‘ಮಯೂರ' ಹಾಸ್ಯ - ಭಾಗ ೪೮

‘ಮಯೂರ' ಹಾಸ್ಯ - ಭಾಗ ೪೮

ಬಣ್ಣ ಬಯಲಾದಾಗ

ಗುಂಡ ತನ್ನ ಮದುವೆಯ ನಂತರ ಅವನ ವಧುವಿಗೆ ಅಲಂಕಾರ ಮಾಡಿದ್ದ ಬ್ಯೂಟಿಷಿಯನ್ ಮನೆಗೆ ಹೋಗಿ ಒಂದು ಕವರ್ ಕೊಟ್ಟ ‘ಐ ಫೋನ್’ ನ ಬಾಕ್ಸ್ ನೋಡಿ ಅವಳು ಸಂತೋಷದಿಂದ ಅದನ್ನು ತೆರೆದು ನೋಡಿದಳು. ಅದು ಸಾಧಾರಣ ಬೇಸಿಕ್ ಮಾಡೆಲ್ ಫೋನ್ ಆಗಿತ್ತು. ಆಕೆ ಕೋಪದಿಂದ ‘ಏನ್ಸಾರ್, ಹೀಗೆ ತಮಾಷೆ ಮಾಡೋದಾ?’ ಎಂದು ಕೇಳಿದಳು. ಗುಂಡ, ‘ಮೇಡಂ, ನನಗೂ ಸಹ ಹೀಗೇ ಆಯ್ತು. ನೀವು ಮಾಡಿದ ಮೇಕಪ್ ಕಳಚಿದ ನಂತರ !’ ಎಂದ. ಆಕೆ ನಿರುತ್ತರಳಾದಳು.

-ಸಿ.ಆರ್.ಪುಷ್ಪ

***

ಬಾಲ್ಕನಿಯಲ್ಲಿ

ಮರಿನಂಜ ಮೀನಾಕ್ಷಿ ಥಿಯೇಟರ್ ನಲ್ಲಿ ಗೇಟ್ ಕೀಪರ್. ಸಿನೆಮಾ ಶುರುವಾದ ಬಳಿಕ ಬ್ಯಾಟರಿ ಹಿಡಿದು ಪ್ರೇಕ್ಷಕರಿಗೆ ಸೀಟು ತೋರಿಸಿ ಕೂರಿಸುವ ಕೆಲಸ ಅವನದ್ದು. 

ಒಂದು ದಿನ ಅವನಿಗೆ ವಿಪರೀತ ಹಲ್ಲು ನೋವು ! ದಂತ ವೈದ್ಯರಲ್ಲಿಗೆ ಹೋದವನು ಕುರ್ಚಿಯಲ್ಲಿ ಕೂತು ಬಾಯಿ ತೆರೆದ. ಡಾಕ್ಟರು ಬ್ಯಾಟರಿ ಹಿಡಿದು ಕೇಳಿದರು. ‘ಯಾವ ಹಲ್ಲು ನೋಯ್ತಾ ಇದೆಯಪ್ಪಾ?’

‘ಅದೇ ಸರ್ ! ಬಾಲ್ಕನಿಯಲ್ಲಿ ಎಡಬದಿಯಿಂದ ನಾಲ್ಕನೆಯದ್ದು!’ ಎಂದ.

