‘ಮಯೂರ' ಹಾಸ್ಯ - ಭಾಗ ೭೦

‘ಮಯೂರ' ಹಾಸ್ಯ - ಭಾಗ ೭೦

ಶಾರದೆ ಒಲಿದದ್ದು ಹೇಗೆ?

ಮಗಳು ನಿಖಿತಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ವಾರಕ್ಕೊಮ್ಮೆ ಸಂಗೀತ ಕ್ಲಾಸಿಗೆ ಹೋಗುತ್ತಿದ್ದಳು. ಕೆಲವಾರಗಳ ಕಾಲ ತರುವಾಯ ಸಂಗೀತದ ಪ್ರಾಥಮಿಕ ಪಾಠಗಳನ್ನು ಪೂರೈಸಿದ ಸಂಗೀತ ಶಿಕ್ಷಕರು “ಸಂಗೀತ ಶಾರದೆಯನ್ನು ಒಲಿಸಿಕೊಳ್ಳಬೇಕು ಎಂದರೆ ಕಠಿಣ ಪರಿಶ್ರಮ ಹಾಕಬೇಕು. ಶ್ರದ್ಧೆ ಬಹಳ ಮುಖ್ಯ" ಎಂದು ಹೇಳಿದ್ದರಂತೆ. ಮಗಳು ಮನೆಗೆ ಬಂದವಳೇ ಅಜ್ಜನ ಬಳಿ ರಾಗ-ತಾಳಗಳ ಬಗ್ಗೆ ಪ್ರಶ್ನೆ ಹಾಕಿದಳು. ಅಜ್ಜ “ ಇಲ್ಲ ಪುಟ್ಟಿ, ನನಗೆ ನಿಜವಾಗ್ಲೂ ಸಂಗೀತದ ಬಗ್ಗೆ ತಿಳಿದಿಲ್ಲ.” ಎಂದರು. “ಸಂಗೀತ ಕಲಿಯದೆ ಈ ಶಾರದೆಯನ್ನು ಹೇಗೆ ಒಲಿಸಿಕೊಂಡಿರಿ?” ಎಂದು ಅಜ್ಜಿಯತ್ತ ತೋರಿಸಿ ಕೇಳಿದಳು. ಅಜ್ಜಿಯ ಹೆಸರು ಶಾರದೆ ಎಂದೇ ಇರುವುದರಿಂದ ನಮಗೆಲ್ಲಾ ನಗೆ ತಡೆಯಲಾಗಲಿಲ್ಲ. 

-ನಗರ ಗುರುದೇವ್ ಭಂಡಾರ್ಕರ್

***

ದೆವ್ವಕ್ಕೆ ಹೆದರಿಕೆ

ಅಕ್ಕನ ನಾಲ್ಕು ವರ್ಷದ ಮಗ ವರ್ಷಿತ್ ರಾತ್ರಿ ಬೇಗ ಮಲಗಲಿಲ್ಲ. ಅವನನ್ನು ಮಲಗಿಸಲು ಅಕ್ಕ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಕೊನೆಗೆ ಅವಳು “ಹೊರಗೆ ದೆವ್ವ ಬಂದಿದೆ ನೋಡು, ಅಲ್ಲೇ ಮೆಟ್ಟಿಲ ಹತ್ರ, ಕತ್ತಲಾದಾಗ ಕುಂತದ. ಲಗೂ ಮಲ್ಕೋ, ಇಲ್ಲಂದ್ರ ಒಳಗ ಬರ್ತದ" ಎಂದು ಗದರಿಸಿದಳು. ಕಿಟಕಿಯಿಂದ ಆಚೆ ನೋಡಿದ ವರ್ಷಿತ್ ಹೊರಗಡೆಯ ಲೈಟುಗಳೆಲ್ಲಾ ಆರಿದ್ದನ್ನು ನೋಡಿ, ‘ಹೊರಗ ಲೈಟ್ ಹಾಕಮ್ಮಾ, ಕತ್ತಲಾದಾಗ ದೆವ್ವಕ್ಕ ಹೆದರಿಕೆ ಆಗ್ತದ. ಪಾಪ" ಅಂದಾಗ ಮನೆಯವರೆಲ್ಲಾ ನಕ್ಕಿದ್ದೇ ನಕ್ಕಿದ್ದು.

