‘ಮಯೂರ' ಹಾಸ್ಯ - ಭಾಗ ೫೦

‘ಮಯೂರ' ಹಾಸ್ಯ - ಭಾಗ ೫೦

ಕಳೆದ ಸುಮಾರು ಒಂದು ವರ್ಷದಿಂದ ಪ್ರತೀ ವಾರ ನಾವು ಹಳೆಯ ‘ಮಯೂರ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಹಾಸ್ಯ ಬರಹ ‘ಅಂಗೈಯಲ್ಲಿ ಅರಮನೆ'ಯನ್ನು ಸಂಗ್ರಹಿಸಿ ಸಂಪದದಲ್ಲಿ ಪ್ರಕಟಿಸುತ್ತಾ ಬಂದಿದ್ದೇವೆ. ಈ ಹಾಸ್ಯ ತುಣುಕುಗಳನ್ನು ಬಹಳಷ್ಟು ಮಂದಿ ಮೆಚ್ಚಿಕೊಂಡಿರುವಿರಿ. ಈ ವಾರ ‘ಮಯೂರ’ ಹಾಸ್ಯ ಇದರ ೫೦ನೇ ಭಾಗ ಪ್ರಕಟವಾಗುವುದರೊಂದಿಗೆ ಈ ವಿಭಾಗಕ್ಕೆ ನಾವು ತಾತ್ಕಾಲಿಕ ವಿರಾಮ ನೀಡುತ್ತಿದ್ದೇವೆ. ಒಂದೇ ವಿಷಯ ಹಲವಾರು ಸಮಯಗಳ ಕಾಲ ನಡೆಯುತ್ತಾ ಬಂದರೆ ಅದಕ್ಕೆ ಸ್ವಾರಸ್ಯವಿರುವುದಿಲ್ಲ. ಮುಂದಿನ ವಾರದಿಂದ ನಾವು ಹೊಸ ವಿಚಾರದೊಂದಿಗೆ ಹಾಜರಾಗಲಿದ್ದೇವೆ. ಇಷ್ಟು ಸಮಯ ಅಕ್ಕರೆಯಿಂದ ಓದಿ ಮೆಚ್ಚಿ, ಪ್ರತಿಕ್ರಿಯೆ ನೀಡಿದ ಓದುಗರೆಲ್ಲರಿಗೂ ಕೃತಜ್ಞತೆಗಳು. 

***

“ಅಂಕಲ್ ಇಳೀಬೇಡಿ"

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಯಾಣಿಕರ ಅನುಕೂಲಕ್ಕಾಗಿ ಅಲ್ಲಲ್ಲಿ ಹತ್ತಲು, ಇಳಿಯಲು ಬಸ್ ನಿಲುಗಡೆಯ ಫಲಕಗಳನ್ನು ಹಾಕಿದೆ.

ಇತ್ತೀಚೆಗೆ ಹುಬ್ಬಳ್ಳಿಯ ಬಸವೇಶ್ವರ ಹುಟ್ಟುವಳಿ ಮಾರಾಟ ಸಮಿತಿಯ ಕಲ್ಯಾಣ ಮಂಟಪದಲ್ಲಿ ನಡೆವ ಬಂಧುವೊಬ್ಬರ ಮದುವೆಗೆಂದು ಸಿಟಿಬಸ್ ಹತ್ತಿದೆ. 

ಬಸ್ ಕಂಡಕ್ಟರ್ ಸೂಚನೆಯಂತೆ ಚಾಲಕ ಬಸ್ ಅನ್ನು ಉಣಕಲ್ ಕ್ರಾಸ್ ಬಳಿ ನಿಲ್ಲಿಸಿದ. ಕೆಲವು ಪ್ರಯಾಣಿಕರು ಇಳಿಯಲು ಮುಂದಾದರು. ಆಗ ಬಸ್ ನ ಒಳಗಿದ್ದ ಬಾಲಕನೊಬ್ಬ ‘ರೀ ಅಂಕಲ್, ಇಳೀ ಬ್ಯಾಡ್ರಿ, ಇದು ಪ್ರಯಾಣಿಕರು ಹತ್ತಾಕ ಮಾತ್ರ, ಇಳಿಯಾಕಲ್ರಿ' ಎಂದು ಸಾರಿಗೆ ಸಂಸ್ಥೆಯ ಫಲಕ ತೋರಿಸಿದ.

