‘ಮಯೂರ' ಹಾಸ್ಯ - ಭಾಗ ೪೫
ಬೇರೆ ಹೇಳ್ಕೊಡೋದಿಕ್ಕೆ ಹೇಳಮ್ಮ
ಪ್ರಿ ನರ್ಸರಿ ತರಗತಿಯಲ್ಲಿ ಓದುತ್ತಿರುವ ನನ್ನ ಮೂರು ವರ್ಷದ ಮೊಮ್ಮಗ ಚೈತನ್ಯ ತರಗತಿಯಲ್ಲಿ ಹೇಳಿಕೊಟ್ಟ ಶಿಶುಗೀತೆಗಳನ್ನು ಚಾಚೂ ತಪ್ಪದೆ ಹೇಳುತ್ತಾನೆ. ಮೊನ್ನೆ ಭಾನುವಾರ, ಅವನ ಅಣ್ಣ ಭಾರ್ಗವನನ್ನು ಈಜು ಕೊಳದಿಂದ ಕರೆತರಲು ನಾನು, ನನ್ನ ಮಗಳು ಹಾಗೂ ಚೈತನ್ಯ ಹೋಗಿದ್ದೆವು. ಅಲ್ಲಿ ಚೈತನ್ಯನ ಮ್ಯಾಮ್ (ನಮ್ಮ ಕಾಲದ ಮೇಡಂ) ನ ಭೇಟಿಯಾಯಿತು. ಅವರೂ ತಮ್ಮ ಮಗಳನ್ನು ಈಜುಕೊಳದಿಂದ ಕರೆದುಕೊಂಡು ಹೋಗಲು ಬಂದಿದ್ದರು. ನನ್ನ ಮಗಳು ಅವರನ್ನು ಮಾತನಾಡಿಸಿದಳು. ನನ್ನ ಮೊಮ್ಮಗ ಚೈತನ್ಯ ಹೇಳಿದ - ‘ಅಮ್ಮ ನಮ್ಮ ಮ್ಯಾಮ್ ಹೇಳಿಕೊಟ್ಟದನ್ನೇ ಹೇಳಿ ಕೊಡುತ್ತಾರೆ. ಹೇಳಿದ್ದನ್ನೇ ಕೇಳಲು ಬೋರ್ ಆಗುತ್ತದೆ. ಬೇರೇ ಹೇಳ್ಕೊಡೋದಿಕ್ಕೆ ಹೇಳಮ್ಮ'. ನಾವೆಲ್ಲ ಸುಸ್ತು.
-ಎಂ. ಮೋಹನ ರಾವ್, ಬೆಂಗಳೂರು
***
ನೀವು ಯಾಕೆ ಬಿಟ್ಟಿಲ್ಲ?
ನಾನು ಚಾಮರಾಜನಗರದಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಸರ್ಕಾರಿ ನೌಕರರೇ ಹೆಚ್ಚಿದ್ದ ಸಂಜೆಯ ರೈಲಿನ ಬೋಗಿಯೊಂದರಲ್ಲಿ ಕುಳಿತಿದ್ದೆ. ಅಲ್ಲಿಗೆ ಅಂಗವಿಕಲ ವ್ಯಕ್ತಿಯೊಬ್ಬ ಭಿಕ್ಷೆ ಬೇಡುತ್ತಾ ಬಂದ. ಅಲ್ಲಿ ಕುಳಿತಿದ್ದ ಸರ್ಕಾರಿ ನೌಕರರೊಬ್ಬರು “ಸರ್ಕಾರ ನಿಮಗೆ ತಿಂಗಳಿಗೆ ಸಾವಿರದಿನ್ನೂರು ಹಣ ಕೊಟ್ಟರೂ, ನೀವು ಭಿಕ್ಷೆ ಬೇಡೋದು ಬಿಟ್ಟಿಲ್ಲ. ಅದ್ಯಾವಾಗ ನೀವೆಲ್ಲ ಉದ್ಧಾರ ಆಗ್ತಿರೋ” ಅಂತ ರೇಗಿದರು. ಅದಕ್ಕೆ ಆತ ಕೊಟ್ಟ ಪ್ರತ್ಯುತ್ತರ ಹೀಗಿತ್ತು ‘ಏನ್ಸಾರ್ ಸರ್ಕಾರ ನಿಮಗೆ ಕೈತುಂಬಾ ಸಂಬಳ ಕೊಟ್ಟರೂ ನೀವು ಲಂಚ ಕೇಳುವುದನ್ನ ಯಾಕೆ ಬಿಟ್ಟಿಲ್ಲ?’
