‘ಮಯೂರ' ಹಾಸ್ಯ - ಭಾಗ ೫೮

‘ಮಯೂರ' ಹಾಸ್ಯ - ಭಾಗ ೫೮

ಬಾವಿಯಲ್ಲಿ ಬಿದ್ರೆ ಯೇಳ್ರೀ…

ನಾನು ಚಿಕ್ಕವನಿದ್ದಾಗ ರಜೆ ಕಳೆಯಲು ತಮಿಳುನಾಡಿನಿಂದ ಬೆಂಗಳೂರಿನಲ್ಲಿದ್ದ ನಮ್ಮ ದೊಡ್ಡಪ್ಪನ ಮನೆಗೆ ಬಂದಿದ್ದೆವು. ನಾವು ಮಾತನಾಡುವ ಕನ್ನಡಕ್ಕೂ ಬೆಂಗಳೂರಿನ ಕನ್ನಡಕ್ಕೂ ವ್ಯತ್ಯಾಸವಿತ್ತು. ಒಂದು ದಿನ ರಸ್ತೆಯಲ್ಲಿ ಒಬ್ಬ ‘ಬಾವಿಯಲ್ಲಿ ಬಿದ್ದರ ಯೇಳ್ರೀ..' ಎಂದು ಕೂಗುತ್ತಾ ಹೊರಟಿದ್ದ. ಅವನ ಮಾತು ಕೇಳಿ ನಮಗೆಲ್ಲಾ ಅಚ್ಚರಿಯೂ, ಗಾಬರಿಯೂ ಆಯ್ತು. ನನ್ನ ತಾಯಿ, ‘ಏನಿದು ವಿಚಿತ್ರ? ಬಾವಿಯಲ್ಲಿ ಬಿದ್ದವರು ಏಳಿರಿ ಅಂತ ಕೂಗುತ್ತಿದ್ದಾನೆ ಈತ?’ ಎಂದು ಕೇಳಿದರು. ನನ್ನ ದೊಡ್ದಮ್ಮ ಹೇಳಿದರು. ‘ಅವರು ಬಾವಿಯಲ್ಲಿ ಬಿದ್ದ ವಸ್ತುಗಳನ್ನು ತೆಗೆದುಕೊಡುವವರು. ಅದಕ್ಕೆ ಬಾವಿಯಲ್ಲಿ ಏನಾದ್ರೂ ಬಿದ್ದಿದ್ದರೆ ಹೇಳಿ ಅಂತ ಕೂಗುತ್ತಾ ಬರುತ್ತಾರೆ.’ ಅಂತ ಬಿಡಿಸಿ ಹೇಳಿದ ಮೇಲೆಯೇ ನಾವೆಲ್ಲಾ ನಿರಾಳವಾದದ್ದು.

-ಬಿ ಎನ್ ನರಸಿಂಹ ಮೂರ್ತಿ

***

ಹೃದಯಸ್ಪರ್ಶಿ ವಿದಾಯ !

ಕನ್ನಡ ಬಾರದ ಅಧಿಕಾರಿಯೊಬ್ಬರು ನಮ್ಮ ಜೊತೆ ಕೆಲವು ವರ್ಷ ಕೆಲಸ ಮಾಡಿ ಸಹೋದ್ಯೋಗಿಗಳ ಮನ ಗೆದ್ದಿದ್ದರು. ತುಂಬಾ ಒಳ್ಳೆಯವರು. ಅವರಿಗೆ ಕೆಲ ವರ್ಷಗಳ ನಂತರ ಬೇರೆ ಕಡೆ ವರ್ಗವಾಯಿತು. ಬೀಳ್ಕೊಡುಗೆ ಸಮಾರಂಭದಲ್ಲಿ ಅವರ ಬಗ್ಗೆ ಇಂಗ್ಲಿಷ್ ನಲ್ಲಿ ಯಾರಾದರೂ ಮಾತನಾಡಬೇಕಿತ್ತು. ನಾವೆಲ್ಲಾ ಕನ್ನಡ ಪಂಡಿತರು. ಹೀಗಾಗಿ ಅದನ್ನು ನಮ್ಮ ಮ್ಯಾನೇಜರ್ ಗೆ ವಹಿಸಿಕೊಡಬೇಕಾಯ್ತು. ಅವರೊ ಮ್ಯಾನೇಜರ್ ಆಗಿದ್ದರಿಂದ ಮಾತನಾಡಲೇಬೇಕಾಯ್ತು. ಸಮಾರಂಭದ ಕೊನೆಯಲ್ಲಿ ಅವರ ಬಗ್ಗೆ ಎರಡೇ ಎರಡು ಮಾತುಗಳನ್ನು ಹೇಳಿದರು. ‘ಟುಡೇ ವಿ ಆರ್ ಲೂಸಿಂಗ್ ಎ ಮ್ಯಾನ್ ವಿದ್ ಎನ್ ಲಾರ್ಜ್ ಡ್ ಹಾರ್ಟ್' (Today we are loosing a man with enlarged heart) ಎಂದಾಗ ಆ ಅಧಿಕಾರಿ ಪ್ರಜ್ಞೆ ತಪ್ಪಿ ಬೀಳೊದೊಂದು ಬಾಕಿ !

