‘ಮಯೂರ' ಹಾಸ್ಯ - ಭಾಗ ೫೫

‘ಮಯೂರ' ಹಾಸ್ಯ - ಭಾಗ ೫೫

ಆಂಜನೇಯನಿಗೆ ಮಾಸ್ಕ್ !

ಮನೆಯಲ್ಲಿ ಹಟ ಮಾಡುತ್ತಿದ್ದ ಐದೂವರೆ ವರ್ಷದ ಪೋರನನ್ನು ಹೊರಗೆ ಸುತ್ತಾಡಿಸಿಕೊಂಡು ಬರಲು ಕರೆದೊಯ್ದೆ. ಆಗಷ್ಟೇ ಹೊಲದಿಂದ ಹಿಂತಿರುಗುತ್ತಿದ್ದ ಎತ್ತುಗಳ ಬಾಯಿಗೆ ಹಾಕಿರುವ ‘ಮಗಟ' (ಕೆಲಸದ ವೇಳೆ ಎತ್ತುಗಳು, ಬೆಳೆಗೆ ಬಾಯಿ ಹಾಕದಂತೆ ಹೆಣೆದಿರುವ ದುಂಡನೆಯ ವಸ್ತು) ವನ್ನು ನೋಡಿ, ‘ಎತ್ತುಗಳೂ ಮಾಸ್ಕ್ ಹಾಕಿಕೊಂಡಿವೆ' ಎಂದ. ಅವನ ಮಾತಿಗೆ ನಕ್ಕು, ಮುಂದೆ ಆಂಜನೇಯನ ಗುಡಿಗೆ ಹೋದೆವು. ಕೆಲ ನಿಮಿಷಗಳ ಕಾಲ ದೇವರ ಮೂರ್ತಿಯನ್ನು ಗಮನಿಸಿದ ಪೋರ, ‘ಪಾಪ, ಹನುಮಂತನಿಗೆ ಬಿಗಿಯಾದ ಮಾಸ್ಕ್ ಹಾಕಿ ಮುಖ ಹೇಗೆ ಊದಿಕೊಂಡಿದೆ ನೋಡಿ...' ಎಂದಾಗ ಮೂರ್ಛೆ ಹೋಗುವ ಸರದಿ ಅರ್ಚಕರದ್ದಾಗಿತ್ತು.

-ಮಹೇಶ್ವರ ಹುರುಕಡ್ಲಿ

ನಮ್ಮ ಕೈಯಲ್ಲಿ ಏನಿದೆ?

ನಮ್ಮ ಸಂಬಂಧದಲ್ಲಿ ಹಿರಿಯರೊಬ್ಬರು ಇತ್ತೀಚೆಗೆ ತೀರಿಕೊಂಡಿದ್ದರು. ಲಾಕ್ ಡೌನ್ ಸಮಯವಾದುದರಿಂದ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಂತರ ಅವರ ಮನೆಯವರನ್ನು ಮಾತಾಡಿಸಿಕೊಂಡು ಬರೋಣವೆಂದು ಹೋಗಿದ್ದೆವು. ನಾವು ಹೋದ ಸಮಯಕ್ಕೆ ಬೇರೊಂದು ಊರಿನವರು ಕೂಡಾ ಬಂದಿದ್ದರು. ‘ಇಷ್ಟು ಬೇಗ ಸಾಯಬಾರದಿತ್ತು ಅಂತ ನಾವೆಲ್ಲಾ ಅಂದುಕೊಳ್ತೀವಿ. ಆದರೆ ಹಣೆಬರಹದಲ್ಲಿ ಹಾಗೆ ಬರೆದಿರುವಾಗ ಏನು ಮಾಡುವುದು? ಎಲ್ಲ ಭಗವಂತನ ಇಚ್ಛೆ. ನಮ್ಮ ಕೈಯಲ್ಲಿ ಏನಿದೆ?’ ಎಂದು ಗಂಭೀರವಾಗಿ ಅಜ್ಜಿಯೊಬ್ಬರು ಹೇಳುತ್ತಿದ್ದರೆ ಅವರ ಮೊಮ್ಮಗಳು ‘ನಮ್ಮ ಕೈಯಲ್ಲಿ ಮೊಬೈಲ್ ಇದೆ' ಎಂದಳು. ಅಂತಹ ಗಂಭೀರ ಸಮಯದಲ್ಲಿಯೂ ಎಲ್ಲರೂ ಜೋರಾಗಿ ನಗತೊಡಗಿದರು.