-ಕೆ.ಶ್ರೀನಿವಾಸ ರಾವ್

***

ಬಡಾವಣೆಯ ಡಾಕ್ಟರ್

‘ನಮ್ಮ ಬಡಾವಣೆಯಲ್ಲಿ ಮನೆ ಮಾಡಿದರೆ ಉತ್ತಮವಾದ ಗಾಳಿ, ಬೆಳಕು, ಶುದ್ಧ ನೀರು ಸಿಗುತ್ತದೆ. ಇಲ್ಲಿನ ವಾತಾವರಣವೂ ಎಷ್ಟು ಶುದ್ದ ಎಂದರೆ ಇಲ್ಲಿನ ಜನಕ್ಕೆ ಕಾಯಿಲೆಯೇ ಗೊತ್ತಿಲ್ಲ' ಎಂದು ಹೊಸದಾಗಿ ಬಂದ ಬಾಡಿಗೆದಾರರಿಗೆ ಹೇಳುತ್ತಿದ್ದ ಮನೆ ಮಾಲೀಕ. ಆಗ ಅಲ್ಲೊಬ್ಬ ನರಪೇತಲ ವ್ಯಕ್ತಿ ಕೆಮ್ಮುತ್ತ ನಿತ್ರಾಣಗೊಂಡ ನಡಿಗೆಯಲ್ಲಿ ನಡೆದು ಬರುತ್ತಿದ್ದ. ‘ಈಗ ತಾನೆ ಹೇಳಿದಿರಿ, ಇಲ್ಲಿ ರೋಗಿಗಳೇ ಇಲ್ಲ ಅಂತ?’ ಮತ್ತೆ ಇವರು ಯಾರು? ಎಂದು ಕೇಳಿದ ಬಾಡಿಗೆದಾರ. ‘ಇವರು ನಮ್ಮ ಬಡಾವಣೆಯ ಡಾಕ್ಟ್ರು ಸ್ವಾಮಿ...ಪಾಪ, ವರ್ಷಗಳಿಂದ ರೋಗಿಗಳೇ ಇಲ್ಲದ ನೋವಿನಲ್ಲಿ ಹೀಗಾಗಿದ್ದಾರೆ' ಎಂದ ಮನೆಯೊಡೆಯ.

-ಸಾವಿತ್ರಿ ಹೊಳ್ಳ

***

ಲೆಕ್ಕ ಸಿಗುತ್ತಿಲ್ಲ

ಗುಂಡ ರಾಷ್ಟೀಕೃತ ಬ್ಯಾಂಕ್ ಒಂದರಲ್ಲಿ ಕ್ಯಾಶಿಯರ್. ಅಂದಿನ ವಹಿವಾಟೆಲ್ಲ ಮುಗಿದ ಮೇಲೆ ಹಣದ ಲೆಕ್ಕಾಚಾರದಲ್ಲಿ ತೊಡಗಿದ್ದ. ದಿಢೀರೆಂದು ಒಳನುಗ್ಗಿದ ದರೋಡೆಕೋರರು ಅವನ ಮುಖಕ್ಕೆ ಬಂದೂಕು ಹಿಡಿದು, ‘ಈಗ ನಿನ್ನ ಬಳಿ ಎಷ್ಟು ಹಣವಿದೆಯೋ ಅದನ್ನೆಲ್ಲ ಮರುಮಾತನಾಡದೇ ನಮಗೆ ಕೊಟ್ಟು ಬಿಡು. ಇಲ್ಲದಿದ್ದರೆ ನಿನ್ನ ತಲೆ ಉರುಳುತ್ತದೆ' ಎಂದು ಗುಡುಗಿದರು. ಗುಂಡ ದಯನೀಯ ದನಿಯಿಂದ ‘ಎಷ್ಟು ಬಾರಿ ಲೆಕ್ಕ ಮಾಡಿದರೂ ಎರಡು ಲಕ್ಷ ರೂಪಾಯಿ ಲೆಕ್ಕ ಸಿಗುತ್ತಿಲ್ಲ. ದಯವಿಟ್ಟು ಈ ಹಣದ ಜೊತೆಗೆ ಈ ಲೆಕ್ಕದ ಪುಸ್ತಕವನ್ನೂ ತೆಗೆದುಕೊಂಡು ಹೋಗಿ. ಒಟ್ಟು ಎಷ್ಟು ಹಣ ದರೋಡೆ ಆಯಿತೆಂದು ಬರೆದು ಬಿಡಿ ಪ್ಲೀಸ್' ಎಂದ.

-ಎಂ.ಕೆ.ಮಂಜುನಾಥ್

***

(ಆಗಸ್ಟ್ ೨೦೧೮ರ ‘ಮಯೂರ’ ಪತ್ರಿಕೆಯಿಂದ ಸಂಗ್ರಹಿತ)