‘ಮಯೂರ' ಹಾಸ್ಯ - ಭಾಗ ೬೦

ಖಜೂ - ಕತ್ರಿ
ನನ್ನ ಗೆಳೆಯ ಮಕ್ಕಳ ರಜೆಗೆಂದು ಕುಟುಂಬ ಸಮೇತ ದೆಹಲಿ ಪ್ರವಾಸಕ್ಕೆ ಹೋಗಿದ್ದ. ಹೋದವನು ತನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡಿದ್ದ. ಒಂದು ಭಾನುವಾರ ಅವರ ಚಿಕ್ಕಪ್ಪನ ಮಗನ ಹುಟ್ಟುಹಬ್ಬವಿತ್ತು. ಅವರು ನನ್ನ ಸ್ನೇಹಿತನಿಗೆ, ‘ನೀನು ಸುತ್ತಾಡಿಕೊಂಡು ಬರುವಾಗ ಖಜೂ-ಕತ್ರಿ ತೆಗೆದುಕೊಂಡು ಬಾ.' ಎಂದು ಹೇಳಿ ಐನೂರು ರೂಪಾಯಿ ಕೊಟ್ಟಿದ್ದರು. ಇವನು ಸಂಜೆ ಮನೆಗೆ ಬರುವಾಗ ಪಕ್ಕದ ಬೀದಿಯಲ್ಲಿದ್ದ ಟೈಲರ್ ಅಂಗಡಿಗೆ ಹೋಗಿ ‘ಕಾಜು-ಕತ್ರಿ ಕೊಡಿ' ಅಂದಿದ್ದಾನೆ. ಆತ ತನ್ನ ಅಂಗಡಿಯಲ್ಲಿ ಮಾರಟಕ್ಕಿಟ್ಟಿದ್ದ ಕಾಜು-ಕತ್ರಿಯನ್ನು ಕೊಟ್ಟಿದ್ದಾನೆ. ಆತ ಅದನ್ನೇ ತಂದು ತನ್ನ ಚಿಕ್ಕಪ್ಪನಿಗೆ ಕೊಟ್ಟಿದ್ದಾನೆ. ಗೋಡಂಬಿ ಬರ್ಫಿಗೆ ಖಜೂ-ಕತ್ರಿ ಎನ್ನುತ್ತಾರೆ ಎನ್ನುವುದೂ ಇವನಿಗೆ ಗೊತ್ತಿಲ್ಲದ್ದು ನೋಡಿ ಅವರೆಲ್ಲಾ ನಕ್ಕಿದ್ದೇ ನಕ್ಕಿದ್ದು.
-ಬಿ ಎನ್ ನರಸಿಂಹ ಮೂರ್ತಿ
***
ಯಾರೂ ಹೋಗಿಲ್ಲ…
ನಮ್ಮ ಸಂಬಂಧಿ ಅರವತ್ತೆಂಟರ ಗೋಪಾಲಯ್ಯನವರಿಗೆ ಪ್ರತಿ ದಿನ ರಾತ್ರಿ ಊಟದ ಬಳಿಕ ಮನೆಯಲ್ಲಿಯೇ ಬಿರುಸಿನಿಂದ ನಾಲ್ಕಾರು ಹೆಜ್ಜೆ ಹಾಕುವ ಅಭ್ಯಾಸ. ಒಮ್ಮೆ ಕಾರ್ಯ ನಿಮಿತ್ತ ಪರ ಊರಿನ ನೆಂಟರ ಮನೆಯಲ್ಲಿ ತಂಗಿದ್ದರು. ಅವರ ಮನೆ ತುಂಬಾ ಚಿಕ್ಕದಾಗಿತ್ತು. ರಾತ್ರಿಯ ಊಟದ ನಂತರ ನೆಂಟರ ಮನೆಯವರೆಲ್ಲ ಟಿವಿ ನೋಡುತ್ತಿದ್ದರು. ಆದರೆ, ಗೋಪಾಲಯ್ಯನವರು ಅಲ್ಲೇ ಜಾಗ ಮಾಡಿಕೊಂಡು ಅತ್ತಿಂದಿತ್ತ ಇತ್ತಿಂದತ್ತ ಹೆಜ್ಜೆ ಹಾಕುತ್ತಿದ್ದರು. ಇದನ್ನೇ ಗಮನಿಸುತ್ತಿದ್ದ ಆ ನೆಂಟರ ಮನೆಯ ಐದು ವರ್ಷದ ಪುಟ್ಟ ಬಾಲಕಿ ಎದ್ದು ಹೋಗಿ, ಅವರ ಕೈ ಹಿಡಿದು ‘ತಾತಾ, ಯಾರೂ ಹೋಗಿಲ್ಲ...ನೀವು ಹೋಗಿ...'ಎನ್ನುತ್ತ ತನ್ನ ಬೆರಳನ್ನು ಟಾಯ್ಲೆಟ್ ಕಡೆ ತೋರಿಸಿದಾಗ ಟಿವಿ ನೋಡುತ್ತಿದ್ದವರೆಲ್ಲಾ ಮುಸಿ ಮುಸಿ ನಗಲಾರಂಭಿಸಿದರು.
