‘ಮಯೂರ' ಹಾಸ್ಯ - ಭಾಗ ೬೭

‘ಮಯೂರ' ಹಾಸ್ಯ - ಭಾಗ ೬೭

ಆಪದ್ಭಾಂಧವ !

ನಮ್ಮ ಯಡಹಳ್ಳಿಯ ಮಾದೇವ ಮಾವ ವಿನೋದದ ಮಾತುಗಳಿಗೆ ಹೆಸರುವಾಸಿ. ಒಮ್ಮೆ ಅವನು ರಾತ್ರಿ ಧಾರವಾಡದಿಂದ ತನ್ನ ಗೂಡ್ಸ್ ಗಾಡಿಯಲ್ಲಿ ಒಬ್ಬನೇ ಬರುವಾಗ ಹೊರವಲಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕೈ ಮಾಡಿ ಗಾಡಿ ಹತ್ತಿದ. ಅವನು ಕುಡಿದಿರೋದು ಗೊತ್ತಾದ ಕೂಡಲೇ ‘ದೇವರ ಬಂದಂಗೆ ಬಂದಿ ನೋಡಪಾ ಮಾರಾಯಾ. ನನಗೂ ಕಣ್ಣ ಸರಿ ಕಾಣುದಿಲ್ಲಾ. ಲೈಟಿಂದೂ ಪ್ಲಾಬ್ಲಮ್ ಇತ್ತು. ಜೋಡಿ ಆದಂಗ ಆತು' ಅಂದಾಗ ಆ ವ್ಯಕ್ತಿಯ ನಶೆ ಇಳಿದು, ‘ಸಾವಕಾರ, ನಾ ಒಂದ ದಗದಾ ಮರತ ಬಂದೇನ್ರೀ, ಕೈ ಮುಗಿತೇನಿ. ಇಲ್ಲೇ ಇಳಿಸ್ರೀ... ವಾಪಾಸ್ ಹೋಗಬೇಕು ‘ ಎಂದು ಹೇಳಿ, ಇಳಿದು ಓಡಿ ಹೋದನಂತೆ.

-ರವಿ ಮುನವಳ್ಳಿ 

***

ಪ್ರಧಾನ ಮಂತ್ರಿಗಳಿಲ್ಲ

ಇಂದಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಚಲಿತ ವಿದ್ಯಮಾನಗಳ ಪರಿಚಯವೇ ಇಲ್ಲ. ಬಹಳಷ್ಟು ವಿದ್ಯಾರ್ಥಿಗಳಿಗೆ ರಾಜ್ಯದ ಶಿಕ್ಷಣ ಸಚಿವರ ಹೆಸರು ಗೊತ್ತಿಲ್ಲ ಅಂತ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗುತ್ತಿದ್ದವು. ನಾನು ಒಂಬತ್ತನೇ ತರಗತಿಗೆ ಪಾಠ ಮಾಡುತ್ತಿರುವಾಗ ‘ಸಾಮಾನ್ಯ ಜ್ಞಾನದ ಒಂದು ಪ್ರಶ್ನೆ ಹೇಳ್ತೀನಿ. ಉತ್ತರ ಗೊತ್ತಿದ್ದವರು ಕೈ ಮೇಲಕ್ಕೆತ್ತಬೇಕು.’ ಎಂದು ಹೇಳಿ, ನಮ್ಮ ದೇಶದ ಪ್ರಧಾನ ಮಂತ್ರಿಗಳು ಯಾವ ದೇಶಕ್ಕೆ ಪ್ರವಾಸ ಕೈಗೊಂಡಿದ್ದಾರೆ?’ ಎಂದೆ. ಕೂಡಲೆ ಎದ್ದು ನಿಂತ ಬೃಂದಾ, ‘ನಮ್ಮ ದೇಶಕ್ಕೆ ಪ್ರಧಾನ ಮಂತ್ರಿಗಳಿಲ್ಲ. ಇರೋದು ಒಬ್ಬರೇ ಪ್ರಧಾನ ಮಂತ್ರಿ' ಎಂದಳು. ಆಕೆ ಪ್ರಶ್ನೆಯನ್ನು ಗ್ರಹಿಸಿದ ಪರಿಗೆ ಬೆರಗಾಗುವ ಸರದಿ ನನ್ನದಾಗಿತ್ತು.

