‘ಮಯೂರ' ಹಾಸ್ಯ - ಭಾಗ ೫೩

‘ಮಯೂರ' ಹಾಸ್ಯ - ಭಾಗ ೫೩

ಅಕ್ಕ ಮನೆಯಲ್ಲಿಲ್ಲ

ನಾವೆಲ್ಲಾ ಕಾಫಿ-ತಿಂಡಿಗಾಗಿ ನಮ್ಮ ಆಫೀಸಿನ ಶೀಘ್ರಲಿಪಿಕಾರ್ತಿ ಮಂಜುಳಾ ಅವರನ್ನು ಆಗಾಗ್ಗೆ ಪೀಡಿಸುತ್ತಿದ್ದೆವು. ಒಮ್ಮೆ ನಾವೆಲ್ಲಾ ಸಂಜೆ ಕಾಫಿಗೆ ಅವರ ಮನೆಗೆ ಬರುತ್ತೇವೆ ಎಂದು ಹೇಳಿದೆವು. ‘ಆಯಿತು ಬನ್ನಿ' ಎಂದರು. ಸಂಜೆ ಆರು ಗಂಟೆಯ ಸುಮಾರಿಗೆ ಮನೆಯ ಹತ್ತಿರ ಹೋದಾಗ ಮನೆಯ ಬಾಗಿಲು ಹಾಕಿತ್ತು. ಆದರೆ ಅವರ ಅಕ್ಕನ ಮಗಳು ಅನಿತಾ ಕಿಟಕಿಯಿಂದಲೇ ನಮ್ಮನ್ನು ನೋಡಿ ‘ಅಕ್ಕ, ನಿಮ್ಮ ಆಫೀಸಿನವರು ಬಂದ್ರು, ನೀನು ಇಲ್ಲ ಅಂತ ಹೇಳಿ ಕಳಿಸಲಾ’ ಎಂದಳು. ಆರು ವರ್ಷದ ಹುಡುಗಿ ಅನಿತಾ ತುಂಬಾ ಚೂಟಿ. ಅವಳಿಗೆ ನಮ್ಮೆಲ್ಲರ ಪರಿಚಯವಿತ್ತು. ‘ನಮ್ಮ ಆಫೀಸಿನವರು ಬಂದರೆ ನಾನು ಮನೆಯಲ್ಲಿ ಇಲ್ಲ ಅಂತ ಹೇಳು' ಎಂದು ಅವಳಿಗೆ ಬಾಯಿಪಾಠ ಮಾಡಿಸಿದ್ದ ಮಂಜುಳಾ, ಸಿಟ್ಟಿನಿಂದ ಅನಿತಾಳ ತಲೆಗೆ ಮೊಟಕಿ, ಬಾಗಿಲು ತೆಗೆದಳು.

-ರಾಜಶೇಖರ

***

ಬೆಲ್ ಮಾಡಿದೆ…

ಮನೆಯ ಕಾಲಿಂಗ್ ಬೆಲ್ ಕೆಟ್ಟಿತ್ತು. ಸಮೀಪದ ಎಲೆಕ್ಟ್ರಿಕಲ್ ಅಂಗಡಿಗೆ ಹೋಗಿ ಬೆಲ್ ರಿಪೇರಿಗೆ ಹುಡುಗನನ್ನು ಕಳಿಸಿ ಎಂದು ಹೇಳಿ ಬಂದಿದ್ದೆ. ಎರಡು ದಿನಗಳಾದರೂ ಹುಡುಗ ಬರಲೇ ಇಲ್ಲ. ಮತ್ತೊಮ್ಮೆ ನೆನಪಿಸೋಣ ಎಂದು ಅಂಗಡಿಗೆ ಹೋದೆ. ‘ನೋಡಿ, ನಿಮ್ಮ ಹುಡುಗ ಬರಲೇ ಇಲ್ಲ.’ ಎಂದು ದೂರಿದೆ. ಅವರು ‘ಯಾಕಪ್ಪ? ನಿನ್ನೆ ಸಾಹೇಬರ ಮನೆ ಬೆಲ್ ರಿಪೇರಿಗೆ ಹೋಗಲಿಲ್ಲ ನೀನು?’ ಎಂದು ಕೇಳಿದರು. ‘ಹೋಗಿದ್ದೆ ಸಾರ್, ಎರಡು ಮೂರು ಸಲ ಬೆಲ್ ಮಾಡಿದರೂ ಯಾರೂ ಬಾಗಿಲು ತೆಗೆಯಲೇ ಇಲ್ಲ' ಎಂದ ಹುಡುಗ !

