‘ಮಯೂರ ಹಾಸ್ಯ' - ಭಾಗ ೪೦

‘ಮಯೂರ ಹಾಸ್ಯ' - ಭಾಗ ೪೦

ಅಡುಗೆಯವನನ್ನು ಕಳಿಸಿ

ಅಡುಗೆ ಮಾಡುವುದು ನನ್ನ ಹವ್ಯಾಸ. ನೌಕರಿಯಲ್ಲಿದ್ದಾಗಲೂ ಅಡುಗೆ ಮಾಡಿ ಊಟ ಮಾಡಿಕೊಂಡೇ ಆಫೀಸಿಗೆ ಹೋಗುತ್ತಿದ್ದೆ. ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ನನ್ನ ಮಗಳ ಮನೆಗೆ ಬಂದಾಗಲೂ ಅಡುಗೆ ಕೆಲಸ ನನ್ನದೇ. ಹೀಗೊಂದು ದಿನ ಪಂಚೆ ಮಾತ್ರ ಧರಿಸಿ ಅಡಿಗೆ ಮಾಡುತ್ತಿದ್ದೆ. ಅದು ಪಕ್ಕದ ಮನೆಗೂ ಕಾಣುತ್ತಿತ್ತು. ಮಾರನೇ ದಿನ ನೆರೆಮನೆಯವರ ಮನೆಗೆ ಬರುತ್ತಿದ್ದ ಅಡುಗೆಯವರು ಬರಲಿಲ್ಲವಂತೆ. ಆಕೆ ಮಗಳ ಎದುರು, ‘ನಮ್ಮನೆಯ ಅಡುಗೆ ಕೆಲಸದವರು ಬಂದಿಲ್ಲ. ನಿಮ್ಮನೆಯಲ್ಲಿ ಅಡುಗೆ ಮಾಡುವವರನ್ನು ಒಂದು ದಿನ ನಮ್ಮನೆಗೆ ಕಳಿಸಿ. ಕೈತುಂಬ ಹಣ ಕೊಡುತ್ತೇನೆ.’ ಎಂದರು. ಮಗಳು ‘ಅವರು ಅಡುಗೆಯವರಲ್ಲ. ನಮ್ಮ ತಂದೆ' ಎಂದಾಗ ಅವರ ಮುಖ ನೋಡಬೇಕಿತ್ತು. 

-ಎ.ಎನ್.ವೆಂಕಟೇಶ್

***

ಮ್ಯಾಚಿಂಗ್

ಯಾರ ಬಗ್ಗೆ ಇನ್ಯಾರೊ ಏನು ಹೇಳಿದರೂ ನಂಬುತ್ತ, ತಾನೂ ಹಾಗೆಯೇ ಚಿತ್ರವಿಚಿತ್ರ ಸುದ್ದಿ ಹರಡುವ ನಮ್ಮ ಮಾಲಿನಿಯನ್ನು ಗೆಳತಿಯರೆಲ್ಲಾ ‘ಹಿತ್ತಾಳೆ ಕಿವಿ ಮಾಲಿನಿ' ಎಂದೇ ಕರೆಯುತ್ತಿದ್ದರು. ಆ ದಿನ ಗೆಳತಿಯೊಬ್ಬಳು, ‘ಹಿತ್ತಾಳೆ ಕಿವಿ ಮಾಲಿನಿ ಇದ್ದಾಳಲ್ಲ..' ಅವಳು...' ಎಂದು ಏನೋ ಹೇಳುತ್ತಿದ್ದಳು. ಪಕ್ಕದಲ್ಲಿದ್ದ ಏಳು ವರ್ಷದ ನಮ್ಮ ಮಗಳು ‘ಆ !... ಹಿತ್ತಾಳೆ ಕಿವಿಯಾ?... ಹಾಗಿದ್ರೆ ಮಾಲಿನಿ ಆಂಟಿ ಚಿನ್ನದ ಓಲೆ ಹೇಗೆ ಹಾಕ್ತಾರೆ? ಹಿತ್ತಾಳೆ ಕಿವಿಗೆ, ಚಿನ್ನದ ಓಲೆ ಮ್ಯಾಚಿಂಗ್ ಆಗುತ್ತಾ? ‘ ಎಂದಾಗ ಗೆಳತಿಯರೆಲ್ಲಾ ಕಕ್ಕಾಬಿಕ್ಕಿ. 

