‘ಮಯೂರ' ಹಾಸ್ಯ - ಭಾಗ ೬೧

ಯಾರು ತಂದಿದ್ದು?
ನನ್ನ ನಾಲ್ಕು ಚಿಲ್ಲರೆ ವರ್ಷದ ಮೊಮ್ಮಗ ಹೊರಗಿನಿಂದ ಏನಾದರೂ ತಿಂಡಿ ತಿನಿಸು ತಂದರೆ, ಯಾರು ತಂದಿದ್ದು ಎಂದು ಕೇಳುತ್ತಾನೆ. ಒಂದು ದಿನ ಅವನ ತಾಯಿ ಬಾದುಶ ಕೊಟ್ಟರು. ‘ಇದನ್ನು ಯಾರು ತಂದಿದ್ದು?’ ಎಂದ. ನಾವು ಯಾರು ಎನ್ನುವುದನ್ನು ಹೇಳುವುದು ಬೇಡವೆಂದು ಸುಮ್ಮನಿದ್ದೆವು. ‘ಯಾರು...ಯಾರು...' ಎಂದು ಪೀಡಿಸಿದ. ‘ನೀನೇ ಹೇಳು ನೋಡೋಣ' ಎಂದೆವು. ತಿನ್ನುವುದನ್ನು ಬಿಟ್ಟು ಎದ್ದು, ‘ಇದನ್ನು ಯಾರು ತಂದಿದ್ದಾರೋ ಅವರೇ ನನಗೆ ತಿನ್ನಿಸಬೇಕು' ಎಂದ. ನಾನು ಎದ್ದು ತಿನ್ನಿಸಲು ಹೋದೆ. ಕೊನೆಗೂ ತಂದಿದ್ದು ಯಾರೆಂದು ಪತ್ತೆ ಹಚ್ಚಿದ. ಅವನ ಬುದ್ಧಿವಂತಿಕೆಗೆ ಎಲ್ಲರೂ ತಲೆಬಾಗಿದೆವು.
-ಕೆ. ಹೊನ್ನಪ್ಪ
***
ಬಯಲಾಟದ ಹುಡುಗಿ
ಈಚೆಗೆ ಪರಿಚಿತ ಕುಟುಂಬದ ಮಹಿಳೆಯೊಬ್ಬರು ನಮ್ಮ ಮನೆಗೆ ಬಂದಿದ್ದರು. ಅವರು ವಧು -ವರರನ್ನು ಪರಿಚಯಿಸುವ ಕೆಲಸವನ್ನೂ ಮಾಡುತ್ತಿದ್ದರು. ಅದೇ ವಿಚಾರವಾಗಿ ಮಾತನಾಡುತ್ತಾ ತುಂಬಾ ಸಮಯ ಕಳೆದು ಹೋದರು. ತಮ್ಮೂರು ತಲುಪಿದ ನಂತರ ನನಗೆ ಫೋನ್ ಮಾಡಿದ ಅವರು ‘ತಮ್ಮಾ, ನಿನ್ನ ಫೋನಿಗೆ ಹುಡುಗಿ ಬಯಲಾಟ ಫೊಟೊ ಹಾಕಿನಿ, ನೊಡಪಾ...;ಎಂದರು. ಬಯಲಾಟದ ಹುಡುಗಿಯ ಫೊಟೊ ನನಗ್ಯಾಕೆ ಕಳಿಸಿದರೆಂದು ತಲೆಕೆಡಿಸಿಕೊಂಡೆ. ನಂತರ ವಾಟ್ಸಾಪ್ ನೋಡಿದಾಗ ತಿಳಿಯಿತು. ಅವರು ಹುಡುಗಿಯೊಬ್ಬಳ ಫೊಟೊ ಮತ್ತು ಬಯೋಡೆಟಾ ಕಳಿಸಿದ್ದರು ! ಬಯೋಡೆಟಾ ಅವರ ಗ್ರಾಮ್ಯ ಭಾಷೆಯಲ್ಲಿ ಬಯಲಾಟವಾಗಿತ್ತು !
