‘ಮಯೂರ' ಹಾಸ್ಯ - ಭಾಗ ೩೭
ಪೋಲೀಸ್ ಬೇಕರಿ
ಆರು ವರ್ಷದ ನನ್ನ ಮೊಮ್ಮಗಳು ಪೂರ್ವಿ ಬಹಳ ಚೂಟಿ. ಅವಳೊಂದಿಗೆ ಒಂದು ದಿನ ಸಂಜೆ ಸ್ಕೂಟಿಯಲ್ಲಿ ಮಾರ್ಕೆಟ್ ಗೆ ಹೊರಟಿದ್ದೆ. ಪೋಲೀಸ್ ಕಚೇರಿ ಬಳಿ ಅಲ್ಲಿನ ಸಿಬ್ಬಂದಿಗಾಗಿಯೇ ಒಂದು ಬೇಕರಿ ಇದೆ. ಅದರ ಮುಂದೆ ‘ಪೋಲೀಸ್ ಬೇಕರಿ' ಎಂದು ಬೋರ್ಡ್ ಹಾಕಿದ್ದಾರೆ. ಅದನ್ನು ಕಂಡ ಮೊಮ್ಮಗಳು ‘ಅಜ್ಜಾ, ಪೋಲೀಸರು ಬೇಕಾದರೆ ಇಲ್ಲಿಗೆ ಬರಬೇಕೇನು?’ ಎಂದು ಪ್ರಶ್ನಿಸಿದ್ದು ಕೇಳಿ ನನಗೆ ನಗೆ ತಡೆಯಲಾಗಲಿಲ್ಲ.
-ಶಿ.ಗು.ಕುಸುಗಲ್ಲ
***
ಮೂರ್ತಿ ಚಿಕ್ಕದು…
ನನ್ನ ಅಣ್ಣನ ಮಗ ಮೂರ್ತಿ ದೊಡ್ಡವ ಮತ್ತು ಮಗಳು ಕೀರ್ತಿ ಚಿಕ್ಕವಳು. ಇಬ್ಬರೂ ಒಂದೇ ಶಾಲೆಯಲ್ಲಿ ಓದುತ್ತಾರೆ. ಮೂರ್ತಿಯ ಪ್ರತಿಭೆಯನ್ನು ಗುರುತಿಸಿ ಅವನಿಗೆ ಶಹಭಾಸ್ ಗಿರಿ ಕೊಡಲು ಅವರ ಗುರುಗಳು ಎಲ್ಲರ ಸಮ್ಮುಖದಲ್ಲಿ ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಅಂದರಂತೆ. ಸಂಜೆ ಕೀರ್ತಿ ದೂರು ತೆಗೆದುಕೊಂಡೇ ಮನೆಗೆ ಬಂದಳು. ‘ಅಮ್ಮ, ಟೀಚರ್ ಗೆ ಅಷ್ಟೂ ಗೊತ್ತಾಗೋಲ್ವೇನಮ್ಮಾ, ಮೂರ್ತಿ ಅಣ್ಣ ಚಿಕ್ಕವನಂತೆ. ನಾನು ದೊಡ್ಡವಳಂತೆ. ಮೂರ್ತಿ ಚಿಕ್ಕದು, ಕೀರ್ತಿ ದೊಡ್ಡದು ಅಂದರು. ‘ನೀನೇ ಹೇಳಮ್ಮ, ಕೀರ್ತಿನೇ ಚಿಕ್ಕದು ಮೂರ್ತಿನೇ ದೊಡ್ದದು ಅಂತ...' ಎಂದಳು !
-ಪೂರ್ಣಿಮಾ ಭಂಡಾರ್ಕರ್
***
ಲಂಚ ತರಿಸೋಣ…
ಸುಮಾರು ೪೭ ವರ್ಷಗಳ ಹಿಂದಿನ ಮಾತು. ಆಗ ‘ಲಂಚ' ಎನ್ನುವುದು ಇಷ್ಟು ಸರ್ವವ್ಯಾಪಿ ಆಗಿರಲಿಲ್ಲ. ಯಾರಾದರೂ ಲಂಚ ತಿಂದಿದ್ದಾರೆ ಎಂದು ಗೊತ್ತಾದರೆ ಜನರು ಛೀಮಾರಿ ಹಾಕುತ್ತಿದ್ದರು. ಲಂಚ ತಿಂದವರೂ ತಪ್ಪಿತಸ್ಥ ಭಾವದಿಂದ ಕುಸಿದು ಹೋಗುತ್ತಿದ್ದರು.
