‘ಮಯೂರ' ಹಾಸ್ಯ - ಭಾಗ ೫೬

‘ಮಯೂರ' ಹಾಸ್ಯ - ಭಾಗ ೫೬

ಶಂಡರು!

ಬಹಳ ವರ್ಷಗಳ ಹಿಂದೆ ನಾನು ತೀರ್ಥಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಪ್ರಸಂಗ. ನಮ್ಮ ಕಚೇರಿಯಿಂದ ಅಂಚೆ ಕಚೇರಿಗೆ ಪ್ರತಿದಿನ ಸಾವಿರಾರು ಪತ್ರಗಳು ರವಾನೆಯಾಗುತ್ತಿದ್ದ ಕಾಲವದು. ಒಂದು ದಿನ ಅಂಚೆ ಪೇದೆ ನನ್ನ ಕೈಗೆ ಕೆಲವು ಪತ್ರಗಳನ್ನು ಕೊಟ್ಟು ಸಹಿ ಮಾಡಲು ಕೇಳಿದ. ಅವೆಲ್ಲ ವಿತರಣೆಯಾಗದೆ ಹಿಂದಕ್ಕೆ ಬಂದ ಪತ್ರಗಳು. ಕುತೂಹಲಕ್ಕೆ ಕಾರಣ ಏನಿರಬಹುದೆಂದು ಪತ್ರಗಳ ಹಿಂಭಾಗ ನೋಡಿದೆ. ಅಲ್ಲಿ ‘ಶಂಡರಿಗೆ ಹಿಂದಿರುಗಿಸಲಾಗಿದೆ' ಎಂದು ಬರೆದಿತ್ತು. ಸ್ವಲ್ಪ ಸಮಯ ಯೋಚಿಸಿದ ನಂತರ ಅದು ‘ಸೆಂಡರ್' (Sender) ಎಂಬುದು ಅರ್ಥವಾಯಿತು. ಆದರೆ ಈ ‘ಶಂಡರು' ಯಾರು? ಗ್ರಾಹಕರೋ? ಅಂಚೆ ಇಲಾಖೆಯೋ ಅಥವಾ ನಮ್ಮ ಕಚೇರಿಯೋ? ತಿಳಿಯಲಿಲ್ಲ.

-ವಾ. ಮುರಳೀಧರ

***

ಊಟರಾಜ

ಶಾಲೆಗಳಿಗೆ ರಜೆ ಇರುವ ಕಾರಣ ಎರಡನೇ ತರಗತಿ ಓದುತ್ತಿರುವ ನಮ್ಮ ಮೊಮ್ಮಗಳು ದಿಯಾ ‘ಮಹಾಭಾರತ' ಧಾರಾವಾಹಿ ನೋಡುತ್ತಾ ಕುಳಿತಿದ್ದಳು. ಧಾರಾವಾಹಿ ಮುಗಿದ ನಂತರ ನಾನು ಅವಳಿಗೆ ಭೀಷ್ಮ, ಯುಧಿಷ್ಟಿರ, ಭೀಮರಿಗೆ ಇರುವ ಪರ್ಯಾಯ ಹೆಸರು ಹೇಳುವಂತೆ ಕೇಳಿದೆ. ಅದಕ್ಕವಳು ‘ಭೀಷ್ಮ -ಗಾಂಗೇಯ ; ಯುಧಿಷ್ಟಿರ - ಧರ್ಮರಾಜ ; ಭೀಮ - ಗಧಾಧರ ಮತ್ತು ಊಟರಾಜ' ಎಂದು ಹೆಸರಿಸಿದಳು. ಭೀಮನಿಗೆ ‘ಊಟರಾಜ' ಎಂಬ ಹೆಸರು ಕೇಳಿ ನಾನು ಚಕಿತನಾದೆ. ಅದಕ್ಕವಳು ‘ತಾತಾ, ಭೀಮನ ಊಟದ ರೀತಿ ನೋಡಿದಿರಾ? ಹಿಡಿಂಬೆ ತಂದ ಫಲಗಳಲ್ಲಿ ಮುಕ್ಕಾಲು ಭಾಗ ಭೀಮನೇ ತಿಂದ. ಅದಕ್ಕೇ ಅವನಿಗೆ ‘ಊಟರಾಜ' ಅಂತ ನಾನೇ ಹೆಸರಿಟ್ಟೆ’ ಎಂದಳು.

-ಬಸವರಾಜ ಹುಡೇದಗಡ್ಡಿ

***

ನೋಡಿದಾಗೆಲ್ಲಾ ಎದ್ದು ನಿಂತ !

