‘ಮಯೂರ' ಹಾಸ್ಯ - ಭಾಗ ೫೭

‘ಮಯೂರ' ಹಾಸ್ಯ - ಭಾಗ ೫೭

ಮಗನ ಕನಸು

ನನ್ನ ಮಗ ತೇಜಸ್ ತನಗೆ ಬಿದ್ದ ಕನಸುಗಳನ್ನೆಲ್ಲ ನೆನಪಿಟ್ಟುಕೊಂಡು ಮುಂಜಾನೆದ್ದು ಅವುಗಳನ್ನು ಚಾಚೂ ತಪ್ಪದೇ ಹೇಳಿಬಿಡುತ್ತಾನೆ. ಒಮ್ಮೆ ಹಾಗೆಯೇ ನನ್ನ ಮುಂದೆ ತನ್ನ ಕನಸನ್ನು ಬಿಚ್ಚಿಡುತ್ತಾ, ‘ಅಮ್ಮ, ಇವತ್ತು ನನ್ನ ಕನಸಲ್ಲಿ ನೀನು, ಅಪ್ಪ, ಅಂಜು ಚಿಕ್ಕಮ್ಮ ಎಲ್ಲರೂ ಬಂದಿದ್ರಿ. ನೀನಂತೂ ಎಷ್ಟು ಸ್ಲಿಮ್ ಆಗಿ ಕಾಣಿಸ್ತಾ ಇದ್ದೆ ಗೊತ್ತಾ?’ ಎಂದ.

‘ಹೌದೇನೋ ತೇಜು ! ಛೇ, ಒಂದು ಫೊಟೋ ತಗೀಬಾರ್ದಾ?’ ಎಂದಾಗ ಆತ ‘ಅಮ್ಮ, ಇವತ್ತು ಅದರ ಪಾರ್ಟ್ ೨ ಬಿದ್ದೇ ಬೀಳುತ್ತೆ. ಗ್ಯಾರಂಟಿ ಫೊಟೋ ತೆಗಿತೀನಿ' ಎಂದ. ನಾನು ಈಗಲೂ ಆ ಕನಸಿನ ಎರಡನೇ ಭಾಗದ ನಿರೀಕ್ಷೆಯಲ್ಲಿದ್ದೇನೆ. 

-ಆರತಿ ಘಟಿಕಾರ್

***

ಕಂಬಳಿಹುಳು

ಹದಿನೈದು ದಿನಗಳಿಂದ ನಮ್ಮ ಪ್ರದೇಶದ ಎಲ್ಲಾ ಮನೆಗಳಲ್ಲಿ ಕಂಬಳಿಹುಳುಗಳು ಕಾಣಿಸಿಕೊಳ್ಳುತ್ತಿದ್ದವು. ಮರದಿಂದ ಉದುರಿದ್ದ ಎಲೆಗಳಿಂದ ಅವುಗಳನ್ನು ತೆಗೆದು ಕಂಪೌಂಡ್ ಆಚೆಗೆ ಎಸೆಯುತ್ತಿದ್ದೆವು. ಪಕ್ಕದ ಮನೆಯ ಎರಡು ವರ್ಷದ ಪೋರ ವಜ್ರಾಂಶು ಸಹ ತಮ್ಮ ಕಂಪೌಂಡ್ ನಲ್ಲಿನ ಹುಳಗಳನ್ನು ಹುಡುಕಿ ಅವರಜ್ಜನಿಂದ ಅದನ್ನು ಬಿಡದೆ ತೆಗೆಸಿಹಾಕುತ್ತಿದ್ದ. ಒಂದಿನ ತನ್ನ ಪುಸ್ತಕ ಒಂದನ್ನು ತಂದು ತೋರಿಸುತ್ತಿದ್ದ. ಚೆಂಡು (ಆಡುವುದು), ಗಿಟಾರ್ (ನುಡಿಸುವುದು) ಎಂದೆಲ್ಲಾ ಹೇಳಿದವನು ಒಂದು ಕಡೆ ಎಲೆಗಳ ಚಿತ್ರ ಕಂಡೊಡನೆ ‘ಎಲೆ-ಕಂಬಳಿಹುಳ ತೆಗೆದು ಹಾಕುವುದು' ಎಂದ. ಎಲೆಯ ಕೆಲಸವೇ ಅದು ಎಂಬಂತೆ ಅವನು ಹೇಳಿದ ರೀತಿಗೆ ನಮಗೆಲ್ಲಾ ನಗು ಬಂತು.

-ತಲಕಾಡು ಶ್ರೀನಿಧಿ

***

ಐರನ್ ಡೆಫಿಷಿಯೆನ್ಸಿ !

