‘ಮಯೂರ' ಹಾಸ್ಯ - ಭಾಗ ೪೩

ಹೆಸರಿನಲ್ಲೇನಿದೆ?
ನಮಗೆ ಅವಳಿ ಜವಳಿ ಹೆಣ್ಣು ಮಕ್ಕಳಾದವು. ನನ್ನವಳು ಕೊನೆಯಲ್ಲಿ ‘ವರಿ'ಯಿಂದ ಬರುವ ಹೆಸರು ಬೇಕೆಂದಳು. ಎಷ್ಟು ಯೋಚಿಸಿದರೂ, ಹೆಸರುಗಳ ಪುಸ್ತಕಗಳನ್ನು ತಂದು ಹುಡುಕಿದರೂ, ಯಾರಲ್ಲಿ ಕೇಳಿದರೂ ಕೊನೆಯಲ್ಲಿ ‘ವರಿ' ಯಿಂದ ಬರುವ ಹೆಸರು ಸಿಗಲಿಲ್ಲ. ನನ್ನ ಅಕ್ಕನ ಐದು ವರ್ಷದ ಮಗಳು ನಮ್ಮ ಸಮಸ್ಯೆ ಕೇಳಿ ‘ಅದಕ್ಕೆ ಯಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದೀರಿ, ಜನವರಿ, ಫೆಬ್ರವರಿ ಎಂದು ಹೆಸರಿಡಿ' ಎಂದಳು.
-ಶರತ್ ಕುಮಾರ್ ತೋನ್ಸೆ
***
ಎಷ್ಟು ಉಪವಾಸ ತಿಂದೆ?
ನಾಲ್ಕು ವರ್ಷದ ನನ್ನ ಮೊಮ್ಮಗ ಸಮರ್ಥ ದಿನಕ್ಕೆ ಏಳೆಂಟು ಬಾರಿ ಫೋನ್ ಮಾಡಿ ನಮ್ಮೊಡನೆ ಮಾತಾಡುತ್ತಾನೆ. ಮೊನ್ನೆ ಫೋನ್ ಮಾಡಿದಾಗ ‘ತಾತಾ, ಏನು ತಿಂಡಿ ತಿಂದೆ?’ ಎಂದು ಕೇಳಿದ. ಅದಕ್ಕೆ ತಾತ ‘ಇವತ್ತು ಸಂಕಷ್ಟಹರ ಚೌತಿ ಉಪವಾಸ' ಎಂದರು. ‘ಹೌದಾ ತಾತಾ, ಎಷ್ಟು ಉಪವಾಸ ತಿಂದೆ?’ ಎಂದ. ನಂತರ ನನ್ನೊಡನೆ ‘ಅಜ್ಜೀ, ತಾತನಿಗೆ ಎಷ್ಟು ಉಪವಾಸ ಮಾಡಿಕೊಟ್ಟೆ? ನನಗೆ ಒಮ್ಮೆಯೂ ಉಪವಾಸ ಮಾಡಿಕೊಟ್ಟಿಲ್ಲ ನೀನು' ಎಂದಾಗ ನಂಗೆ ನಗು ತಡೆಯಲಾಗಲಿಲ್ಲ. ‘ಪುಟ್ಟಾ, ತಿಂಡಿ-ಊಟ ಏನೂ ಮಾಡದೆ ಖಾಲಿ ಹೊಟ್ಟೆಯಲ್ಲಿರುವುದೇ ಉಪವಾಸ' ಎಂದು ವಿವರಿಸಿದೆ. ಅದವನಿಗೆ ಎಷ್ಟು ಅರ್ಥವಾಯಿತೋ ಗೊತ್ತಿಲ್ಲ. ‘ಇನ್ನೊಂದು ಸಲ ಫೋನ್ ಮಾಡಿ ‘ತಾತಾ, ಈಗೆಷ್ಟು ಉಪವಾಸ ತಿಂದೆ?’ ಎಂದು ಕೇಳಿದ.