-ವಾ. ಮುರಳೀದರ

***

ಬಕ್ರಿ...ಭಕ್ಕರಿ…

ಪತಿಯ ಉದ್ಯೋಗದ ನಿಮಿತ್ತ ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಇದ್ದೆವು. ಕೆಲದಿನಗಳ ನಂತರ ಅಷ್ಟಿಷ್ಟು ಮರಾಠಿ ಕಲಿತೆ. ಅದನ್ನು ಮನೆ ಮಾಲೀಕರ ಮಗಳ ಮುಂದೆ ಪ್ರಯೋಗಿಸುತ್ತಿದ್ದೆ. ಒಂದು ದಿನ ರಾತ್ರಿ ಅಡುಗೆ ತಯಾರಿಯಲ್ಲಿದ್ದೆ. ಹೊರಗೆ ನನ್ನ ಮಗಳೊಂದಿಗೆ ಆಟವಾಡುತ್ತಿದ್ದ ಮಾಲೀಕರ ಮಗಳು ಕಿಟಕಿಯಲ್ಲಿ ಇಣುಕಿ ‘ಏನಡುಗೆ ಮಾಡ್ತಿದೀರಾ?’ ಎಂದು ಕೇಳಿದಳು. ‘ಭಕ್ಕರಿ, ಭಾಜಿ ಮಾಡ್ತಾ ಇದೀನಿ' ಎಂದೆ ಮರಾಠಿಯಲ್ಲಿ.

ಮರುದಿನ ಬೆಳಿಗ್ಗೆ ಮನೆ ಮಾಲೀಕರ ತಾಯಿ ನನ್ನನ್ನು ಕಂಡವರೇ ಜೋರುಜೋರಾಗಿ ಮರಾಠಿಯಲ್ಲಿ ಏನೇನೋ ಹೇಳಲಾರಂಭಿಸಿದರು. ಆಗ ನೆರವಿಗೆ ಬಂದ ಅವರ ಸೊಸೆ ‘ಬ್ರಾಹ್ಮಣರಾಗಿ ಮಾಂಸ ತಿನ್ನುತ್ತೀರಾ?’ ಎಂದು ಕೇಳುತ್ತಿದ್ದಾರೆ ಅತ್ತೆ ಎಂದರು ಮುಜುಗರದಿಂದ. ನಾನು ಕಕ್ಕಾಬಿಕ್ಕಿಯಾದೆ. ಹಿಂದಿನ ದಿನ ನಮ್ಮ ಮನೆಯಿಂದ ಹೋದ ಅವರ ಮಗಳು ‘ಆಂಟಿ ಊಟಕ್ಕೆ ಬಕ್ರಿ ತಯಾರಿ ಮಾಡುತ್ತಿದ್ದರು. ಎಂದಿದ್ದಳಂತೆ. ‘ನಾನು ಭಕ್ಕರಿ (ಜೋಳದ ರೊಟ್ಟಿ) ಎಂದಿದ್ದು, ಬಕ್ರಿ (ಕುರಿ) ಅಲ್ಲ' ಎಂದು ವಿವರಿಸಿದೆ.

-ಮೇಧಾ ಭಟ್

***

ಟಾಯ್ಲೆಟ್ ನಲ್ಲಿದ್ದಾರೆ

ಮೊಬೈಲ್ ಫೋನ್ ಗಳು ಆಗ ತಾನೇ ಕಾಲಿಟ್ಟ ಸಮಯ. ಗೆಳೆಯನೊಬ್ಬನ ಮೊಬೈಲಿಗೆ ಕರೆ ಮಾಡಿದಾಗ ಪದೇ ಪದೇ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂದೇ ಬರುತ್ತಿತ್ತು. ಆತನ ಸ್ಥಿರ ದೂರವಾಣಿಗೆ ಕರೆ ಮಾಡಿ ವಿಚಾರಿಸಿದೆ. ಅವನ ಪತ್ನಿ ‘ಟಾಯ್ಲೆಟ್ ಒಳಗಿದ್ದಾರೆ' ಎಂದರು. ಆಮೇಲೆ ನಾಲ್ಕಾರು ಸಲ ಫೋನ್ ಮಾಡಿದಾಗಲೂ ಇದೇ ಉತ್ತರ ಬಂತು. ‘ಯಾಕೆ ಟಾಯ್ಲೆಟ್ ನಿಂದ ಹೊರಗೆ ಬರ್ತಾ ಇಲ್ಲ? ಏನಾದರೂ ಸಮಸ್ಯೆ ಇದೆಯಾ? ಎಂದು ಕೇಳಿದೆ. ಆಕೆ ‘ಹಾಗೇನಿಲ್ಲ, ಅವರು ಹೊಸ ಮೊಬೈಲ್ ತಕೊಂಡಿದ್ದಾರೆ. ಅದನ್ನು ಗೆಳೆಯರಿಗೆಲ್ಲಾ ಹೇಳಬೇಕು. ಆದರೆ ಟಾಯ್ಲೆಟ್ ಒಳಗೆ ಮಾತ್ರ ಒಮ್ಮೊಮ್ಮೆ ಸ್ವಲ್ಪ ಸಿಗ್ನಲ್ ಸಿಗುತ್ತೆ. ಅದಕ್ಕೆ ಅಲ್ಲೇ ಕುಳಿತುಕೊಂಡು ಫೋನ್ ಮಾಡ್ತಾ ಇದ್ದಾರೆ.’ ಎಂದಳು !

-ಪ. ರಾಮಕೃಷ್ಣ ಶಾಸ್ತ್ರಿ

***

(ಮಯೂರ ಡಿಸೆಂಬರ್ ೨೦೨೦ರ ಸಂಚಿಕೆಯಿಂದ ಸಂಗ್ರಹ)