-ಅರವಿಂದ ಜಿ.ಜೋಷಿ
***
ತಿರುಗುಬಾಣ
ಒಮ್ಮೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಒಬ್ಬ ಪ್ರಯಾಣಿಕ ಲಗೇಜ್ ಚೆಕ್ ಮಾಡುವ ಸಿಬ್ಬಂದಿಯ ಹತ್ತಿರ ಅನಾವಶ್ಯಕವಾಗಿ ಜಗಳ ಮಾಡುತ್ತಿದ್ದ. ಆತ ‘ಮ್ಯಾನೇಜರ್ ಹತ್ತಿರ ವಿಚಾರಿಸಿ ಸರ್' ಎಂದು ವಿನಯಪೂರ್ವಕವಾಗಿ ಹೇಳುತ್ತಿದ್ದ. ಆದರೂ ಕೇಳದೆ ‘ನೀನೇ ಹೋಗಿ ಕೇಳು, ನಾನ್ಯಾಕೆ ಹೋಗಲಿ?’ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡ. ನಗುಮೊಗದಿಂದಲೇ ಅವನು ತನ್ನ ಕೆಲಸ ತಾನು ಮಾಡುತ್ತಿದ್ದ. ಇದನ್ನು ಗಮನಿಸುತ್ತಾ ನಿಂತಿದ್ದ ನನಗೆ ಈ ನೌಕರನ ತಾಳ್ಮೆ ಕಂಡು ಆಶ್ಚರ್ಯವಾಯಿತು. ಜಗಳ ಮಾಡಿದ ಪ್ರಯಾಣಿಕ ಹೋದ ನಂತರ ಕೇಳಿದೆ. ‘ಏನಪ್ಪಾ, ಅವರು ಅಷ್ಟು ಜೋರು ಮಾಡಿದರೂ ನೀನು ಮಾತ್ರ ಒಂದೂ ಮಾತು ಆಡದೇ ನಿನ್ನ ಕೆಲಸ ನೀವು ಮಾಡುತ್ತಾ ಇದ್ದೆಯಲ್ಲಾ?’ ಆತ ಉತ್ತರಿಸಿದ ‘ಇಂಥವರಿಗೆಲ್ಲಾ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದನ್ನು ನಮಗೆ ನಮ್ಮ ಅನುಭವವೇ ಕಲಿಸಿಕೊಟ್ಟಿರುತ್ತದೆ ಸರ್, ಈಗ ನೋಡಿ, ಆ ಮನುಷ್ಯ ಜಪಾನ್ ವಿಮಾನ ಏರುತ್ತಾನೆ ಮತ್ತು ಅವನ ಲಗೇಜ್ ಅಮೇರಿಕಕ್ಕೆ ಹೋಗುತ್ತದೆ.’ ಅವನ ಉತ್ತರಕ್ಕೆ ನಾನು ಕಣ್ಣರಳಿಸಿದೆ. !
-ಮುರಳಿ, ನಾಗವಾರ
***
ಹೀರೆಕಾಯಿ ಚಟ್ನಿ
ಆಗಿನ್ನೂ ನಮ್ಮ ಮನೆಗಳಿಗೆ ಟಿವಿ ಬಂದಿರಲಿಲ್ಲ. ರೇಡಿಯೋ ಮಾತ್ರ ಇರುತ್ತಿತ್ತು. ಒಂದು ದಿನ ರೇಡಿಯೋದಲ್ಲಿ ಹೀರೆಕಾಯಿ ಸಿಪ್ಪೆಯ ಚಟ್ನಿ ಮಾಡುವುದು ಹೇಗೆ ಎಂಬುದನ್ನು ಹೇಳಿದ್ದರು. ಸರಿ ಅದಕ್ಕೆ ಬೇಕಾದ ಎಲ್ಲವನ್ನು ತಂದು ಅಚ್ಚುಕಟ್ಟಾಗಿ ಚಟ್ನಿ ಮಾಡಲಾಯಿತು. ಎಲ್ಲರೂ ಎರಡೆರಡು ಬಾರಿ ತಿಂದಿದಾಯ್ತು. ವಿಷಯ ಇಷ್ಟಕ್ಕೇ ಮುಗಿಯಲಿಲ್ಲ. ಮಾರನೆಯ ದಿನ ಬೀದಿ ಕಸ ಗುಡಿಸುವ ಕೆಲಸಗಾರರಿಗೆ ಕಸದ ತೊಟ್ಟಿಯಲ್ಲಿ ಟ್ಯೂಬ್ ಲೈಟ್ ತರ ಹೊಳೆಯುವ ಸಿಪ್ಪೆ ತೆಗಿಸಿಕೊಂಡ ಸಾಕಷ್ಟು ಹೀರೆಕಾಯಿಗಳು ಸಿಕ್ಕವು !
-ಗಂಜಾಂ ನಾಗರಾಜ್
***
(‘ಮಯೂರ' ಫೆಬ್ರವರಿ ೨೦೨೧ ರ ಸಂಚಿಕೆಯಿಂದ ಸಂಗ್ರಹಿತ)