‘ಮಯೂರ' ಹಾಸ್ಯ - ಭಾಗ ೩೫

‘ದೋಣಿ ಸಾಗಲಿ'
ಆಗ ಶ್ರಾವಣಮಾಸ. ಮನೆಯಲ್ಲಿ ಜೋಕಾಲಿ ಕಟ್ಟಿದ್ದೆವು. ಎಲ್ಲರಿಗೂ ಒಂದೊಂದು ‘ಬೋರಾ ಬಟ್ಲಾ’ ಕಟ್ಟಿ ಕೊಟ್ಟಿದ್ದರು. (ಒಣ ಕೊಬ್ರಿಗೆ ಮಧ್ಯದಲ್ಲಿ ರಂಧ್ರ ಮಾಡಿ ಅದರಲ್ಲಿ ದಾರ ಪೋಣಿಸಿ ಬುಗುರಿ ತರಹ ಆಡಿಸುವುದು) ನಮ್ಮಕ್ಕ ಜೋಕಾಲಿಯಲ್ಲಿ ಕೂತು ‘ಬೋರಾ ಬಟ್ಲಾ’ ಆಡಿಸುತ್ತಿದ್ದಳು. ಅವಳು ಬಹಳ ಚೆನ್ನಾಗಿ ಹಾಡುತ್ತಾಳೆ. ‘ಅಕ್ಕಾ, ದೋಣಿ ಸಾಗಲಿ ಮುಂದೆ ಹೋಗಲಿ' ಹಾಡು ಎಂದು ಹೇಳಿದೆವು. ಅವಳು ‘ದೋಣಿ ಸಾಗಲಿ ಮುಂದೆ ಹೋಗಲಿ..ದೂರ ತೀರವ ಸೇರಲಿ..'ಎಂದು ಹಾಡುತ್ತಿದ್ದಳು. ಟೀವಿಯಲ್ಲಿ ಕ್ರಿಕೆಟ್ ನೋಡುತ್ತಿದ್ದ ನನ್ನ ತಮ್ಮ ‘ದೋನಿ ಸಾಗಲೆ ಮುಂದೆ ಹೋಗಲೆ, ಆ ಕಡೆಯ ತೀರವ ಸೇರಲೆ ರನ್ ಮಾಡಲೇ. ಗಾಳಿಯಲ್ಲಿ ತೇಲಿ ಬರುವ ಚೆಂಡನ್ನು ಹೊಡೆಯಲೇ... ಎಂದು ಅದೇ ರಾಗದಲ್ಲಿ ಹಾಡಿದಾಗ ಎಲ್ಲರೂ ನಕ್ಕ ನಗು ಕೇಳಿದವರನ್ನು ಬೆಚ್ಚಿಬೀಳಿಸುವಂತಿತ್ತು !
-’ವೃಂದಾ’
***
ಬ್ಲೌಸ್ ಪೀಸ್
ಮನೆಗೆ ಹೆಣ್ಣು ಮಕ್ಕಳು ಬಂದಾಗ ಕುಂಕುಮದ ಜೊತೆ ಹಣ್ಣು, ಬ್ಲೌಸ್ ಪೀಸ್ ಕೊಡುವುದು ಸಂಪ್ರದಾಯ. ಇನ್ನು ಹಬ್ಬ ಅಂದ್ರೆ ಕೇಳೋದೇ ಬೇಡ. ಮೊನ್ನೆ ಸಂಕ್ರಾಂತಿಯಂದು ಸಂಜೆ ನನ್ನ ಸ್ನೇಹಿತೆ ಉಮಾ ಬಂದು ಬಣ್ಣದ ಪ್ಯಾಕೆಟಲ್ಲಿ ಎಳ್ಳು ಬೆಲ್ಲ ಕೊಟ್ಟರು. ನಾನು ಪ್ರತಿಯಾಗಿ ಅವರಿಗೆ ಎಳ್ಳು ಬೆಲ್ಲದ ಜೊತೆಗೆ ಹಣ್ಣು, ಒಂದು ಬ್ಲೌಸ್ ಪೀಸ್ ಕೊಟ್ಟೆ. ಅವರು ಅಲ್ಲಿಂದ ನೇರ ನನ್ನ ಇನ್ನೊಬ್ಬ ಸ್ನೇಹಿತೆ ಪ್ರಭಾ ಮನೆಗೆ ಹೋದರು. ಸ್ವಲ್ಪ ಸಮಯಕ್ಕೇ ಪ್ರಭಾ ನಮ್ಮ ಮನೆಗೆ ಬಂದರು. ಕುಂಕುಮ ಕೊಟ್ಟು, ಉಮಾ ಅವರ ಮನೆಯ ಅದೇ ಬಣ್ಣದ ಎಳ್ಳು ಪ್ಯಾಕೇಟ್, ನಮ್ಮ ಮನೆಯ ಬ್ಲೌಸ್ ಪೀಸ್ (ಉಮಾಗೆ ಕೊಟ್ಟದ್ದು) ಅವರ ಮನೆಯ ಎರಡು ಬಾಳೆಹಣ್ಣನ್ನು ಬೀರಿ ಸಂಕ್ರಾಂತಿ ಮೆರೆದರು. ನಮ್ಮ ಮನೆಯ ಬ್ಲೌಸ್ ಪೀಸ್ ಹಿಂತಿರುಗಿ ನನಗೇ ಬಂದದ್ದು ನೋಡಿ ನಗು ಬಂತು.
