‘ಮಯೂರ' ಹಾಸ್ಯ - ಭಾಗ ೬೮

‘ಮಯೂರ' ಹಾಸ್ಯ - ಭಾಗ ೬೮

ನಿಧಾನವಾಗಿ ಮಾಡಿ

ಪಕ್ಷ ಮಾಸದ ಒಂದು ದಿನ. ಮನೆ ಪಕ್ಕದ ಗೀತಾ ಮಾಮಿ ಪುಟ್ಟ ಶಾಸ್ತ್ರಿಗೆ ಊಟಕ್ಕೆ ಹೇಳಿದ್ದರು. ಮದ್ಯಾಹ್ನ ಊಟದ ಹೊತ್ತಿಗೆ ಪುಟ್ಟ ಶಾಸ್ತ್ರಿ ಪಂಚೆ ಉಟ್ಟು ಹೋದ. ಊಟಕ್ಕೆ ಎಲೆ ಹಾಕಿ, ಭಟ್ಟರೊಂದಿಗೆ ಕೂಡಿಸಿ, ‘ನಿಧಾನವಾಗಿ ಊಟ ಮಾಡು' ಎಂದು ಪೂರಿ, ವಡೆ, ರವೆ ಪಾಯಸ ಹಾಕಿದರು. ಅದು ಖಾಲಿಯಾಗುತ್ತಿದ್ದಂತೆಯೇ ಮತ್ತೆ ಹಾಕಿದರು. ಎಲೆ ಮೇಲೆ ಏನೂ ಬಿಡಬಾರದು ಎನ್ನುವುದನ್ನು ಅಪ್ಪನಿಂದ ಕಲಿತಿದ್ದ ಶಾಸ್ತ್ರಿ, ಹೊಟ್ಟೆ ತುಂಬಿದರೂ ಎಲೆ ಖಾಲಿ ಮಾಡಿ ಒದ್ದಾಡತೊಡಗಿದ. ಪಕ್ಕದಲ್ಲಿ ಕೂತ ಭಟ್ಟರು ಕಿವಿಯಲ್ಲಿ ಮೆಲ್ಲಗೆ, ‘ಎಲೆ ಮೇಲೆ ಸ್ವಲ್ಪವಾದರೂ ಬಿಡಬೇಕು. ಇಲ್ಲದಿದ್ರೆ ಹಾಕ್ತಾನೆ ಇರ್ತಾರೆ. ಉಳಿಸಿದರೆ ಮಾತ್ರ ಹಿರಿಯರಿಗೆ ತೃಪ್ತಿಯಾದಂತೆ..' ಎಂದಾಗ ಶಾಸ್ತ್ರಿ ಬೆಪ್ಪಾದ.

-ರಾಮಕೃಷ್ಣ ಗೋಖಲೆ ಸೊರಬ

***

ವರ್ಷಕ್ಕಾಗ ಬೇಕು

ಅಂದು ಮುಂಬೈಯಿಂದ ಬಂದ ನಮ್ಮ ಅಣ್ಣನ ಮೊಮ್ಮಗ ಹರ್ಷ ಮತ್ತು ಬೆಳಗಾವಿಯ ಅವನ ಅಣ್ಣ ನಕುಲ ನನ್ನೊಂದಿಗೆ ಹೊರಗೆ ಬಂದಿದ್ದರು. ನಾನು ಅವರಿಬ್ಬರನ್ನೂ ನನ್ನ ಗೆಳೆಯ ಜಿತೇಂದ್ರನ ಅಂಗಡಿಯಲ್ಲಿ ಕೂಡ್ರಿಸಿ ನನ್ನ ಕೆಲಸಕ್ಕೆ ಹೋದೆ. ಜೀತೇಂದ್ರ ಇವರಿಬ್ಬರಿಗೂ ಬಾಳೆಹಣ್ಣು ತಿನ್ನಲು ಹೊಟ್ಟಿದ್ದ. ಅವರು ಬಾಳೆಹಣ್ಣು ತಿಂದು, ಅದರ ಸಿಪ್ಪೆಯನ್ನು ಅತ್ಯಂತ ಕಾಳಜಿಯಿಂದ ಒಂದು ಕವರಿನಲ್ಲಿ ಹಾಕಿಕೊಂಡು ಇಟ್ಟುಕೊಂಡರು. ಕೇಳಿದರೆ, ‘ವರ್ಷಕ್ಕಾಗ ಬೇಕು' ಎಂದು ಹೇಳಿದರು. ಮನೆಗೆ ಬಂದೊಡನೆ ಓಡಿ. ‘ವರ್ಷಕ್ಕಾ, ನಿನಗ ಮುಖಕ್ಕ ಹಚ್ಕೊಳಾಕ ತಂದೇವ ನೋಡ' ಎಂದು ನನ್ನ ಮಗಳಿಗೆ ಬಾಳೆಹಣ್ಣಿನ ಸಿಪ್ಪೆ ಹಾಕಿದ್ದ ಕವರ್ ಕೊಟ್ಟಾಗ ಎಲ್ಲರೂ ನಕ್ಕರು.

