‘ಮಯೂರ' ಹಾಸ್ಯ - ಭಾಗ ೫೯

‘ಮಯೂರ' ಹಾಸ್ಯ - ಭಾಗ ೫೯

ಪಾಸಿಟಿವ್ ಆದ್ರೆ…

ಮನೆಯಲ್ಲಿ ನಾನು ನನ್ನ ಹೆಂಡತಿ ಮಾತನಾಡುತ್ತಾ ಕುಳಿತಿದ್ದೆವು. ‘ನೋಡು, ನೀನು ಸಣ್ಣ ಸಣ್ಣ ವಿಚಾರಗಳಿಗೆಲ್ಲಾ ತಲೆ ಕೆಡಿಸಿಕೊಳ್ಳಬೇಡ, ಯಾವಾಗಲೂ ಪಾಸಿಟಿವ್ ಆಗಿರಬೇಕು' ಎಂದು ಹೇಳುತ್ತಿದ್ದೆ. ಅಷ್ಟರಲ್ಲಿ ರೂಮಿನಲ್ಲಿ ಆಟ ಆಡುತ್ತಿದ್ದ ಐದಾರು ವರ್ಷದ ನಮ್ಮ ಮೊಮ್ಮಗಳು ಓಡಿ ಬಂದು, ‘ಅಜ್ಜಾ, ಆ ತರಹ ಎಲ್ಲಾ ಹೇಳಬಾರದು, ಈಗ ಪಾಸಿಟಿವ್ ಅಲ್ಲಾ, ನೆಗೆಟಿವ್ ಆಗಿದ್ರೆ ಒಳ್ಳೇದು. ಪಾಸಿಟಿವ್ ಆದರೆ ಕೊರೋನಾ ಬರುತ್ತೆ. ತಿಳ್ಕೋ.ಇನ್ನೊಂದು ಸಲ ಯಾರಿಗೂ ಪಾಸಿಟಿವ್ ಅಂತ ಹೇಳಲೇ ಬೇಡ. ಗೊತ್ತಾಯ್ತಾ?’ ಅಂತ ಬುದ್ಧಿ ಹೇಳಿ ಮತ್ತೆ ತನ್ನ ಆಟ ಮುಂದುವರೆಸಲು ತನ್ನ ರೂಮಿಗೆ ಓಡಿ ಹೋದಳು. 

-ವೈ ಎಸ್ ನಾಗರಾಜ

***

ಆನಿ'

ನಾನಾಗ ತುಂಗಭದ್ರಾ ಗ್ರಾಮೀಣ ಬ್ಯಾಂಕಿನಲ್ಲಿ (ಈಗಿನ ಕರ್ನಾಟಕ ಗ್ರಾಮೀಣ ಬ್ಯಾಂಕ್) ಕೆಲಸ ಮಾಡುತ್ತಿದ್ದೆ. ಬಳ್ಳಾರಿ ಜಿಲ್ಲೆಯವನಾದ ನಾನು ಉದ್ಯೋಗ ಮಾಡುತ್ತಿದ್ದುದು ಬ್ಯಾಂಕಿನ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಹಳ್ಳಿಯೊಂದರ ಶಾಖೆಯಲ್ಲಿ. ಬ್ಯಾಂಕಿನಲ್ಲಿ ನಾವು ಮೂವರು ಸಹೋದ್ಯೋಗಿಗಳು ಒಂದೇ ಸಾಲಿನಲ್ಲಿ ಕುಳಿತುಕೊಂಡಿದ್ದೆವು. ಆಗ ನಮ್ಮ ಮ್ಯಾನೇಜರ್ ಜೊತೆಗೆ ಮಾತನಾಡುತ್ತಿದ್ದ ಗ್ರಾಹಕರೊಬ್ಬರು ‘ಆನಿ, ಆನಿ, ಎಂದು ಚೀರಿದಂತೆ ಕೇಳಿತು. ‘ಆ ಕಡೆ ಓಡಿ ಹೋಗಿ ನೋಡಿದರೆ ಅಲ್ಲಿ ಏನೂ ಕಾಣಲಿಲ್ಲ. ಮತ್ತೆ ಒಳಗೆ ಬಂದು ಕುಳಿತೆ. ಸಹೋದ್ಯೋಗಿ ಮಿತ್ರರು. ‘ಯಾಕೆ ಓಡಿ ಹೋಗಿ ನೋಡಿದಿರಿ?’ ಎಂದರು. ‘ಏನಿಲ್ಲಾ, ಆ ಮನುಷ್ಯ ಆನಿ, ಆನಿ.. ಎಂದು ಚೀರಿದಂತಾಯ್ತು. ಆನೆ ಬಂತೇನೋ ಎಂದು ಓಡಿ ಹೋಗಿದ್ದೆ.’ ಎಂದಾಗ ಎಲ್ಲರೂ ನಕ್ಕಿದ್ದೇ ನಕ್ಕಿದ್ದು. ರಾಯಚೂರು ಜಿಲ್ಲೆಯಲ್ಲಿ ‘ಏನು? ಎನ್ನಲು ‘ಆನಿ', ‘ಆನೆಪ್ಪಾ?’ “ಆನೆವ್ಯಾ” ಎನ್ನುತ್ತಾರಂತೆ. ಆ ವ್ಯಕ್ತಿಯ ಧ್ವನಿಯಲ್ಲಿ ‘ಆನಿ' ಎಂಬ ಪದ ಕೇಳಿ ಆನೆಯೇ ಬಂತೆಂದು ಭಾವಿಸಿದ್ದೆ.