ನನ್ನ ಮಗ ಓದುವುದರಲ್ಲಿ ಸ್ವಲ್ಪ ಹಿಂದೆ, ಆಟದಲ್ಲಿ ಮುಂದೆ.. ಅದರಲ್ಲೂ ಈಗ ಆನ್ ಲೈನ್ ಕ್ಲಾಸುಗಳು ನಡೆಯುತ್ತಿರುವುದರಿಂದ ಅವನನ್ನು ಸ್ವಲ್ಪ ಎಚ್ಚರಿಸಬೇಕೆಂದುಕೊಂಡು ಒಂದು ದಿನ ‘ನೋಡು ಗಣೇಶ, ನೀನು ಚೆನ್ನಾಗಿ ಓದಬೇಕು, ಜೀವನದಲ್ಲಿ ಗಟ್ಟಿಯಾಗಿ ಎದ್ದು ನಿಲ್ಲಬೇಕು. ಅಂದರೇನೇ ಮರ್ಯಾದೆ' ಎಂದು ಹಲವಾರು ಉದಾಹರಣೆ ಕೊಟ್ಟು ಹೇಳಿದೆ. ಕೆಲ ದಿನಗಳ ನಂತರ ನನ್ನನ್ನು ನೋಡಿದಾಗಲೆಲ್ಲಾ ಆತ ಎದ್ದು ನಿಲ್ಲುವುದನ್ನು ಕಂಡು ನನಗೆ ರೇಗಿ ಹೋಯಿತು. ಕೋಪದಿಂದ ‘ಯಾಕೆ ಹೀಗೆ ಮಾಡುತ್ತೀಯಾ?’ ಎಂದು ಗದರಿಸಿ ಕೇಳಿದೆ. ‘ಅಪ್ಪ, ನೀವೇ ಹೇಳಿದರಲ್ಲ, ಗಟ್ಟಿಯಾಗಿ ಎದ್ದು ನಿಲ್ಲಬೇಕು ಅಂತ' ಎಂದು ಹೇಳಿದಾಗ ನನಗೆ ಕೋಪ ಮಾಯವಾಗಿ ನಗೆಯುಕ್ಕಿತು.

-ಹರವೆಸಂಗಣ್ಣ ಪ್ರಕಾಶ್

***

ಟ್ರಾಫಿಕ್ ಜಾಮ್

ನಮ್ಮ ತರಬೇತಿ ಕೇಂದ್ರದಲ್ಲಿ ಲಾಕ್ ಡೌನ್ ಸಮಯದಲ್ಲಿ ಆನ್ ಲೈನ್ ತರಗತಿಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅದೊಂದು ದಿನ ಮದ್ಯಾಹ್ನ ನನ್ನ ಸಹೋದ್ಯೋಗಿಯೊಬ್ಬರು ಆನ್ ಲೈನ್ ಕ್ಲಾಸ್ ತೆಗೆದುಕೊಂಡಿದ್ದರು. ನಾನು ಅವರ ಪಕ್ಕ ಕುಳಿತು ಬೇರೊಂದು ಕೆಲಸ ಮಾಡುತ್ತಿದ್ದೆ. ಕ್ಲಾಸ್ ಮುಗಿಯುವ ಹಂತಕ್ಕೆ ಬಂದಾಗ ಒಬ್ಬ ವಿದ್ಯಾರ್ಥಿ ಬಂದು ಸೇರಿಕೊಂಡ. ‘ಕ್ಲಾಸ್ ಗೆ ಬರಲು ಯಾಕೆ ತಡವಾಯಿತು?’ ಅಂತ ಕೇಳಿದ್ದಕ್ಕೆ ‘ಟ್ರಾಫಿಕ್ ಇತ್ತು ಸರ್' ಎಂದ. ‘ಆದರೆ ಇದು ಆನ್ ಲೈನ್ ಕ್ಲಾಸ್ ಅಲ್ವಾ?’ ಬಿಡದೇ ಕೇಳಿದಾಗ, ‘ನೆಟ್ ವರ್ಕ್ ಟ್ರಾಫಿಕ್ ಇತ್ತು ಸರ್' ಎಂದ. ಒಂದು ಕ್ಷಣ ನಮ್ಮ ಮಿತ್ರರಿಗೆ ಏನು ಉತ್ತರ ಕೊಡಬೇಕೆಂದೇ ಗೊತ್ತಾಗಲಿಲ್ಲ…

-ಭೋಜರಾಜ ಸೊಪ್ಪಿಮಠ

(ಅಕ್ಟೋಬರ್ ೨೦೨೦ರ ‘ಮಯೂರ' ಪತ್ರಿಕೆಯಿಂದ ಸಂಗ್ರಹಿತ)