‘ಮಯೂರ' ಹಾಸ್ಯ - ಭಾಗ ೪೨

ರೈಲು ಬಿಡ್ತಿದ್ದಾನೆ
ನಮ್ಮ ಮಗಳ ಕುಟುಂಬ ಗ್ರಾಮೀಣ ಪ್ರದೇಶದಲ್ಲಿದೆ. ನಾನು ಒಮ್ಮೆ ಅವರ ಮನೆಗೆ ಹೋಗಿದ್ದೆ. ಮಗಳಿಗೆ ಇಬ್ಬರು ಗಂಡು ಮಕ್ಕಳು. ಒಬ್ಬ ೭ನೇ ತರಗತಿ. ಮತ್ತೊಬ್ಬ ೧ ನೇ ತರಗತಿ. ಇಬ್ಬರದೂ ಒಂದೇ ಸರಕಾರಿ ಶಾಲೆ. ಆ ದಿನ ಇಬ್ಬರೂ ಶಾಲೆಯಿಂದ ಬಂದರು. ನಾನು ಕಿರಿಯ ಮೊಮ್ಮಗನನ್ನು ತೊಡೆಯ ಮೇಲೆ ಕೂಡಿಸಿಕೊಂಡು ‘ಏನೋ ಪುಟ್ಟಾ, ನೀನೀಗ ಯಾವ ಕ್ಲಾಸು?’ ಎಂದು ಕೇಳಿದೆ. ಅವನು ‘೫ನೇ ಕ್ಲಾಸು ತಾತಾ’ ಅಂದ. ನನಗೆ ಸೋಜಿಗವಾಯಿತು. ಅಷ್ಟರಲ್ಲಿ ಹಿರಿಯ ಮೊಮ್ಮಗ ಹೇಳಿದ ‘ತಾತಾ, ನಿಜ ಏನು ಗೊತ್ತಾ? ನಮ್ಮ ಶಾಲೆಯಲ್ಲಿ ಇರೋದು ಎರಡೇ ಕೊಣೆಗಳು. ೧ ರಿಂದ ೫ ನೇ ಕ್ಲಾಸು ಒಂದು ಕೋಣೆಯಲ್ಲಿ ಹಾಗೂ ೬ರಿಂದ ೧೦ ನೇ ಕ್ಲಾಸು ಇನ್ನೊಂದು ಕೋಣೆಯಲ್ಲಿ. ಇವನನ್ನು ಇದೇ ವರ್ಷ ಶಾಲೆಗೆ ಸೇರಿಸಿರೋದು. ಒಂದನೇ ತರಗತಿಯಿಂದ ೫ ನೇ ತರಗತಿಯವರೆಗೂ ಎಲ್ಲರಿಗೂ ಒಂದೇ ಕೋಣೆಯಲ್ಲಿ ಪಾಠ ಮಾಡೋದರಿಂದ ಇವನು ೫ ನೇ ತರಗತಿ ಅಂತ ರೈಲು ಬಿಡ್ತಿದ್ದಾನೆ' ಅಂದ.
-ಕೆ.ಜಿ.ಭದ್ರಣ್ಣವರ, ಮುದ್ದೇಬಿಹಾಳ
***
ಪರಿಚಯ
ನಮ್ಮ ಕಾಲೇಜಿನ ವಾರ್ಷಿಕ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪ್ರಸಿದ್ಧ ನ್ಯಾಯವಾದಿ ನಾನಿ ಪಾಲ್ಖೀವಾಲ ಆಗಮಿಸಿದ್ದರು. ಮೊದಲಿಗೆ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಡಬೇಕಾಗಿತ್ತು. ಆಗ ನಮ್ಮ ಪ್ರಿನ್ಸಿಪಾಲರು, ‘ಸುಪ್ರಸಿದ್ಧ ನ್ಯಾಯವಾದಿ ನಾನಿ ಪಾಲ್ಖೀವಾಲರ ಪರಿಚಯ ನಿಮಗೆಲ್ಲಾ ಇದ್ದೇ ಇದೆ. ಆದರೆ ನಿಮಗೆ ಬೇಕಿರುವುದು ನನ್ನ ಪರಿಚಯ ‘ ಎಂದರು. ಪ್ರಿನ್ಸಿಪಾಲರ ಮಾತಿನಿಂದ ಗಲಿಬಿಲಿಗೊಂಡ ನಾವು ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತೆವು. ಆಗ ಮುಂದುವರಿದು ಮಾತನಾಡಿದ ಪ್ರಿನ್ಸಿಪಾಲರು ‘ನೀವು ಕಾಲೇಜಿಗೆ ಬರುವುದೇ ಅಪರೂಪ. ನನಗೆ ಇಲ್ಲಿ ಹೊಸ ಮುಖಗಳೇ ಹೆಚ್ಚು ಕಾಣಿಸುತ್ತಿವೆ. ಹಾಗಾಗಿ ಮೊದಲಿಗೆ ನನ್ನ ಪರಿಚಯ ಮಾಡಿಕೊಡುತ್ತೇನೆ' ಎಂದಾಗ ಪಾಲ್ಖೀವಾಲಾ ಅವರಿಗೂ ನಗು ತಡೆಯಲಾಗಲಿಲ್ಲ.
