‘ಮಯೂರ' ಹಾಸ್ಯ - ಭಾಗ ೫೪

‘ಮಯೂರ' ಹಾಸ್ಯ - ಭಾಗ ೫೪

ರೇಡಿಯೋ ಡಾಕ್ಟ್ರು !

ನಮ್ಮ ಮನೆಯ ಅಡುಗೆ ಕೋಣೆಯ ಸಂಗಾತಿ ಫಿಲಿಪ್ಸ್ ರೇಡಿಯೋಗೆ ಈಗ ೨೫ರ ಹರೆಯ. ನಾವು ಆಗಾಗ ಅದೇ ರೇಡಿಯೋದಲ್ಲಿ ಹಾಡುಗಳನ್ನು ಆಲಿಸುವುದೂ ಇದೆ. ಈ ರೇಡಿಯೋ ಕೆಲ ದಿನಗಳಿಂದ ಕೊರ ಕೊರ ಅನ್ನುತ್ತಿತ್ತು. ಅದನ್ನು ದುರಸ್ತಿ ಮಾಡುವವರು ಸಿಗದೆ ಮೌನವಾಗಿತ್ತು. ಅಂದು ಅನ್ನ ಪರಿಚಯದ ವೈದ್ಯರು ಬಹಳ ವರ್ಷಗಳ ನಂತರ ಮನೆಗೆ ಬಂದಿದ್ದರು. ನನ್ನ ಪುಟ್ಟ ಮಗಳು ಹಾಗೂ ಪತ್ರಿಗೆ ರೇಡಿಯೋಲಜಿ ಸ್ಪೆಷಲಿಸ್ಟ್ ಆದ ಅವರನ್ನು ಪರಿಚಯಿಸಿದೆ. ಪತ್ನಿ ಕಾಫಿ ತರಲು ಅಡುಗೆ ಕೋಣೆಯತ್ತ ಸಾಗಿದಳು. ಮಗಳು ಓಡಿ ಹೋಗಿ ಹಾಳಾದ ರೇಡಿಯೋ ತಂದು, “ಇದು ಕೊರಕೊರ ಅನ್ನುತ್ತಿದೆ. ರಿಪೇರಿಗೆ ಯಾರೂ ಸಿಕ್ಕಿರಲಿಲ್ಲ. ಹೇಗೂ ನೀವು ರೇಡಿಯೋಲಜಿ ಸ್ಪೆಷಲಿಸ್ಟ್ ಅಲ್ಲವೆ, ಸ್ವಲ್ಪ ನೋಡಿ ಪ್ಲೀಸ್" ಎಂದು ವೈದ್ಯರ ಬಳಿ ಕೊಟ್ಟಳು.

-ನಗರ ಗುರುದೇವ್ ಭಂಡಾರ್ಕರ್

***

ತಲೆಗೆ ಬಣ್ಣ ಹಚ್ಚಿಕೊಳ್ಳುತ್ತಾಳೆ…

ಅದೊಂದು ದಿನ ನನ್ನ ನಾದಿನಿ ಬೇಸರದಿಂದ ತನಗೆ ಸಕ್ಕರೆ ಕಾಯಿಲೆ ಬಂದಿದ್ದಾಗಿ ಹೇಳುತ್ತಿದ್ದಳು. ಹಿಂದಿನ ದಿನವಷ್ಟೇ ವೈದ್ಯರ ಬಳಿ ಯಾವುದೊ ಪರೀಕ್ಷೆಗೆ ಹೋಗಿದ್ದಾಗ ಸಕ್ಕರೆ ಪ್ರಮಾಣ ಹೆಚ್ಚಿಗೆ ಇರುವುದು ಗೊತ್ತಾಗಿ, ತಲೆಯಮೇಲೆ ಕೈಹೊತ್ತು ಕುಳಿತಿದ್ದಳು. ನಾವು ಅವಳಿಗೆ ಸಮಾಧಾನ ಮಾಡಿ, ‘ಚಿಂತಿಸಬೇಡ ಮಾರಾಯ್ತಿ, ಊಟೋಪಚಾರದಲ್ಲಿಯೇ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ನೀನು ಏನೇನೊ ತಲೆಗೆ ಹಚ್ಚಿಕೊಂಡು ಕೂಡಬೇಡ. ಅದರಿಂದ ನಿನ್ನ ಸಮಸ್ಯೆ ಜಾಸ್ತಿ ಆಗುತ್ತೆ' ಎಂದು ಹೇಳಿದೆವು. ಅಲ್ಲಿಯೇ ಕುಳಿತಿದ್ದ ನಾದಿನಿಯ ಮಗಳು ‘ಹೌದು ದೊಡ್ಡಪ್ಪ, ಸುಮ್ನೆ ತಲೆಗೆ ಬಣ್ಣ ಎಲ್ಲಾ ಹಚ್ಕೊತಾಳೆ' ಎಂದು ಮುಗ್ಧವಾಗಿ ಹೇಳಿದಾಗ ಬಿಗುವಿನ ವಾತಾವರಣ ತಿಳಿಯಾಗಿ ನಗು ತುಂಬಿಕೊಂಡಿತು.

