‘ಮಯೂರ' ಹಾಸ್ಯ - ಭಾಗ ೬೫

‘ಮಯೂರ' ಹಾಸ್ಯ - ಭಾಗ ೬೫

ಪುಣ್ಯ ಸ್ನಾನ

ಸಂಕ್ರಮಣದ ದಿನ ನಮ್ಮೂರ ಹೊಳೆಗೆ ಸಮೀಪದ ನಗರವಾಸಿಗಳು ‘ಪುಣ್ಯ ಸ್ನಾನ'ಕ್ಕೆಂದು ಬಂದಿದ್ದರು. ಹೊಳೆಯ ದಂಡೆಯಲ್ಲಿ ಏಡಿ ಹಿಡಿಯುತ್ತಿದ್ದ ಮಕ್ಕಳು ನನ್ನನ್ನು ಕಂಡೊಂಡನೆ ಓಡಿ ಬಂದು, ತಮ್ಮ ಬೇಟೆಯ ಸಾಹಸವನ್ನು ತೋರಿಸುತ್ತಿದ್ದರು. ಗುಂಪಿನಲ್ಲಿದ್ದ ಕಲ್ಲೇಶ ಎಂಬ ವಿದ್ಯಾರ್ಥಿ, ‘ಸಾ, ಇವ್ರು ಯದಕಾ ಈ ಗುಂಡ್ಯಾಗ ಮುಣಿಗೆದ್ದಾಳ್ತಾರ್ ಸಾ?’ ಎಂದ. ‘ಇಂದು ಸಂಕ್ರಮಣ. ಅದಕ್ಕೆ ಅವರೆಲ್ಲಾ ಪುಣ್ಯ ಸ್ನಾನ ಮಾಡ್ತಿದ್ದಾರೆ' ಎಂದೆ. ಅದಕ್ಕವನು ‘ಓ ಹಂಗಂದ್ರಾ ಇವರೆಲ್ಲಾ ಪಾಪಾ ಮಾಡಿ ಬಂದ್ರೇನ್ ಸಾ?’ ಎಂದ ಮುಗ್ಧವಾಗಿ. ಇವನ ಪ್ರಶ್ನೆಗೆ ನನ್ನ ಬಳಿ ಉತ್ತರವಿರಲಿಲ್ಲ !

-ಮಹೇಶ್ವರ ಹುರುಕಡ್ಲಿ

***

ನಿಮಗೂ ಬಡೀಲಾ?

ಉತ್ತರ ಕರ್ನಾಟಕದ ಗೆಳೆಯ ಮಂಗಳೂರಿಗೆ ವರ್ಗಾವಣೆಯಾಗಿದ್ದ. ಅವನನ್ನು ಕಾಣಲು ಹೋಗಿದ್ದೆ. ಗೆಳೆಯ ಸ್ನಾನಕ್ಕೆ ಹೋಗಿದ್ದ. ಅವನ ಹೆಂಡತಿಯೇ ನನ್ನನ್ನು ಸ್ವಾಗತಿಸಿದರು. ‘ಬೆಳಿಗ್ಗೆ ಏನ್ ನಾಷ್ಟಾ ಮಾಡಿದ್ರಿ?’ ಕೇಳಿದರು. ಹೇಳಿದೆ. ‘ನೀವೇನು ಮಾಡಿದ್ದೀರಿ?’ ಕೇಳಿದೆ. ರೊಟ್ಟಿ, ಹುಚ್ಚೆಳ್ಳು ಚಟ್ನಿ' ಎಂದರು. ಆಮೇಲೆ ‘ಏನ್ರೀ, ನಿಮ್ಗೂ ಎರಡು ಬಡೀಲಾ?’ ಕೇಳಿದರು. ಮಂಗಳೂರಿನ ಭಾಷೆಯಲ್ಲಿ ‘ಬಡೀಲಾ’ ಎಂದರೆ ಹೊಡೆಯುವುದು ಎಂದೇ ಅರ್ಥ. ಆ ವೇಳೆಗೆ ಸ್ನಾನ ಮಾಡಿ ಬಂದ ಗೆಳೆಯ ‘ರೊಟ್ಟಿ ಮಾಡ್ಕೊಡ್ಲಾ ಅಂತ ಕೇಳೇ, ಬಡೀಲಾ ಅಂತ ಕೇಳಿದ್ರೆ ಅವ್ರು ಗಾಬ್ರಿಯಾಗಿ ಎದ್ದೋಡ್ತಾರೆ. ಇಲ್ಲಿ ರೊಟ್ಟಿ ಬಡಿಯೋದು ಅನ್ನೋದಿಲ್ಲ. ತಟ್ಟೋದು ಅನ್ತಾರೆ' ಎಂದು ಗೊಂದಲ ಬಗೆಹರಿಸಿದ.

