‘ಮಯೂರ' ಹಾಸ್ಯ - ಭಾಗ ೬೪
ಚೌಕಾಸಿ
ನನ್ನ ಹೆಂಡತಿ ಲಲಿತಾ ಅಂಗಡಿಗೆ ಹೋಗಿ ಏನೇ ಸಾಮಾನು ತರಲಿ ವಿಪರೀತ ಚೌಕಾಸಿ ಮಾಡುವ ಬುದ್ಧಿ. ಅಂದು ಅವಳು ನನಗೆ ‘ರೀ, ಅಂಗಡಿಗೆ ಹೋಗಿ ಸಕ್ಕರೆ, ಗೋಧಿ ಹಿಟ್ಟು ಹಾಗೇ ಒಂದಿಷ್ಟು ತರಕಾರಿ ತನ್ನಿ' ಎಂದಳು. ನಾನು ಅದೇ ಮೊದಲ ಬಾರಿಗೆ ಅಂಗಡಿಗೆ ಹೋಗಿದ್ದು. ಅಂಗಡಿಯವಳಿಗೆ ‘ಒಂದು ಸೌತೇಕಾಯಿಗೆ ಎಷ್ಟಮ್ಮ?’ ಎಂದು ಕೇಳಿದೆ. ಅವಳು ‘ಒಂದಕ್ಕೆ ಹತ್ತು, ಇಪ್ಪತ್ತು ರೂಪಾಯಿಗೆ ಮೂರು’ ಎಂದಳು. ನಾನು ‘ನಾಲ್ಕು ಕೊಡಮ್ಮ' ಎಂದು ಕೇಳಿದೆ. ಅದಕ್ಕೆ ಅವಳು ‘ಏನ್ಸಾರ್, ಇಷ್ಟೊಂದು ಚೌಕಾಸಿ ಮಾಡ್ತೀರಾ? ನೀವು ಲಲಿತಮ್ಮನ ಯಜಮಾನರಾ?’ ಎಂದು ಕೇಳಿಬಿಡುವುದೇ?
-ಎಂ ಕೆ ಮಂಜುನಾಥ್
***
ನಿಜವಾದ ಕನ್ನಡಿಗರೆಂದರೆ…
ನಮ್ಮೂರಿನ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಾನು ತುಸು ಆವೇಶದಿಂದ ಭಾಷಣ ಮಾಡುತ್ತಾ ‘ ನಿಜವಾದ ಕನ್ನಡಿಗರೆಂದರೆ ಯಾರು?’ ಎನ್ನುವಷ್ಟರಲ್ಲಿ ಸಭೆಯ ಮುಂದಿನ ಸಾಲಿನಲ್ಲೇ ಕುಳಿತವನೊಬ್ಬ ದಿಗ್ಗನೆ ಎದ್ದು ನಿಂತು ‘ ನಿಜವಾದ ಕನ್ನಡಿಗರೆಂದರೆ ಈ ಮಣ್ಣಿನ ವೀರನಾರಿಯರಲ್ಲದೆ ಇನ್ಯಾರು? ಎಂದು ಅಬ್ಬರಿಸಿದ. ‘ಅದನ್ನು ಯಾವ ಆಧಾರದ ಮೇಲೆ ಹೇಳುತ್ತೀರಿ?’ ಎಂದೆ. ಆತ ‘ಅವರಷ್ಟು ಹೊತ್ತು ಕನ್ನಡಿಯ ಮುಂದೆ ನಿಲ್ಲುವ ಸೈರಣೆ ಬೇರೆ ಯಾರಿಗಿದೆ?’ ಎಂದಾಗ ಸಭಿಕರಿಂದ ಚಪ್ಪಾಳೆಯ ಸುರಿಮಳೆ.
