‘ಮಯೂರ' ಹಾಸ್ಯ - ಭಾಗ ೬೨

‘ಮಯೂರ' ಹಾಸ್ಯ - ಭಾಗ ೬೨

ಕಟ್ಟಾ ಕನ್ನಡಾಭಿಮಾನ

ಮಗಳು ಇತ್ತೀಚೆಗೆ ಫೋನ್ ಮಾಡಿದಾಗ ‘ನೀನು ಈ ಬಾರಿ ಬೆಂಗಳೂರಿಗೆ ಬಂದಾಗ ಕನ್ನಡಾಭಿಮಾನದ ದರ್ಶಿನಿಯೊಂದಕ್ಕೆ ಕರೆದುಕೊಂಡು ಹೋಗುವೆ. ಅಲ್ಲಿ ಕನ್ನಡದ ಫಲಕಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಹೆಸರುಗಳು ಇವೆ' ಎಂದಿದ್ದಳು. ನಾನೂ ಆದಷ್ಟು ಬೇಗ ಅಲ್ಲಿಗೆ ಒಮ್ಮೆ ಭೇಟಿಕೊಡುವ ಕಾತುರದಲ್ಲಿದ್ದೆ. ಅಂತೆಯೇ ಮೊನ್ನೆ ಬೆಂಗಳೂರಿಗೆ ಹೋದಾಗ ಎನ್ ಆರ್ ಕಾಲನಿಯಲ್ಲಿರುವ ಆ ದರ್ಶಿನಿಗೆ ಕರೆದುಕೊಂಡು ಹೋದಳು. ಅಲ್ಲಿನ ಕನ್ನಡ ಫಲಕಗಳನ್ನು ನೋಡಿ, ಅವರ ಕನ್ನಡಾಭಿಮಾನಕ್ಕೆ ಮನಸೋತೆ. ತಿಂಡಿ ಮುಗಿಸಿ ಹೊರಗೆ ಬಂದ ಬಳಿಕ ಯಾವುದಕ್ಕೂ ಮಿತ್ರರಿಗೆ ಈ ಬಗ್ಗೆ ತಿಳಿಸುವ ಎಂದು ದರ್ಶಿನಿಯ ಹೆಸರು ನೋಡಿದೆ. ‘ಸೌತ್ ಕಿಚನ್' ಎಂದಿತ್ತು !

-ನಗರ ಗುರುದೇವ್ ಭಂಡಾರ್ಕರ್

***

ಯಾರೀ ಅವಳು?

ಹೆಂಡತಿ ತವರಿಗೆ ಹೋಗಿದ್ದಳು. ಎರಡು ದಿನಗಳಾದರೂ ಒಂದು ಫೋನ್ ಕೂಡ ಮಾಡಲಿಲ್ಲ. ಕೊನೆಗೆ ನಾನೇ ಫೋನ್ ಮಾಡಿದರೂ ಫೋನ್ ಎತ್ತಲಿಲ್ಲ. ಮೂರನೇ ದಿನವೂ ಫೋನ್ ಮಾಡಲಿಲ್ಲ. ನನಗೂ ಸಿಟ್ಟು ಬಂತು. ಹಾಗೇ ಅವಳನ್ನು ತುಸು ರೇಗಿಸಬೇಕೆಂದು, ‘ಹುಡುಗಿಯೊಬ್ಬಳು ನನ್ನ ವಿಳಾಸ ಕೇಳಿ ಮೆಸೇಜ್ ಕಳಿಸಿದ್ದಾಳೆ. ನಮ್ಮ ಮನೆ ಡೋರ್ ನಂಬರ್ ಅಳಿಸಿ ಹೋಗಿದೆ. ಮನೆಯ ನಂಬರ್ ಎಷ್ಟು ಅಂತ ನಿನಗೆ ನೆನಪಿದೆಯೇ?’ ಅಂತ ಮೆಸೇಜ್ ಕಳುಹಿಸಿ, ಫೋನ್ ಮ್ಯೂಟ್ ಮಾಡಿ ಸ್ನೇಹಿತರ ಜೊತೆ ರಾತ್ರಿ ಊಟಕ್ಕೆ ಹೋದೆ. ಮನೆಗೆ ಬಂದು ಫೋನ್ ನೋಡಿದಾಗ ಹೆಂಡತಿಯ ಐವತ್ತೊಂಬತ್ತು ಮಿಸ್ಡ್ ಕಾಲ್ ಇದ್ದವು. ಒಳ್ಳೆ ಶಾಸ್ತಿ ಆಯಿತು ಎಂದು ಸುಮ್ಮನೇ ಮಲಗಿದೆ. ಮರುದಿನ ಆಫೀಸಿಗೆಂದು ಹೊರಟು ನಿಂತಾಗ ಮನೆಯಾಚೆ ಆಟೋ ನಿಂತ ಸದ್ದು ಕೇಳಿಸಿತು. ಹೊರಗೆ ಬಂದು ನೋಡಿದರೆ ತವರಿನಿಂದ ವಾಪಾಸ್ಸಾದ ಹೆಂಡತಿಯಿಂದ ‘ಯಾರೀ ಅವಳು?’ ಎಂಬ ಪ್ರಶ್ನೆ ಒಳಗಡಿ ಇಡುವ ಮೊದಲೇ ತೂರಿ ಬಂತು !

