‘ಮಯೂರ' ಹಾಸ್ಯ - ಭಾಗ ೪೪

‘ಮಯೂರ' ಹಾಸ್ಯ - ಭಾಗ ೪೪

ರಾಮ - ಉಮ

ನಮ್ಮ ಪಕ್ಕದ ಮನೆ ರಾಮಣ್ಣನವರ ಮಗ ಪ್ರಕಾಶ್ ರಾವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಕನ್ಯಾನ್ವೇಷಣೆ ನಡೆದಿತ್ತು. ನಗರದ ಎರಡು ಮೂರು ವಧುವರ ಹುಡುಕುವ ಕಾರ್ಯಾಲಯಗಳಲ್ಲಿ ಹೆಸರು ನೊಂದಾಯಿಸಿದ್ದರು. ಒಂದು ದಿನ ಅವರಿಗೆ ೪-೫ ಕನ್ಯಾಮಣಿಗಳ ಜಾತಕಗಳು ಅಂಚೆಯಲ್ಲಿ ಬಂದವು. ಅವುಗಳಲ್ಲಿ ಕನ್ಯಾಮಣಿಗಳ ಹೆಸರು, ವಯಸ್ಸು, ಗೋತ್ರ, ಸ್ಮಾರ್ತ -ವೈಷ್ಣವ ಇತ್ಯಾದಿ ವಿವರಗಳೊಂದಿಗೆ ಕೆಳಗಡೆ ರಾಮ ಅಥವಾ ಉಮ ಎಂದು ನಮೂದಿಸಿದ್ದರು. ಹಾಗೆಂದರೇನು ಎಂದು ನಮಗೆ ತಿಳಿಯದೆ ಗೊಂದಲವಾಗಿತ್ತು. ಅಷ್ಟರಲ್ಲಿ ೫ನೇ ತರಗತಿಯಲ್ಲಿ ಓದುತ್ತಿದ್ದ ನಮ್ಮ ಪುಟ್ಟಿ ಬಂದು ‘ರಾಮ' ಎಂದರೆ ರಾತ್ರಿ ಮಲಗುವುದು. ‘ಉಮ' ಎಂದರೆ ಉಂಡು ಮಲಗುವುದು ಎಂದು ಅರ್ಥಹೇಳಿ ನಮ್ಮನ್ನೆಲ್ಲ ಚಕಿತಗೊಳಿಸಿದಳು. ‘ರಾಮ' ಎಂದರೆ ರಾಯರ ಮಠ, ‘ಉಮ’ ಎಂದರೆ ಉತ್ತರಾಧಿ ಮಠ ಎಂದು ಹಿಂದಿನಿಂದ ಗೊತ್ತಾದಾಗ ಮನೆಯಲ್ಲಿ ಎಲ್ಲರೂ ನಕ್ಕಿದ್ದೇ ನಕ್ಕಿದ್ದು.

-ಡಾ. ಬಿ. ಡಿ. ನಾಡಕರ್ಣಿ, ಗುಡಗೇರಿ

***

ಪುಟ್ಟನ ತಲೆ ಬಿಸಿ

ಅಪರೂಪಕ್ಕೆ ನಮ್ಮ ಮನೆಗೆ ಬಂದ ದೊಡ್ಡಮ್ಮನನ್ನು ಒತ್ತಾಯದಿಂದ ಒಂದು ವಾರ ಉಳಿಸಿಕೊಂಡಿದ್ದೆವು. ಅವರು ಊರಿಗೆ ಹೊರಡುವ ದಿನ ಮನಸ್ಸು ಭಾರವಾಗಿತ್ತು. ಅಂಗಳಕ್ಕಿಳಿದು ಹೊರಡುತ್ತಿದ್ದಂತೆ ದೊಡ್ಡಮ್ಮ ‘ಈ ಒಂದು ವಾರ ಹೇಗೆ ಕಳೆಯಿತೆಂದೇ ಗೊತ್ತಾಗಲಿಲ್ಲ ನೋಡು. ಮುಂದಿನ ವಾರ ಮಕ್ಕಳೂ ರಜೆ ಮುಗಿಸಿ ಅವರವರ ಕೆಲಸಕ್ಕೆ ಹೋಗ್ತಾರೆ. ಆ ಮೇಲೆ ನಾನೊಬ್ಳೇ ಮನೇಲಿ ಯೋಚ್ನೆ ಮಾಡಿದ್ರೆ ತಲೆ ಬಿಸಿಯಾಗುತ್ತೆ ಕಣೆ' ಅಂದರು.