ಫಲಕದಲ್ಲಿ ‘Passangers Boarding Place’ ಅಂತ ಬರೆದಿತ್ತು. ಜೊತೆಗೆ ‘ಪ್ರಯಾಣಿಕರು ಹತ್ತುವ ಸ್ಥಳ' ಎಂದೂ ಬರೆದಿತ್ತು. ಫಲಕದಲ್ಲಿ ‘ಇಳಿಯಲು' ಬರೆಯಲಿಲ್ಲವಾದ್ದರಿಂದ ಬಾಲಕ ಬಸ್ ಇಳಿಯುವವರನ್ನೆಲ್ಲಾ ಎಚ್ಚರಿಸುತ್ತಿದ್ದ. 

-ಬಸವರಾಜ ಹುಡೇದಗಡ್ಡಿ, ಹಾವೇರಿ

***

ಇಲಿಯಿಂದ್ಲೂ ಪಾಷಾಣ ಟೆಸ್ಟ್ !

ನನ್ನ ಸ್ನೇಹಿತನ ಕಿರಾಣಿ ಅಂಗಡಿ ತುಂಬಾ ಇಲಿಗಳು ! ಹಗಲಲ್ಲೇ ರಾಜಾರೋಷವಾಗಿ ಓಡಾಡಿ ಚೀಲ, ಪಾಕೀಟು, ಪೇಪರುಗಳನ್ನು ಕಡಿದು ಚೂರು ಚೂರು ಮಾಡುತ್ತಿದ್ದವು. 

ಇಲಿಗಳ ಕಾಟದಿಂದ ಸುಸ್ತಾದ ಸ್ನೇಹಿತ ಇಲಿಗಳನ್ನು ಕೊಲ್ಲಲು ಶೆಟ್ಟರ ಅಂಗಡಿಯಿಂದ ಇಲಿ ಪಾಷಾಣ ತಂದ. ಪಾಷಾಣದ ಪಾಕೀಟು ಒಂದು ತುದಿಯಲ್ಲಿ ಹರಿದಿತ್ತು. ಪುನಃ ಅವನು ಅದನ್ನು ಹಿಡಿದು ಶೆಟ್ಟರ ಅಂಗಡಿಗೆ ಓಡಿದ. ಏನು ಶೆಟ್ಟರೆ, ಪಾಕೀಟು ಹರಿದಿದೆಯಲ್ಲ' ಕೇಳಿದ.

“ಸ್ವಲ್ಪ ಹಾಳಾಗಿದೆ ರೀ...ಬಾಕ್ಸ್ ನಲ್ಲಿಟ್ಟಾಗ ಇಲಿ ಕಡಿದಿದೆ" ಶೆಟ್ಟರು ಹೇಳಿದರು.

“ ಇದು ಇಲಿ ಪಾಷಾಣ... ಇದನ್ನೇ ಇಲಿ ಹೇಗೆ ಕಡಿಯಿತು?’ ಸ್ನೇಹಿತನ ಮರುಪ್ರಶ್ನೆ.

“ಇಲಿಗಳು ಕಮ್ಮಿ ಏನ್ರಿ... ಪಾಷಾಣನೂ ಟೆಸ್ಟ್ ಮಾಡ್ತಾವೆ ವಿಷ ಕಡಿಮೆಯಿದ್ರೆ ತಿಂದು ಹೊಟ್ಟೆ ತುಂಬಿಸಿಕೊಳ್ತಾವೆ. ಜಾಸ್ತಿಯಿದ್ರೆ ಸುಮ್ಮನೆ ಬಿಟ್ಟು ಹೋಗ್ತಾವೆ. ಇದ್ರಿಂದಾನೆ ಗೊತ್ತಾಗ್ತದೆ, ನಿಮಗೆ ಕೊಟ್ಟಿರೊ ಪಾಷಾಣ ಬಹಳ ಸ್ಟ್ರಾಂಗ್ ಐತಿ" ಶೆಟ್ಟರು ವಿವರಿಸಿದರು. ಶೆಟ್ಟರ ಮಾತಿಗೆ ಸ್ನೇಹಿತ ದಂಗಾಗಿ ಹೋದ.