-ಶಶಿರೇಖಾ ನಾಗೇಂದ್ರ
***
ಆಡು ಭಾಷೆ
ನಮ್ಮ ಹಳ್ಳಿಯಲ್ಲಿ ಕಾರ್ಯಕ್ರಮವೊಂದು ನಡೆಯಲಿತ್ತು. ಹೆಚ್ಚು ಜನ ಸೇರುವುದು ಅನುಮಾನವಾಯಿತು. ಧ್ವನಿವರ್ಧಕದಲ್ಲಿ ಪ್ರಚಾರ ಮಾಡಿ ಜನ ಸೇರಿಸುವ ಪ್ರಯತ್ನ ಶುರುವಾಯಿತು. ಪ್ರಭಾವಿಯಾಗಿ ಪ್ರಚಾರ ಮಾಡಲು ಆರಿಸಿದ್ದು ಉತ್ತರ ಕರ್ನಾಟಕದ ಸುಬ್ಬನನ್ನು. ಜೋರಾದ ಪ್ರಚಾರ ಸುರುವಿಟ್ಟುಕೊಂಡ ಅವನು ‘ಕಾರ್ಯಕ್ರಮಕ್ಕೆ ಬನ್ನಿ, ಹಾಸ್ಯಗಾರ ಗಂಗಾವತಿ ಪ್ರಾಣೇಶನಿಗಿಂತ ಹೆಚ್ಚ್ ಹಾಸ್ಯಾ ಮಾಡ್ತಾನ್ರೀ..ಅವನ ಮಾತು ಕೇಳಲು ಮರಿಬ್ಯಾಡ್ರಿ' ಎಂದಾಗ ಅವನ ಆಡು ಭಾಷೆಗೆ ಜನ ನಕ್ಕರು. ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರಿದರೆಂದು ಬೇರೆ ಹೇಳಬೇಕಿಲ್ಲವಲ್ಲ!
-ಫಾಲನೇತ್ರ ಗಂಗಪ್ಪ ಸಜ್ಜನ
***
ಅತಿಯಾದ್ರೆ ವಿಷ !
ನಮ್ಮ ಚಿಕ್ಕಮ್ಮನ ಮಗ ಚಿನ್ನು ಮಾತಿನ ಮಲ್ಲ. ನಮ್ಮ ಅಜ್ಜಿಗೆ ಆತನನ್ನು ಕಂಡರೆ ಅತಿಪ್ರೀತಿ. ಆತ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನೇ ಪಡೆದಿದ್ದರೂ ಅಜ್ಜಿ ಮಾತ್ರ ‘ನೋಡು ಚಿನ್ನೂ, ನೀನು ಇನ್ನೂ ಚೆನ್ನಾಗಿ ಓದಿ, ಹೆಚ್ಚಿನ ಅಂಕಗಳನ್ನು ಪಡೆಯಬೇಕು' ಅಂತ ಉಪದೇಶ ಮಾಡ್ತಾನೇ ಇರ್ತಾರೆ. ಕಳೆದ ಬೇಸಿಗೆಯಲ್ಲಿ ಆತ ನಮ್ಮಲ್ಲಿಗೆ ಬಂದಿದ್ದ. ನಮ್ಮ ತಂದೆ 'ಫ್ಯಾಮಿಲಿ ಪ್ಯಾಕ್ ಐಸ್ ಕ್ರೀಂ’ ತಂದಿದ್ದರು. ಆತ ಎರಡು -ಮೂರು ಕಪ್ ತಿಂದು ಇನ್ನೂ ಬೇಕು ಅಂದ. ಆಗ ಅಜ್ಜಿ ‘ಬೇಡ ಚಿನ್ನೂ, ಅತಿಯಾದ್ರೆ ಅಮೃತನೂ ವಿಷ ಆಗುತ್ತೆ' ಎಂದರು. ಆತ ಕೂಡಲೇ ‘ಅಲ್ಲಾ ಅಜ್ಜೀ, ನಾನು ಎಷ್ಟು ಮಾರ್ಕ್ಸ್ ತಗೊಂಡ್ರೂ ಇನ್ನೂ ಹೆಚ್ಚಿಗೆ ತಗೋ ಅಂತೀರಲ್ಲ. ಹೆಚ್ಚಾದ್ರೆ ಅದೂ ವಿಷನೇ ಅಲ್ವಾ?’ ಎಂದು ತಿರುಗೇಟು ನೀಡಿದ.
-ಸಿಂಧು ಬಿ.ಎನ್.
***
(‘ಮಯೂರ' ಡಿಸೆಂಬರ್ ೨೦೧೮ರ ಸಂಚಿಕೆಯ ಕೃಪೆಯಿಂದ)