‘ಮಯೂರ' ಹಾಸ್ಯ (ಭಾಗ - ೩೯)
ಮೊದಲ ರಾತ್ರಿ
ನನ್ನ ಗೆಳೆಯನೊಬ್ಬನ ಮಗನ ಮದುವೆಗೆ ಹೋಗಿದ್ದೆ. ಮದುವೆ ಎಲ್ಲಾ ಸಾಂಗವಾಗಿ ನೆರವೇರಿ ರಾತ್ರಿಯ ಮುಖ್ಯ ಕಾರ್ಯಕ್ರಮವಷ್ಟೇ ಉಳಿದಿತ್ತು. ಹತ್ತಿರದ ನೆಂಟರು, ಖಾಸಾ ಗೆಳೆಯರ ಗುಂಪು ಅಷ್ಟೇ ಇತ್ತು. ನಾವೆಲ್ಲ ವರನ ತಂದೆಯಾದ ನನ್ನ ಗೆಳೆಯನೊಂದಿಗೆ ಹರಟೆ ಹೊಡೆಯುತ್ತಾ ಕುಳಿತಾಗ ನವದಂಪತಿ ಗೆಳೆಯನ ಆಶೀರ್ವಾದ ಪಡೆಯಲು ಬಂದರು. ಆಗ ಗೆಳೆಯ ತನ್ನ ಸೊಸೆಗೆ, ‘ನೋಡಮ್ಮ, ಇದು ನಿಮ್ಮ ಮೊದಲ ರಾತ್ರಿ. ಅನಾಹುತ ನಡೆಯಬಾರದು ನೋಡು. ಅದಕ್ಕೇ ಹೇಳ್ತಾ ಇದ್ದೀನಿ...' ಅಂತ ಮಾತು ಆರಂಭಿಸಿದಾಗ ಅವನ ಪತ್ನಿ, ‘ರೀ, ಅದೆಲ್ಲಾ ಈಗ್ಯಾಕೆ... ನೀವೊಂದು' ಎಂದು ತಡೆಯಲು ಬಂದರು. ಹುಡುಗಿ ನಾಚಿಗೆಯಿಂದ ನೆಲ ನೋಡುತ್ತಾ ನಿಂತಿದ್ದಳು. ನಾವೆಲ್ಲಾ ಇವನೇನು ಹೇಳುತ್ತಿದ್ದಾನೆ ಎನ್ನುವ ಕುತೂಹಲದಿಂದ ಅವನನ್ನೇ ನೋಡುತ್ತಿದ್ದೆವು. ಗೆಳೆಯ ದೊಡ್ಡ ದನಿಯಲ್ಲಿ ಹೇಳಿದ, ‘ಏನಿಲ್ಲಮ್ಮ, ಅವನನ್ನು ಗೋಡೆ ಕಡೆಗೆ ಹಾಕು. ಇಲ್ಲದಿದ್ರೆ ಮಂಚದಿಂದ ಕೆಳಗೆ ಉರುಳಿ ಬೀಳ್ತಾನೆ' ಎಂದ!
-ಹಾಡ್ಯ ಬಿ.ಜಯಾನಂದ
***
ಭಕ್ತಿಗೀತೆ
ಆಗೆಲ್ಲಾ ಮನರಂಜನೆಗೆ ಈಗಿನಷ್ಟು ಆಯ್ಕೆಗಳು ಇರಲಿಲ್ಲ. ರೇಡಿಯೋದಲ್ಲಿ ಚಿತ್ರಗೀತೆಗಳನ್ನು ಕೇಳುವುದೆಂದರೆ ಎಲ್ಲಿಲ್ಲದ ಖುಷಿ. ಆಗ ರೇಡಿಯೋದಲ್ಲಿ ಮದ್ಯಾಹ್ನ ಸಿಲೋನ್ ನಿಂದ ಕನ್ನಡ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದವು. ನಾವೆಲ್ಲಾ ಕಾತರದಿಂದ ಕಾಯುವ ಸಮಯವದು. ಕನ್ನಡ ಸರಿಯಾಗಿ ಬಾರದ ನಿರೂಪಕಿಯೊಬ್ಬಳು ‘ಇಂದು ಗುರುವಾರ, ಭಕ್ರ ಕುಂಬಾರ ಚಿತ್ರದ ಭಕ್ತಿ ಗೀತೆಯೊಂದನ್ನು ಈಗ ಕೇಳುತ್ತೀರಿ' ಎಂದಳು.