-ಪ. ರಾಮಕೃಷ್ಣ ಶಾಸ್ತ್ರಿ

***

ಎಲ್ಲಾರ್ ನಂಬರ್

ಕೊರಿಯರ್ ಆಫೀಸಿಗೆ ಬಂದಿದ್ದ ಪಾರ್ಸೆಲ್ ಅನ್ನು ತೆಗೆದುಕೊಂಡು ಬರಲು ತಮ್ಮನ ಜೊತೆ ಹೊರಟಿದ್ದೆ. ಹೊರಡುವ ಮುನ್ನ ‘ಅಕ್ಕ, ಎಲ್ಲಾರ್ ನಂಬರ್ ಇಟ್ಕೊಂಡಿದಿಯಾ’ ಎಂದು ಕೇಳಿದ. ‘ಹೂಂ, ಎಲ್ಲಾರ್ ನಂಬರೂ ಮೊಬೈಲ್ ನಲ್ಲಿದೆ' ಎಂದೆ. ಸರಿ ಎಂದು ಹೊರಟದ್ದಾಯಿತು. ಆಫೀಸಿಗೆ ಹೋದ ತಕ್ಷಣ ‘ಅಕ್ಕಾ, ಎಲ್ಲಾರ್ ನಂಬರ್ ಹೇಳು' ಅಂದ. ‘ಏಯ್, ಎಲ್ಲಾರ್ ನಂಬರ್ ತಕೊಂಡು ಏನು ಮಾಡ್ತಿಯೋ, ಯಾರ ನಂಬರ್ ಬೇಕು ಸರಿಯಾಗಿ ಕೇಳು. ಹೇಳ್ತೀನಿ' ಎನ್ನುತ್ತಿದ್ದಂತೆ ಬಿದ್ದು ಬಿದ್ದು ನಗಲಾರಂಭಿಸಿದ. ‘ಅಲ್ವೇ, ಎಲ್ಲಾರ್ ನಂಬರ್ ಅಂದ್ರೆ ಲಾರಿ ರಶೀದಿ ನಂಬರ್' ಎಂದಾಗ, ಹಣೆ ಚಚ್ಚಿಕೊಂಡು ಮತ್ತೊಮ್ಮೆ ಅದನ್ನು ತರಲು ಮನೆಕಡೆ ಹೊರಟಿದ್ದಾಯಿತು.

-ನಳಿನಿ ಟಿ.ಭೀಮಪ್ಪ

***

‘ಕೋತಿಗೊಬ್ಬ'

ಎಂಟನೆ ತರಗತಿಗೆ ಮೂವತ್ತಾರು ವಿದ್ಯಾರ್ಥಿಗಳು ದಾಖಲಾಗಿದ್ದರು. ಅವರ ಪರಿಚಯ ವಿಭಿನ್ನವಾಗಿ ಮಾಡಿಕೊಳ್ಳಲು ಬಯಸಿದ ನಾನು, ‘ಒಬ್ಬೊಬ್ಬರಾಗಿ ನಿಮ್ಮ ಹೆಸರು, ಊರು, ನೆಚ್ಚಿನ ಹೀರೋ, ಹೀರೋಯಿನ್, ಇಷ್ಟದ ಸಿನೆಮಾ, ಹಾಡಿನ ಒಂದು ಸಾಲನ್ನು ಹಾಡಬೇಕು' ಎಂದು ಸೂಚಿಸಿದೆ. ಅದರಂತೆ ಮುಂದೆ ಬಂದ ವಿದ್ಯಾರ್ಥಿ ‘ನನ್ನ ಹೆಸರು ರಾಹುಲ್ ರಾಜ್, ಊರು ಬೊಮ್ಮನ ಹಳ್ಳಿ ಮೆಚ್ಚಿನ ಹೀರೋ ಸುದೀಪ್, ಕೋತಿಗೊಬ್ಬ ಕೋತಿಗೊಬ್ಬ ಗೆಲ್ಲೋನು ಕೋತಿಗೊಬ್ಬ' ಎಂದು ನಿರರ್ಗಳವಾಗಿ, ನಿಸ್ಸಂಕೋಚವಾಗಿ ಹಾಡತೊಡಗಿದ. ಅಷ್ಟೇ ನಿರ್ಭಿಡೆಯಿಂದ ನಾನು ಮತ್ತು ತರಗತಿಯಲ್ಲಿದ್ದ ವಿದ್ಯಾರ್ಥಿಗಳು ನಕ್ಕಿದ್ದೇ ನಕ್ಕಿದ್ದು. ಆಮೇಲೆ ತಿಳಿಯಿತು. ಆತನಿಗೆ ‘ಟ’ ಅಕ್ಷರವನ್ನು ‘ತ' ಎಂದು ಉಚ್ಛರಿಸುವ ಸಮಸ್ಯೆ ಇದೆಯೆಂದು.

-ಮಲ್ಲಿಕಾರ್ಜುನ ಸುರಧೇನುಪುರ

***

(ಆಗಸ್ಟ್ ೨೦೨೧ರ ‘ಮಯೂರ' ಪತ್ರಿಕೆಯಿಂದ ಆಯ್ದದ್ದು)