‘ಮಯೂರ' ಹಾಸ್ಯ (ಭಾಗ- ೩೮)
ಸುಮ್ಮನೇ ವೇಸ್ಟ್
ನನ್ನ ಹತ್ತು ವರ್ಷದ ಮೊಮ್ಮಗಳು ಸ್ತುತಿಗೆ ಶಾಲೆಯಲ್ಲಿ ಟೀಚರು ಐದು ಪ್ರಶ್ನೆ ಕೊಟ್ಟು ಉತ್ತರ ಬರೆಯಲು ಹೇಳಿದ್ದರು. ನಾಲ್ಕು ಪ್ರಶ್ನೆಗಳಿಗೆ ಉತ್ತರ ಬರೆಯುವುದರಲ್ಲಿ ಕೊಟ್ಟ ಹಾಳೆಗಳು ತುಂಬಿ ಹೋದವು. ಇನ್ನೊಂದು ಉತ್ತರ ಬರೆಯಲು ಮತ್ತೊಂದು ಹಾಳೆಯನ್ನು ತೆಗೆದುಕೊಳ್ಳಬೇಕಾಯಿತು. ಆ ಉತ್ತರ ಅವಳಿಗೆ ಗೊತ್ತಿದೆ ಎಂಬ ಖಾತ್ರಿಯೂ ಇತ್ತು. ಗೊತ್ತಿರುವ ಆ ಒಂದು ಉತ್ತರ ಬರೆಯಲು ಬರೆಯಲು ಸುಮ್ಮನೇ ಮತ್ತೊಂದು ಹಾಳೆಯನ್ನು ಹಾಳು ಮಾಡುವುದು ಬೇಡ ಎಂದು ಅದನ್ನು ಬರೆಯದೇ ಹಾಗೇ ಬಂದಿದ್ದಳು. ಅದಕ್ಕಾಗಿ ಅವಳಮ್ಮ ಒಂದೇ ಸಮನೆ ರೇಗುತ್ತಿದ್ದರೆ ನನಗಂತೂ ಅವಳ ‘ಉಳಿತಾಯ ಯೋಜನೆ' ಕಂಡು ನಗು ಬಂತು.
-ಲಕ್ಷ್ಮೀ ವಿ.ಜೋಶಿ
***
ಮ್ಯಾಗ್ನೆಟ್ ಪವರ್
ಮೊನ್ನೆ ಮುಂಗಾರಿನ ಅಬ್ಬರ ಜೋರಾಗಿ ಪಕ್ಕದ ತೋಟದಲ್ಲಿದ್ದ ನುಗ್ಗೆಮರ ಬುಡ ಸಮೇತ ಬಿದ್ದಿತ್ತು. ನಮಗಂತೂ ನುಗ್ಗೆ , ಅದರ ಸೊಪ್ಪಿನ ಖಾದ್ಯಗಳು ತುಂಬಾ ಇಷ್ಟ. ಇದನ್ನೆ ನಾನು ಬೆಂಗಳೂರಿನಿಂದ ಬಂದಿದ್ದ ದೊಡ್ಡಪ್ಪ ದೊಡ್ಡಮ್ಮನಿಗೆ ಹೇಳಿದೆ. ಅದಕ್ಕವರು ‘ನಮಗೆ ಇದು ಗೊತ್ತೇ ಇಲ್ಲ' ಎಂದರು. ಅದಕ್ಕೆ ಉತ್ತರವಾಗಿ ನನ್ನಮ್ಮ ಹೇಳಿದರು. ‘ ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುತ್ತೆ. ತುಂಬಾ ಒಳ್ಳೆಯದು.’ ಅಂತ. ಅಷ್ಟರಲ್ಲಿ ಹಾಸ್ಯ ಪ್ರವೃತ್ತಿಯ ನನ್ನ ಅಪ್ಪ ಬೀರುವಿನಿಂದ ಒಂದು ಮ್ಯಾಗ್ನೆಟ್ ತುಂಡು ತಂದು ಅದರ ಸುತ್ತಾ ಕೈಯಾಡಿಸುತ್ತ ಹೇಳಿದರು. ‘ಅಯ್ಯೋ ಇವಳ ಮಾತು ನಂಬಲೇ ಬೇಡಿ...ಇಲ್ನೋಡಿ. ಕಬ್ಬಿಣದ ಅಂಶವಿದ್ದರೆ ಮ್ಯಾಗ್ನೆಟ್ಟಿಗೆ ಸೊಪ್ಪು ಅಂಟ್ಕೋಬೇಕಿತ್ತಲ್ವಾ! ಎಂದರು. ಅಮ್ಮನ ಮುಖ ಪೆಚ್ಚಾಯ್ತು.