‘ಜೋಡಿ ಬೇಡೊ ಕಾಲವಮ್ಮ, ತುಂಬಿ ಬಂದ ಪ್ರಾಯವಮ್ಮ...' ಹಾಡು ಕೇಳಿ ನಾವೆಲ್ಲಾ ದಂಗಾದೆವು. ಕನ್ನಡ ಭಾಷೆ ಗೊತ್ತಿರದ ಆಕೆ, ಭಕ್ತ ಕುಂಬಾರ ಚಿತ್ರದ ಎಲ್ಲಾ ಹಾಡುಗಳೂ ಭಕ್ತಿಗೀತೆಗಳೆಂದು ತಿಳಿದಿದ್ದಳೇನೋ…
-ಪುಷ್ಪಾ ಎನ್ .ಕೆ. ರಾವ್
***
ಇನ್ನೆಲ್ಲಿ ತಿರುಗಿಸ್ತಾಳೆ…
ಶಾಲೆಗೆ ರಜೆ ಇದ್ದ ಕಾರಣ ನನ್ನ ತಂಗಿ ಶೋಭಾ ತನ್ನಿಬ್ಬರು ಮಕ್ಕಳೊಂದಿಗೆ ನಮ್ಮ ಮನೆಗೆ ಬಂದಳು. ಮಕ್ಕಳು ಅನನ್ಯ ಮತ್ತು ಅಮೂಲ್ಯ ಉತ್ತಮ ಗಾಯಕಿಯರು. ಕಳೆದ ಬಾರಿ ಬಂದಾಗ ಅವರು ಒಂದು ಜನಪದ ಗೀತೆಯನ್ನು ಹಾಡಿದ್ದರು. ನನಗದು ತುಂಬಾ ಇಷ್ಟವಾಗಿತ್ತು. ಅದನ್ನು ಹಾಡುವಂತೆ ಕೇಳಿದೆ. ಆ ಹಾಡು ಅವರಿಗೆ ನೆನಪಿಗೆ ಬರಲಿಲ್ಲ. ಒಂದು ಸಾಲನ್ನು ನೆನಪಿಸುವಂತೆ ಕೇಳಿದರು. ‘ಸೊಂಟ ತಿರುಗಿಸ್ತಾಳೆ ರತುನ...' ಅಂತ ನಾನು ನೆನಪಿಸಲೆತ್ನಿಸಿದೆ. ಅಷ್ಟರಲ್ಲಿ ನನ್ನ ಪತಿ ‘ತುಂಬಾ ವರ್ಷವಾಯಿತಲ್ಲ, ರತುನಂಗೆ ವಯಸ್ಸಾಗಿ ಹೋಯ್ತು. ಇನ್ನೆಲ್ಲಿ ಸೊಂಟ ತಿರುಗಿಸಲಾಗುತ್ತೆ ಬಿಡು' ಎನ್ನಬೇಕೇ ...!
-ಎನ್.ಪಿ.ಶೈಲಜಾ
***
ಸರಿಯಾಗಿಯೇ ಇದೆ !
ಇತ್ತೀಚೆಗೆ ನಾನು ಬೆಂಗಳೂರಿನ ಪ್ರತಿಷ್ಟಿತ ಬ್ಯಾಂಕ್ ಒಂದಕ್ಕೆ ಹೋಗಿದ್ದೆ. ಅಲ್ಲಿ ನನ್ನ ಕೆಲಸದ ನಿಮಿತ್ತ ಸ್ವಲ್ಪ ಕಾಯಬೇಕಾಗಿ ಬಂತು. ಠೇವಣಿ ಕೌಂಟರಿನ ಎದುರು ಕೂತ ನನ್ನ ಗಮನ ಪಕ್ಕದಲ್ಲಿರುವ ಕೋಣೆಯತ್ತ ಹರಿಯಿತು. ಆ ಕೋಣೆಯ ಬಾಗಿಲಿಗೆ ಲಾಕರ್ ರೂಮ್ (Locker Room) ಎಂಬ ಇಂಗ್ಲಿಷ್ ಪದವನ್ನು ‘ಭದ್ರತಾ ಕಪಟ ಕೊಟ್ಟಡಿ' ಎಂದು ತರ್ಜುಮೆ ಮಾಡಿ ಹಾಕಲಾಗಿತ್ತು. ನನಗೆ ಒಂದು ಕಡೆ ನಗು ಬಂದರೆ, ಇನ್ನೊಂದು ಕಡೆ ಕನ್ನಡದ ದುರವಸ್ಥೆಯ ಬಗ್ಗೆ ಬೇಸರವೆನಿಸಿತು. ಕೌಂಟರಿನಲ್ಲಿ ಕೂತ ಸಿಬ್ಬಂದಿಯೊಬ್ಬರಿಗೆ ‘ಮೇಡಂ, ನೋಡಿ... ‘ಭದ್ರತಾ ಕಪಟ ಕೊಟ್ಟಡಿ’ ತಪ್ಪು ಪ್ರಯೋಗ, ಅದು ಬೇರೇನೇ ಅರ್ಥ ಕೊಡುತ್ತದೆ. ದಯವಿಟ್ಟು ಅದನ್ನು ‘ಭದ್ರತಾ ಕಪಾಟು ಕೊಠಡಿ' ಎಂದಾದರೂ ಬರೆಯಿರಿ' ಅಂದೆ. ಅದಕ್ಕವರು ಮಾರ್ಮಿಕವಾಗಿ ನಕ್ಕು ‘ಸರಿಯಾಗಿಯೇ ಇದೆ ಬಿಡಿ ಸರ್...' ಅನ್ನಬೇಕೆ.
-ಧರ್ಮಾನಂದ ಶಿರ್ವ
***
(‘ಮಯೂರ' ಅಕ್ಟೋಬರ್ ೨೦೧೮ರ ಸಂಚಿಕೆಯಿಂದ ಸಂಗ್ರಹಿತ)