-ಸುರೇಶ ಹೆಗಡೆ

***

ಭೂತ ಆಂಟಿ

ಸರ್ಕಾರಿ ಸೇವೆಯಿಂದ ನಿವೃತ್ತಿ ಪಡೆದ ನೆಂಟರೊಬ್ಬರು ಬಹಳ ವರ್ಷಗಳ ನಂತರ ನಮ್ಮ ಮನೆಗೆ ಬಂದರು. ‘ಹೇಗೆ ಸಾಗಿದೆ ನಿವೃತ್ತಿ ಜೀವನ?’ ಎಂದು ಕೇಳಿದೆ. ‘ಹಗಲು ತೊಂದರೆ ಇಲ್ಲ. ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ' ಯಾರೂ ಇಲ್ಲದ ಮನೆಯಲ್ಲಿ ಒಬ್ಬಳೇ ಭೂತದ ತರಹ ಓಡಾಡುತ್ತೇನೆ' ಎಂದು ನಕ್ಕರು. ಮತ್ತೆ ಸಂಜೆ ಬರುವುದಾಗಿ ಹೇಳಿ ತಮ್ಮ ಸ್ನೇಹಿತೆಯ ಮನೆಗೆ ಹೋದರು. ಸಂಜೆ ಎಂದಿನಂತೆ ವಿದ್ಯುತ್ ಕೈಕೊಟ್ಟಿತು. ನಾನು ಅಡುಗೆ ಮನೆಯಲ್ಲಿದ್ದೆ. ಯಾರೋ ಬಾಗಿಲು ಬಡಿದರು. ‘ಯಾರು ನೋಡು' ಎಂದು ನನ್ನ ಮಗನಿಗೆ ಹೇಳಿದೆ. ಆತ ‘ಭೂತ...' ಎಂದ. ನಾನು ಗಾಬರಿಯಾಗಿ ಅಡುಗೆ ಮನೆಯಿಂದ ಹೊರಗೆ ಬಂದೆ. ‘ಅದೇ ಅಮ್ಮ, ಬೆಳಿಗ್ಗೆ ಬಂದಿದ್ರಲ್ಲ...ಭೂತ ಆಂಟಿ' ಎಂದು ವಿವರಣೆ ಕೊಟ್ಟ !

-ಪೂರ್ಣಿಮಾ ಗುರುದೇವ ಭಂಡಾರ್ಕರ್

***

ಗಂಧೀ ತಸ್ವೀರ್

ಉತ್ತರ ಭಾರತದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಪರಿಚಯದ ಕಮಲಮ್ಮನ ಮಗ, ಸೊಸೆ ಹಾಗೂ ನಾಲ್ಕು ವರ್ಷದ ಮೊಮ್ಮಗಳು ನೀಲು ರಜೆ ಕಳೆಯಲು ಬೆಂಗಳೂರಿಗೆ ಬಂದಿದ್ದರು. ನೀಲುಗೆ ಕನ್ನಡ ಅಷ್ಟಕಷ್ಟೇ. ಬೆಳಗಿನ ತಿಂಡಿ ತಯಾರಿಸುತ್ತಿದ್ದ ಕಮಲಮ್ಮ, ನೀಲುಗೆ ‘ಪುಟ್ಟೀ, ತಾತಾ ಏನ್ಮಾಡ್ತಿದ್ದಾರೆ ನೋಡಿ ಬಾ’ ಎಂದರು. ತಾತನ ರೂಮಿಗೆ ಬಂದು ಇಣುಕಿ ವಾಪಾಸು ಬಂದ ನೀಲು ‘ನಾನಿ, ನಾನಾ ಗಂಧೀ ತಸ್ವೀರ್ ಬನಾರಹೆ ಹೆ' ಎಂದಳು. ಕಮಲಮ್ಮ ಕೂಡಲೇ ಮೇಲೆ ಹೋಗಿ ನೋಡಿದರು. ಅವರ ಪತಿ ತಾವು ಬಿಡಿಸಿದ ಗಾಂಧೀಜಿ ಚಿತ್ರಕ್ಕೆ ಬಾರ್ಡರ್ ಹಾಕುತ್ತಿದ್ದರು. ‘ಗಾಂಧಿ' ಎನ್ನುವ ಪದ ಅವಳ ಬಾಯಿಯಲ್ಲಿ ‘ಗಂಧೀ’ (ಕೆಟ್ಟ) ಆಗಿತ್ತು.

-ಅರವಿಂದ ಜಿ.ಜೋಷಿ

***

(ಕೃಪೆ: ‘ಮಯೂರ' ಫೆಬ್ರವರಿ ೨೦೨೦ರ ಸಂಚಿಕೆಯಿಂದ)