‘ಮಯೂರ' ಹಾಸ್ಯ - ಭಾಗ ೭೪

‘ಮಯೂರ' ಹಾಸ್ಯ - ಭಾಗ ೭೪

ಪೂಜಾರಮ್ಮ

ಕೆಲ ದಿನಗಳ ಹಿಂದೆ ಸಂಬಂಧಿಕರ ಮನೆಯಲ್ಲಿ ಪೂಜೆಗೆಂದು ಹೋಗಿದ್ದೆವು. ತಮ್ಮನ ಹೆಂಡತಿ ಪೂಜಾ ಬಂದಿದ್ದಳು. ಪೂಜಾಳ ಜೊತೆಗೆ ಅವರ ಅಮ್ಮನೂ ಬರುತ್ತೇನೆ ಎಂದಿದ್ದರು. ಆದರೆ, ಪೂಜೆ ಆರಂಭವಾದರೂ ಅವರು ಕಾಣಲಿಲ್ಲ. ಹಾಗಾಗಿ, ‘ಪೂಜಾರಮ್ಮ ಬಂದಿಲ್ವಾ?’ ಎಂದು ಮನೆಯವರನ್ನು ಕೇಳಿದೆ. ಅದನ್ನು ಕೇಳಿಸಿಕೊಂಡ ಅರ್ಚಕರು ‘ಇಲ್ಲಮ್ಮ, ಇಲ್ಲಿ ಪೂಜಾರಮ್ಮ ಇರುವುದಿಲ್ಲ. ಪೂಜಾರಪ್ಪ ಮಾತ್ರ ಪೂಜೆ ಮಾಡುವುದು' ಎಂದಾಗ ನಗು ತಡೆಯಲಾಗಲಿಲ್ಲ.

-ನಳಿನಿ ಟಿ.ಭೀಮಪ್ಪ

***’

ಹೆಸರೇನು?

ಮನೆಗೆ ಅಪರೂಪದ ಅತಿಥಿಯೊಬ್ಬರು ಬಂದಿದ್ದರು. ಅವರಿಗೆ ತಿಂಡಿ ಮಾಡಿ ತಟ್ಟೆಯಲ್ಲಿ ಹಾಕಿ ಕೊಡಲು ಹೊರಟಾಗ ನಮ್ಮ ಪುಟ್ಟ ತಾನೇ ಕೊಡಬೇಕು ಎಂದು ಹಟ ಮಾಡಿದ. ‘ಸರಿ, ಕೊಟ್ಟು ಬಾ’ ಎಂದು ಅವನ ಕೈಯಲ್ಲಿ ಕೊಟ್ಟು ಕಳಿಸಿದೆವು. ಅವರು ಪ್ರೀತಿಯಿಂದ ಅವನ ಕೆನ್ನೆ ತಟ್ಟಿ, ‘ಏನ್ ಮರಿ ನಿನ್ನ ಹೆಸರು?’ ಎಂದು ಕೇಳಿದರು. ಅವನು ‘ನಿ ತಿನ್' ಎಂದ. ‘ನಾನು ತಿನ್ತೀನಪ್ಪಾ, ನಿನ್ನ ಹೆಸರು ಏನು ಹೇಳು' ಎಂದು ಮತ್ತೆ ಕೇಳಿದಾಗ ಅವನು ‘ನಿ ತಿನ್' ಅಂದ. ಅವರು, ‘ಈ ಹುಡುಗನಿಗೆ ಹೆಸರು ಹೇಳಲೂ ಕಲಿಸಿಲ್ಲವೆ? ನೀ ತಿನ್ನು, ನೀ ತಿನ್ನು ಅಂತಿದಾನೆ?’ ಎಂದು ಕೇಳಿದರು. ‘ಒಳಗಿನಿಂದ ಅವನ ಅಜ್ಜಿ ಬಂದು ‘ಅಯ್ಯೋ, ಅವನು ಹೇಳಿದ್ದು ಅವನ ಹೆಸರೇ...ನಿತಿನ್...' ಎಂದು ಸ್ಪಷ್ಟನೆ ಕೊಟ್ಟರು.

