‘ಮಯೂರ' ಹಾಸ್ಯ - ಭಾಗ ೪೬

‘ಮಯೂರ' ಹಾಸ್ಯ - ಭಾಗ ೪೬

‘ತಬ್ಬೇಕು'

ಅದೊಂದು ದಿನ ಶಿವಮೊಗ್ಗದಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಭದ್ರಾವತಿಯಲ್ಲಿ ಗಂಡ-ಹೆಂಡತಿ ತನ್ನ ಎರಡು ಮಕ್ಕಳೊಂದಿಗೆ ನಾನು ಕುಳಿತಿದ್ದ ಬೋಗಿಯನ್ನೇರಿ ಖಾಲಿ ಇದ್ದ ನನ್ನ ಎದುರಿನ ಸೀಟಿನಲ್ಲಿ ಆಸೀನರಾದರು. ಹುಡುಗ ಕೇಳಿದ ಪ್ರಶ್ನೆಗಳಿಗೆ ಅವರು ಅವನನ್ನು ಅಪ್ಪಿಕೊಂಡು ಉತ್ತರಿಸುತ್ತಿದ್ದರು. ತರೀಕೆರೆ ಸಮೀಪಿಸುತ್ತಿದ್ದ ಹಾಗೆ ಹುಡುಗ ರೈಲಿನ ಕಿಟಕಿಯಲ್ಲಿ ಅದೇನನ್ನು ನೋಡಿದನೋ, ‘ಅಮ್ಮಾ, ಅಪ್ಪ ತಬ್ಬೇಕು..' ಅಂತ ಒಂದೇ ವರಾತ ಹಚ್ಚಿ ಅಳತೊಡಗಿದ. ೩-೪ ವರ್ಷದ ಹುಡುಗ ಪುನಃ ತನ್ನ ಹಟ ಮುಂದುವರೆಸಿದ. ಪಕ್ಕದಲ್ಲಿದ್ದ ಇನ್ನೊಬ್ಬ ಸಹ ಪ್ರಯಾಣಿಕ ಆ ದಂಪತಿಯನ್ನು ಕುರಿತು ‘ಅದೇನೋ ಅಪ್ಪ-ಅಮ್ಮ ತಬ್ಬೇಕು ಅಂತ ಹೇಳ್ತಿದ್ದಾನೆ. ಅವನ ಸಮಾಧಾನಕ್ಕಾದರೂ ಒಂದ್ಸಾರಿ ತಬ್ಬಕ್ಕಳ್ಳಿ’  ಎಂದರು. ನಾಚಿದ ಮಗುವಿನ ತಂದೆ-ತಾಯಿ ‘ಸಾರ್, ಅವನಿಗೆ ಕ ಕಾರ ಉಚ್ಛಾರಣೆ ಬರುವುದಿಲ್ಲ. ಗದ್ದೆಯಲ್ಲಿ ಕಬ್ಬನ್ನು ನೋಡಿದನಲ್ಲ. ಅದಕ್ಕೆ ಕಬ್ಬು ಬೇಕು ಎನ್ನುವುದಕ್ಕೆ, 'ಅಪ್ಪ, ಅಮ್ಮ, ತಬ್ಬು ಬೇಕು ಎಂದು ಹಟಮಾಡುತ್ತಿದ್ದಾನೆ' ಎಂದಾಗ ರೈಲಿನ ಸಹ ಪ್ರಯಾಣಿಕರಿಗೆಲ್ಲ ನಗು ತಡೆಯಲಾಗಲಿಲ್ಲ. 

-ಸಿಹಿಮೊಗೆ ರಮೇಶ್, ಮೈಸೂರು 

***

ನಮ್ಮನೇಲೇ ಕೆಮ್ತೀನಿ!

ಎದುರು ಮನೆಯ ಅಶ್ವಿನಿ ತನ್ನ ಮೂರು ವರ್ಷದ ಮಗು ಪ್ರಣವ್ ಜತೆ ತವರು ಮನೆಗೆ ಬಂದಿದ್ದಳು. ಮಗುವನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದೆ. ಸ್ವಲ್ಪ ಹೊತ್ತಾದ ಮೇಲೆ ‘ಮನೆಗೆ ಹೋಗ್ತೀನಿ' ಎಂದು ಪ್ರಣವ್ ಹೇಳಿದ. ‘ಯಾಕೋ?’ ಎಂದು ಕೇಳಿದರೆ, ‘ನಂಗೆ ಕೆಮ್ಮು ಬರ್ತಿದೆ' ಅಂದ. ನಾನು ತಮಾಷೆಗೆ ‘ಇಲ್ಲೇ ಕೆಮ್ಮು ಪರವಾಗಿಲ್ಲ' ಎಂದಾಗ 'ಇಲ್ಲಾ ನಾನು ನಮ್ಮನೇಲೇ ಕೆಮ್ತೀನಿ' ಎಂದು ಓಡಿಹೋದ!

-ಬಿ.ಎಸ್. ರಾಜಲಕ್ಷ್ಮಿ, ಹಾಸನ

***

ಹೆಂಗಸರನ್ನು ಮದುವೆಯಾಗಬಾರದಿತ್ತು !