ಅಷ್ಟರಲ್ಲಿ ಅಲ್ಲೇ ಬಿಸಿಲಲ್ಲಿ ಆಟವಾಡುತ್ತಿದ್ದ ನಮ್ಮ ನಾಲ್ಕು ವರ್ಷದ ಪುಟ್ಟ ಓಡೋಡಿ ಬಂದು ‘ಅಜ್ಜೀ, ನನ್ನ ತಲೆನೂ ಎಷ್ಟೊಂದು ಬಿಸಿಯಾಗಿದೆ. ನೋಡಿ ಬೇಕಾದ್ರೆ' ಎನ್ನುತ್ತ ಅವರ ಕೈಯನ್ನು ತನ್ನ ತಲೆಯ ಮೇಲೆ ಇರಿಸಿದ. ಪುಟ್ಟನ ಮಾತಿಗೆ ದೊಡ್ಡಮ್ಮ ಆಟೋ ಹತ್ತುವ ತನಕವೂ ನಗುತ್ತಲೇ ಇದ್ದರು.

-ಮಂದಾರ, ಬೆಂಗಳೂರು

***

ವಾಸ್ತು ಪ್ರಕಾರ

ಸಂಬಂಧಿಯೊಬ್ಬರ ಮಗನ ಮದುವೆಗೆ ಪತ್ನಿ ಗಿರಿಜಳೊಂದಿಗೆ ಹೋಗಲು ಜಯನಗರದ ಕುಚಲಾಂಬ ಕಲ್ಯಾಣ ಮಂಟಪಕ್ಕೆ ಹೊರಟಿದ್ದೆ. ಮೂರನೇ ಬ್ಲಾಕ್ ಸಿಗ್ನಲ್ ನಲ್ಲಿ ನನ್ನ ಬೈಕನ್ನು ನಿಲ್ಲಿಸಿದ್ದೆ. ನಮ್ಮ ಮುಂದೆ ಅನೇಕ ಮಹಿಳೆಯರು ರೇಷ್ಮೆ ಸೀರೆ ಧರಿಸಿ ನಡೆದು ಹೋಗುತ್ತಿದ್ದರು.

ಆ ಮಹಿಳೆಯರಲ್ಲಿ ಒಬ್ಬರು ವಿಚಿತ್ರವಾಗಿ ಸೀರೆ ಉಟ್ಟು ಹೋಗುತ್ತಿದ್ದರು. ಆ ಮಹಿಳೆ ಉಟ್ಟಿದ್ದ ಸೀರೆಯನ್ನು ನೋಡಿ ಏಕೆ ಆ ರೀತಿ ವಿಚಿತ್ರವಾಗಿ ಸೀರೆ ಉಟ್ಟಿದ್ದಾರಲ್ಲ ಎಂದು ಪತ್ನಿಗೆ ಕೇಳಿದೆ. ಅದಕ್ಕೆ ನನ್ನವಳು ನಗುತ್ತಾ, ‘ರೀ ಆ ಮಹಿಳೆ ಖ್ಯಾತ ವಾಸ್ತುತಜ್ಞರ ಹೆಂಡತಿ, ಸೀರೆಯನ್ನು ವಾಸ್ತು ಪ್ರಕಾರ ಉಟ್ಕೊಂಡಿದ್ದಾಳೆ' ಅಂದಳು.

