‘ಮಯೂರ' ಹಾಸ್ಯ - ಭಾಗ ೪೧

‘ಮಯೂರ' ಹಾಸ್ಯ - ಭಾಗ ೪೧

ಎನೀ ಡೌಟ್

ನಾನು ಕುಂದಾಪುರದ ಹತ್ತಿರದ ಬಸ್ರೂರಿನ ಕಾಲೇಜಿಗೆ ಉಪನ್ಯಾಸಕನಾಗಿ ಹೋದಾಗ ಮೊದಲ ಕ್ಲಾಸ್ ನಲ್ಲಿ ಪಾಠದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ನಿಮಗೆ ಪಾಠಕ್ಕೆ ಸಂಬಂಧಿಸಿದಂತೆ doubts ಇದ್ರೆ ಅರ್ಥವಾಗದಿದ್ರೆ ಕೇಳಿ. ಹತ್ತು ಸಾರಿ ಬೇಕಾದರೂ ಹೇಳುವೆ ಎಂದೆ. ಮರುದಿನ ಬಿ.ಕಾಂ.ತರಗತಿಯಲ್ಲಿ ಪಾಠದ ನಂತರ ವಿದ್ಯಾರ್ಥಿಗಳಿಗೆ ‘Any doubts?’ ಅಂತ ಕೇಳಿದೆ. ಮುಂದಿನ ಬೆಂಚಿನಲ್ಲಿ ಕುಳಿತಿದ್ದ ಹುಡುಗನೊಬ್ಬ ‘ಸರ್ ಒಂದ್ ಕ್ವಶ್ಚನ್' ಎಂದ. ಮೊದಲ ಸಲ ಪ್ರಶ್ನೆ ಕೇಳುತ್ತಿದ್ದಾನಲ್ಲ ಅಂತ ನನಗೆ ಖುಷಿಯಾಯ್ತು. ಎಲ್ಲರನ್ನೂ ಉದ್ದೇಶಿಸಿ, ‘ನೋಡಿ, ಕ್ವಶ್ಚನ್ ಕೇಳುವುದು, ಗೊತ್ತಿಲ್ಲದ್ದನ್ನು ಕೇಳಿ ತಿಳಿಯುವುದು ಜ್ಞಾನಾಕಾಂಕ್ಷಿಗಳ ಲಕ್ಷಣ. ಆತ ಏನು ಕೇಳ್ತಾನೆ ಅಂತ ಲಕ್ಷ್ಯ ಕೊಟ್ಟು ಕೇಳಿ' ಎಂದು ಎಲ್ಲರನ್ನೂ ಸುಮ್ಮನಾಗಿಸಿದೆ. ಆ ಹುಡುಗ ‘ಸರ್, ನಿಮಗೆ ಮದ್ವೆ ಆಗಿದೆಯಾ?’ ಅಂತ ಕೇಳಿದಾಕ್ಷಣ ನಾನು ತಬ್ಬಿಬ್ಬಾದೆ. ವಿದ್ಯಾರ್ಥಿಗಳೆಲ್ಲಾ ನಗತೊಡಗಿದರು. ನಾನು ‘ಇಲ್ಲ, ಯಾಕೆ?’ ಅಂತ ಕೇಳಿದೆ. ಆತ ‘ಸರ್, ಹಾಗಾದರೇ ಕುಂದಾಪುರದಲ್ಲೇ ಒಂದು ಹುಡುಗಿಯನ್ನು ಮದುವೆಯಾಗಿಬಿಡಿ.’ ಅಂದ ತಕ್ಷಣ ಇಡೀ ತರಗತಿಯೇ ಹೋ ಎಂದು ನಗೆಗಡಲಿನಲ್ಲಿ ತೇಲಿತು. ಅಂದಿನಿಂದ ‘Any doubts?’ ಅಂತ ಕೇಳೋದನ್ನೇ ಬಿಟ್ಟುಬಿಟ್ಟೆ.