ನಮ್ಮ ಮನೆಯಲ್ಲಿ ದೇವರ ಪೂಜಾ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮಕ್ಕೆ ನಮ್ಮ ದೊಡ್ದಪ್ಪ ಮತ್ತು ದೊಡ್ಡಮ್ಮ ಬಂದಿದ್ದರು. ಕಾರ್ಯಕ್ರಮ ಮುಗಿದ ಮರುದಿನ ದೊಡ್ದಪ್ಪ ಮತ್ತು ದೊಡ್ಡಮ್ಮ ಊರಿಗೆ ಹೊರಡಲು ಸಿದ್ಧರಾಗತೊಡಗಿದರು. ದೊಡ್ಡಪ್ಪನಂತೂ ದೊಡ್ದಮ್ಮನಿಗೆ ತುಂಬಾ ಅವಸರ ಪಡಿಸುತ್ತಿದ್ದರು. ದೊಡ್ದಮ್ಮ ‘ಸ್ವಲ್ಪ ಬಂದೆ ಇರಿ. ಇನ್ನು ಐದೇ ನಿಮಿಷ, ಬಂದೇ ಬಿಟ್ಟೆ. ಒಂದು ಚೂರು ಕನಕಳಿಗೆ ಹೇಳಿ ಬರ್ತೀನಿ, ವನಜಳಿಗೆ ಹೇಳಿ ಬರ್ತೀನಿ' ಅಂತ ಅರ್ಧ ಗಂಟೆಯಿಂದಲೂ ಹೇಳುತ್ತಿದ್ದರು. ದೊಡ್ದಪ್ಪ ಬ್ಯಾಗುಗಳನ್ನು ವರಾಂಡದಲ್ಲಿ ಇಟ್ಟುಕೊಂಡು ಕಾಯುತ್ತ ಕುಳಿತಿದ್ದರು. ವರಾಂಡದಲ್ಲಿದ್ದ ನಾನೂ ‘ದೊಡ್ದಪ್ಪ ಕಾಯ್ತಾ ಇದ್ದಾರೆ ದೊಡ್ದಮ್ಮ' ಅಂದೆ. ‘ಬಂದೆ ಪುಟ್ಟಿ' ಅಂತ ಮತ್ತೆ ಹತ್ತು ನಿಮಿಷವಾದರೂ ದೊಡ್ದಮ್ಮ ಒಳಗಿನಿಂದ ಬರಲಿಲ್ಲ. ದೊಡ್ಡಪ್ಪನಿಗೆ ತುಂಬಾ ಸಿಟ್ಟು ಬಂದಿತು. ಆಗ ದೊಡ್ಡಪ್ಪ ‘ಎಷ್ಟು ಹೊತ್ತು ಮಾಡುತ್ತಾಳೆ ನಿಮ್ಮ ದೊಡ್ಡಮ್ಮ, ಬರುತ್ತಾಳೋ ಇಲ್ಲವೋ ಕೇಳು. ಈ ಹೆಂಗಸರನ್ನು ಮದುವೆಯಾದರೆ ಇಷ್ಟೇ!’ ಎಂದು ಬಿಡೋದೆ? ಅಲ್ಲೇ ಕುಳಿತ ನಾನು ನಗುತ್ತಾ ‘ಹೌದು ದೊಡ್ಡಪ್ಪ, ನೀವು ಗಂಡಸರನ್ನೇ ಮದುವೆಯಾಗಬೇಕಿತ್ತು' ಎಂದು ಹೇಳಿದಾಗ, ದೊಡ್ಡಪ್ಪನಿಗೂ ನಗು ಬಂತು.

-ಸು.ವಿಜಯಲಕ್ಷ್ಮಿ, ಶಿವಮೊಗ್ಗ

***

ಸಿಹಿ-ತಿಂಡಿ !

ನಮ್ಮ ನೆರೆಮನೆಯ ಅರವಿಂದನ ಮಡದಿ, ಒಮ್ಮೆ ಗಂಡನಿಗೆ ಹೇಳಿದಳು, ‘ಸಂಜೆ, ಕಚೇರಿಯಿಂದ ಮನೆಗೆ ಬರುವಾಗ ಸಿಹಿ ತಿಂಡಿ ತೆಗೆದುಕೊಂಡು ಬನ್ನಿ.’

ಅರವಿಂದನೂ ನಗುತ್ತ - ‘ನಿನ್ನ ತುಟಿಯೇ ಇಷ್ಟು ಸಿಹಿಯಿದೆ. ಮತ್ತೇ ಸಿಹಿ ತಿಂಡಿಯ ಅಗತ್ಯವೇನಿದೆ?’ ಎಂದು ಕೇಳಿದನು. 

‘ಸಂಜೆ ಮನೆಗೆ ಬರುವವರು ನಿಮ್ಮ ಸ್ನೇಹಿತರು. ಅವರಿಗೆ ಸಿಹಿ ತಿಂಡಿ ಕೊಡಲೇ? ಅಥವಾ ಇದೇ ಸಿಹಿ ಕೊಡಲೇ?’ ಎಂದು ತುಟಿ ತೋರಿಸಿ ಕೇಳಿದಳು !

-ಪ್ರತಿಮಾ ಪ್ರಮೋದ ಮೋನೆ

***

(ಅಕ್ಟೋಬರ್ ೨೦೧೫ರ ‘ಮಯೂರ' ಸಂಚಿಕೆಯಿಂದ ಆಯ್ದದ್ದು)