-ಪ್ರಕಾಶ್ ಮಲ್ಕಿಒಡೆಯರ್

***

ಮಂಗಳೂರು ಬೋಂಡ

ಮೂಲತಃ ಮಂಗಳೂರಿನವನಾದ ನಾನು ಮೂರು ದಶಕಗಳ ಹಿಂದೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದೆ. ನನ್ನ ಸಹೋದ್ಯೋಗಿಯೊಬ್ಬರಿಗೆ ಆಹಾರದಲ್ಲಿ ವ್ಯತ್ಯಾಸವಾಗಿ ಹೊಟ್ಟೆ ಕೆಟ್ಟಿತ್ತು. ‘ಇವತ್ತು ಮನೆಗೆ ಹೋಗುತ್ತಾ ದಾರಿಯಲ್ಲಿ ಒಂದು ಬೊಂಡ ಸೇವಿಸಿಬಿಡು. ಎಲ್ಲಾ ಸರಿಯಾಗುತ್ತೆ' ಎಂದು ನಾನು ಸುಲಭೋಪಾಯ ತಿಳಿಸಿದೆ. ಮರುದಿನ ಆತ ಕೆಲಸಕ್ಕೆ ಹಾಜರಾಗಲಿಲ್ಲ. ಏನಾಯಿತೆಂದು ಫೋನಾಯಿಸಿದೆ. ‘ನಿನ್ನಿಂದಾಗಿ ನನ್ನ ಹೊಟ್ಟೆ ಮತ್ತಷ್ಟು ಕೆಟ್ಟು ಹೋಗಿದೆ. ನೀನು ಹೇಳಿದೆ ಅಂತ ದಾರಿಯಲ್ಲಿ ಬಿಸಿ ಬಿಸಿ ಬೋಂಡಾ ತಿಂದೆ. ನೋವು ಜಾಸ್ತಿಯಾಯಿತು.’ ಎಂದ. ಮಂಗಳೂರಿನ ಆಡುಭಾಷೆಯಲ್ಲಿ ಎಳನೀರಿಗೆ ‘ಬೊಂಡ' ಎನ್ನುತ್ತಾರೆ ಆದರೆ, ಆತ ತಿಂದ ಬೆಂಗಳೂರಿನ ಬೋಂಡ ಅನಾಹುತ ಮಾಡಿತ್ತು.

-ರಮಣ್ ಶೆಟ್ಟಿ ರೆಂಜಾಳ್

***

ಕೊರೊನಾ ಎಫೆಕ್ಟ್

ಪರಿಚಿತ ಕುಟುಂಬದ ಬಾಲಕನೊಬ್ಬ ಹಲವು ತಿಂಗಳುಗಳ ನಂತರ ಭೇಟಿಯಾದ. ತಕ್ಷಣಕ್ಕೆ ಆತನ ಗುರುತೇ ಸಿಗಲಿಲ್ಲ. ಏಕೆಂದರೆ ಈ ಹಿಂದೆ ‘ಗೋಧಿ ಬಣ್ಣ, ಸಾಧಾರಣ ಮೈಕಟ್ಟು’ ಹೊಂದಿದವನು ಈಗ ಏಕಾಏಕಿ ‘ಶ್ವೇತ ವರ್ಣ' ಅಸಾಧಾರಣ ಮೈಕಟ್ಟು ಆಗಿ ಬದಲಾವಣೆಗೊಂಡಿದ್ದ. ಉಭಯಕುಶಲೋಪರಿಯ ನಂತರ ಕುತೂಹಲ ತಾಳಲಾಗದೇ, ‘ಡಿಢೀರ್ ಬದಲಾವಣೆಗೆ ಕಾರಣವೇನು?’ ಎಂದು ಕೇಳಿದೆ. ನನ್ನ ಮಾತನ್ನು ಅರ್ಧದಲ್ಲೇ ತುಂಡರಿಸಿ ಆತ ಹೇಳಿದ. ‘ಅಯ್ಯೋ ಏನಿಲ್ಲ ಅಣ್ಣಾ, ಕೊರೊನಾ ಇರೋದ್ರಿಂದ ಅಪ್ಪಾಜಿ, ಅಮ್ಮ ನನ್ನನ್ನು ೫-೬ ತಿಂಗಳಿಂದ ಮನೆ ಬಿಟ್ಟು ಹೊರಗೇ ಕಳಿಸಿಲ್ಲ. ಅಂಗಳಕ್ಕೆ ಕಾಲಿಟ್ಟು ಆರು ತಿಂಗಳಾಯ್ತು. ಬಿಸಿಲೇ ನೋಡಿಲ್ಲ. ಅದಕ್ಕೆ ಹೀಗಾಗಿದ್ದೀನಿ; ಎಂದಾಗ ಪ್ರಜ್ಞೆ ತಪ್ಪಿ ಬೀಳೋ ಸರದಿ ನನ್ನದಾಗಿತ್ತು.

-ಮಹೇಶ್ವರ ಹುರುಕಡ್ಲಿ

***

ಕೃಪೆ: ಮಯೂರ ಜನವರಿ ೨೦೨೧