ರಜೆಯಲ್ಲಿ ಊರಿಗೆ ಹೋಗಿದ್ದಾಗ ಹಳ್ಳಿ ಹುಡುಗನೊಬ್ಬ ಊರಿನ ಜಾತ್ರೆಗೆ ಸುಕ್ಕಾದ ಅಂಗಿ ಧರಿಸಿ ಬಂದಿರುವುದನ್ನು ಗಮನಿಸಿದೆ. ಜೊತೆಗಿದ್ದ ಮಗಳು ಪುಟ್ಟಿಗೆ ‘ನೋಡಲ್ಲಿ ಆ ಹುಡುಗನನ್ನು, ಬಟ್ಟೆಗೆ ಐರನ್ ಹಾಕಲೂ ಅವನ ಬಳಿ ಹಣವಿಲ್ಲ' ಎನ್ನುತ್ತಾ ಹಳ್ಳಿಯ ಸ್ಥಿತಿಗತಿಯ ಬಗ್ಗೆ ವಿವರಿಸಿದೆ.

ವಿಜ್ಞಾನ ತರಗತಿಯಲ್ಲಿ ಕಬ್ಬಿಣದ ಪೋಷಕಾಂಶ ಕಡಿಮೆ ಇದ್ದರೆ ದೇಹ ಬೇಗನೇ ಸುಕ್ಕುಗಟ್ಟುತ್ತದೆ ಎನ್ನುವುದನ್ನು ಕಲಿತಿದ್ದ ಪುಟ್ಟಿ ತಕ್ಷಣ ಉದ್ಗರಿಸಿದಳು ‘ಇಲ್ಲಪ್ಪಾ, ಆ ಹುಡುಗನಿಗೆ ಐರನ್ ಡೆಫಿಷಿಯನ್ಸಿ ಇದೆ. ಹೀಗಾಗಿ ಅವನ ದೇಹವೂ ಸುಕ್ಕಾಗಿದೆ. ಮೊದಲು ಅದನ್ನು ನೋಡಿ' ಎಂದಳು. ನಾನು ಮೂಕವಿಸ್ಮಿತನಾದೆ.

-ರಮಣ್ ಶೆಟ್ಟಿ ರೆಂಜಾಳ್

***

ಸಿಟ್ ಆಗಿ…

ಪುಟ್ಟ ಸೃಷ್ಟಿ ಓದುತ್ತಿರುವುದು ಹೆಸರಾಂತ ಕಾನ್ವೆಂಟ್ ಶಾಲೆಯಲ್ಲಿ. ಕೊರೊನಾದಿಂದ ಶಾಲೆಗಳು ಮುಚ್ಚಿದ ಕಾರಣ ಆನ್ ಲೈನ್ ನಲ್ಲಿ ಕನ್ನಡ ಪಾಠ ನಡೆಯುತ್ತಿತ್ತು. ಕನ್ನಡ ಪಾಠ ನಡೆಯುತ್ತಿರುವಾಗ ಕನ್ನಡದಲ್ಲೇ ಮಾತನಾಡಬೇಕೆಂದು ಹೇಳಿದ್ದೆ. ಒಮ್ಮೆ ಪಾಠ ನಡೆಯುತ್ತಿದ್ದಾಗ ಮಧ್ಯದಲ್ಲೇ ‘ಸಿಟ್ ಆಗಿ ತುಂಬಾ ಹೊತ್ತಾಯ್ತು' ಎಂದು ಹೇಳಿದವಳೇ ಇಯರ್ ಫೋನ್ ತೆಗೆದಿಟ್ಟು ಒಂದು ಕ್ಷಣ ಮರೆಯಾದಳು. ಅವಳಿಗ್ಯಾಕೆ ಸಿಟ್ಟು ಬಂತು ಅಂತ ನಾನು ಯೋಚಿಸಿದೆ. ಸ್ವಲ್ಪ ಸಮಯದ ನಂತರ ಮತ್ತೆ ಬಂದು ತನ್ನ ಕುರ್ಚಿಯಲ್ಲಿ ಕುಳಿತಳು. ಆಗ ನನಗೆ ಹೊಳೆಯಿತು. ಸೃಷ್ಟಿಗೆ ಕನ್ನಡದ ಸಿಟ್ಟು ಬಂದಿರಲಿಲ್ಲ. ತುಂಬಾ ಹೊತ್ತು ಕುಳಿತುಕೊಂಡಿರುವುದರಿಂದ ಆಕೆಗೆ ವಿರಾಮ ಬೇಕಿತ್ತು !

-ವಿದ್ಯಾ ವಿ. ಹಾಲಭಾವಿ

(‘ನವೆಂಬರ್ ೨೦೨೦ರ ‘ಮಯೂರ' ಸಂಚಿಕೆಯಿಂದ)