-ಅರ್ಚನಾ ವಿ ರಾವ್

***

ವೈಫು ಬೇಕು

ಕಳೆದ ಲಾಕ್ ಡೌನ್ ಸಮಯದಲ್ಲಿ ಹಳ್ಳಿಯಿಂದ ನೆಂಟರ ಕುಟುಂಬ ನಮ್ಮ ಮನೆಗೆ ಬಂದಿತ್ತು. ಅವರು ಹಿಂದಿರುಗಿದ ಮಾರನೇ ದಿನವೇ ಪ್ರಾಥಮಿಕ ಶಾಲೆಯಲ್ಲಿ ಓದುವ ಅವರ ಮಗ ರೋಹಿತ್ ‘ನನಗೂ ವೈಫು ಬೇಕು' ಎಂದು ಹಟ ಹಿಡಿದ. ಅವರು ಗಾಬರಿಯಾಗಿ ‘ನಿನಗೇನೋ ಬಂತು? ಊರಿನಿಂದ ಬಂದಾಗಿನಿಂದ ವೈಫು ಬೇಕು ಅಂತಿದ್ದೀಯಾ? ವೈಫು ತರಲು ಅದೇನು ಹುಡುಗಾಟನಾ?’ ಎಂದು ಗದರಿದರಂತೆ. ಆದರೂ ಅವನು ಕೇಳಲಿಲ್ಲ. ಕೊನೆಗೆ ನಮಗೆ ಫೋನ್ ಬಂತು. ವಿಷಯ ಅರ್ಥವಾಗಿದ್ದು - ನಮ್ಮ ಮನೆಗೆ ಬಂದಾಗ ಅವನು ನಮ್ಮ ಮಗಳ ಕಡೆಯಿಂದ ವೈಫೈ ಬಗ್ಗೆ ತಿಳಿದುಕೊಂಡಿದ್ದಾನೆ. ಅಲ್ಲಿ ಗೇಮ್ ಆಡಲು ಅವನಿಗೆ ವೈಫೈ ಬೇಕಾಗಿದೆ. ಅದೇ ಅವನ ಬಾಯಿಯಲ್ಲಿ ‘ವೈಫ್' ಆಗಿದೆ.!

-ನಗರ ಗುರುದೇವ್ ಭಂಡಾರ್ಕರ್

***

ಕೊಪ್ಪಳ- ಹಪ್ಪಳ

ಇತ್ತೀಚೆಗೆ ಸ್ನೇಹಿತರೆಲ್ಲ ಸೇರಿ ಕೆಲಸದ ನಿಮಿತ್ತ ಕೊಪ್ಪಳಕ್ಕೆ ಹೊರಟಿದ್ದೆವು. ಹೇಳಿ ಕೇಳಿ ಬಿರು ಬೇಸಿಗೆಯ ದಿನಗಳು. ಅದು ಬೇರೆ ಅಂದು ತಾಪಮಾನ ಕೊಂಚ ಹೆಚ್ಚಾಗಿಯೇ ಇತ್ತು. ನಮ್ಮ ಗ್ರಹಚಾರಕ್ಕೆ ದಾರಿ ಮಧ್ಯೆ ತಾಂತ್ರಿಕ ಕಾರಣದಿಂದ ಕಾರಿನ ಎ ಸಿ ಕೂಡ ನಿಂತು ಹೋಯಿತು. ಆ ಅಸದಳ ಸೆಕೆ ಸಹಿಸಿಕೊಳ್ಳಲಾರದೇ ನಮ್ಮಲ್ಲೊಬ್ಬರು ಕೊಪ್ಪಳ ಬರುವಷ್ಟರಲ್ಲಿ ನಾವು ಸುಟ್ಟ ಹಪ್ಪಳ ಆಗೋದು ಗ್ಯಾರಂಟಿ ಅಂದುಬಿಟ್ಟರು. ಬಿಸಿಲಿನ ಪ್ರತಾಪದ ನಡುವೆಯೂ ಎಲ್ಲರ ಮೊಗದಲ್ಲಿ ಒಂದು ಕ್ಷಣ ನಗೆಯ ಬುಗ್ಗೆ ಎದ್ದಿತ್ತು.

-ಸ್ವರೂಪಾನಂದ ಕೊಟ್ಟೂರು

***

(ಜುಲೈ ೨೦೨೨ರ 'ಮಯೂರ' ಪತ್ರಿಕೆಯಿಂದ ಆಯ್ದದ್ದು)