-ಶಿವಮೊಗ್ಗ ರಮೇಶ್

***
ಆಸ್ಟ್ರೇಲಿಯಾದಲ್ಲಿ ಪಾರ್ವತಿ

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮೊದಲಬಾರಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೆವು. ಸೋದರತ್ತೆಯ ಮೊಮ್ಮಗ ಉತ್ಸುಕತೆಯಿಂದ ಪ್ರಶ್ನೆಗಳನ್ನು ಕೇಳುತ್ತ ಕುಳಿತಿದ್ದ. ಚೂಟಿಯಾಗಿದ್ದ ನಾಲ್ಕು ವರ್ಷದ ತುಂಟ ಪೋರನನ್ನು ಕಂಡ ಗಗನಸಖಿ ‘ವಾಟ್ ಈಸ್ ಯುವರ್ ನೇಮ್?’ (ನಿನ್ನ ಹೆಸರೇನು?) ಎಂದು ಕೇಳಿದಳು. ‘ಶಿವ' ಎಂದ ಆತ. ಅವಳು ನಸುನಗುತ್ತಾ, ‘ವೇರ್ ಈಸ್ ಪಾರ್ವತಿ?’ (ಪಾರ್ವತಿ ಎಲ್ಲಿದ್ದಾಳೆ?) ಎಂದಳು. ಈತ ತಕ್ಷಣವೇ ‘ಶೀ ಈಸ್ ಇನ್ ಆಸ್ಟ್ರೇಲಿಯಾ’ (ಅವಳು ಆಸ್ಟ್ರೇಲಿಯಾದಲ್ಲಿದ್ದಾಳೆ) ಎಂದ. ಅವಳು ಚಕಿತಳಾಗಿ ನಮ್ಮೆಡೆಗೆ ನೋಡಿದಾಗ, ನಮ್ಮ ಮಗಳು ಪಾರ್ವತಿ ಹೆಚ್ಚಿನ ಓದಿಗಾಗಿ ಆಸ್ತ್ರೇಲಿಯಾಗೆ ಹೋಗಿದ್ದಾಳೆಂದು ಹೇಳಿದೆವು. ಅವಳು ನಗುತ್ತ ಶಿವನಿಗೊಂದು ಹೂ ಮುತ್ತನ್ನಿತ್ತು ಮುಂದೆ ಸಾಗಿದಳು.

-ಇಂದಿರಾ ಮೋಟೆಬೆನ್ನೂರ

***

ಸೊಳ್ಳೆ ಕಾಟ

ಬೆಂಗಳೂರಿನಿಂದ ಭದ್ರಾವತಿಗೆ ಹೊರಡಲು ರೈಲಿನಲ್ಲಿ ಕೂತಿದ್ದೆ. ರೈಲಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದ್ದರಿಂದ ಒಬ್ಬಳೇ ಗೊಣಗುತ್ತಿದ್ದೆ. ಎದುರಿಗೆ ಕುಳಿತಿದ್ದ ಅಜ್ಜಿಯೂ ಒಬ್ಬರೇ ಇದ್ದುದರಿಂದ ನನ್ನೊಂದಿಗೆ ಮಾತು ಆರಂಭಿಸಲು ಹವಣಿಸುತ್ತಿದ್ದರು. ಅಷ್ಟರಲ್ಲಿ ನನ್ನ ಪತಿಯ ಫೋನ್ ಬಂತು. ಅವರಿಗೆ ಉತ್ತರಿಸಿ ಫೋನ್ ಇಡುವುದೇ ತಡ ಅಜ್ಜಿ ‘ಏನಮ್ಮಾ, ಇಷ್ಟು ಸಣ್ಣ ವಿಚಾರವನ್ನೆಲ್ಲ ಪಾಪ ಗಂಡನಿಗೆ ಹೇಳಿ ಏಕೆ ಅವರಿಗೆ ಕಿರಿಕಿರಿ ಕೊಡಬೇಕು?’ ಎಂದರು. ನಮ್ಮ ಮನೆಮಾತು ಕೊಂಕಣಿಯಲ್ಲಿ ನನ್ನ ಪತಿ ‘ರೈಲ್ ಬೆಂಗಳೂರ್ ಸೊಳ್ಳೆವೇ?’ (ರೈಲು ಬೆಂಗಳೂರು ಬಿಟ್ಟಿತಾ?) ಎಂದು ಕೇಳಿದ್ದರು. ಅದಕ್ಕೆ ನಾನು ‘ಹಾ ಸೊಳ್ಳೆ, ಸೊಳ್ಳೆ' (ಹಾ ಬಿಟ್ಟಿತು, ಬಿಟ್ಟಿತು) ಎಂದು ಉತ್ತರಿಸಿದ್ದೆ. ಅದನ್ನ ಅಜ್ಜಿ ಕನ್ನಡದ ಸೊಳ್ಳೆ ಅಂದುಕೊಂಡಿದ್ದರು. 

-ಜಯಮಾಲಾ ಎನ್ ಪೈ

***

(ಮಾರ್ಚ್ ೨೦೨೦ರ ಮಯೂರ ಪತ್ರಿಕೆಯಿಂದ ಸಂಗ್ರಹಿತ)