-ಮಲ್ಲಿಕಾರ್ಜುನ ಸುರಧೇನುಪುರ

***

ಕೊರೊನಾ ಟೆಸ್ಟ್

ಲಾಕ್ ಡೌನ್ ಸಮಯದಲ್ಲಿ ಮಕ್ಕಳಿಗೆ ಮನರಂಜನೆಯ ಜೊತೆಗೆ ಸ್ವಲ್ಪ ಸಾಮಾನ್ಯ ಜ್ಞಾನವೂ ಬೆಳೆಯಲಿ ಎಂದು ಚಿಕ್ಕಮ್ಮ ಮಕ್ಕಳೊಂದಿಗೆ ರಾಮಾಯಣ ಚಿತ್ರವನ್ನು ನೋಡುತ್ತಿದ್ದರು. ಬಹಳ ಕುತೂಹಲಕಾರಿಯಾದ ಯುದ್ಧ ಸನ್ನಿವೇಶವಿತ್ತು. ರಾವಣನ ಕಡೆಯವರೆಲ್ಲಾ ಒಬ್ಬೊಬ್ಬರಾಗಿ ಸೋಲು ಅನುಭವಿಸುತ್ತಿರುವಾಗ, ರಾವಣನ ಅಣತಿಯಂತೆ ಕುಂಭಕರ್ಣನನ್ನು ಎಬ್ಬಿಸಲು ಆತ ಪ್ರಯತ್ನ ಮಾಡಿದರೂ ಎಚ್ಚರವಾಗದೇ ಇದ್ದಾಗ, ಗದಾಪ್ರಹಾರ ಇತ್ಯಾದಿ ಮಾಡುತ್ತಾ, ಮೂಗಿನೊಳಗೆ ದೊಡ್ಡ ಬಾಣದಂತಹದನ್ನು ತೂರಿಸಿ ಎಚ್ಚರಗೊಳಿಸಲು ಯತ್ನಿಸುತ್ತಿರುವ ದೃಶ್ಯ ಅದು. ಚಿಕ್ಕಮ್ಮನ ಪಕ್ಕದಲ್ಲಿ ಕುಳಿತಿದ್ದ ಪುಟ್ಟ ದೀಪೂ ಅಮ್ಮನ ಕೈಹಿಡಿದು ಅಲುಗಾಡಿಸುತ್ತಾ, ‘ಅಮ್ಮ... ಕುಂಭಕರ್ಣನಿಗೂ ಕೊರೊನಾ ಟೆಸ್ಟ್ ಮಾಡ್ತಿದಾರಾ?’ ಅಂದಾಗ ಅಲ್ಲಿದ್ದವರೆಲ್ಲರೂ ಹೊಟ್ಟೆ ತುಂಬಾ ಹುಣ್ಣಾಗುವಂತೆ ನಕ್ಕರು. 

-ಸುಮನಾ

***

ಮೂಗ್ಬಾಯಿ ಚೆಡ್ಡಿ

ಲಾಕ್ ಡೌನ್ ವೇಳೆ ದಿನ ಬಳಕೆಯ ಅಗತ್ಯ ವಸ್ತು ಖರೀದಿಗೆ ಸರತಿ ಸಾಲಿನಲ್ಲಿ ಕಾಯಬೇಕಿತ್ತು. ಅದಕ್ಕೆ ಅಂಗಡಿ ಮಾಲೀಕ ಪರಿಚಯದ ಸುದೇಶ್ ಅವರಿಗೆ ಹಿಂದಿನ ದಿನವೇ ಅಗತ್ಯ ವಸ್ತುಗಳ ಲಿಸ್ಟ್ ಅನ್ನು ವಾಟ್ಸ್ ಆಪ್ ಗೆ ಕಳಿಸುತ್ತಿದ್ದೆವು. ಅವರು ಮರುದಿನ ಬೆಳಿಗ್ಗೆ ಸಾಮಾಗ್ರಿಗಳನ್ನು ರೆಡಿ ಮಾಡಿಟ್ಟು ಫೋನ್ ಮಾಡುತ್ತಿದ್ದರು. ಒಮ್ಮೆ ನೀವು ವಾಟ್ಸ್ ಆಪ್ ಮಾಡಿದ ಎಲ್ಲಾ ಸಾಮಾನುಗಳನ್ನು ಪ್ಯಾಕ್ ಮಾಡಿ ಇಟ್ಟಿದ್ದೀವಿ. ಕೊನೆಯ ಐಟಂ ‘ಮೂಗ್ಬಾಯಿ ಚೆಡ್ಡಿ -೬’ ಏನೆಂದು ಗೊತ್ತಾಗಲಿಲ್ಲ’ ಎಂದರು. ನಮ್ಮ ನಾದಿನಿ ಮಗ ಶ್ರೀನಿಧಿ ಲಿಸ್ಟ್ ಬರೆದಿದ್ದ. ಅವನನ್ನೇ ಕೇಳಿದೆವು. ‘ಆರು ಮಾಸ್ಕ್ ಅಂತ ಹೇಳಿದ್ರಲ್ಲ. ಅದನ್ನ ಕನ್ನಡದಲ್ಲಿ ಮೂಗ್ಬಾಯಿ ಚೆಡ್ಡಿ - ೬’ ಅಂತ ಬರೆದೆ ಅಷ್ಟೇ.' ಎಂದು ವಿವರಿಸಿದ.

-ನಗರ ಗುರುದೇವ್ ಭಂಡಾರ್ಕರ್

***

(‘ಮಯೂರ' ಸೆಪ್ಟೆಂಬರ್ ೨೦೨೧ರ ಸಂಚಿಕೆಯಿಂದ ಆಯ್ದದ್ದು)