-ಸುಶೀಲಾ ಆರ್. ರಾವ್

***

ಉಂಡ ಮೇಲೆ…

ಸಂಬಂಧಿಕರ ಮನೆಗೆ ಔತಣಕ್ಕೆ ಹೋಗಿದ್ದೆವು. ನೆಂಟರಿಷ್ಟರೆಲ್ಲಾ ಸೇರಿದ್ದರು. ದಕ್ಷಿಣ ಕನ್ನಡದ ಬಾಣಸಿಗರು ರುಚಿಕಟ್ಟಾಗಿ ಅಡುಗೆ ತಯಾರಿಸಿದ್ದರು. ಬಾಳೆ ಎಲೆಯ ಮೇಲೆ ಅಲಂಕೃತವಾಗಿ ಬಡಿಸಿದ ತಿನಿಸುಗಳನ್ನು ನಾವೆಲ್ಲರೂ ಪೊಗದಸ್ತಾಗಿ ಹೊಡೆಯುತ್ತಿದ್ದೆವು. ಆಗ ನನಗೆ ಎಲ್ಲೋ ಓದಿದ ಚೀನಾದ ದಾರ್ಶನಿಕ ಕನ್ಫೂಶಿಯಸ್ ನ ಮಾತು ನೆನಪಾಯಿತು. ಎಲ್ಲರಿಗೂ ಕೇಳುವಂತೆ ‘ಎಲ್ಲರೂ ಉಣ್ಣುತ್ತಾರೆ, ಕೆಲವರು ಅನುಭವಿಸಿ ಉಣ್ಣುತ್ತಾರೆ' ಎಂದೆ. ಎದುರಿನ ಸಾಲಿನಲ್ಲಿ ಕುಳಿತಿದ್ದ ನನ್ನ ಅಣ್ಣ ‘ಹೌದೌದು, ಕೆಲವರು ಊಟವಾದ ಮೇಲೆ ಅನುಭವಿಸುತ್ತಾರೆ' ಅನ್ನಬೇಕೇ?

-ಸುರೇಶ್ ಹೆಗಡೆ

***

ಮುತ್ತು

ನಾನಾಗ ಚಿಕ್ಕವಳಿದ್ದೆ. ಖರೀದಿಗೆಂದು ಅಮ್ಮ, ಅಕ್ಕ, ಚಿಕ್ಕಮ್ಮ ಮತ್ತು ನಾನು ನಮ್ಮೂರಿನಿಂದ ೩೦ ಕಿಲೋ ಮೀಟರ್ ದೂರದ ತೀರ್ಥಹಳ್ಳಿಗೆ ಹೋಗಿದ್ದೆವು. ಆ ದಿನ ಬಳೆ ಅಂಗಡಿಯಲ್ಲಿ ಬಹಳ ಜನರಿದ್ದರು. ಎಲ್ಲರೂ ತಮಗೆ ಬೇಕಾದ್ದನ್ನು ತೆಗೆದುಕೊಂಡು ಮರಳಲು ಸಾಕಷ್ಟು ಸಮಯ ಹಿಡಿದಿತ್ತು. ಸಂಜೆ ಎಲ್ಲರೂ ಮನೆಮುಂದಿನ ಬಾವಿನ ಕಟ್ಟೆಯ ಬಳಿ ಸೇರಿದ್ದೆವು. ತೀರ್ಥಹಳ್ಳಿಗೆ ಹೋಗಿದ್ದನ್ನು ಹೇಳುತ್ತಾ ಅಕ್ಕ ಹೇಳಿದಳು. ‘ಬಳೆ ಅಂಗಡಿಯಲ್ಲಿ ಬಹಳ ಜನರಿದ್ದರು. ಸಾಕಾಗಿ ಹೋಯಿತು.’ ಎಂದು. ಆಗ ನಾನು ದೊಡ್ಡ ಧ್ವನಿಯಲ್ಲಿ ‘ಹೌದು, ಒಂದು ಮುತ್ತು ಕೊಡಲು ಎಷ್ಟು ಹೊತ್ತಾಯಿತು! ‘ ಎಂದೆ. ಅಲ್ಲಿದ್ದವರೆಲ್ಲ ಜೋರಾಗಿ ನಗಲು ಆರಂಭಿಸಿದರು. ವಿಷಯ ಇಷ್ಟೇ.. ಆಗೆಲ್ಲಾ ಕಿವಿಗೆ ಹೆಚ್ಚಾಗಿ ರಿಂಗ್ ಹಾಕುತ್ತಿದ್ದರು. ಆ ರಿಂಗ್ ನ ಮುತ್ತು ಕಳೆದು ಹೋಗಿತ್ತು. ಅದಕ್ಕೆ ಮುತ್ತು ಹಾಕಿಸಲು ಹೋಗಿದ್ದೆ. ಅಂಗಡಿಯಾತ ಎಷ್ಟೋ ಹೊತ್ತಿನ ಬಳಿಕ ಮುತ್ತು ಹುಡುಕಿಕೊಟ್ಟಿದ್ದ.

-ಮಾಧವಿಲತಾ ಚಿಪ್ಪಳಕಟ್ಟೆ

***

(ಮಯೂರ, ನವೆಂಬರ್ ೨೦೧೮ರ ಸಂಚಿಕೆಯ ಕೃಪೆಯಿಂದ)