‘ಮಯೂರ' ಹಾಸ್ಯ - ಭಾಗ ೭೨

‘ಮಯೂರ' ಹಾಸ್ಯ - ಭಾಗ ೭೨

ಶಾರ್ಟ್ ಹ್ಯಾಂಡ್ !

ನಾನು ಎಸ್ಸೆಸ್ಸೆಲ್ಸಿ ಓದುತ್ತಿದ್ದಾಗ ಪಾಂಡುರಂಗ ಎಂಬ ನನ್ನ ಸಹಪಾಠಿಯೊಬ್ಬನಿದ್ದ. ಅವನು ತುಂಬಾ ಹಾಸ್ಯ ಪ್ರವೃತ್ತಿಯವನು. ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಚದುರಿಹೋಗಿದ್ದೆವು. ಬಳಿಕ, ಅಪರೂಪಕ್ಕೆ ಒಂದು ದಿನ ಅವನು ಭೇಟಿಯಾದ. ಉಭಯ ಕುಶಲೋಪರಿಯ ನಂತರ ನಾನು ‘ನನಗೆ ಮುಂದಕ್ಕೆ ಓದಲಾಗಲಿಲ್ಲ. ಅದಕ್ಕೆ ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ಮಾಡಿಕೊಂಡೆ' ಎಂದೆ. ಅದಕ್ಕವನು, ‘ನಾನೂ ಶಾರ್ಟ್ ಹ್ಯಾಂಡ್ ಮಾಡಿಕೊಂಡೆ ಕಣೋ, ಇಲ್ನೋಡು, ಮೂರನೇ ಮಹಡಿಯಿಂದ ಬಿದ್ದೆ. ಎಡಗೈ ಶಾರ್ಟ್ ಹ್ಯಾಂಡ್ ಆಯ್ತು.’ ಎನ್ನುತ್ತ ತನ್ನ ಎಡಗೈಯನ್ನು ತೋರಿಸಿದ. ನನಗೆ ಅಳಬೇಕೋ ನಗಬೇಕೋ ಗೊತ್ತಾಗಲಿಲ್ಲ. 

-ಎಂ ಕೆ ಮಂಜುನಾಥ್

***

ಮೇತಿ ಕಾ ಲಡ್ಡು !

ಪ್ರತೀ ಚಳಿಗಾಲದಲ್ಲೂ ನನಗೆ ಮೊಣಕಾಲು ನೋವು ಕಾಣಿಸಿಕೊಳ್ಳುತ್ತದೆ. ಈ ಬಾರಿಯೂ ಹಾಗಾದಾಗ, ಸಹೋದ್ಯೋಗಿಯೊಬ್ಬ ದಿನಕ್ಕೊಂದು ಮೆಂತ್ಯೆ ಲಡ್ಡು ಸೇವಿಸಲು ಸಲಹೆಯಿತ್ತ. ಅದೇ ಸಂಜೆ ಕಚೇರಿಯಿಂದ ಮನೆಗೆ ಹಿಂತಿರುಗುವ ದಾರಿಯಲ್ಲಿ ಸ್ವೀಟ್ ಮಾರ್ಟ್ ಗೆ ಹೋಗಿ ಹೋಗಿ ಹಿಂದಿಯಲ್ಲಿ ‘ಆಧಾ ಕಿಲೋ ಮೇತಿ ಕಾ ಲಡ್ಡು ದೇನಾ’ ಎಂದೆ. ಅಂಗಡಿಯಾತ ಇನ್ನೊಮ್ಮೆ ಏನು ಬೇಕೆಂದು ಕೇಳಿದ. ‘ಮೇತಿ ಕಾ ಲಡ್ಡು' ಎಂದೆ. ಒಳ ಹೋಗಿ ಪ್ಯಾಕ್ ಮಾಡಿ ತಂದಿತ್ತ. ನಾನು ದುಡ್ಡು ಕೊಟ್ಟು ಮನೆಗೆ ಬಂದೆ. ಮುಂಜಾನೆ ಒಲ್ಲದ ಮನಸ್ಸಿನಿಂದ ಈ ಕಹಿ ಲಡ್ಡು ತಿನ್ನಲು ಪ್ಯಾಕೆಟ್ ತೆಗೆದು ನೋಡಿದರೆ ಒಳಗೆ ಕಿತ್ತಳೆ ಬಣ್ಣದ ಮೋತಿಚೂರಿನ ಲಡ್ಡುಗಳು ಕಣ್ಸೆಳೆಯುತ್ತಿದ್ದವು ! ನಾನು ‘ಮೇತಿ ಕಾ ಲಡ್ಡು' ಅಂದಿದ್ದು ಆತನಿಗೆ ‘ಮೋತಿ ಕಾ ಲಡ್ಡು' ಎಂದು ಕೇಳಿಸಿರಬೇಕು. ಅಂತೂ ಇಂತೂ ಕಹಿಯ ಬದಲು ಸಿಹಿ ಲಡ್ಡು ಬಾಯಿಗೆ ಬಿತ್ತು. !

