‘ಮಯೂರ' ಹಾಸ್ಯ (ಭಾಗ - ೫)

‘ಮಯೂರ' ಹಾಸ್ಯ (ಭಾಗ - ೫)

ಬೇಸ್ತು?

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ ಕದರಿ ಲಕ್ಷ್ಮೀನರಸಿಂಹ ಸ್ವಾಮಿ ನಮ್ಮ ಮನೆ ದೇವರು. ಕಳೆದ ತಿಂಗಳು ನಮ್ಮ ಕುಟುಂಬದವರೆಲ್ಲರೂ ತುಮಕೂರಿನಿಂದ ಕಾರಿನಲ್ಲಿ ಸ್ವಾಮಿಯ ದರ್ಶನಕ್ಕೆ ಹೋಗಿದ್ದೆವು. ಸ್ವಾಮಿಯ ದರ್ಶನ ಮಾಡಿದ ನಂತರ ಪ್ರಸಾದ ಸ್ವೀಕರಿಸಿ, ಕದರಿ ಪಟ್ಟಣದ ಪೇಟೆ ಬದಿಯಲ್ಲಿ ನಡೆದು ಬರುತ್ತಿದ್ದಾಗ ನಾಲ್ಕಾರು ಕಡೆ ಹಲಸಿನ ಹಣ್ಣಿನ ರಾಶಿಯನ್ನು ಕಂಡೆವು. ನನ್ನ ಮಗ ಆಂಧ್ರಪ್ರದೇಶದ ಹಲಸಿನ ಹಣ್ಣುಗಳ ರುಚಿ ನೋಡ ಬಯಸಿ, ಒಬ್ಬನ ಬಳಿ ಚೌಕಾಶಿ ಮಾಡಿ ೮೦ ರೂ. ಗಳಿಗೆ ಒಂದು ಹಲಸಿನ ಹಣ್ಣನ್ನು ಕೊಂಡನು. ನಂತರ ನನ್ನ ಮಗ ವ್ಯಾಪಾರಿಯನ್ನು ಕುರಿತು ‘ಈ ಹಣ್ಣುಗಳನ್ನು ಇಲ್ಲೇ ಬೆಳೆದಿದ್ದಾ?’ ಎಂದು ಕೇಳಿದ. ಅದಕ್ಕೆ ವ್ಯಾಪಾರಿ ‘ಅಲ್ಲಾ ಸ್ವಾಮಿ, ಕೊಂಡದ್ದು' ಎಂದ. 'ಎಲ್ಲಿ ಕೊಂಡದ್ದು?’ ಎಂದು ನನ್ನ ಮಗ ಕೇಳಿದಾಗ ವ್ಯಾಪಾರಿ. ‘ತುಮಕೂರು ಕಡೆಯಿಂದ ಕೊಂಡದ್ದು' ಎಂದಾಗ ನಾವೆಲ್ಲರೂ ಜೋರಾಗಿ ನಕ್ಕೆವು. ತುಮಕೂರಿನವರಾದ ನಾವು ದೂರದ ಕದರಿಗೆ ಹೋಗಿ ನಮ್ಮೂರಿನ ಹಣ್ಣನ್ನೇ ಹೆಚ್ಚು ಬೆಲೆ ತೆತ್ತು ಕೊಂಡಿದ್ದೆವು!

-ಜಿ. ಅನಂತನಾರಾಯಣ ಸ್ವಾಮಿ, ತುಮಕೂರು

***

ನಮ್ಮ ಡ್ಯಾಡಿ ವೈಫ್!