-ಮಲ್ಲಿಕಾರ್ಜುನ ಸುರಧೇನುಪುರ
***
ಒಂದೇ ರೂಮು
ಪಕ್ಕದ ಮನೆಯ ನನ್ನ ಗೆಳತಿ ಅವರ ಊರಿನಲ್ಲಿ ಕಟ್ಟಿದ ಮನೆಯ ಗೃಹ ಪ್ರವೇಶದ ಸಿಹಿಯನ್ನು ಕೊಡಲು ಬಂದಿದ್ದರು. ಜೊತೆಯಲ್ಲಿ ಬಂದಿದ್ದ ಮೂರು ವರ್ಷದ ಅವರ ಮಗನಿಗೆ ತಮಾಷೆಯಾಗಿ ಕೇಳಿದೆ. ‘ಏನೋ ಪುಟ್ಟಾ, ಹೊಸ ಮನೆ ಚೆನ್ನಾಗಿದೆಯಾ? ನಿನಗಿಷ್ಟ ಆಯ್ತಾ?’ ಎಂದು. ಅದಕ್ಕೆ ಅವನು ಕೂಡಲೇ ‘ಹೌದು ಆಂಟಿ, ಮನೆ ತುಂಬಾ ದೊಡ್ಡದಾಗಿ ಚೆನ್ನಾಗಿದೆ. ನನಗೆ ಒಂದು ರೂಮು, ನಮ್ಮ ಅಕ್ಕನಿಗೂ ಒಂದು ರೂಮು. ಆದರೆ ಪಾಪ ನಮ್ಮ ಅಪ್ಪ ಅಮ್ಮನಿಗೆ ಮಾತ್ರ ಒಂದೇ ರೂಮು. ಅವರಿಗೆ ಬೇರೆ ಬೇರೆ ರೂಮು ಇಲ್ಲಾ’ ಎಂದು ಪಟಪಟನೆ ಹೇಳಿದಾಗ ನಾವಿಬ್ಬರೂ ನಕ್ಕೆವು.
-ಜಯಮಾಲಾ ಪೈ
***
ಕುರೇಶಿಯಾ !
ಗೆಳತಿ ರೂಪಾ ಅವರ ಮನೆಯ ಗೃಹಪ್ರವೇಶಕ್ಕೆಂದು ಖರೀದಿಸಿದ್ದ ಸೀರೆಗಳಿಗೆ ಡಿಸೈನರ್ ಬ್ಲೌಸ್ ಹೊಲೆಸಲು ಹುಬ್ಬಳ್ಳಿಯ ಟೈಲರ್ ಶಾಪ್ ಗೆ ಹೋಗಿದ್ದೆವು. ಟೈಲರ್ ಗೆ ಕನ್ನಡ ಬರುತ್ತಿರಲಿಲ್ಲ. ಎಲ್ಲವನ್ನೂ ಹಿಂದಿಯಲ್ಲಿ ವಿವರಿಸಿ ಹೇಳುವ ಹೊತ್ತಿಗೆ ಇಬ್ಬರಿಗೂ ಸುಸ್ತಾಗಿತ್ತು. ಬ್ಲೌಸ್ ಡಿಸೈನ್ ಎಲ್ಲ ಆರಿಸಿಕೊಟ್ಟ ಮೇಲೆ, ಸೀರೆಗಳಿಗೆ ಪಿಕೋ, ಫಾಲ್ ಹಚ್ಚಿ ಸೆರಗಿಗೆ ಕುಚ್ಚು ಕಟ್ಟಲು ಹೇಳಿದೆವು. ‘ಕುರೇಶಿಯಾ ಟೈಪ್ ಗೊಂಡೆ (ಕುಚ್ಚು) ಕಟ್ಟಿಸುತ್ತೀರಾ?’ ಎಂದು ಕೇಳಿದ. ಇದ್ಯಾವುದೋ ಹೊಸ ತರಹದ ಡಿಸೈನ್ ಇರಬಹುದು ಎಂದು ಯೋಚಿಸಿ, ಅದನ್ನೇ ಮಾಡಿಸೋಣ ಎಂದು ಅವನಿಗೆ ‘ಸ್ವಲ್ಪ ಕುರೇಶಿಯಾ ಕುಚ್ಚಿನ ಡಿಸೈನ್ ತೋರಿಸಿ' ಎಂದೆವು. ಸರಸರನೆ ಆತ ತನ್ನ ಮೊಬೈಲ್ ನಲ್ಲಿದ್ದ ‘ಕ್ರೋಶಾ ಡಿಸೈನ್’ ಗಳನ್ನು ತೋರಿಸುತ್ತಿದ್ದಂತೆ ಇಬ್ಬರಿಗೂ ನಗು ತಡೆಯಲಾಗಲಿಲ್ಲ. ಕ್ರೋಶಾ ಅವನ ಬಾಯಿಯಲ್ಲಿ ಕುರೇಶಿಯಾ ಆಗಿತ್ತು.
-ನಳಿನಿ ಟಿ.ಭೀಮಪ್ಪ
***
(‘ಮಯೂರ' ಜೂನ್ ೨೦೨೧ರ ಸಂಚಿಕೆಯಿಂದ ಆಯ್ದದ್ದು)