-ಶಿವಲೀಲಾ ಸೊಪ್ಪಿಮಠ

‘ಅಟುಳ'

ಸಂಜೆ ಹಾಲು-ಬಿಸ್ಕತ್ ತಿಂದು ಹೋಂವರ್ಕ್ ಮಾಡಲು ಕುಳಿತ ಪಕ್ಕದ ಮನೆಯ ಪುಟ್ಟುಗೆ ‘ಅಟುಳ' ಹೇಗೆ ಬರೆಯುವುದು ಗೊತ್ತಾಗಲಿಲ್ಲ. ತನ್ನ ಅಮ್ಮನಿಗೆ ಕೇಳಿದ. ಅವಳಿಗೂ ಅರ್ಥವಾಗಲಿಲ್ಲ. ಪಕ್ಕದ ಮನೆ ಪದ್ಮಾಗೆ ಕೇಳಿದರು. ಅವರಿಗೂ ಗೊತ್ತಿಲ್ಲ. ನಮ್ಮ ಮನೆಗೆ ಬಂದರು. ನನಗೂ ತಿಳಿಯಲಿಲ್ಲ. ಸಂಜೆ ಅವರಪ್ಪ ಬಂದ ಮೇಲೆ ಅವರಮ್ಮ ‘ರೀ, ಪುಟ್ಟುಗೆ ಅದೇನೊ ಹೋಂವರ್ಕ್ ಹೇಳಿದ್ದಾರೆ. ನನಗೆ ಅದೇನು ಅಂತ ಗೊತ್ತಾಗಲಿಲ್ಲ' ಅಂದರು. ಅಪ್ಪನನ್ನು ಕೇಳಿದ ಪುಟ್ಟು, ‘ಅಟುಳ ಹೇಗೆ ಬರೆಯೋದಪ್ಪ?’ ಎಂದು. ‘ಅದೇನೊ ಅಟುಳ..ನನಗೂ ಗೊತ್ತಿಲ್ಲವಲ್ಲ' ಎಂದ ಅಪ್ಪ ತನ್ನ ಸ್ನೇಹಿತರಿಗೆಲ್ಲಾ ಫೋನ್ ಮಾಡಿ ಕೇಳಿದ. ಯಾರಿಗೂ ಗೊತ್ತಿಲ್ಲ. ಕೊನೆಗೆ ಅವರ ಟೀಚರ್ ಗೆ ಫೋನ್ ಹೋಯಿತು. ‘ಅಯ್ಯೋ ನಿಮ್ಮನೆಯಲ್ಲಿ ಅಟುಳ ಗೊತ್ತಿಲ್ಲವಾ? ಅಮ್ಮ ಅಪ್ಪ ಬಿಎಸ್ಸಿ-ಎಮ್ಮೆಸ್ಸಿ ಅಂತೀರಾ? ‘ಅ' ದಿಂದ ‘ಳ'ವರೆಗೂ, ಅಂದರೆ ‘ಅ ಟು ಳ’ ಹೇಗೆ ಬರೆಯೋದು ಗೊತ್ತಿಲ್ವಾ?’ಎಂದಾಗ ಎಲ್ಲರೂ ಬೆಪ್ಪಾದರು.

-ಜ್ಯೋತಿ ಪರಬತ್

ಒಂದು ಹುಡುಗಿ ಕೊಡಿ !

ದಕ್ಷಿಣ ಕನ್ನಡ ಜಿಲ್ಲೆಯ ನಮ್ಮ ಪರಿಚಯದ ಯುವಕನೊಬ್ಬ ಬಸ್ ಕಂಡಕ್ಟರ್ ಉದ್ಯೋಗಕ್ಕೆ ಆಯ್ಕೆಯಾಗಿದ್ದ. ಅವನನ್ನು ಬೀದರ್ ಜಿಲ್ಲೆಯ ಡಿಪೋಕ್ಕೆ ನೇಮಿಸಿದ್ದರು. ಒಂದು ದಿವಸ ಪ್ರಯಾಣಿಕನೊಬ್ಬ, ಬಸ್ಸಿನಲ್ಲಿ ಕಂಡಕ್ಟರ್ ನಿಗೆ ಹಣ ಕೊಡುತ್ತಾ ‘ಒಂದು ಹುಡುಗಿ ಕೊಡಿ' ಅಂದಿದ್ದಾನೆ. ಅದನ್ನು ಕೇಳಿದ ಕಂಡೆಕ್ಟರ್ ಹುಡುಗ ಕಕ್ಕಾಬಿಕ್ಕಿಯಾಗಿದ್ದಾನೆ ! ಕಂಡಕ್ಟರ್ ನ ಆತಂಕವನ್ನು ಅರಿತ ಇನ್ನೊಬ್ಬ ಪ್ರಯಾಣಿಕ ‘ಸರ್, ಗಾಬರಿಯಾಗಬೇಡಿ ! ಇದೇ ಮಾರ್ಗದಲ್ಲಿ ಮುಂದೆ ಹುಡುಗಿ ಅಂತ ಒಂದೂರಿದೆ. ಅವನು ಅಲ್ಲಿಗೆ ಟಿಕೆಟ್ ಕೇಳ್ತಿದ್ದಾನೆ.’ ಎಂದು ವಿವರಿಸಿದ ಮೇಲೆಯೇ ಕಂಡಕ್ಟರ್ ನಿಗೆ ಸಮಾಧಾನವಾಗಿ ಟಿಕೆಟ್ ಕೊಟ್ಟಿದ್ದು.

-ಕೆ ಜಿ ಭದ್ರಣ್ಣವರ

(‘ಮಯೂರ' ಸೆಪ್ಟೆಂಬರ್ ೨೦೨೦ರಿಂದ ಸಂಗ್ರಹಿತ)