-ಸುರೇಶ ಜಾಲಹಳ್ಳಿ, ಯಲ್ಲಾಪುರ 

***

ಚೌಕಾಶಿ

ನನಗೆ ಚೌಕಾಶಿ ಅಂದರೆ ಆಗುವುದಿಲ್ಲ. ಅದರೆ ನನ್ನ ಹೆಂಡತಿ ತದ್ವಿರುದ್ಧ. ಒಂದು ದಿನ ಎಂದಿನಂತೆ ಮನೆಯ ಹತ್ತಿರದ ಮಾರ್ಕೆಟ್ ಗೆ ಹೋದ ಇವಳು ಅಂಗಡಿಯಲ್ಲಿ ಟೊಮೆಟೋ ಕೇಳಿದ್ದಾಳೆ. ಕೆಜಿಗೆ ೨೦ ರೂಪಾಯಿ ತುಂಬಾ ಜಾಸ್ತಿ ಆಯ್ತು ಸ್ವಲ್ಪ ಕಮ್ಮಿ ಮಾಡಿಕೊಳ್ಳಿ ಅಂದರೆ ಅಂಗಡಿಯವರು ಆಗೋದಿಲ್ಲಮ್ಮ ಅಂದಿದ್ದಾರೆ. ಮನೆಯ ಹತ್ತಿರ ಬಂದಾಗ ಒಬ್ಬ ಕೈಗಾಡಿಯವನು ಕೆಜಿ ಟೊಮೆಟೋಗೆ ೧೬ ಅಂತ ಹೇಳಿದ. ಇವಳು ಅದು ಹೆಂಗೆ ಅಷ್ಟೆಲ್ಲಾ ಹೇಳುತ್ತೀರಾ, ಅಲ್ಲೆಲ್ಲಾ ೨೦ ರೂಪಾಯಿಗೆ ಕೊಡ್ತಾ ಇದ್ದಾರೆ. ನೀವೂ ಅಷ್ಟಕ್ಕೇ ಕೊಡುವುದಾದರೆ ಕೊಡಿ. ಇಲ್ಲಾಂದರೆ ಬೇಡ ಅಂತ ಚರ್ಚೆಗೆ ಇಳಿದಿದ್ದಾಳೆ. ಅವನು ಆಯ್ತಮ್ಮಾ ಅಷ್ಟಕ್ಕೇ ಕೊಡಿ ಅಂತ ದುಡ್ಡು ತಗೊಂಡು ಟೊಮೆಟೋ ಕೊಟ್ಟು ಮುಂದೆ ಹೋದ. ಮನೆಗೆ ಬಂದ ಮೇಲೆ -ನೋಡಿ ಎಲ್ಲಾ ಕಡೆ ರೇಟು ಎಷ್ಟು ಜಾಸ್ತಿ ಹೇಳ್ತಾರೆ, ಕಡಿಮೆ ಮಾಡಿಕೊಳ್ಳಲ್ಲಾ ಅಂತಾರೆ. ಒಂದು ಕೆಜಿ ಟೊಮೆಟೋಗೆ ೨೦ ರೂಪಾಯಿ ಆಗಿದೆ ಗೊತ್ತಾ ನಿಮಗೆ ಅಂದಳು. ನಾನು ಅಲ್ಲಾ ಈಗ ಮನೆಯ ಹತ್ತಿರ ಬಂದಿದ್ದವನು ೧೬ ಕ್ಕೆ ಒಂದು ಕೆಜಿ ಅಂತ ಕೂಗಿದ ಹಾಗಿತ್ತು ಅಂದೆ. ಹೌದು, ಅದೇ ಚರ್ಚೆ ಮಾಡಿ ೨೦ ರೂಪಾಯಿಗೆ ಕೊಂಡುಕೊಂಡೆ ಅಂದಳು. ನಾನು ಅವಳ ಮುಖ ನೋಡಿದೆ. ಕೂಡಲೇ ಅವಳ ಚರ್ಚೆ ಅವಳಿಗೇ ಉಲ್ಟಾ ಹೊಡೆದಿದೆ ಅಂತ ಗೊತ್ತಾಗಿ ಪೆಚ್ಚು ಪೆಚ್ಚಾಗಿ ನಕ್ಕಳು.