ನಾವಾಗ ಎಂಜಿನಿಯರ್ಸ್ ಕ್ವಾರ್ಟರ್ಸ್ ನಲ್ಲಿ ವಾಸವಿದ್ದೆವು. ಅಲ್ಲಿ ಒಬ್ಬ ಎಂಜಿನಿಯರ್ ಲಂಚ ತಿಂದು ಸಸ್ಪೆಂಡ್ ಆಗಿದ್ದರು. ಎಲ್ಲಾ ಕಡೆ ಅದೇ ಮಾತು. ಚರ್ಚೆ ನಡೆದಿತ್ತು. ನನ್ನ ಪುಟ್ಟ ತಮ್ಮ ನರ್ಸರಿಯಲ್ಲಿ ಓದುತ್ತಿದ್ದ. ಒಂದಿನ ಮಧ್ಯಾಹ್ನ ಮನೆಗೆ ಬಂದವನೇ, ‘ಅಮ್ಮ, ನಮ್ ಮನೆಯೊಳಗೆ ಒಮ್ಮೆಯೂ ಲಂಚ ತರಿಸಿಲ್ಲ. ನಾವೂ ಲಂಚ ತರಿಸೋಣ ಅಮ್ಮಾ, ನಾನು ಒಂದು ಸಲಾನೂ ಲಂಚ ತಿಂದೇ ಇಲ್ಲ..' ಅಂತ ಹೇಳಿದಾಗ ಮನೆ ತುಂಬಾ ನಗು.
-ರೇವತಿ ಎಂ. ಅಗ್ನಿಹೋತ್ರಿ
***
ಜಿರಲೆಯ ತರಲೆ
‘ಮಾ’ಮಹಿಳಾ ಸಮಾಜದ ವಾರ್ಷಿಕೋತ್ಸವದ ನಿಮಿತ್ತ ಅಂದು ಸಂಜೆ ‘ವೀರರಾಣಿ ಕಿತ್ತೂರು ಚೆನ್ನಮ್ಮ'ನಾಟಕ ಪ್ರದರ್ಶನ ನಡೆಯುತ್ತಿತ್ತು. ಚೆನ್ನಮ್ಮನ ಪಾತ್ರಕ್ಕೆ ಅದೇ ಸಮಾಜದ ಕಾರ್ಯದರ್ಶಿಯಾಗಿದ್ದ ದುರ್ಗಮ್ಮ ಆಯ್ಕೆಯಾಗಿದ್ದರು. ಥ್ಯಾಕರೆ ಹಾಗೂ ಚೆನ್ನಮ್ಮಳ ನಡುವೆ ಬಿರುಸಿನ ಸಂಭಾಷಣೆ ನಡೆಯುತ್ತಿತ್ತು. ವೀರಾವೇಶಳಾದ ಚೆನ್ನಮ್ಮ ತನ್ನ ಕೈಯೊಳಗಿನ ಕತ್ತಿಯನ್ನು ಝಳಪಿಸುತ್ತ ಥ್ಯಾಕರೆಯ ಕತ್ತಿನ ಬಳಿ ತಂದಾಗ ಆತ ತನ್ನ ತೋರುಬೆರಳನ್ನು ಚೆನ್ನಮ್ಮ ಕತ್ತಿ ಹಿಡಿದ ಕೈ ಕಡೆ ತೋರುತ್ತ ‘ಜಿ..ಜ಼ಿ..ಜ಼ಿ..'ಎಂದು ತೊದಲತೊಡಗಿದ. ಚೆನ್ನಮ್ಮ ಇನ್ನಷ್ಟು ಆವೇಶದಿಂದ ‘ಏನೋ ಬಿಳೀ ಕುನ್ನಿ, ಅದೇನು ಜಿ..ಜ಼ಿ..ಅನ್ನುತ್ತಿದ್ದಿಯಾ?’ ಎಂದಳು. ಆತ ಜಿರಲೆ...ನಿಮ್ಮ ಮುಂಗೈ ಮೇಲೆ ಜಿರಲೆ...'ಎಂದು ಹೇಳಿದ್ದೇ ಬಂತು. ದುರ್ಗಮ್ಮ ಗಾಬರಿಗೊಂಡು ‘ಜಿರಲೆ ಜಿರಲೆ...' ಎನ್ನುತ್ತಾ ಇಡೀ ವೇದಿಕೆಯ ಮೇಲೆಲ್ಲಾ ಕುಣಿದಾಡಿದಳು.
-ಅರವಿಂದ ಜಿ.ಜೋಷಿ
***
(‘ಮಯೂರ' ಆಗಸ್ಟ್ ೨೦೧೮ರ ಸಂಚಿಕೆಯಿಂದ ಸಂಗ್ರಹಿತ)