-ಬಸವರಾಜ ವೀ. ಮೂಲಿಮನಿ, ಇರಕಲ್ಲಗಡ

***

ಇಂಟು ಮಾರ್ಕ್

ಸೇವಾವಧಿಯುದ್ದಕ್ಕೂ ಮುಖ ಗಂಟು ಹಾಕಿಕೊಂಡೇ ಅತಿ ಎನ್ನುವ ಶಿಸ್ತಿನಿಂದ ಆಡಳಿತ ನಡೆಸುತ್ತಿದ್ದ ಪ್ರಿನ್ಸಿಪಾಲ್ ನರಸಿಂಗರಾಯರಿಗೆ ಅಂದು ನಿವೃತ್ತಿಯ ದಿನ. ಆ ದಿನವೂ ಬೆಳಿಗ್ಗೆ ೧೦.೩೦ಕ್ಕೆ ಮುಂಚೆ ಹಾಜರಿ ಪುಸ್ತಕದಲ್ಲಿ ಸಹಿ ಹಾಕದವರ ಹೆಸರಿನ ಮುಂದೆ ಕೆಂಪು ಶಾಯಿಯಲ್ಲಿ ಅತ್ಯುತ್ಸಾಹದಿಂದ ಇಂಟು ಮಾರ್ಕ್ ಹಾಕುತ್ತಿದ್ದಂತೆ ಅಧ್ಯಾಪಕರೊಬ್ಬರು ಓಡೋಡಿ ಬಂದರು. ತಮಗೆ ಇಂಟು ಮಾರ್ಕ್ ಬಿದ್ದಿದ್ದಕ್ಕೆ ಅಸಮಧಾನಗೊಂಡು ‘ಹತ್ತೂವರೆಗೆ ಇನ್ನೂ ಎರಡು ನಿಮಿಷ ಇದೆ ನೋಡಿ ಸರ್, ಇಷ್ಟು ಬೇಗ ಇಂಟು ಮಾರ್ಕ್ ಹಾಕಿದ್ದೀರಲ್ಲ' ಎಂದು ಸಿಡುಕಿದರು.

ಆ ವೇಳೆಗಾಗಲೇ ದುಗುಡು ತುಂಬಿಕೊಂಡಿದ್ದ ಪ್ರಿನ್ಸಿಪಾಲರು ತಲೆಯೆತ್ತಿ ‘ಇವತ್ತು ನನ್ನ ಸೇವಾವಧಿಯ ಕೊನೆಯ ದಿನ. ಇಂಟು ಮಾರ್ಕ್ ಹಾಕುವ ಉತ್ಸಾಹದಲ್ಲಿ ನನ್ನ ಹೆಸರಿನ ಮುಂದೆಯೂ ಹಾಕಿಕೊಂಡು ಬಿಟ್ಟಿದ್ದೀನಿ ಕಣ್ರಿ" ಎಂದರು ನೋವಿನಿಂದ.

-ರಾಮೇಗೌಡ, ಬೈರಮಂಗಲ

***

ಪಂಚೆ ಏಕೆ?

ಇತ್ತೀಚೆಗೆ ನನ್ನ ತಂಗಿ ಮನೆಗೆ ಹೋಗಿದ್ದೆ. ತನ್ನ ನಾಲ್ಕು ವರ್ಷದ ಮಗ ಅಕ್ಷಯನಿಗೆ ಸ್ನಾನ ಮಾಡಿಸಿದ ನನ್ನ ತಂಗಿ ಸ್ಕೂಲ್ ಯೂನಿಫಾರಂ ಹಾಕುತ್ತಿದ್ದಳು. ಅಂಗಿ ತುಂಬಾ ಉದ್ದವಾಗಿರುವುದನ್ನು ಗಮನಿಸಿದ ನಾನು ‘ಅಂಗಿ ಅಷ್ಟುದ್ದ ಇದ್ದ ಮೇಲೆ ಚಡ್ಡಿ ಇನ್ಯಾಕೋ ಅಕ್ಷಯ್' ಎನ್ನುವುದೇ ತಡ ‘ಅಲ್ಲಾ ಮಾವಾ... ನಿನ್ನ ಬನಿಯನ್ ಅಷ್ಟುದ್ದ ಇದೆ, ಪಂಚೆ ಇನ್ಯಾಕೆ' ಎನ್ನಬೇಕೇ?

-ಎಸ್ ಎನ್ ಕೆ, ಕಡೂರು

***

(‘ಮಯೂರ' ಸೆಪ್ಟೆಂಬರ್, ೨೦೦೨ರ ಸಂಚಿಕೆಯಿಂದ ಸಂಗ್ರಹಿತ)