‘ಮಯೂರ' ಹಾಸ್ಯ - ಭಾಗ ೬೬

‘ಮಯೂರ' ಹಾಸ್ಯ - ಭಾಗ ೬೬

ಒಬ್ಬರೇ ಬಂದ್ರಾ?

ಲಸಿಕೆ ಚುಚ್ಚಿಸಿಕೊಳ್ಳಲು ಹತ್ತಿರದ ಆಸ್ಪತ್ರೆಗೆ ಹೋಗಿದ್ದೆ. ಇಂಜೆಕ್ಷನ್ ಚುಚ್ಚುವ ಮುನ್ನ ನರ್ಸ್ ‘ಒಬ್ಬರೇ ಬಂದ್ರಾ ಸರ್?’ ಅಂತ ಎರಡು ಬಾರಿ ಕೇಳಿದರು. ‘ಹೌದು, ಯಾಕೆ? ಜೊತೆಗೆ ಯಾರಾದರೂ ಬೇಕು ಎನ್ನುವ ಅಗತ್ಯವೇನಾದರೂ ಇದೆಯೇ?’ ಎಂದೆ. ಆಕೆ ‘ಅಲ್ಲ ಸರ್, ಲಸಿಕೆ ಚುಚ್ಚುವಾಗ ಫೋಟೋ ತೆಗೆಯೋಕೆ ಯಾರೂ ಜೊತೆಯಲ್ಲಿ ಬಂದಿಲ್ಲವೇ ಅಂತ ಕೇಳಿದೆ' ಎಂದರು. ‘ಇಲ್ಲ' ಎಂದೆ. ಮುಂದುವರೆದು ‘ಬೇಕಿದ್ರೆ ನಿಮ್ಮ ಮೊಬೈಲ್ ಕೊಡಿ ಸರ್, ನಮ್ಮ ನರ್ಸ್ ಫೋಟೋ ತೆಗೀತಾರೆ. ವಾಟ್ಸಾಪ್, ಫೇಸ್ಬುಕ್ ಗಳಲ್ಲಿ ಹಾಕಕ್ಕೆ ಬೇಕಲ್ವಾ?’ ಎಂದಾಗ ನಗೆಯುಕ್ಕಿತು !

-ರಾಜೀವ್ ಎನ್ ಮಾಗಲ್

***

ಸೀಮೆ ಎಣ್ಣೆ ಮಿಕ್ಸ್

ಇದು ೮೦ರ ದಶಕದಲ್ಲಿ ನಡೆದ ಘಟನೆ. ಬೆಂಗಳೂರಿನಿಂದ ನಮ್ಮ ಹಳ್ಳಿಗೆ ಹೋಗಿದ್ದೆ. ಅಲ್ಲಿ ಓಡಾಡುವ ದ್ವಿಚಕ್ರ ವಾಹನಗಳು ತುಂಬಾ ಹೊಗೆ ಉಗುಳುವುದನ್ನು ಗಮನಿಸಿ, ನನ್ನ ಅಣ್ಣನ ಮಗ ಪ್ರಣವನಿಗೆ ‘ಏನ್ ಮಾರಾಯ, ನಿಮ್ಮೂರಿನ ಬೈಕ್ ಗಳೆಲ್ಲಾ ಹೊಗೆ ಉಗುಳಿ ಶಬ್ಧ ಮಾಡುತ್ತವಲ್ಲಾ?’ ಎಂದೆ. ‘ಇಲ್ಲಿ ಪೆಟ್ರೋಲ್ ಸಿಗುವುದಿಲ್ಲ. ೩೦ ಕಿ ಮೀ ದೂರದ ತಾಲ್ಲೂಕು ಕೇಂದ್ರದಿಂದ ಪೆಟ್ರೋಲ್ ತಂದು ಅದಕ್ಕೆ ಸೀಮೆ ಎಣ್ಣೆ ಮಿಕ್ಸ್ ಮಾಡಿ ಮಾರುತ್ತಾರೆ. ಅದನ್ನೇ ಬೈಕ್ ಗಳಿಗೆ ಹಾಕುತ್ತಾರೆ. ಅದಕ್ಕೇ ಹೀಗೆ' ಎಂದ. ನಂತರ ನಾನು ವಾಪಾಸ್ಸು ಬೆಂಗಳೂರಿಗೆ ಬರುವಾಗ ಶಾಲೆಗೆ ರಜೆ ಇದೆ ಎಂದು ಅವನೂ ಜೊತೆ ಬಂದ. ಒಂದು ದಿನ ಅವನಿಗೆ ವಿಮಾನ ನಿಲ್ದಾಣ ತೋರಿಸಲೆಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋದೆ. ನಿಲ್ದಾಣದಿಂದ ಹೊರಟ ವಿಮಾನವೊಂದು ಅತಿಯಾದ ಹೊಗೆ ಉಗುಳುತ್ತಾ ರನ್ ವೇನಲ್ಲಿ ಸಾಗಿತ್ತು. ಅದನ್ನು ನೋಡಿದವನೇ ‘ಓಹೋ, ಇಲ್ಲೂ ಪೆಟ್ರೋಲ್ ಗೆ ಸೀಮೆ ಎಣ್ಣೆ ಮಿಕ್ಸ್ ಮಾಡಿ ವಿಮಾನಕ್ಕೆ ಹಾಕ್ತಾರಾ?’ ಎಂದು ಪ್ರಶ್ನಿಸಿದ್ದ !

