‘ಮಯೂರ' ಹಾಸ್ಯ (ಭಾಗ ೩)

‘ಮಯೂರ' ಹಾಸ್ಯ (ಭಾಗ ೩)

ಪಾದರಸ?

ಮೇ ತಿಂಗಳ ಸುಡುಬಿಸಿಲು. ಉತ್ತರ ಭಾರತದ ಪ್ರವಾಸ ಕೈಗೊಂಡಿದ್ದ ನಾವು ಜಲಂಧರ್ ನಲ್ಲಿ ತ್ರಿಪುರಮಾಲಿನಿ ಕಾತ್ಯಾಯಿನಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೆವು. ದೇವಸ್ಥಾನದ ಪ್ರಾಂಗಣ ಬಹಳ ದೊಡ್ಡದಾಗಿದ್ದು ಬರಿಗಾಲಲ್ಲಿ ನಡೆಯುವುದು ಬೆಂಕಿಯ ಮೇಲೆ ಕಾಲಿಟ್ಟಂತೆ ಆಗಿತ್ತು. ನನ್ನ ಪತ್ನಿಯ ಭಾವ ವೆಂಕಟೇಶ್ ಸರಸರನೆ ನಡೆಯುತ್ತಿದ್ದುದನ್ನು ನೋಡಿ ನಮ್ಮ ಮಗಳ ಮಾವನವರು, ‘ವೆಂಕಟೇಶ ಮೂರ್ತಿಗಳು ಪಾದರಸದಂತೆ ಬಹಳ ಚುರುಕು. ಎಷ್ಟು ಬೇಗ ನಡೀತಿದಾರೆ ನೋಡಿ!’ ಎಂದರು. ಆಗ ನನ್ನ ಪತ್ನಿಯ ಅಣ್ಣ ಸತ್ಯನಾರಾಯಣ, ‘ಈ ಹನ್ನೆರಡು ಗಂಟೆ ಏರು ಬಿಸಿಲಿನಲ್ಲಿ ನೆಲ ಕಾದ ಹೆಂಚಾಗಿದೆ. ಆದ್ದರಿಂದ ಅವರು ‘ಪಾದ ರಸ' ಆಗಿದ್ದಾರೆ ಅಷ್ಟೇ. ಇಲ್ಲಾಂದ್ರೆ ಅವರು ನಿಧಾನವಾಗಿಯೇ ನಡೆಯೋದು' ಎಂದಾಗ ಅವರ ಹಾಸ್ಯ ಚಟಾಕಿಗೆ ನಮ್ಮೊಂದಿಗೆ ಸಹಪ್ರಯಾಣಿಕರೂ ಜೋರಾಗಿ ನಗಲಾರಂಭಿಸಿದರು!

-ಬಿ.ಕೆ.ನರಸಿಂಹಮೂರ್ತಿ, ಬೆಂಗಳೂರು

***

ತಾಯಿ ತಂದೆ

ನಾನಾಗ ಸಕಲೇಶಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೆ. ಒಮ್ಮೆ ಕಾಲೇಜಿನ ಜವಾನ ಮಹಮ್ಮದ್ ಗೌಸ್ ಪ್ರಾಂಶುಪಾಲರ ಬಳಿಗೆ ಬಂದು ‘ಸರ್, ನಾನು ‘ತಾಯಿ ತಂದೆ’ ನೋಡಬೇಕು, ಒಂದು ದಿನ ರಜೆ ಕೊಡಿ’ ಕೇಳಿಕೊಂಡ. ಪ್ರಾಂಶುಪಾಲರು ಗೌಸ್ ನನ್ನೇ ನೋಡುತ್ತಾ, ಪಾಪ, ದೂರದ ಊರಿನಿಂದ ಬಂದು ಇಲ್ಲೇ ವಾಸವಿದ್ದಾನೆ. ಊರಿಗೆ ಹೋಗಿ ಬರಲಿ ಎಂದುಕೊಂಡು, ‘ಆಯಿತು, ರಜೆ ಅರ್ಜಿ ತೆಗೆದುಕೊಂಡು ಹೋಗಿ ಬಾ’ ಎಂದು ಅನುಮತಿ ನೀಡಿದರು. ಒಂದು ದಿನದ ಬಳಿಕ ಕಾಲೇಜಿಗೆ ಬಂದ ಗೌಸ್ ನನ್ನು ನೋಡಿ, ‘ಏನೋ ನಿನ್ನ ‘ತಾಯಿ ತಂದೆ’ ಚೆನ್ನಾಗಿದ್ದಾರೇನೋ? ಎಂದು ಕೇಳಿದರು. ಗೌಸ್ ನಗುತ್ತಾ ‘ಸರ್, ನಾನು ನೋಡಲು ಹೋಗಿದ್ದು, ಕಲ್ಯಾಣ್ ಕುಮಾರ್ ಅಭಿನಯದ ಸಿನೆಮಾ ‘ತಾಯಿ ತಂದೆ' ಎಂದಾಗ ನಮ್ಮ ಪ್ರಾಂಶುಪಾಲರು ಸುಸ್ತೋ ಸುಸ್ತು!

-ಎಸ್.ಕುಮಾರಸ್ವಾಮಿ, ಚಿಕ್ಕಬಳ್ಳಾಪುರ

***

ಚಿಕ್ಕಣ್ಣನ ತರಹ!

ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ನನ್ನ ತಂಗಿ ಮಗ ಅಕ್ಷಯ ಕುಮಾರನನ್ನು ಯಾವುದಾದರೂ ಪ್ರಸಿದ್ಧ ಕಾಲೇಜಿಗೆ ಸೇರಿಸಿ ಹಾಸ್ಟೆಲ್ ನಲ್ಲಿ ಬಿಡೋಣ ಎಂದು ಮಾತನಾಡಿಕೊಳ್ಳುತ್ತಿರುವಾಗ, ‘ಹೋಗಮ್ಮಾ, ಹಾಸ್ಟೆಲಿಗೆ ಯಾರು ಸೇರುತ್ತಾರೆ. ಹಾಸ್ಟೆಲ್ಲಿಗೆ ಸೇರುವಾಗ ನಟ ದರ್ಶನ್ ತರಹ ಇದ್ದ ನನ್ನ ಗೆಳೆಯರು ಹಾಸ್ಟೆಲಿನಿಂದ ಬರುವಾಗ ಹಾಸ್ಯನಟ ಚಿಕ್ಕಣ್ಣನ ತರಹ ಆಗಿ ಬಂದಿದ್ದಾರೆ ಗೊತ್ತಾ...' ಎನ್ನಬೇಕೇ?

-ಎಸ್ ಎನ್ ಕೆ, ಕಡೂರು

***

(ಮಯೂರ, ಡಿಸೆಂಬರ್ ೨೦೧೬ರಿಂದ ಸಂಗ್ರಹಿತ)