‘ಮಯೂರ' ಹಾಸ್ಯ - ಭಾಗ ೭೩

‘ಮಯೂರ' ಹಾಸ್ಯ - ಭಾಗ ೭೩

ಸ್ನೇಕ್ಸ್'

ಅದೊಂದು ಭಾನುವಾರ ಮೊಮ್ಮಗಳು ಅನನ್ಯಳನ್ನು ಪಾರ್ಕಿಗೆ ಕರೆದುಕೊಂಡು ಹೋಗಲು ತಯಾರಾಗುತ್ತಿದ್ದೆ. ‘ಪಾರ್ಕಿನಲ್ಲಿ ಎಲ್ಲರೂ ಸ್ನೇಕ್ಸ್ ತಿಂತಿರ್ತಾರೆ. ನಾವೂ ಒಯ್ಯುವ' ಅಂದಾಗ ಗಾಬರಿಯಾಗಿ ‘ನೀ, ಯಾವಾಗ ನೋಡಿದೆ?’ ಎಂದು ಕೇಳಿದೆ. ‘ಎಷ್ಟೋ ಸಲ ನೋಡಿದ್ದೀನಿ. ಆಟವಾಡಿದ ಮೇಲೆ ಅಲ್ಲೇ ಬೆಂಚಿನ ಮೇಲೆ ಕುಳಿತು ತಿಂತಾರಲ್ಲ?’ ಅಂದಳು. ಸ್ನ್ಯಾಕ್ಸ್ (ತಿಂಡಿ) ಅವಳ ಬಾಯಿಯಲ್ಲಿ ಸ್ನೇಕ್ಸ್ ಆಗಿದ್ದಕ್ಕೆ ನಗೆ ಬಂತು.

-ನೀಲಮ್ಮ ಲಿಂಗಸಗೂರು

***

ಬರುವಾಗ ಸಕ್ಕರೆ ತನ್ನಿ

ನಮ್ಮ ಮನೆಯವರು ಆಫೀಸಿನಿಂದ ಮನೆಗೆ ಬರಬೇಕಾದರೆ ಮುಖ್ಯ ರಸ್ತೆಯಿಂದಲೇ ಬರಬೇಕು. ಹೀಗಾಗಿ, ಅವರು ಆಫೀಸಿಗೆ ಹೋಗುವಾಗಲೇ ಆಯಾ ದಿನ ಮನೆಗೆ ಬೇಕಾಗುವ ಕಿರಾಣಿ ಸಾಮಾನು ತರಲು ಹೇಳುತ್ತಿದ್ದೆ. ಒಂದು ಭಾನುವಾರ ಅವರು ಟಿವಿ ನೋಡುತ್ತಾ ಕುಳಿತಿದ್ದರು. ‘ಸಕ್ಕರೆ ಮುಗಿದಿದೆ. ಬರುವಾಗ ಸಕ್ಕರೆ ತನ್ನಿ' ಎಂದೆ. ‘ಪ್ರತಿದಿನ ಏನಾದರೂ ಹೇಳುತ್ತಲೇ ಇರ್ತೀಯಾ. ಇವತ್ತು ರಜೆ ಇದೆ ಅಂತ ಆರಾಮಾಗಿ ಮನೆಯಲ್ಲಿರಲು ಕೂಡಾ ಬಿಡುವುದಿಲ್ಲ. ಹೀಗೇ ಮಾಡಿದ್ರೆ ನಾನು ಎಲ್ಲಿಗಾದ್ರೂ ಹೋಗ್ತೀನಿ' ಎಂದರು. ಅಡುಗೆಮನೆಯಲ್ಲಿದ್ದ ನನಗೆ ಅವರ ಪೂರ್ತಿ ಮಾತು ಕೇಳಿಸಲಿಲ್ಲ. ‘ಹೋಗ್ತೀನಿ' ಅನ್ನೋ ಕೊನೆಯ ಪದ ಮಾತ್ರ ಕೇಳಿಸಿತು. ಅದಕ್ಕೆ ‘ಆಯ್ತು, ಬರುವಾಗ ಸಕ್ಕರೆ ತನ್ನಿ' ಎಂದೆ. ಮಕ್ಕಳ ಜೊತೆ ಅವರೂ ಜೋರಾಗಿ ನಗತೊಡಗಿದರು. 