-ಎಸ್.ಎಂ.ಸ್ಮಿತಾ
***
ಮೂಳೆ ಎಂಜಿನಿಯರ್
ನಾನು ನನ್ನ ಸಂಬಂಧಿಕರ ಮದುವೆಗೆ ಹೋಗಿದ್ದೆ. ಬಹಳ ದಿನಗಳ ನಂತರ ಅಲ್ಲಿ ನನ್ನ ಸಂಬಂಧಿಕರೊಬ್ಬರು ಎದುರಾದರು. ಅವರಿಗೆ ನನ್ನ ಒಬ್ಬ ಸ್ನೇಹಿತನನ್ನು ಪರಿಚಯಿಸಬೇಕಾಯಿತು. ‘ಇವರು ಮೂಳೆ ಎಂಜಿನಿಯರ್' ಎಂದು ಅವನನ್ನು ಪರಿಚಯಿಸಿದೆ. ‘ಮೂಳೆ ವೈದ್ಯರು ಗೊತ್ತು, ಮೂಳೆಗೆ ಎಂಜಿನಿಯರ್ ಸಹ ಇರ್ತಾರಂತ ಗೊತ್ತೇ ಇರಲಿಲ್ಲ' ಎಂದರು. ‘ಇವರು ಎಂಜಿನಿಯರ್, ಮನೆತನದ ಹೆಸರು ಮೂಳೆ' ಎಂದು ವಿವರಿಸಿದಾಗ ಅವರೂ ನಕ್ಕರು.
-ಸಿ.ವೇಣುಗೋಪಾಲ್
***
ಸಾಯುವವರಿಗೆ ರೂಮಿಲ್ಲ
ಮೂಡುಬಿದರೆಯಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮವೊಂದಕ್ಕೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಸಾಹಿತ್ಯಾಭಿಮಾನಿಗಳು ಬರುತ್ತಾರೆ. ಅವರಿಗೆ ನೂರು ರೂಪಾಯಿಯಲ್ಲಿ ಮೂರು ದಿನ ವಸತಿ, ಊಟದ ವ್ಯವಸ್ಥೆ ಇರುತ್ತದೆ.
ಒಮ್ಮೆ ಕಾರ್ಯಕ್ರಮದ ದಿನದಂದೇ ಬಂದು ರೂಮು ಪಡೆಯಲು ಬಹಳ ಜನ ಕೌಂಟರ್ ಮುಂದೆ ಜಮಾಯಿಸಿದ್ದರು. ತುಂಬಾ ಹೊತ್ತು ಕಾಯ್ದ ಮರಿಸಾಹಿತಿಯೊಬ್ಬ'ನಾನು ಬಹಳ ದೂರದಿಂದ ಬಂದೇನ್ರೀ..ನಾನು ಸಾಯ್ತೇನ್ರಿ..ಬೇಗ ರೂಮು ಕೊಡ್ರಿ..'ಎಂದು ನಾಲ್ಕಾರು ಬಾರಿ ಹೇಳಿದ. ಅಲ್ಲಿನ ಸಹಾಯಕ ‘ಸ್ವಾಮಿ, ಸಾಯುವವರಿಗೆಲ್ಲ ನಾವು ರೂಮು ಕೊಡಲ್ಲ' ಎಂದು ಬಿಟ್ಟ. ಆಗ ಮರಿ ಸಾಹಿತಿ ‘ಹಂಗಲ್ರಿ.. ನಾನು ಸಾಹಿತಿ ಅದಿನ್ರಿ...'ಎಂದಾಗ ಅಲ್ಲಿದ್ದವರೆಲ್ಲ ನೂಕುನುಗ್ಗಲು ಮರೆತು ನಕ್ಕರು.
-ಸದಾನಂದ ಹೆಗಡೆ
***
(‘ಮಯೂರ' ಸೆಪ್ಟೆಂಬರ್ ೨೦೧೮ರ ಸಂಚಿಕೆಯಿಂದ ಸಂಗ್ರಹಿತ)