ಅಲ್ಲಿದ್ದ ಹತ್ತಾರು ಸರ್ಕಾರಿ ನೌಕರರ ಪೈಕಿ ಯಾರೊಬ್ಬರೂ ಆತನ ಪ್ರಶ್ನೆಗೆ ಉತ್ತರಿಸಲಿಲ್ಲ.
-ಸೋಮಣ್ಣ ವಿ., ಚಾಮರಾಜನಗರ
***
ಫೋಟೋ ತೆಗೆಸಿಕೊಂಡದ್ದು ಹೇಗೆ?
ಬೆಳ್ಳಂಬೆಳಗ್ಗೆ ತನ್ನಮ್ಮ ಸ್ನಾನ ಮಾಡಿಕೊಂಡು ದೇವರ ಫೋಟೋಗಳಿಗೆ ಊದಿನಕಡ್ಡಿ ಬೆಳಗುತ್ತ ದೇವರ ಮುಂದೆ ಗಂಟೆಯನ್ನು ಬಾರಿಸುತ್ತಿದ್ದುದನ್ನು ಪುಟ್ಟ ಸಾಗರ್ ನೋಡುತ್ತಿದ್ದ. ‘ಅಮ್ಮಾ, ಆ ಎಲ್ಲ ಫೋಟೋಗಳಿಗೆ ಊದಿನಕಡ್ಡಿ ಬೆಳಗಿದೆಯಲ್ಲಾ ಅವು ಯಾರ ಫೋಟೋಗಳು' ಎಂದು ಹೇಳಿದ. ‘ಅವೆಲ್ಲವೂ ದೇವರ ಫೋಟೋಗಳು' ಎಂದು ಅಮ್ಮ ಅವನಿಗೆ ಹೇಳಿದಳು. ಇದನ್ನು ಕೇಳಿಸಿಕೊಂಡ ಸಾಗರ ಸ್ವಲ್ಪ ಹೊತ್ತು ಸುಮ್ಮನೆ ನಿಂತ. ಆದರೆ ಹಿಂದೊಮ್ಮೆ ಅಮ್ಮ ಹೇಳಿದ ‘ದೇವರು ಯಾರ ಕಣ್ಣಿಗೂ ಕಾಣಿಸುವುದಿಲ್ಲ' ಎಂಬ ಮಾತು ಅವನಿಗೆ ಥಟ್ಟನೆ ನೆನಪಾಯಿತು. ‘ಅಮ್ಮಾ, ಆವತ್ತು ನೀನು ದೇವರು ಯಾರ ಕಣ್ಣಿಗೂ ಕಾಣಿಸುವುದಿಲ್ಲ ಎಂದಿದ್ದೆ. ಹಾಗಾದರೆ ದೇವರು ಡ್ರೆಸ್ ಮಾಡಿಕೊಂಡು ಫೋಟೋಗಳನ್ನು ತೆಗೆಸಿಕೊಂಡಿರುವುದು ಹೇಗಮ್ಮಾ’ ಎಂದು ಕೇಳಿಯೇ ಬಿಟ್ಟ. ಆಗ ಅವನ ಅಮ್ಮನಿಗೆ ದಿಕ್ಕೇ ತೋಚದಂತಾಗಿ ದೇವರಿಗೆ ಪೂಜೆ ಮಾಡುವುದನ್ನು ನಿಲ್ಲಿಸಿ ಸುಮ್ಮನೆ ನಿಂತಳು.