-ಶಿವಲೀಲಾ ಸೊಪ್ಪಿನಮಠ

***

ಕೋರ್ಟ್ ಮೆಟ್ಟಿಲು

ಪಕ್ಕದ ಮನೆಯ ಪದ್ಮಮ್ಮ ಯಾವಾಗಲೂ ಹೇಳುತ್ತಿದ್ದರು. ‘ಏನೇ ಆಗ್ಲಿ, ಕೋರ್ಟ್ ಮೆಟ್ಟಿಲು ಮಾತ್ರ ಹತ್ತಬ್ಯಾಡ್ರಿ' ಎಂದು. ಅವರ ಮನೆಯವರಿಗೆ ವರ್ಗಾವಣೆಯಾಗಿ ಬೇರೆ ಊರಿಗೆ ಹೋದರು. ಎಷ್ಟೋ ವರ್ಷಗಳ ಆನಂತರ ಅಚಾನಕ್ಕಾಗಿ ಅವರ ಮಗ ಶ್ರೀಪಾದ ಸಿಕ್ಕಿದ. ಆತನೇ ಗುರುತು ಹಿಡಿದು ಮಾತನಾಡಿಸಿ, ಮನೆಗೆ ಕರೆದುಕೊಂಡು ಹೋದ. ಅವರ ತಾಯಿ ಪದ್ಮಮ್ಮ ಖುಷಿಪಟ್ಟರು. ಮಾತು, ಚಹಾ, ಕುಶಲೋಪರಿ ಆದಮೇಲೆ, ಪದ್ಮಮ್ಮ ಅವರಿಗೆ, ‘ಏನೇ ಹೇಳ್ರೀ, ನಿಮ್ಮ ಮಕ್ಕಳು ನಿಮ್ಮ ಮಾತು ಮೀರಿದ್ದು ನೋಡಿ ಬೇಸರವಾಯಿತು.’ ಎಂದೆ. ಅವರು ಆಶ್ಚರ್ಯದಿಂದ ನನ್ನನ್ನೇ ದಿಟ್ಟಿಸಿದರು. ‘ನೀವೇ ಹೇಳಿದ್ರಿ, ಏನೇ ಆದ್ರೂ ಕೋರ್ಟ್ ಮೆಟ್ಟಿಲು ಹತ್ತಬ್ಯಾಡ್ರಿ ಅಂತ.. ಈಗ ನೋಡಿದ್ರೆ ನಿಮ್ಮ ಮಗ ದಿನಬೆಳಗಾದರೆ ಕೋರ್ಟ್ ಮೆಟ್ಟಿಲು ಹತ್ತುತ್ತಾರಂತೆ ?!’ ಎಂದಾಗ ವಕೀಲನಾಗಿದ್ದ ಮಗ ಶ್ರೀಪಾದನೂ ಆತನ ತಾಯಿಯೂ ಒಟ್ಟಿಗೆ ನಕ್ಕರು. 

- ರಾಮಕೃಷ್ಣ ಗೋಖಲೆ

***

‘ಯದ್ಧಾವಂ ತದ್ಭವತಿ..'

ನಮ್ಮ ಕಿರಿಯ ಮಗಳ ನಿಶ್ಚಿತಾರ್ಥ ಮುಗಿಸಿಕೊಂಡು ಮನೆಗೆ ಬಂದಾಗ ಗೇಟಿನ ಬಳಿ ಮನೆಯ ಮಾಲೀಕರು ಸಿಕ್ಕಿದರು. ಅವರು ರಾಜಸ್ಥಾನದವರು. ಕನ್ನಡ ಬರುತ್ತಿರಲಿಲ್ಲ. ಕಾರ್ಯಕ್ರಮ ಹೇಗಾಯ್ತು ಎಂದು ವಿಚಾರಿಸಿ, ನಮ್ಮ ಮಗಳಿಗೆ ಶುಭ ಕೋರಿದರು. ಆನಂತರ, ‘ಬೇಟೀ ಪರಾಯೀ ಹೋ ಗಯೀ’ (ಮಗಳು ಪರಕೀಯಳಾದಳು) ಎಂದರು. ಕೂಡಲೇ ಮಗಳು ‘ನಹೀಂ ಅಂಕಲ್, ವೋ ಅಪ್ನೇ ಹೋಗಯೇ’ (ಇಲ್ಲ, ಅಂಕಲ್, ಅವರು ನಮ್ಮವರಾದರು) ಎಂದಳು. ಆತ ಅವಕ್ಕಾದರೂ ಸಾವರಿಸಿಕೊಂಡು, ‘ಬರೋಬರ್...ಬರೋಬರ್' ಅಂದರು. ‘ಯದ್ಧಾವಂ ತದ್ಭವತಿ..' (ಭಾವಕ್ಕೆ ತಕ್ಕಂತೆ ಬದುಕು) ಎಂದುಕೊಂಡೆ. 

-ಜಯಲಕ್ಷ್ಮಿ ಭಟ್

***

(‘ಮಯೂರ' ಜೂನ್ ೨೦೨೨ ರ ಸಂಚಿಕೆಯಿಂದ ಸಂಗ್ರಹಿತ)