆಯ ನಂತರ ನನ್ನ ಗೆಳತಿಯ ತಾಯಿ ಮತ್ತು ಅಣ್ಣ ಆಸ್ಪತ್ರೆಯಿಂದ ಬಂದರು. ನನ್ನನ್ನು ನೋಡಿದೊಡನೆ, ‘ಅಯ್ಯೋ, ಯಾವಾಗ ಬಂದೆ. ತುಂಬಾ ಹೊತ್ತಾಯ್ತಾ? ಚೆನ್ನಾಗಿದ್ದೀಯಾ? ‘ ಎಂದು ಅವರೇ ಮೊದಲು ನನ್ನನ್ನು ಕೇಳಿದರು. ‘ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಾ?’ ಎಂದೆ. ‘ಚೆನ್ನಾಗಿದ್ದೀನಿ ಕಣೆ, ಏನೋ ಕಾಯಿಲೆ ಬಂದಿದೆ ನೋಡು' ಎಂದರು. ಅವರಿಗೆ ಕ್ಯಾನ್ಸರ್ ಆಗಿದೆಯೆಂದು ಮನೆಯಲ್ಲಿ ಯಾರೂ ಹೇಳಿರಲಿಲ್ಲ. ‘ಆಸ್ಪತ್ರೆಗೆ ಹೋಗಿದ್ದೀರಲ್ಲಾ, ಡಾಕ್ಟರ್ ಏನು ಹೇಳಿದರು?’ ಎಂದೆ. ಆಪರೇಷನ್ ಮಾಡಲಿಕ್ಕೆ ವಯಸ್ಸಾಗಿದೆ ಅದೇನೋ ರೇಡಿಯೋಥೆರಪಿ ಮಾಡಬೇಕಂತೆ. ‘ಲೋ ಸುರೇಶಾ, ಸಂಜೆ ಪೇಟೆಗೆ ಹೋದಾಗ ಒಂದು ರೇಡಿಯೋ ತೆಗೆದುಕೊಂಡು ಬಾರೋ’ ಎಂದರು. ನೋವಿನಲ್ಲಿದ್ದವರಿಗೂ ನಗು ಬಂತು.
-ಸು.ವಿಜಯಲಕ್ಷ್ಮೀ
***
ನಾಲ್ಕು ಬಣ್ಣ
ಪುಣೆಯಲ್ಲಿರುವ ನನ್ನ ಮೊಮ್ಮಗಳು ದಿಯಾ ಯುಕೆಜಿಯಲ್ಲಿ ಓದುತ್ತಿದ್ದಾಳೆ. ಈ ವರ್ಷದ ದೀಪಾವಳಿಯ ಸಂದರ್ಭದಲ್ಲಿ ರಜೆಗೆ ಬೆಂಗಳೂರಿಗೆ ಬಂದಿದ್ದಳು. ಅವಳು ತನ್ನ ಶಾಲೆಯ ಚಟುವಟಿಕೆಗಳು, ಆಟ ಪಾಠಗಳ ಬಗ್ಗೆ ನಮೆಗೆಲ್ಲಾ ಖುಷಿಯಾಗಿ ಹೇಳುತ್ತಿದ್ದಳು. ನನ್ನನ್ನು ಕೇಳಿದಳು - ‘ತಾತಾ, ನಮ್ಮ ರಾಷ್ಟ್ರ ಧ್ವಜದಲ್ಲಿ ಎಷ್ಟು ಬಣ್ಣಗಳು ಇವೆ?’ ಎಂದು ಪ್ರಶ್ನಿಸಿದಳು. ನಾನು ‘ಕೇಸರಿ, ಬಿಳಿ, ಹಸಿರು' ಎಂದು ಉತ್ತರಿಸಿದೆ. ಅದಕ್ಕವಳು ತನ್ನ ಪುಸ್ತಕದಲ್ಲಿ ಕೊಟ್ಟಿರುವ ರಾಷ್ಟ್ರಧ್ವಜದ ಚಿತ್ರದಲ್ಲಿಯ ಬಿಳಿ ಪಟ್ಟಿಯಲ್ಲಿಯ ನೀಲಿ ವರ್ಣದ ಚಕ್ರವನ್ನು ತೋರಿಸಿ, ‘ತಾತಾ, ಮೂರು ಬಣ್ಣಗಳೊಂದಿಗೆ ನೀಲಿ ಬಣ್ಣ ಕೂಡ ಧ್ವಜದಲ್ಲಿದೆ. ಅಂದರೆ ಧ್ವಜದಲ್ಲಿ ನಾಲ್ಕು ಬಣ್ಣಗಳಲ್ಲವೇ?’ ಎಂದು ಉತ್ತರ ನೀಡಿದಳು.
-ಬಸವರಾಜ ಹುಡೇದಗಡ್ಡಿ
***
(ಜನವರಿ ೨೦೧೮ರ ‘ಮಯೂರ' ಸಂಚಿಕೆಯಿಂದ ಆಯ್ದದ್ದು)