-ರವಿ ಮುನವಳ್ಳಿ 

 ***

ಕಣ್ಣೇಕೆ ಕೆಂಪು

ಮೊಮ್ಮಗಳು ಸಿರಿಗೆ ಮೂರು ವರ್ಷವಿದ್ದಾಗ ಮೊಬೈಲ್ ನೋಡುವುದು ಅಭ್ಯಾಸವಾಗಿತ್ತು. ಅದನ್ನು ತಪ್ಪಿಸಬೇಕೆಂದು ಮೊಬೈಲಿನ ಅಡ್ಡಪರಿಣಾಮಗಳ ಬಗ್ಗೆ ಹೇಳಿದ್ದೆ. ‘ಮೊಬೈಲ್ ನೋಡಿದರೆ ಕಣ್ಣು ಉರಿಯುತ್ತದೆ. ಕೆಂಪಾಗುತ್ತದೆ. ದಪ್ಪ ಗ್ಲಾಸಿನ ಕನ್ನಡಕ ಬರುತ್ತದೆ. ಅದಕ್ಕೇ ಮೊಬೈಲ್ ನೋಡಬಾರದು.’ ಎಂದು ತಿಳಿಸಿದ್ದೆ. ಮನೆ ಮೇಲೆ ಹಕ್ಕಿಗಳಿಗೆ ಕಾಳು ಹಾಕುತ್ತ ಅವಳಿಗೆ ಊಟ ಮಾಡಿಸುತ್ತಿದ್ದಾಗ ಪಾರಿವಾಳಗಳನ್ನು ದಿಟ್ಟಿಸಿ ನೋಡಿದ ಸಿರಿ ‘ ಅಲ್ನೋಡಜ್ಜಿ, ಪಾರಿವಾಳಗಳ ಕಣ್ಣು ಎಷ್ಟು ಕೆಂಪಾಗಾಗಿವೆ. ಅವು ಸಿಕ್ಕಾಪಟ್ಟೆ ಮೊಬೈಲ್ ನೋಡ್ತಾ ಇರಬೇಕು. ಅಷ್ಟೆಲ್ಲಾ ನೋಡಬಾರದು ಅಂತ ಹೇಳು ಮತ್ತೆ' ಎಂದಳು.

-ಉಮಾ ಬಸವಣ್ಯಪ್ಪ

***

ಒಂದು ಬೋಂಡ

ಬಹಳ ವರ್ಷಗಳ ಹಿಂದಿನ ಘಟನೆ. ಅದು ದಸರಾ ಸಮಯ. ಮೈಸೂರು ಮಹಾರಾಜರು ಅಂಬಾರಿಯಲ್ಲಿ ಕುಳಿತುಕೊಳ್ಳುವುದು ಅದೇ ಕೊನೆಯ ವರ್ಷ ಎನ್ನುವ ಸುದ್ದಿ ಹರಡಿತ್ತು. ಹೀಗಾಗಿ, ಅಂಬಾರಿ ನೋಡಲು ಮೈಸೂರಿಗೆ ಹೊರಟಿದ್ದೆ. ಹುಣಸೂರಿನಲ್ಲಿ ಕಾಫಿಗಾಗಿ ಬಸ್ಸು ನಿಲ್ಲಿಸಿದರು. ಅದು ಬಹಳ ಚಿಕ್ಕ ಹೋಟೇಲ್. ಜನ ತುಂಬಾ ಇದ್ದರು. ಹೀಗಾಗಿ, ಅದಾಗಲೇ ಇಬ್ಬರು ಕೊಡವರು ಕುಳಿತಿದ್ದ ಟೇಬಲ್ಲಿಗೆ ನಾನೂ ಕೂತೆ. ಮಾಣಿ ‘ಸಾರ್ ಏನ್ ಕೊಡಲಿ?’ ಎಂದು ಕೇಳಿದ. ನಾನು ಕಾಫಿ ಹೇಳಿದೆ. ಕೊಡವರಲ್ಲಿ ಒಬ್ಬ ‘ನೀಕ್ ಎಂತ ಬೋಂಡು? (ನಿನಗೆ ಏನು ಬೇಕು?) ಎಂದು ಕೇಳಿದ. ಇನ್ನೊಬ್ಬ ‘ನಾಕ್ ಒಂದೂ ಬೋಂಡ.’ (ನನಗೆ ಏನೂ ಬೇಡ) ಎಂದ. ಆಗ ಮೊದಲನೇಯವ ‘ಅಕ್ಕ, ನಾಕೂ ಒಂದೂ ಬೋಂಡಾ’ (ಹಾಗಾದರೆ ನನಗೂ ಏನೂ ಬೇಡ) ಎಂದ. ಇದನ್ನು ಕೇಳಿಸಿಕೊಂಡ ಮಾಣಿ ನನಗೆ ಕಾಫಿ, ಅವರಿಗೆ ಒಂದೊಂದು ಬೋಂಡ ತಂದುಕೊಟ್ಟ !

-ಜಿ.ಬಿ.ರಾಘವೇಂದ್ರ ರಾವ್

***

(‘ಮಯೂರ’ ಜನವರಿ ೨೦೨೨ ರ ಸಂಚಿಕೆಯಿಂದ ಆಯ್ದದ್ದು)