-ಭೋಜರಾಜ ಸೊಪ್ಪಿಮಠ

***

ಆಮ್ಲಜನಕ

ತಂಗಿಯ ಮಗ ಎಂಟು ವರ್ಷದ ಪುಟ್ಟು ವಿಜ್ಞಾನ ಪುಸ್ತಕ ಹಿಡಿದುಕೊಂಡು ಬೇರೆ ಎಲ್ಲೋ ನೋಡುತ್ತ ಕುಳಿತಿದ್ದ. ‘ಯಾಕೋ ಮರಿ? ಏನೋ ಚಿಂತೆ ಮಾಡ್ತಾ ಇದ್ದೀಯಲ್ಲಾ?’ ಅಂತ ಕೇಳಿದೆ. ನಾಲ್ಕು ಶತಮಾನಗಳ ಹಿಂದೆ ಜನ ಆಮ್ಲಜನಕ ಇಲ್ಲದೆ ಹ್ಯಾಗೆ ಬದುಕ್ತಾ ಇದ್ರು ಅಂತ ಆಲೋಚನೆ ಆಗ್ತಿದೆ ದೊಡ್ಡಮ್ಮ. ಸದ್ಯ ಆಗ ಹುಟ್ಟಿರಲಿಲ್ಲವಲ್ಲ... ಒಳ್ಳೇದಾಯ್ತು...' ಎಂದ. ‘ನಾಲ್ಕು ಶತಮಾನಗಳ ಹಿಂದೆ ಆಮ್ಲಜನಕ ಇರಲಿಲ್ಲ ಅಂತ ಯಾರೋ ಹೇಳಿದ್ದು ನಿನಗೆ?’ ಕೇಳಿದೆ. ‘ನಿನ್ನೆ ಕ್ಲಾಸಿನಲ್ಲಿ ಟೀಚರ್ ಹೇಳಿದ್ರು ದೊಡ್ಡಮ್ಮಾ, ನಾವು ಬದುಕಬೇಕಾದರೆ ಆಮ್ಲಜನಕ ತುಂಬಾ ಮುಖ್ಯ. ಇದನ್ನು ನಾಲ್ಕು ಶತಮಾನಗಳ ಹಿಂದೆ ಕಂಡು ಹಿಡಿಯಲಾಯಿತು ಅಂತ...'ಎಂದು ಹೇಳಿದಾಗ ನಾನು ತಬ್ಬಿಬ್ಬು.

-ಜ್ಯೋತಿ ಪರಬತ್

***

‘ಎಮ್ಮಿ ಗಬ್ಬ ಆಗಿಲ್ರೀ’

ನಾನು ಗ್ರಾಮೀಣ ಬ್ಯಾಂಕ್ ಸೇರಿದ ಹೊಸದು. ಆಗ ಕೃಷಿ ಸಂಬಂಧಿ ಸಾಲಗಳನ್ನು ಹೆಚ್ಚಾಗಿ ಕೊಡುತ್ತಿದ್ದರು. ಐ ಆರ್ ಡಿ ಪಿ ಯೋಜನೆಯಲ್ಲಿ ಎಮ್ಮೆಗಳನ್ನು ಕೊಡಿಸಬೇಕಾಗಿತ್ತು. ಒಂದು ದಿನ ಬ್ಯಾಂಕಿಗೆ ಬಂದ ಒಬ್ಬ ಹೆಣ್ಣು ಮಗಳಿಗೆ ನಮ್ಮ ಮ್ಯಾನೇಜರ್ ಸಾಹೇಬರು ‘ಏನವ್ವಾ...ನಿನ್ನ ಎಮ್ಮಿ ಸಾಲದ ಕಂತ ತುಂಬಲಿಲ್ಲಲಾ’ ಎಂದರು. ಆಗ ಅವಳು ಥಟ್ಟನೆ, ‘ಏನ ಮಾಡುದ್ರಿ ಸಾಹೇಬ್ರ, ನೀವ ಕೊಡಿಸಿದ ಎಮ್ಮಿ ಇನ್ನ ಗಬ್ಬ ಆಗಿಲ್ರೀ’ ಎಂದಾಗ ನಮ್ಮ ಮ್ಯಾನೇಜರ್ ಮುಖ ನೋಡಿ ನಾವೆಲ್ಲಾ ಬಿದ್ದು ಬಿದ್ದು ನಕ್ಕಿದ್ದೆವು.

-ರವಿ ಮುನವಳ್ಳಿ

***
(ಮಯೂರ ಎಪ್ರಿಲ್ ೨೦೨೧ ಸಂಚಿಕೆಯಿಂದ ಆಯ್ದದ್ದು)