-ನಾಗರಾಜ ವೈ.ಎಸ್., ಬೆಂಗಳೂರು

***

ನಾನೇ ಜಾಸ್ತಿ

ನಾನು, ನನ್ನ ತಂಗಿ ಮಂಡ್ಯದ ಅಜ್ಜಿ ಮನೆಯಲ್ಲಿದ್ದೆವು. ಅಲ್ಲಿಯ ‘ಜೈ ಭಾರತ ಮಾತಾ’ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೆವು. ನಾನಾಗ ನಾಲ್ಕನೇ ತರಗತಿಯಲ್ಲಿ, ತಂಗಿ ಎರಡನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಳು.

ಅಂದು ನಮ್ಮ ಮಧ್ಯಮ ವಾರ್ಷಿಕ ಪರೀಕ್ಷೆಯ ಅಂಕಪಟ್ಟಿಯನ್ನು ನಮ್ಮ ಮಾವನವರಿಗೆ ಉತ್ಸಾಹದಿಂದ ತೋರುತ್ತಿದ್ದೆ. ಇದನ್ನು ಗಮನಿಸಿದ ನನ್ನ ತಂಗಿ ಅವಳ ಅಂಕಪಟ್ಟಿಯನ್ನು ತಂದು ತೋರಿಸಿದಳು. ನಮ್ಮ ಮಾವ ಇಬ್ಬರ ಅಂಕಪಟ್ಟಿ ನೋಡಿ ಶುಭ ಹಾರೈಸಿ ನಾವು ಪಡೆದ ದರ್ಜೆಯನ್ನ ನನ್ನ ತಾತ, ಅಜ್ಜಿಗೆ ಹೇಳಿದರು ‘ನೋಡವ್ವ ಇವ್ನು ೨ನೇ ರಾಂಕ್, ಅವ್ಳು ೧೦ನೇ ರಾಂಕ್ ಬಂದಿದ್ದಾಳೆ' ಅಂದರು. ಇದನ್ನು ಕೇಳಿದ ನನ್ನ ತಂಗಿ ಎಲ್ಲಿಲ್ಲದ ಖುಷಿಯಿಂದ ಕುಣಿಯುತ್ತಿದ್ದಳು. ನಾವೆಲ್ಲಾ ಆಶ್ಚರ್ಯದಿಂದ ನೋಡುತ್ತಿದ್ದೆವು. ಮಾವ ಕೇಳಿದರು ‘ಯಾಕಮ್ಮಾ ಕುಣಿತಾಯಿದೀಯಾ!’ ಅದಕ್ಕವಳು ‘ಅಣ್ಣನಿಗಿಂತ ನಾನೇ ಜಾಸ್ತಿ ಮಾರ್ಕ್ಸ್ ತೆಗೆದಿದ್ದೇನಲ್ಲ ಅದ್ಕೆ !’ ಮಾವ ‘ಜಾಸ್ತಿನ !? ಅದೇಗೆ?’

‘ಅಣ್ಣ ೨ನೇ ರಾಂಕು, ನಾನು ಹತ್ತನೇ ರಾಂಕು, ಎರಡಕ್ಕಿಂತ ಹತ್ತು ದೊಡ್ದದಲ್ವ ಮಾಮಾ?’ ಎಂದು ಖುಷಿಯಿಂದ ನಲಿಯುತ್ತಿದ್ದಳು. ನಾವು ಒಳಗೊಳಗೇ ನಗುತ್ತಾ ಅವಳ ಖುಷಿಗೆ ಧಕ್ಕೆ ತರುವುದು ಬೇಡ ಎಂದುಕೊಂಡು ‘ಸರಿಯಮ್ಮ' ಎಂದೆವು. ಬೆಳೆದು ದೊಡ್ಡವಳಾಗಿ ತಿಳುವಳಿಕೆ ಬಂದ ಮೇಲೆ ತಿಳಿಸಿ ಹೇಳಿದಾಗ ನಗುವ ಸರದಿ ಅವಳದಾಗಿತ್ತು.