-ಸೋಮನಾಥ ಎಸ್.ಕರ್ಕೇರ, ಮುಂಬೈ
***
ಯಾ ನಮೂನಿ ಮಸಿ…
ತನ್ನ ಅಚ್ಚುಕಟ್ಟಾದ ಕೆಲಸ ಹಾಗೂ ಮುಗ್ಧ ಮನಸ್ಸಿನಿಂದ ನಮ್ಮ ಮನೆಯ ಕೆಲಸದ ನಾಗಮ್ಮ ನಮಗೆಲ್ಲ ಅಚ್ಚು ಮೆಚ್ಚು. ಇತ್ತೀಚೆಗೆ ನಮ್ಮ ಮನೆಯ ಕೆಲಸಕ್ಕೆ ತನ್ನ ಸೊಸೆಯನ್ನೇ ಕಳುಹಿಸುತ್ತಿದ್ದ ನಾಗಮ್ಮ ಅಪರೂಪಕ್ಕೆ ಒಂದು ಭಾನುವಾರ ತಾನೇ ಬಂದಿದ್ದಳು. ನಾನು ಅಡುಗೆ ಮನೆಯಲ್ಲಿದ್ದೆ. ‘ಇದೊಂದು... ಯಾ ನಮೂನಿ ಮಸಿ ಮಾಡಿದ್ದೀರಿ? ತಿಕ್ಕಿ ತಿಕ್ಕಿ ಕೈಯೆಲ್ಲ ನೋವು. ಉಸ್ಸಪ್ಪಾ !’ ಎನ್ನುತ್ತ ತೊಳೆದ ಪಾತ್ರೆಗಳನ್ನೆಲ್ಲ ಅಡಿಗೆ ಮನೆಯಲ್ಲಿ ಇಟ್ಟಳು. ‘ಅದ್ಯಾವ ಪಾತ್ರೆ ಅಷ್ಟು ಮಸಿಯಾಯಿತು?’ ಎಂದು ನಾನು ಕೇಳಿದೆ. ‘ಇದೇ ನೋಡಿ' ಎಂದ ನಾಗಮ್ಮ ಹೊಳೆಯುವ, ಉದ್ದ ಹಿಡಿ ಇರುವ ಪಾತ್ರೆಯನ್ನು ನನ್ನ ಮುಂದೆ ಹಿಡಿದಳು. ಕೈಯಲ್ಲಿ ಹಿಡಿದು ನೋಡಿದೆ. ಬೆಳಿಗ್ಗೆ ತಾನೆ ತಿಂಡಿ ತಿನ್ನಲು ಉಪಯೋಗಿಸಿದ್ದ ಹೊಸ ನಾನ್ ಸ್ಟಿಕ್ ದೋಸೆ ಕಾವಲಿ ಅದಾಗಿತ್ತು ! ಇದನ್ನು ತಿಕ್ಕಿ ತಿಕ್ಕಿ ಬಿಳಿ ಮಾಡಲು ಹೋಗಿ ನಾಗಮ್ಮ ಕೈನೋಯಿಸಿಕೊಂಡದ್ದನ್ನು ನೋಡಿ ನಕ್ಕು ಸುಸ್ತಾಯಿತು.
-ಮಂದಾರ, ಬಂಟ್ವಾಳ
***
ಅತಿ ಬುದ್ಧಿ
ನಾನು ಎಂಟನೇ ತರಗತಿಯಲ್ಲಿದ್ದಾಗ ನಡೆದ ಘಟನೆ ಇದು. ನನ್ನ ಸಹಪಾಠಿಯೊಬ್ಬ ಭಾರೀ ಬುದ್ಧಿವಂತನಾಗಿದ್ದ. ಪ್ರತಿಯೊಂದು ಪರೀಕ್ಷೆಯಲ್ಲಿಯೂ ಆತನೇ ಮೊದಲ ರಾಂಕ್ ಬರುತ್ತಿದ್ದ. ಒಮ್ಮೆ ಕ್ಲಾಸ್ ಟೀಚರ್ ಒಂದು ಲಕೋಟೆಯನ್ನು ಅವನ ಕೈಗೆ ಕೊಟ್ಟು ‘ಈ ಕವರ್ ಮೇಲೆ ೨೦ ರೂಪಾಯಿಯ ಚೀಟಿ ಅಂಟಿಸಿದ್ದೇನೆ. ಅಂಚೆ ಕಚೇರಿಯಲ್ಲಿ ಇದರ ತೂಕ ಮಾಡಿಸು. ಇದಕ್ಕೆ ರೂ.೧೫ರ ಚೀಟಿ ಸಾಕು ಅನಿಸಿದರೆ ರೂ.೫ರ ಚೀಟಿಯನ್ನು ನಿಧಾನವಾಗಿ ಕಿತ್ತುಕೊಂಡು ಬಾ’ ಎಂದು ಹೇಳಿದರು. ಅನಂತರ ಕೆಲಸ ಮುಗಿಸಿ ಬಂದ ಗೆಳೆಯ, ‘ಮೇಡಮ್, ಅಂಚೆ ಕಚೇರಿಯಲ್ಲಿ ತೂಕ ಮಾಡಿಸಿದೆ. ರೂ.೫ರ ಅಂಚೆ ಚೀಟಿ ಹೆಚ್ಚಾಗಿತ್ತು. ತೆಗೆಯಲು ಹೋದಾಗ ಬರಲಿಲ್ಲ. ಅದಕ್ಕಾಗಿ ಮೈನಸ್ ರೂ.೫ ಎಂದು ಬರೆದು ಅಂಚೆ ಪೆಟ್ಟಿಗೆಗೆ ಹಾಕಿ ಬಂದೆ.’ ಎಂದ. ನಮ್ಮ ಟೀಚರ್ ‘ನಿನ್ನ ಬುದ್ಧಿ ಅತಿಯಾಯ್ತು' ಎಂದು ರೇಗಿದರು !
-ಸದಾನಂದ ಹೆಗಡೆಕಟ್ಟೆ, ಮೂಡುಬಿದರೆ
***
(ಮಾರ್ಚ್ ೨೦೧೮ರ ‘ಮಯೂರ' ಪತ್ರಿಕೆಯ ಕೃಪೆಯಿಂದ ಸಂಗ್ರಹಿತ)