-ವಿ.ಹೇಮಂತಕುಮಾರ್, ಬೆಂಗಳೂರು

***

ಜೂನಿಯರ್- ಸೀನಿಯರ್

 ಮೊನ್ನೆ ಬೆಂಗಳೂರಿಗೆ ಬಂದು ಅಣ್ಣ ಅತ್ತಿಗೆ ವಾಸವಿರುವ ಚಿಕ್ಕಲ್ಲಸಂದ್ರಕ್ಕೆ ಹೋಗಲು ಸಿಟಿ ಬಸ್ ಏರಿ, ಸೀಟೆಲ್ಲ ಭರ್ತಿ ಆಗಿದ್ದರಿಂದ ಮಧ್ಯದಲ್ಲಿ ಒಂದು ಕಂಬಕ್ಕೆ ಒರಗಿ ನಿಂತೆ. ಬಲಗಡೆಯ ಮುಂದಿನ ಸಾಲಿನಲ್ಲಿ ‘ಹಿರಿಯ ನಾಗರಿಕರಿಗೆ' ಎಂದು ಬೋರ್ಡ್ ಇದ್ದ ಎರಡು ಆಸನಗಳಲ್ಲಿ ಒಬ್ಬರು ವಯಸ್ಸಾದವರು ಕುಳಿತಿದ್ದರು. ಅವರ ಪಕ್ಕದಲ್ಲಿ ಕುಳಿತಿದ್ದ ಇನ್ನೊಬ್ಬರಿಗೆ ಅಷ್ಟು ವಯಸ್ಸಾದಂತೆ ಕಂಡು ಬರುತ್ತಿರಲಿಲ್ಲ. ಆಗ ಬಸ್ಸಿನಲ್ಲಿ ನನ್ನ ಹಿಂದೆ ನಿಂತಿದ್ದವರೊಬ್ಬರು ಮುಂದೆ ಬಂದು , ಹಿರಿಯ ನಾಗರಿಕರ ಸ್ಥಾನದಲ್ಲಿ ಕುಳಿತಿದ್ದ ಅಷ್ಟು ವಯಸ್ಸಾದವರಂತೆ ಕಂಡು ಬಾರದ ವ್ಯಕ್ತಿಯನ್ನುದ್ದೇಶಿಸಿ ‘ಮಿಸ್ಟರ್... ಇದು ಸೀನಿಯರ್ ಸಿಟಿಜನ್ ಸೀಟ್ ನನಗೆ ಬಿಡ್ತೀರಾ’ ಎಂದು ಕೇಳಿದರು. ಆಗ ಅವರು ‘ಸಾರ್..ನಾನೂ ಈಗೊಂದು ತಿಂಗಳಿಂದ ಸೀನಿಯರ್ರೇ.. ಆದರೆ ನೀವು ಸೀನಿಯರ್ ಗೆ ಸೀನಿಯರ್ ; ನಾನು ನಿಮ್ಮ ಸೀನಿಯಾರಿಟಿಗೆ ಜೂನಿಯರ್ ; ನಿಮ್ಮ ಸೀನಿಯಾರಿಟಿಯನ್ನು ಒಪ್ಪುತ್ತೇನೆ' ಎಂದು ತಮಾಷೆ ಮಾಡುತ್ತಲೇ ಅವರಿಗೆ ಸೀಟ್ ಬಿಟ್ಟುಕೊಟ್ಟರು. ಈ ಹಿರಿಯ ನಾಕರಿಕರ ಸ್ನೇಹಭಾವದಿಂದ ನಾವು ನಾಲ್ಕಾರು ಯುವಕರೂ ಖುಷಿ ಪಟ್ಟು ಅವರೊಂದಿಗೆ ನಸುನಕ್ಕೆವು. ನಮಗೆ ನಾಚಿಕೆಯೂ ಆಯಿತೆನ್ನಿ !

-ಗುರುಪ್ರಸಾದ್, ಆಲೂರು