‘ಮಯೂರ' ಹಾಸ್ಯ - ಭಾಗ ೭೧

‘ಮಯೂರ' ಹಾಸ್ಯ - ಭಾಗ ೭೧

ಕೂಬಸ್

ಮಾರುಕಟ್ಟೆಗೆ ಹೋದಾಗ ತಂಗಿಯ ಮಗ ಆಟದ ಸಾಮಾನಿನ ಅಂಗಡಿಯ ಮುಂದೆ ನಿಂತು ‘ಕೂಬಸ್' ಬೇಕು ಎಂದು ಹಠ ಮಾಡತೊಡಗಿದ. ಸರಿ, ಅಂಗಡಿಯವನಿಗೆ ಬಸ್ಸು ತೋರಿಸಪ್ಪಾ ಎಂದಿದ್ದಾಯಿತು. ಯಾವುದನ್ನು ತೋರಿಸಿದರೂ, ಇದಲ್ಲ ‘ಕೂಬಸ್' ಬೇಕು ಎನ್ನತೊಡಗಿದ. ತಲೆಕೆಟ್ಟು ಹೋಯಿತು ಅಂಗಡಿಯವನಿಗೆ. ಮಗುವನ್ನು ಎತ್ತಿಕೊಂಡು ನಿನಗೆ ಯಾವ ಬಸ್ಸು ಬೇಕೋ ತೆಗೆದುಕೋ ಎಂದು ಆಟಿಕೆಗಳ ಶೆಲ್ಫ್ ಬಳಿ ಕರೆದುಕೊಂಡು ಹೋದ. ಅಲ್ಲಿದ್ದ ರೈಲನ್ನು ಗಬಕ್ಕನೆ ತೆಗೆದುಕೊಂಡು, ಖುಷಿಯಿಂದ ‘ಕೂ...ಬಸ್, ಚುಕುಬುಕು ಚುಕುಬುಕು...;ಅಂತಾ ಬಾಯಿಗೆ ಕೈಯಿಟ್ಟು ಕೂಗತೊಡಗಿದಾಗ ಎಲ್ಲರೂ ಹಣೆಚಚ್ಚಿಕೊಂಡಿದ್ದಾಯಿತು. 

 -ನಳಿನಿ ಟಿ ಭೀಮಪ್ಪ

***

ನೀರು, ಎಳನೀರು

ನನಗೆ ಜ್ವರ ಕಾಣಿಸಿಕೊಂಡಿತ್ತು. ಮಾತ್ರೆ ತೆಗೆದುಕೊಂಡೆ. ಜ್ವರ ಹೋದರೂ ಸುಸ್ತು ಕಡಿಮೆಯಾಗಲಿಲ್ಲ. ಚಿಕ್ಕಮ್ಮ ವೈದ್ಯರ ಬಳಿ ಕರೆದುಕೊಂಡುಹೋದರು. ತಪಾಸಣೆಯ ಬಳಿಕ ವೈದ್ಯರು ‘ನಿರ್ಜಲೀಕರಣ ಆಗಿದೆ. ಹೆಚ್ಚು ನೀರು, ಎಳನೀರು ಕುಡಿಬೇಕು' ಅಂದರು. ‘ಮಾತ್ರೆ ಬರ್ಕೊಡ್ತೀರಾ? ಚಿಕ್ಕಮ್ಮ ಕೇಳಿದರು. ಒಂದೆರಡು ಮಾತ್ರೆ ಬರೆದುಕೊಟ್ಟ ವೈದ್ಯರು, ‘ಚೆನ್ನಾಗಿ ನೀರು ಕುಡಿಬೇಕು ತಿಳೀತಾ?’ ಅಂದರು. ‘ವಾರದಿಂದ ಸುಸ್ತು ಕಡಿಮೆಯಾಗಿಲ್ಲ, ಏನಾದರೂ ಪರೀಕ್ಷೆ ಮಾಡಿಸಬೇಕಾ ಹೀಗೆ?’ ಚಿಕ್ಕಮ್ಮ ಮತ್ತೆ ಕೇಳಿದರು. ‘ಬೇಡ, ನೀರು, ಎಳನೀರು ಕುಡಿತಾ ಇರಲಿ. ಸಾಕು' ಎಂದರು. ಆಚೆ ಬಂದಾಗ ಬಿಲ್ಲಿಂಗ್ ಕೌಂಟರ್ ನಲ್ಲಿ ೨೦೦ ರೂಪಾಯಿ ಕನ್ಸಲ್ಟೇಷನ್ ಫೀ ಎಂದರು. ಚಿಕ್ಕಮ್ಮ ‘ನೂರೈವತ್ತು ತಗೊಳ್ಳಿ ಸಾಕು. ನಿಮ್ಮ ಡಾಕ್ಟ್ರು ನೀರು, ಎಳನೀರು ಕುಡಿಲಿ ಅನ್ನದು ಬಿಟ್ರೆ ಬೇರೇನೂ ಹೇಳಿಲ್ಲ.’ ಅಂದಳು.

