‘ಮಯೂರ' ಹಾಸ್ಯ - ಭಾಗ ೩೬

‘ಮಯೂರ' ಹಾಸ್ಯ - ಭಾಗ ೩೬

ನಾನು ಸ್ವಲ್ಪ ಲೂಸು…

ಕಳೆದ ತಿಂಗಳು ನಮ್ಮ ಬಾಲ್ಯದ ಗೆಳತಿಯರೆಲ್ಲ ಕುಟುಂಬ ಸಮೇತರಾಗಿ ಗೆಳತಿಯೊಬ್ಬಳ ಮನೆಯಲ್ಲಿ ಸೇರಿದ್ದೆವು. ಮದ್ಯಾಹ್ನದ ಊಟದ ನಂತರ ಎಲ್ಲರೂ ನಮ್ಮ ಬಾಲ್ಯದ ಸಂಗತಿಗಳನ್ನ ನೆನಪಿಸಿಕೊಳ್ಳುತ್ತಾ ಕುಳಿತೆವು. ಹರಟೆಯ ವಿಷಯ ನಮ್ಮ ಅಂದಿನ ಕಾಲದ ಜಡೆಯ ಸುತ್ತ ಸಾಗಿತು. ‘ಆಗೆಲ್ಲ ನಮ್ಮ ಕೂದಲು ಎಷ್ಟು ಚೆನ್ನಾಗಿತ್ತಲ್ವಾ...' ಅಂದೆ ನಾನು. ಗೀತಾ, ‘ನಮ್ಮಮ್ಮ ಬಿಗಿದು ಎರಡು ಜಡೆ ಹಾಕುತ್ತಿದ್ದಳು. ಜಡೆ ಸ್ವಲ್ಪ ಲೂಸಾದ್ರೂ ನನಗೆ ಇರುಸುಮುರುಸು ಆಗೋದು' ಅಂದಳು. ಆಗ ಮತ್ತೊಬ್ಬ ಗೆಳತಿಯ ಮಗಳು 'ಈಗ ಹಂಗೇನಿಲ್ಲಪ್ಪ, ನಾನಂತೂ ಸ್ವಲ್ಪ ಲೂಸು, ನಮ್ಮಮ್ಮ ಫುಲ್ ಲೂಸು' ಎಂದು ಹೇಳಿದಾಗ ಅಲ್ಲಿ ಸೂರು ಹಾರಿ ಹೋಗುವಂತಹ ನಗು.

-ಶಾಂತಾ ಕೆ.ಪಿ.

***

ಬದುಕೋದು ಹೇಗೆ?

ಹಣ ತೆಗೆದುಕೊಳ್ಳಲು ಎಟಿಎಂಗೆ ಹೋಗಿದ್ದೆ. ಜೊತೆಗೆ ಗೆಳೆಯನೂ ಇದ್ದ. ಮೊದಲೇ ಇಬ್ಬರು ಸಾಲಿನಲ್ಲಿದ್ದರು. ಬಾಗಿಲಲ್ಲಿ ಕುಳಿತಿದ್ದ ಸೆಕ್ಯೂರಿಟಿ ಗಾರ್ಡ್ ಜೊತೆಗೆ ಮಾತಿಗಿಳಿದ ಗೆಳೆಯ, ‘ಹಣ ಇದೆಯಾ ಹೇಗೆ?’ ಎಂದ. ಸೆಕ್ಯೂರಿಟಿ ಗಾರ್ಡ್, ‘ಈಗಿದೆ; ಇನ್ಮೇಲೆ ಹಣ ಸಿಗೋದು ಕಷ್ಟ ಸೋಮಿ! ಇನ್ಮುಂದೆ ಪರ್ಸಲ್ಲಿ ದುಡ್ಡೇ ಮಡ್ಗಂಗಿಲ್ಲ... ಬರೀ ಕಾರ್ಡ್..’ಎಂದ. ಸುಮ್ಮನಿರಲಾರದ ಗೆಳೆಯ ‘ಛೇ! ಬಹಳ ಅನ್ಯಾಯ ಕಣ್ರಿ!...ಎಂದ. ‘ಯಾಕ್ ಸೋಮಿ ಅನ್ಯಾಯ? ಯಾರಿಗನ್ಯಾಯಾ?’ ಎಂಬ ಪ್ರಶ್ನೆಗೆ ಗೆಳೆಯ ‘ಅಲ್ರೀ, ಪರ್ಸಲ್ಲಿ ದುಡ್ದೇ ಇಡದಿದ್ರೆ ಪಿಕ್ ಪಾಕೆಟ್ ಮಾಡೋವ್ರು ಪಾಪ ಬದುಕೋದಾದ್ರೂ ಹೆಂಗ್ರೀ? ಬಹಳ ಕಷ್ಟ..' ಎಂದ. ಸೆಕ್ಯೂರಿಟಿಯವ ಸುಸ್ತು. ಉಳಿದವರ ಮುಖದಲ್ಲಿ ಮಂದಹಾಸ.