ತಂಗಿಯ ಮಗ ಎಂಟು ವರ್ಷದ ವರುಣ್ ಬಹಳ ಚೂಟಿ. ಯಾರೇ ಮಾತನಾಡಿಸಿದರೂ ಅಂಜಿಕೆಯಿಲ್ಲದೆ, ಅರಳು ಹುರಿದಂತೆ ಮಾತನಾಡುತ್ತಾನೆ. ಇತ್ತೀಚೆಗೆ ಆತನ ತಂದೆಗೆ ವರ್ಗಾವಣೆಯಾದ ಹಿನ್ನಲೆಯಲ್ಲಿ ಅವನ ಶಾಲೆಯನ್ನು ಬದಲಾಯಿಸಲಾಗಿತ್ತು. ಅಲ್ಲಿನ ಶಿಕ್ಷಕಿ, ಹೊಸದಾಗಿ ಶಾಲೆಗೆ ಸೇರಿದ್ದ ವರುಣ್ ನನ್ನು ಮಾತಿಗೆಳೆದು ಆತನ ತಂದೆ, ತಾಯಿ, ಮೊದಲು ಓದಿದ ಶಾಲೆ ಮುಂತಾದುವುಗಳ ಬಗ್ಗೆ ಕೇಳಿದ್ದರು. ಮಾತಿನ ಮಧ್ಯದಲ್ಲಿ ಬಂದ ‘ವರುಣ್, ನಿಮ್ಮ ತಾಯಿ ಹೌಸ್ ವೈಫಾ? ಎಂಬ ಶಿಕ್ಷಕಿಯ ಪ್ರಶ್ನೆಗೆ ನಮ್ಮ ವರುಣ್ ಉತ್ತರಿಸಿದ್ದೇನು ಗೊತ್ತಾ? ‘ಇಲ್ಲ ಮ್ಯಾಮ್, ಅಮ್ಮ ನಮ್ಮ ಡ್ಯಾಡಿ ವೈಫ್' ಎಂದು!.

ಒಮ್ಮೆ ದಾರಿಯಲ್ಲಿ ಸಿಕ್ಕ ಶಿಕ್ಷಕಿ ಈ ಬಗ್ಗೆ ನಮಗೆ ತಿಳಿಸಿದಾಗ ನಮಗೆಲ್ಲಾ ನಗುವೋ ನಗು. 

-ಡಾ.ವಿನಯ ಶ್ರೀನಿವಾಸ್, ಶಿವಮೊಗ್ಗ

***

ಉತ್ತರವಿಲ್ಲದ ಪ್ರಶ್ನೆ!

ಈಗಿನ ಮಕ್ಕಳೇ ಹಾಗೆ. ವಿಪರೀತ ಚೂಟಿ. ಏನಾದರೂ ಉಪದೇಶ ಮಾಡಿದರೆ ಅದಕ್ಕೆ ಪ್ರತಿಯಾಗಿ ಅವರಿಂದ ಉತ್ತರವೇ ಇಲ್ಲದ ಪ್ರಶ್ನೆ ಇದ್ದದ್ದೇ. ಮೊನ್ನೆ ಹಾಗೇ ಆಯಿತು. ಪಕ್ಕದ ಮನೆಯ ಯುಕೆಜಿಗೆ ಪಾದಾರ್ಪಣೆ ಮಾಡುತ್ತಿರುವ ತುಂಟ ಪೋರ ಆಯುಷ್ ಗೆ ನನ್ನ ಹೆಂಡತಿ ‘ಮರೀ, ಗಿಡಗಳ ಎಲೆ ಹರಿಯಬಾರದು, ಟೊಂಗೆ ಮುರಿಯಬಾರದು. ಹೂವು ಕೀಳಬಾರದು. ಗಿಡಕ್ಕೆ ನೋವಾಗುತ್ತದೆ’ ಎಂದು ಪೂರ್ತಿ ಹೇಳಿಯೂ ಮುಗಿದಿರಲಿಲ್ಲ. ‘ಹಾಗಾದರೆ ನೀವು ಪ್ರತೀದಿನ ಗಿಡದಿಂದ ಕರಿಬೇವಿನ ಎಲೆಗಳನ್ನು ಕೀಳುತ್ತೀರಲ್ಲ! ಅದು ಸರಿಯೇ?’ ಎಂದ.

-ದೇವಿದಾಸ ಸುವರ್ಣ

***

(ಮಯೂರ ಸೆಪ್ಟೆಂಬರ್ ೨೦೧೬ ಸಂಚಿಕೆಯಿಂದ ಸಂಗ್ರಹಿತ)