-ಕಾವ್ಯಾ ಹೀರೇಮಠ

***

ಆಧಾರ-ಆಧಾರ್

ಈಚೆಗೊಂದು ದಿನ ಶಾಲಾ ಸ್ಟಾಫ್ ರೂಮಿನಲ್ಲಿ ಸಹೋದ್ಯೋಗಿಗಳೊಂದಿಗೆ ಕೂತಿರುವಾಗ, ಆಗಷ್ಟೇ ಕೊಟ್ಟೂರಿನ ಕಾರ್ತಿಕೋತ್ಸವ ಮುಗಿಸಿಕೊಂಡು ಬಂದಿದ್ದ ಮುಖ್ಯ ಗುರುಗಳು ಒಳಬಂದರು. ‘ಮಹೇಶ್, ಟೇಬಲ್ ಮೇಲೆ ಕೋಟ್ರೇಶನ ಆಧಾರ್ ಇದೆ ತಗೊಳ್ಳಿ ‘ ಎಂದರು. ನಾನು ಟೇಬಲ್ ಮೇಲೆ ಕೋಟ್ರೇಶ್ ಎಂಬ ವಿದ್ಯಾರ್ಥಿಯ ಆಧಾರ್ ಕಾರ್ಡ್ ನ್ನು ಹುಡುಕತೊಡಗಿದೆ. ಆದರೆ ಯಾವುದೇ ಆಧಾರ್ ಕಾರ್ಡ್ ಅಲ್ಲಿ ಸಿಗದ ಕಾರಣ, ‘ಸರ್, ಕೋಟ್ರೇಶನ ಆಧಾರ್ ಕಾರ್ಡ್ ಸಿಗ್ತಾ ಇಲ್ಲ.’ ಎಂದೆ. ಅದಕ್ಕವರು ನಗುತ್ತ, ‘ಟೇಬಲ್ ಮೇಲೆ ಕೋಟ್ರೇಶ್ವರನ ಆಧಾರ (ಪ್ರಸಾದ) ಇದೆ ತಗೊಂಡು ಹಣೆಗೆ ಹಚ್ಚಿಕೊಳ್ಳಿ ಅಂತ ಹೇಳಿದೆ' ಎಂದು ಬಿಡಿಸಿ ಹೇಳಿದರು.

-ಮಹೇಶ್ವರ ಹುರುಕಡ್ಲಿ

***

ನಾಗೇಂದ್ರ ABCDEFG!

ಈ ಘಟನೆ ನಡೆದದ್ದು ೧೯೮೨ರಲ್ಲಿ. ದೂರದ ಮಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿದ್ದೆ. ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕಥೆಗಳನ್ನು ಒಟ್ಟು ಮಾಡಿ ಪುಸ್ತಕ ರೂಪಕ್ಕೆ ತರಲು ಬೈಂಡ್ ಮಾಡಿಸಲು ಪ್ರಿಂಟಿಂಗ್ ಪ್ರೆಸ್ ಗೆ ಕೊಟ್ಟಿದ್ದೆ. ನನ್ನ ಹೆಸರು ಕೇಳಿದರು. ‘ನಾಗೇಂದ್ರ ಜಿ. ಎಂದೆ.’ ಆಗ ಪ್ರೆಸ್ ಸಿಬ್ಬಂದಿ ‘Nagendra Jee’ ಎಂದು ಬರೆದುಕೊಂಡರು. ಆಗ ನಾನು G ಅಂದರೆ Jee ಅಲ್ಲ ಎಂದು ಮನವರಿಕೆ ಮಾಡಿಸಲು, ‘ನಾಗೇಂದ್ರ G. ABCDEF…G’ ಎಂದು ವಿವರಿಸಿದೆ. ಆತ ‘ನಾಗೇಂದ್ರ ABCDEFG’ ಎಂದು ಬರೆದುಕೊಂಡ !

-ಜಿ. ನಾಗೇಂದ್ರ ಕಾವೂರು

***

(‘ಮಯೂರ' ಎಪ್ರಿಲ್ ೨೦೨೨ರ ಸಂಚಿಕೆಯಿಂದ ಆಯ್ದದ್ದು)