-ನಗರ ಗುರುದೇವ್ ಭಂಡಾರ್ಕರ್

***
ಸೂ...ಸು

ಅದೊಂದು ದಿನ ನಮ್ಮ ಕುಟುಂಬದ ಮಿತ್ರರು ನಮ್ಮ ಮನೆಯಲ್ಲಿ ಸೇರಿದ್ದರು. ಮನೆಪಕ್ಕದ ಮೂರು ವರ್ಷದ ಪುಟ್ಟ ರಿಯಾ ಅವರಮ್ಮನ ಬಳಿ ಹೋಗಿ, ‘ಮಮ್ಮಾ, ಸೂ..ಸು.. ಅಂದದ್ದು ಕೇಳಿ ಅವರಮ್ಮ ತಕ್ಷಣ ಬಾತ್ ರೂಮಿಗೆ ಕರೆದೊಯ್ದಾಗ ‘ಒಂದೇ ಸಮನೆ ಗಲಾಟೆ ಆರಂಭಿಸಿದಳು. ‘ಸೂಸೂ ಅಲ್ಲ, ಸೂಸು’ ಅಂತ ಪುನಃ ಅಳಲಾರಂಭಿಸಿದಳು. ನಮಗ್ಯಾರಿಗೂ ಅರ್ಥವಾಗಲಿಲ್ಲ. ತುಸು ಸಮಯದ ಬಳಿಕ ಡೈನಿಂಗ್ ಟೇಬಲ್ ಕಡೆ ಕೈತೋರಿಸುತ್ತಾ, ‘ಸೂಸು... ಸೂಸು…’ ಅಂತ ಗಾಜಿನ ಲೋಟಗಳಲ್ಲಿ ಇಟ್ಟಿದ್ದ ಜ್ಯೂಸು ಕಡೆ ತೋರಿಸಿದಾಗಲೇ ಗೊತ್ತಾದದ್ದು, ಜ್ಯೂಸು ಅವಳ ಬಾಯಲ್ಲಿ ‘ಸೂಸು' ಅಂತಾಗಿದೆ ಎಂದು !

-ಸುಮನಾ

***

ಚೌಕಾಸಿ ಅಜ್ಜಿ

ಮಧ್ಯಮವರ್ಗದವರಾದ ನಾವು ಎಲ್ಲದರಲ್ಲೂ ಚೌಕಾಸಿ ಮಾಡುವುದು ಸಾಮಾನ್ಯ. ನಮ್ಮ ಮಗಳು ಅಮೇರಿಕದಿಂದ ಬಂದಿದ್ದಳು. ಅವಳ ಮಕ್ಕಳಿಗೆ ಇಲ್ಲಿನ ಚೌಕಾಸಿ ವ್ಯಾಪಾರ ಗೊತ್ತಿಲ್ಲ. ನಾನು ಆಟೋಕ್ಕೆ, ಹಣ್ಣು, ತರಕಾರಿಗೆಲ್ಲಾ ಚೌಕಾಸಿ ಮಾಡೋದನ್ನು ನೋಡಿ ಅಲ್ಪಸ್ವಲ್ಪ ಪರಿಚಯ ಆಗಿತ್ತು. ಅವತ್ತು ಊಟಕ್ಕೆಂದು ಹೋಟೇಲ್ ಗೆ ಹೋಗಿದ್ವಿ. ಊಟದ ನಂತರ ವೇಟರ್ ತಂದಿರಿಸಿದ್ದ ಬಿಲ್ಲನ್ನು ಎತ್ತಿ ನಮ್ಮ ಹಿರಿಯ ಮೊಮ್ಮಗಳು ನನ್ನ ಕೈಗೆ ಕೊಟ್ಟಳು. ಅವರ ಅವ್ವ, ಬಿಲ್ಲನ್ನು ಅಜ್ಜಿಯ ಕೈಗೆ ಯಾಕೆ ಕೊಟ್ಟೆ ಎಂದು ಬೈದಳು. ಅದಕ್ಕೆ ನನ್ನ ಮೊಮ್ಮಗಳ ಉತ್ತರ ‘ಅಜ್ಜೀ ವಿಲ್ ಬಾರ್ಗೈನ್!’ 

-ಮಾಲತಿ ಮುದಕವಿ

***

( ‘ಮಯೂರ' ಜುಲೈ ೨೦೨೧ರ ಸಂಚಿಕೆಯಿಂದ ಆಯ್ದದ್ದು)