-ಹೊಸ್ಮನೆ ಮುತ್ತು

***

ಶುಗರ್ ಬರುತ್ತೆ

ಮೊನ್ನೆ ನನ್ನ ಚಿಕ್ಕಮ್ಮ ಫೋನ್ ಮಾಡಿದ್ಲು. ಅವಳ ಜೊತೆ ಮಾತಾಡ್ತಾ ಇದ್ದಾಗ ಹೊರಗಡೆ ಗುಬ್ಬಚ್ಚಿಯ ಕಲರವ ಶುರುವಾಯ್ತು. ನಾನು ಅವುಗಳಿಗೆ ಅಕ್ಕಿ ಹಾಕೋಕೆ ಮೊಬೈಲ್ ಹಿಡಿದೇ ಹೋದೆ. ಹೇಳಿದೆ, ‘ನೋಡು ಚಿಕ್ಕಮ್ಮಾ, ಗುಬ್ಬಚ್ಚಿಗಳೇ ಇಲ್ಲ ಅಂತಾರಲ್ಲಾ.. ನಾನು ದಿನಾ ಅಕ್ಕಿ ಹಾಕ್ತೀನಿ. ನೀರೂ ಇಟ್ಟಿರ್ತೀನಿ ಎಷ್ಟೊಂದು ಗುಬ್ಬಚ್ಚಿಗಳು ಚಿಲಿ ಪಿಲಿ ಅಂತ ಬರುತ್ತೆ.. ತುಂಬಾ ಖುಷಿಯಾಗುತ್ತಪ್ಪ..’ ಅಂದೆ. ಅದಕ್ಕವಳು ‘ಗುಬ್ಬಚ್ಚಿ ಬ್ರಾಹ್ಮಣ, ಬರಿ ಅಕ್ಕಿ ಹಾಕಿದ್ರೆ ಅನ್ನ ಇಟ್ಟಂಗಾಗುತ್ತೆ. ಜೊತೆಗೆ ಸ್ವಲ್ಪ ಬೆಲ್ಲದ ಪುಡಿ ಸೇರಿಸಿ ಹಾಕು. ಪಾಯಸ ಹಾಕಿದಂತಾಗುತ್ತೆ' ಅಂದ್ಲು. ಅಲ್ಲೇ ಆಡುತ್ತಿದ್ದ ತಂಗಿ ಮಗ ಪ್ರಜ್ವಲ್ ಚಿಕ್ಕಮ್ಮನಿಂದ ಫೋನು ಕಸಿದುಕೊಂಡು ಹೇಳಿದ. ‘ದೊಡ್ಡಮ್ಮಾ, ಹಾಗೆ ಮಾಡ್ಬೇಡಿ. ದಿನಾ ಸ್ವೀಟ್ ತಿಂದ್ರೆ ಪಾಪ ಅವಕ್ಕೂ ಶುಗರ್ ಬರುತ್ತೆ' ಅಂತ!

-’ಸುಮಾ ಕಳಸಾಪುರ'

***  

ಗೆಸ್ಟ್ ಹೌಸ್ ಗೆ ಹೋಗತ್ತಾ?

ಕುಟುಂಬದ ಚಿಕ್ಕ ಸಮಾರಂಭದಲ್ಲಿ ನಡೆದ ಘಟನೆ. ಮನೆಗೆ ನೆಂಟರು ಬಹಳ ಜನ ಬಂದಿದ್ದರಿಂದ ಎಲ್ಲರಿಗೂ ಮನೆಯಲ್ಲಿ ಮಲಗಲು ಜಾಗ ಸಾಕಾಗದು ಎಂದು ಹತ್ತಿರದಲ್ಲೇ ಒಂದು ಗೆಸ್ಟ್ ಹೌಸ್ ಬುಕ್ ಮಾಡಲಾಗಿತ್ತು. ನಮ್ಮ ಬಂಧುಗಳಲ್ಲಿ ಒಬ್ಬರು ಎಲ್ಲಾ ಮಾತಿಗೂ ಹಾಸ್ಯ ಮಾಡುತ್ತ ಎಲ್ಲರನ್ನೂ ನಗಿಸುತ್ತಿದ್ದರು. ಊಟವಾದ ಮೇಲೆ ಅವರಿಗೆ ಗೆಸ್ಟ್ ಹೌಸ್ ನಲ್ಲಿ ವ್ಯವಸ್ಥೆ ಮಾಡಿದ್ದು ಹೇಳಿದೆವು. ಅವರು ‘ಅಯ್ಯೋ, ನಮಗೆಲ್ಲ ಗೆಸ್ಟ್ ಹೌಸ್ ಯಾಕೆ, ಒಂದು ಗೋಣಿ ಚೀಲ ಇದ್ರೆ ಸಾಕಿತ್ತು. ಮಲಗಿ ಬಿಡ್ತಿದ್ದೆ' ಎಂದರು. ನಾನೂ ತಮಾಷೆಗೆ, 'ನಮ್ಮನೇಲಿ ಒಂದೇ ಗೋಣಿಚೀಲ ಇರೋದು. ಅದರ ಮೇಲೆ ನಮ್ಮ ನಾಯಿ ಮಲಗಿ ಬಿಟ್ಟಿದೆ. ಅದನ್ನೇ ಕೊಡಬೇಕಷ್ಟೇ’ ಅಂದೆ. ಅದಕ್ಕವರು ‘ಪಾಪ, ಅದೇನು ಮಾಡುತ್ತೆ? ಗೆಸ್ಟ್ ಹೌಸ್ ಗೆ ಹೋಗುತ್ತಾ?’ ಎಂದರು.

-ಎನ್.ಪಿ.ಶೈಲಜ

***

(‘ಮಯೂರ' ಜುಲೈ ೨೦೧೮ರ ಸಂಚಿಕೆಯಿಂದ ಆಯ್ದದ್ದು)