-ರಮಣ್ ಶೆಟ್ಟಿ ರೆಂಜಾಳ್

***

ಕಣ್ಣು ಮುಚ್ಚು 

ನಮ್ಮ ಪರಿಚಯದಲ್ಲಿ ನಡೆದ ಘಟನೆ ಇದು. ಮಗುವೊಂದು ತನ್ನ ತಾತನ ಹತ್ತಿರ ಬಂದು, ‘ತಾತ, ನೀನು ಒಂದೇ ಸಾರಿ ಕಣ್ಣು ಮುಚ್ಚು’ ಎಂದಿತು. ಮಗು ತನಗಾಗಿ ಏನೋ ತಂದಿರಬೇಕು ಎಂದುಕೊಂಡ ತಾತ ಕಣ್ಣು ಮುಚ್ಚಿದರು. ಸ್ವಲ್ಪ ಹೊತ್ತಿನ ನಂತರ ‘ಈಗ ಕಣ್ಣು ಬಿಡು' ಎಂದಿತು. ತಾತ ಕಣ್ಣು ಬಿಟ್ಟರು. ಒಡನೆಯೇ ಒಳಗೆ ಓಡಿ ಹೋದ ಮಗು ತನ್ನ ತಾಯಿಯೊಂದಿಗೆ ಏನೋ ಮಾತನಾಡಿ ನಿರಾಸೆಯಿಂದ ಹೊರಗೆ ಬಂತು. ತಾತ ‘ಏನಾಯಿತು?’ ಎಂದು ಕೇಳಿದರು. ‘ನಿನ್ನೆ ಅಮ್ಮ ಪಕ್ಕದ ಮನೆಯ ಆಂಟಿಯ ಹತ್ತಿರ ಮಾತನಾಡುವಾಗ ‘ಇವರ ತಾತ ಬೇಗ ಕಣ್ಣು ಮುಚ್ಚಿದರೆ ನಮಗೆ ಹಣ, ಆಸ್ತಿ ಏನಾದರೂ ಕೈಗೆ ಬರುತ್ತದೆ' ಅಂತ ಹೇಳುತ್ತಿದ್ದರು. ಅದಕ್ಕೆ ಕಣ್ಣು ಮುಚ್ಚಲು ಹೇಳಿದೆ. ಆಮೇಲೆ ಅಮ್ಮನ ಬಳಿ ಕೇಳಿದರೆ ಗದರಿಸಿ ಕಳುಹಿಸಿದರು' ಎಂದು ಮಗು ಅಳತೊಡಗಿತು. ತಾತ ಮಾತನಾಡಲಿಲ್ಲ.

-ಶಿವಲೀಲಾ ಸೊಪ್ಪಿಮಠ

***

ಎಮ್ಮೆ ಕನ್ನಡ

ಮೊನ್ನೆ ಪಕ್ಕದ ಮನೆಯವರ ಜೊತೆಗೆ ಮಾತನಾಡುತ್ತಾ ಕುಳಿತಿದ್ದೆ. ಆಗಾಗ ಪತ್ರಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗುವುದನ್ನು ನೋಡಿರುವುದಾಗಿ ಅವರು ತಿಳಿಸಿದರು. ಅಲ್ಲದೆ, ‘ಬಹಳ ಚೆನ್ನಾಗಿ ಬರಿತಿರಿ. ನಿಮ್ದು ಎಂ ಎ ಕನ್ನಡ ಏನ್ರೀ?’ ಎಂದು ಕೇಳಿದರು. ‘ಅಲ್ಲ ಬಿ ಎಸ್ಸಿ' ಎಂದು ಹೇಳಿದೆ. ಅಲ್ಲೇ ಹೋಮ್ ವರ್ಕ್ ಮಾಡುತ್ತಿದ್ದ ನಮ್ಮ ಪುಟ್ಟಿ ‘ಮಮ್ಮೀ ಮಮ್ಮೀ ಎಮ್ಮೆ ಕನ್ನಡ ಅಂತಾನೂ ಇರುತ್ತಾ?’ ಎಂದಾಗ ಅವಳು ಅರ್ಥ ಮಾಡಿಕೊಂಡ ರೀತಿಗೆ ಇಬ್ಬರೂ ಹೊಟ್ಟೆ ಹುಣ್ಣಾಗುವಂತೆ ನಕ್ಕು ವಿವರಿಸಿದ್ದಾಯ್ತು.

-ನಳಿನಿ ಟಿ.ಭೀಮಪ್ಪ

***

(‘ಮಯೂರ' ಮೇ ೨೦೨೨ರ ಸಂಚಿಕೆಯಿಂದ ಸಂಗ್ರಹಿತ)