-ಮಲ್ಲಿಕಾರ್ಜುನ ಹ.ಬಗಲಿ, ಗಿರಗಾಂವ, ಜತ್ತ
***
ಕಾಲೆತ್ತಿ ತೋರಿಸ್ತಾ ಇದ್ದಾರೆ
ಜನವರಿ ೨೬ ರಂದು ದೆಹಲಿಯಿಂದ ನೇರ ಪ್ರಸಾರವಾಗುತ್ತಿದ್ದ ಗಣರಾಜ್ಯೋತ್ಸವದ ಧ್ವಜ ವಂದನೆ ಕಾರ್ಯಕಲಾಪಗಳನ್ನು ನನ್ನ ನಾಲ್ಕು ವರ್ಷದ ಮೊಮ್ಮಗಳು ವರ್ಷಾ ತುಂಬಾ ಉತ್ಸುಕತೆಯಿಂದ ನೋಡುತ್ತಾ ಇದ್ದಳು. ಮಧ್ಯದಲ್ಲೇ ‘ಅಲ್ನೋಡು ಅಜ್ಜಿ ಅವರು ಹೇಗೆ ಮಾಡ್ತಾ ಇದಾರೆ? ಅಂದಾಗ ನಾನು ಮಾತಾಡಬೇಡ ಸುಮ್ಮನೆ ನೋಡು ಅಂದೆ. ಆಗ ಅವಳು ನನ್ನ ಮಾತ್ಕೇಳಿ ಇಲ್ಲಿ ನಾನು ಯಾರಿಗಾದರೂ ಕಾಲು ತೋರಿಸಿದರೆ ಬೈತೀಯಾ, ಹಾಗೆಲ್ಲಾ ಮಾಡ್ಬಾರ್ದು ಅಂತೀಯಾ, ಆದರೆ, ಅಲ್ಲಿ ಟೀವಿನಲ್ಲಿ ಎಷ್ಟೋಂದು ಜನ ಅಲ್ಲಿ ನಿಂತಿರೋ ತಾತನಿಗೆ ಎಷ್ಟು ಜೋರ್ ಜೋರಾಗಿ ಕಾಲೆತ್ತಿ ತೋರಿಸ್ತಾ ಇದಾರೆ ! ಅವರು ಮಾತ್ರ ಹಾಗೆ ಮಾಡಿದರೆ ಸರಿನಾ? ಅಂತ ಕೇಳಿದಳು. ಕಾರ್ಯಕ್ರಮ ನೋಡುತ್ತಿದ್ದ ನಮ್ಮೆಲ್ಲರಿಗೂ ಒಂದು ಕ್ಷಣ ಏನೂ ಅರ್ಥವಾಗದೇ ಗಲಿಬಿಲಿಗೊಂಡೆವು. ‘ಏನೇ ಹಾಗಂದ್ರೆ?’ ಎಂದು ಕೇಳಿದಾಗ ಕುರ್ಚಿಯಿಂದ ಇಳಿದು ಮಾರ್ಚ್ ಪಾಸ್ಟ್ ಮಾಡುವ ಸೈನಿಕರಂತೆ ತಾನೂ ಕಾಲುಗಳನ್ನು ಜೋರ್ ಜೋರಾಗಿ ಎತ್ತಿ ಇಡುತ್ತಾ ನಡೆದು ತೋರಿಸಿದಾಗ ನಮಗೆಲ್ಲಾ ಅರ್ಥವಾಗಿ ನಗು ಉಕ್ಕಿ ಬಂತು. ಅವಳಿಗೆ ಅದರ ಸರಿಯಾದ ಅರ್ಥವನ್ನು ವಿವರಿಸಿ ಹೇಳಿದಾಗ ‘ಹೋಗಜ್ಜಿ...ನನಗೆ ಮಾತ್ರ ತಪ್ಪು ಅಂತ ಹೇಳ್ತಿಯಾ’ ಅಂತ ನನ್ನನ್ನೇ ದೂಷಿಸಿ ಆಡಲು ಓಡಿ ಹೋದಳು.
-ಲೀಲಾ ಚಂದ್ರಶೇಖರ, ಬೆಂಗಳೂರು
***
(‘ಮಯೂರ' ಜೂನ್ ೨೦೧೫ರ ಸಂಚಿಕೆಯಿಂದ ಸಂಗ್ರಹಿತ)