-ಮಹೇಶ್ವರ ಹುರುಕಡ್ಲಿ
***
ರಜೆಯ ಕಾರಣ
ನನ್ನ ಗೆಳೆಯನೊಬ್ಬನ ಮೇಲಧಿಕಾರಿ ತುಂಬಾ ಶಿಸ್ತಿನ ಅಸಾಮಿ. ಯಾರಿಗೂ ರಜೆ ಕೊಡುತ್ತಲೇ ಇರಲಿಲ್ಲ. ‘ತಂದೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಊರಿಗೆ ಹೋಗಬೇಕು ರಜೆ ಕೊಡಿ' ಎಂದರೆ, ‘ನನ್ನ ತಂದೆಗೂ ಹುಷಾರಿಲ್ಲ. ಆದರೂ ನಾನು ಹೋಗಲಿಲ್ಲ.’ ಅನ್ನುತ್ತಿದ್ದ. ‘ತಂಗಿಯ ಮದುವೆಗೆ ಹೋಗಬೇಕು' ಅಂದರೆ ‘ಹೋದ ವಾರ ನನ್ನ ತಂಗಿಯ ಮದುವೆ ಆಯ್ತು. ನಾನು ಹೋಗಲೇ ಇಲ್ಲ. ಕೆಲಸ ಮುಖ್ಯ ಅಲ್ಲವಾ?’ ಅನ್ನುತ್ತಿದ್ದ. ಇದನ್ನು ತಿಳಿದ ಸಹೋದ್ಯೋಗಿಯೊಬ್ಬ ರಜೆ ಮಂಜೂರು ಮಾಡಿಸಿಕೊಂಡು ಶಿಳ್ಳೆ ಹಾಕುತ್ತಾ ಹೊರ ಬಂದಾಗ ಎಲ್ಲರಿಗೂ ಆಶ್ಚರ್ಯ. ಅವನು ರಜೆಗೆ ಕೊಟ್ಟ ಕಾರಣ ಕೇಳಿ ಎಲ್ಲರೂ ದಂಗು...' ನಮ್ಮ ಅಮ್ಮ ಕೂಡಲೇ ಊರಿಗೆ ಬರಲು ಹೇಳಿದ್ದಾಳೆ ಸರ್, ನನ್ನ ತಂಗಿ ಯಾರೊಂದಿಗೋ ಓಡಿ ಹೋಗಿದ್ದಾಳಂತೆ. ಹೋಗಿ ಹುಡುಕಬೇಕು... ರಜೆ ಕೊಡಿ...!’
-ಹಾಡ್ಯ ಬ.ಜಯಾನಂದ
***
ದೇವರ ಹಾರನ್ !
ನಾನು ಪ್ರತಿದಿನ ಆಫೀಸಿಗೆ ಹೋಗುವ ರಸ್ತೆಯ ಬಲಬದಿಯಲ್ಲಿ ಏಕವಿರಾ ದೇವಿಯ ಪುಟ್ಟ ಮಂದಿರವಿದೆ. ಈ ಮಂದಿರವನ್ನು ಹಾದು ಹೋಗುವಾಗ ಎಲ್ಲರೂ ದೇವಿಗೆ ಕೈ ಮುಗಿಯುತ್ತೇವೆ. ಅಲ್ಲಿ ಬಸ್ಸಿನ ಡ್ರೈವರ್ ಕೂಡಾ ದಿನಾ ಒಂದು ಹಾರನ್ ಹೊಡೆಯುತ್ತಾನೆ. ಅದು ಆತ ತೋರುವ ಭಕ್ತಿಯ ವಿಧಾನ ಎಂದು ಊಹಿಸಿದ್ದೆ. ಆದರೆ, ಕ್ರಮೇಣ ಬೇರೆ ವಾಹನದ ಚಾಲಕರೂ ಆ ಸ್ಥಳದಲ್ಲಿ ಹಾರನ್ ಹೊಡೆಯುವುದನ್ನು ಗಮನಿಸಿ ಎಲ್ಲಾ ಚಾಲಕರೂ ದೇವರಿಗೆ ಭಕ್ತಿ ತೋರುತ್ತಾರೆ ಎಂದುಕೊಂಡೆ. ಕೆಲ ಸಮಯದ ನಂತರ ನಂತರ ನಾನು ಡ್ರೈವಿಂಗ್ ತರಬೇತಿ ಪಡೆದ ಬಳಿಕ ಈ ಹಾರನ್ನಿನ ರಹಸ್ಯ ಪತ್ತೆಯಾಯಿತು. ಆ ದೇವಸ್ಥಾನದ ಮುಂದೆ ದೊಡ್ಡ ತಿರುವಿರುವ ಕಾರಣ ಚಾಲಕರು ಹಾರನ್ ಹೊಡೆಯುತ್ತಿದ್ದರು.
-ರಮಣ್ ಶೆಟ್ಟಿ ರೆಂಜಾಳ್
***
(‘ಮಯೂರ' ಮಾರ್ಚ್ ೨೦೨೧ರ ಸಂಚಿಕೆಯಿಂದ ಸಂಗ್ರಹಿತ)