-ಸುಮಾ ಕಳಸಾಪುರ
***
ಮದರಂಗಿ ಪ್ರವಾಸ!
ಪ್ಯಾಕೇಜ್ ಟೂರ್ ಗಳನ್ನು ಏರ್ಪಡಿಸುವ ಸಂಸ್ಥೆಯೊಂದು ಒಂದೇ ಸಮಯದಲ್ಲಿ ಎರಡು ಯೋಜನೆಗಳ ಮೂಲಕ ಯುರೋಪ್ ಪ್ರವಾಸ ಏರ್ಪಡಿಸಿತ್ತು. ಹಿರಿಯ ನಾಗರಿಕರಿಗಾಗಿ ‘ಸೀನಿಯರ್ ಸಿಟಿಜನ್ಸ್ ಔಟಿಂಗ್' ಯೋಜನೆ, ನವವಿವಾಹಿತರಿಗಾಗಿ ‘ಹನಿಮೂನ್ ಕಪಲ್ಸ್' ಯೋಜನೆ. ‘ಸೀನಿಯರ್ ಸಿಟಿಜನ್ಸ್ ಔಟಿಂಗ್' ಗುಂಪಿನಲ್ಲಿ ಪತ್ನಿಯೊಂದಿಗೆ ನಾನೂ ಹಾಜರಿದ್ದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನಮ್ಮ ಗುಂಪುಗಳನ್ನು ಪ್ರತ್ಯೇಕಿಸುತ್ತಾ ಟೂರ್ ಮ್ಯಾನೇಜರ್, ಕೈಗಳಿಗೆ ಮದರಂಗಿ ಹಾಕಿಕೊಂಡವರು ಈ ಬದಿಗೆ ಬನ್ನಿ ಮತ್ತು ತಲೆಕೂದಲಿಗೆ ಮದರಂಗಿ ಹಾಕಿ ಕೊಂಡವರು ಆ ಬದಿಗೆ ಹೋಗಿ' ಎಂದು ಹೇಳುತ್ತಿದ್ದಂತೆ ನಾವೆಲ್ಲ ನಕ್ಕಿದ್ದೇ ನಕ್ಕಿದ್ದು !
-ರಮಣ್ ಶೆಟ್ಟಿ ರೆಂಜಾಳ್
***
ನನಗೂ ಗೊತ್ತು ....
ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ನಮ್ಮ ನೆಂಟರ ಹುಡುಗ ಇತ್ತೀಚೆಗೆ ಆಸ್ಟ್ರೇಲಿಯಾದಿಂದ ಹಿಂದಿರುಗಿದ್ದ. ಅಲ್ಲಿನ ಅನುಭವ, ದೇಶ, ಕೆಲಸದ ಬಗ್ಗೆ ನಮ್ಮೊಂದಿಗೆ ವಿವರಿಸುತ್ತಿದ್ದ. ಆತನ ಮಾತನ್ನು ನಾವೆಲ್ಲಾ ಏಕಾಗ್ರತೆಯಿಂದ ಆಲಿಸುತ್ತಿದ್ದೆವು. ನಮ್ಮ ನಾದಿನಿ ಮಗ ಶ್ರೀನಿಧಿ ಚೂಟಿ. ಆತನ ಬಳಿ ಶ್ರೀನಿಧಿ, ‘ನನಗೂ ಆಸ್ಟ್ರೇಲಿಯಾ ದೇಶದವರು ಕೆಲವರು ಗೊತ್ತು' ಎಂದಾಗ ನಾವೆಲ್ಲಾ ದಂಗು ಬಡಿದೆವು. ‘ಹೌದು, ಸ್ಮಿತ್, ಹೆಡ್, ಫಿಂಚ್, ವಾರ್ನರ್, ಜಂಪಾ, ಮ್ಯಾಕ್ಸ್ ವೆಲ್...;ಎಂದು ಕ್ರಿಕೆಟಿಗರ ಹೆಸರು ಹೇಳುತ್ತಲೇ ಇದ್ದ!
-ಗುರುದೇವ್ ಭಂಡಾರ್ಕರ್
***
(‘ಮಯೂರ' ಎಪ್ರಿಲ್ ೨೦೧೮ರ ಸಂಚಿಕೆಯಿಂದ ಆಯ್ದದ್ದು)