-ಚೇತನ್ ಹೆಚ್.ಎಂ.

***

ನಾನೇ ಸುಜಾತ…

ನನ್ನ ಸೋದರತ್ತೆ ಹಾಗೂ ಆಕೆಯ ತಂಗಿ ಸುಜಾತ ಇಬ್ಬರಿಗೂ ಬೆಂಗಳೂರು ಹೊಸತು. ಒಮ್ಮೆ ಇಬ್ಬರೂ ಬೆಂಗಳೂರಿನ ರಾಜಾಜಿನಗರದ, ಅಕ್ಕನ ಮಗನ ಮನೆಯಿಂದ ಮೆಜೆಸ್ಟಿಕ್ ಕಡೆಗೆ ಸಿಟಿಬಸ್ ನಲ್ಲಿ ಹೊರಟಾಗ ನಡೆದ ಘಟನೆಯಿದು. ಇಬ್ಬರಿಗೂ ಮೆಜೆಸ್ಟಿಕ್ ಗುರುತು ಅಲ್ಪ ಸ್ವಲ್ಪ ಇದ್ದಿದ್ದರಿಂದ ಅಲ್ಲಿ ಇಳಿಯುವುದು ಕಷ್ಟವಾಗಲಾರದು ಅಂದು ಧೈರ್ಯಮಾಡಿ, ರಾಜಾಜಿನಗರದಿಂದ ಮೆಜೆಸ್ಟಿಕ್ ಕಡೆಗೆ ಹೊರಟಿದ್ದ ಸಿಟಿಬಸ್ ಹತ್ತಿ ಕುಳಿತಿದ್ದರು. ಬಸ್ ಹೊರಟು ಸ್ವಲ್ಪ ಸಮಯದ ಬಳಿಕ ಬಸ್ ನಿಲುಗಡೆಯೊಂದರಲ್ಲಿ ಕಂಡಕ್ಟರ್, ಸುಜಾತ ಯಾರ್ರೀ, ಸುಜಾತ ಯಾರ್ರೀ..? ಎಂದು ಕೂಗಬೇಕೇ? ಮೊದಲೇ ಅಪರಿಚಿತ ಊರು, ಅಪರಿಚಿತ ಜನ ಎಂದು ಹೆದರಿಕೆಯಿಂದ ಕುಳಿತಿದ್ದ ಅತ್ತೆಯ ತಂಗಿ ಸುಜಾತ, ಕೂಡಲೇ ಗಾಬರಿಯಿಂದ ಎದ್ದು ‘ನಾನು, ನಾನೇ ಸುಜಾತ' ಎಂದು ಮುಂದೆ ಹೋದರು. ಇವರ ಮುಖ ಚಹರೆಯಿಂದಲೇ ಊರಿಗೆ ಹೊಸಬರು ಎಂದು ಅರಿತ ಕಂಡಕ್ಟರ್ ನಗುತ್ತಲೇ ಮೇಡಂ, ಇದು ಸುಜಾತ ಟಾಕೀಸ್ ಸ್ಟಾಪ್, ನೀವು ಎಲ್ಲಿ ಇಳಿಯಬೇಕು? ಎಂದು ಕೇಳಿದಾಗ ಸುಜಾತ ಪೆಚ್ಚಾಗಿ ಬಿಟ್ಟರು.

-ಡಾ.ವಿನಯ ಶ್ರೀನಿವಾಸ್, ಶಿವಮೊಗ್ಗ

***

(‘ಮಯೂರ' ಸೆಪ್ಟೆಂಬರ್ ೨೦೧೨ ಸಂಚಿಕೆಯಿಂದ ಆಯ್ದು ಪ್ರಕಟಿತ)