‘ಮಯೂರ' ಹಾಸ್ಯ - ಭಾಗ ೪೯

‘ಮಯೂರ' ಹಾಸ್ಯ - ಭಾಗ ೪೯

ಎಲ್ಲಿ ಕೂರುತ್ತಾಳೆ?

ಅಂದು ಗುಂಡನ ಮದುವೆ. ಪುರೋಹಿತನ ಆದೇಶದಂತೆ ಹಸೆಮಣೆಯ ಮೇಲೆ ವಿರಾಜಮಾನನಾಗಿದ್ದ ಗುಂಡ. ಮಂತ್ರ ಹೇಳುತ್ತಿದ್ದ ಪುರೋಹಿತನ ಗಮನವನ್ನು ತನ್ನೆಡೆಗೆ ಸೆಳೆಯುತ್ತ, ‘ಪುರೋಹಿತರೇ, ಮದುಮಗಳನ್ನು ನನ್ನ ಬಲಬದಿಗೆ ಕೂರಿಸುತ್ತೀರೋ ಅಥವಾ ಎಡಬದಿಗೋ?’ ಎಂದು ಕೇಳಿದ.

ಅದಕ್ಕೆ ಪುರೋಹಿತರು ಒಂದು ದೇಶಾವರಿ ನಗು ಬೀರುತ್ತ, ‘ಎಲ್ಲೋ ಒಂದು ಕಡೆ ಕೂರಿಸಿದರಾಯಿತು ಬಿಡಪ್ಪ ! ಅದಕ್ಯಾಕೆ ಯೋಚನೆ ಮಾಡ್ತಿಯಾ? ಹೇಗಿದ್ದರೂ ಮದುವೆಯಾದ ಮೇಲೆ ಅವಳು ನಿನ್ನ ತಲೆ ಮೇಲೆ ತಾನೇ ಕೂರೋದು?’ ಎನ್ನುತ್ತಿದ್ದಂತೆಯೇ ಗುಂಡ ಅವರನ್ನೇ ಪಿಳ ಪಿಳನೆ ನೋಡುತ್ತ ತೆಪ್ಪಗೆ ಕುಳಿತ.

-ಎಂ.ಕೆ.ಮಂಜುನಾಥ

***

ಸೊಪ್ಪಿನ ಸಹವಾಸ

ಮಗನನ್ನು ನೋಡಿದೊಡನೆಯೇ ಅಪ್ಪನ ಕೋಪ ನೆತ್ತಿಗೇರಿತ್ತು. ‘ಏನೋ? ಕೊತ್ತಂಬರಿ ಸೊಪ್ಪು ತಗೊಂಡು ಬಾ ಅಂದ್ರೆ ಪುದೀನಾ ಸೊಪ್ಪು ತಂದಿದ್ದಿಯಲ್ಲಾ ! ದಡ್ಡ... ನೀನು ಮನೆಯಲಿರೋದೇ ದಂಡ, ಮನೆ ಬಿಟ್ಟು ಆಚೆ ಹೋದರೇನೇ ಬುದ್ಧಿ ಬರೋದು..' ಎಂದು ಗೊಣಗಿಕೊಂಡು ಕುಳಿತ.

ಮಗ, ಒಳಗೆ ಹೋದವನೇ ಖುಷಿಯಿಂದ ಹೊರಗೆ ಬಂದು, ‘ನಡೀ ಅಪ್ಪಾ, ನೀನೂ ಸಹ ನನ್ನ ಜೊತೆ ಮನೆ ಬಿಡಬೇಕಾಗುತ್ತೆ. ಅಮ್ಮ ಹೇಳಿದ್ರು, ಅದು ಪುದೀನಾ ಅಲ್ಲ. ಮೆಂತ್ಯೆ ಸೊಪ್ಪು ಅಂತ !’ ಅಂದಾಗ ಅಪ್ಪನ ಮುಖ ಇಂಗು ತಿಂದ ಮಂಗನಂತಾಗಿತ್ತು.

-ಚೈತ್ರಾ ಕುಕ್ಕೆಮನೆ

***

ಡೋಲಿಗೆ ಚಿತ್ರ

ಒಂದು ಕಾರ್ಯಕ್ರಮದಲ್ಲಿ ತಿಮ್ಮ ಡೋಲಿನ ಎರಡು ಬದಿಗಳಿಗೂ ಹೆಣ್ಣಿನ ಚಿತ್ರಗಳನ್ನು ಅಂಟಿಸಿಕೊಂಡು ಡೋಲು ಬಾರಿಸುತ್ತಿದ್ದ. ‘ಇದನ್ನು ನೋಡಿದ ಒಬ್ಬರು ‘ಡೋಲಿಗೆ ಮಹಿಳೆಯರ ಚಿತ್ರ ಹಾಕಿದ್ದೀರಲ್ಲ. ನೀವೇನು ಸೌಂದರ್ಯೋಪಾಸಕರೋ?’ ಎಂದು ಕೇಳಿದರು. ಅವರ ಮಾತಿಗೆ ತಿಮ್ಮ ‘ಹಾಗೇನಿಲ್ಲ, ಒಂದು ಚಿತ್ರ ನನ್ನ ಅತ್ತೆಯದು, ಇನ್ನೊಂದು ನನ್ನ ಹೆಂಡತಿಯದು' ಎಂದು ಹೇಳಿ ಡೋಲನ್ನು ಮೊದಲಿಗಿಂತಲೂ ಜೋರಾಗಿ ಬಡಿಯತೊಡಗಿದ.!

-ಶಂಕರೇಗೌಡ ತುಂಬಕೆರೆ

***

ನೀವ್ಯಾಕೆ ಬಿಚ್ತೀರಾ?

ಹೋಮ್ ವರ್ಕ್ ಮಾಡದೆ ಇದ್ದ ಗುಂಡನನ್ನುದ್ದೇಶಿಸಿ ಮೇಸ್ಟ್ರು ಹೇಳಿದರು- ‘ಯಾವಾಗ ನೋಡಿದ್ರೂ ಹೋಮ್ ವರ್ಕ್ ಮಾಡದೆನೇ ಬರ್ತಿಯಲ್ಲಾ.. ಹೀಗೇ ಮಾಡಿದ್ರೆ ಚಡ್ಡಿ ಬಿಚ್ತೀನಿ ನೋಡು. ಅದಕ್ಕೆ ಗುಂಡ, ಅಯ್ಯೋ ಬೇಡ ಸರ್, ನಾನು ಹೋಮ್ ವರ್ಕ್ ಮಾಡಲಿಲ್ಲ ಅಂತ ಪಾಪ ನೀವ್ಯಾಕೆ ಚಡ್ಡಿ ಬಿಚ್ತೀರಾ...; ಎಂದಾಗ ಕ್ಲಾಸಿನಲ್ಲಿದ್ದವರಿಗೆ ನಗುವೋ ನಗು.

-ಪಿ.ಜಯವಂತ ಪೈ

***

(‘ಮಯೂರ' ಎಪ್ರಿಲ್ ೨೦೧೮ರ ಸಂಚಿಕೆಯಿಂದ ಆಯ್ದದ್ದು)