-ನರಸಿಂಹರೆಡ್ಡಿ ಯಂಕಾಮೊಳ

***

ಲೋಕೇಶನ್

ಇದು ನನ್ನ ಸ್ನೇಹಿತೆಯೊಬ್ಬಳಿಗಾದ ಅನುಭವ. ಮದುವೆ ಮುಂಜಿ, ಮಂಗಲಕಾರ್ಯಗಳ ಸೀಸನ್ ಪ್ರಾರಂಭವಾದ ಸಮಯವದು. ನನ್ನ ಗೆಳತಿ ಚಿತ್ರಾ ತನ್ನ ಸಂಬಂಧಿಕರೊಬ್ಬರ ಗೃಹಪ್ರವೇಶಕ್ಕೆ ಹೋಗುವ ತಯಾರಿಯಲ್ಲಿದ್ದಳು. ಆಮಂತ್ರಣ ಪತ್ರಿಕೆ ನೋಡುತ್ತಲೇ ಅವಳು ತನ್ನ ಗೆಳತಿಗೆ ಫೋನ್ ಮಾಡಿ ‘ರೆಡಿಯಾಗಿದ್ದೀನಿ, ಸ್ವಲ್ಪ ಲೋಕೇಶನ್ ಕಳಿಸ್ತೀಯಾ?’ ಎಂದಳು. ಕೆಲಸಮಯದ ಬಳಿಕ ಗೆಳತಿಯ ಮಗ ಲೋಕೇಶ, ‘ಏನು ಆಂಟಿ? ಬರಬೇಕು ಅಂದ್ರಂತೆ' ಎನ್ನುತ್ತ ಎದುರಿಗೆ ಬಂದು ನಿಂತಾಗ ಚಿತ್ರಾಳಿಗೆ ಗಲಿಬಿಲಿಯಾಯಿತು. ಲೋಕೇಶನ್ ಕಳಿಸಿಕೊಡು ಎಂದರೆ ಗೆಳತಿ ತನ್ನ ಮಗ ‘ಲೋಕೇಶ' ನನ್ನೇ ಕಳಿಸಿಕೊಟ್ಟಿದ್ದಳು!

-ಇಂದಿರಾ ಮೋಟೆಬೆನ್ನೂರ

***

ಮದುವೆಗಳೇ ಆಗಿಲ್ಲ

ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಇತ್ತೀಚೆಗೆ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದಾಗ ನಡೆದ ಘಟನೆ. ಶಾಲೆಯ ಅತ್ಯುತ್ತಮ ಮೂಲಭೂತ ಸೌಲಭ್ಯ ಮತ್ತು ಶಿಕ್ಷಕರ ಕ್ರಿಯಾಶೀಲತೆ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸುತ್ತಾ, ‘ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಒಂದನೇ ತರಗತಿಗೆ ದಾಖಲಾತಿ ಇಷ್ಟೊಂದು ಕಡಿಮೆ ಇದೆ?’ ಎಂದಾಗ ಶಿಕ್ಷಕಿಯೊಬ್ಬರು ‘ಏನ್ಮಾಡೋದು ಸರ್, ಕಳೆದ ಏಳೆಂಟು ವರ್ಷಗಳಿಂದ ಈ ಊರಲ್ಲಿ ಮದುವೆಗಳೇ ಆಗಿಲ್ಲ' ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಿಬ್ಬಂದಿ ನಗು ತಡೆಯಲಾರದೇ ಜೀಪೇರಿ ಹೊರಟರು.

-ಗೊಂಡೇದಹಳ್ಳಿ ಜೀವಿ

***

(‘ಮಯೂರ' ಮಾರ್ಚ್ ೨೦೨೨ ರ ಸಂಚಿಕೆಯಿಂದ ಸಂಗ್ರಹಿತ)